ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮನಗೆಲ್ಲುತ್ತಿದ್ದಾರೆ- ಯೋಧನಿಗೆ ತಕ್ಕ ಮಾತುಗಳಿಂದ!

ಡಿಜಿಟಲ್ ಕನ್ನಡ ಟೀಮ್:

ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಈಗ ಸುದ್ದಿಯಲ್ಲಿದ್ದಾರೆ. ಕೆನಡಾದಿಂದ ಖಾಲಿಸ್ಥಾನ್ ಪ್ರತ್ಯೇಕತಾವಾದಿಗಳ ಬೆದರಿಕೆ, ಗಡಿಯಲ್ಲಿ ಉಗ್ರರಿಂದ ಭಾರತೀಯ ಯೋಧರ ಹತ್ಯೆ ಹಾಗೂ ನಕ್ಸಲರ ದಾಳಿಗಳಿಗೆ ಸಂಬಂಧಿಸಿದಂತೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಆಡಿರುವ ಮಾತುಗಳು ನಮ್ಮ ಮನಗೆಲ್ಲುತ್ತಿವೆ.

ಇತ್ತೀಚೆಗೆ ಕೆನಡಾದ ಬ್ರಿಟೀಷ್ ಕೊಲಂಬಿಯಾ ಪ್ರಾಂತ್ಯದ ಸರ್ರೆಯಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಖಾಲಿಸ್ಥಾನ ಪ್ರತ್ಯೇಕತಾವಾದಿಗಳು ಅಮರಿಂದರ್ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಭಾರತ ಸಹ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಭಾರತೀಯ ರಾಯಭಾರಿ ಕಚೇರಿಯಿಂದ ಕೆನಡಾದ ಜಾಗತಿಕ ವ್ಯವಹಾರಗಳ ಸಚಿವಾಲಯಕ್ಕೆ ದೂರು ದಾಖಲಿಸಲಾಗಿದೆ. ಇನ್ನು ಭಾರತದ ಗಡಿಯಲ್ಲಿ ಹಾಗೂ ನಕ್ಸಲರ ದಾಳಿಗೆ ಯೋಧರ ಬಲಿದಾನಗಳು ನಡೆಯುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿದಂತೆ ಇತರೆ ವಿರೋಧ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುತ್ತಿದ್ದರೆ, ಅಮರಿಂದರ್ ಸಿಂಗ್ ಕೇವಲ ರಾಜಕೀಯ ನಾಯಕನಾಗಿ ಮಾತ್ರವಲ್ಲದೇ ಒಬ್ಬ ಮಾಜಿ ಯೋಧನಾಗಿ ಅರ್ಥಪೂರ್ಣವಾದ ಹಾಗೂ ಸ್ವಾರಸ್ಯಕರ ಹೇಳಿಕೆಗಳನ್ನು ನೀಡಿದ್ದಾರೆ. ಈ ಎಲ್ಲ ವಿಷಯಗಳ ಬಗ್ಗೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಹೇಳಿರುವ ಮಾತುಗಳು ಹೀಗಿವೆ…

ಖಾಲಿಸ್ಥಾನಿ ಬೆಂಬಲಿಗರ ಬೆದರಿಕೆಗೆ ಪ್ರತಿಕ್ರಿಯೆ:

‘ಖಾಲಿಸ್ಥಾನಿ ಬೆಂಬಲಿಗರಿಗೆ ನಿಜವಾಗಲೂ ಗುಂಡಿಗೆ ಇದ್ದರೆ, ಇಲ್ಲಿ ಬಂದು ಬೆದರಿಕೆಯ ಮಾತುಗಳನ್ನಾಡಲಿ. ಯಾವುದೋ ಮೂಲೆಯಲ್ಲಿ ಕುಳಿತು, ತಪ್ಪು ಸಂದೇಶ ರವಾನಿಸಿ ಜನರ ದಿಕ್ಕು ತಪ್ಪಿಸಲು ಮಾತನಾಡಬಾರದು. ನಮಗೆ ಶಾಂತಿಯುತ ಪಂಜಾಬ್ ರಾಜ್ಯದ ಅಗತ್ಯವಿದೆ. ಹೀಗಾಗಿ ನಾವು ಕೇವಲ ಅಭಿವೃದ್ಧಿಯತ್ತ ಮಾತ್ರ ಗಮನಹರಿಸಬೇಕು. ನಾನು ಒಬ್ಬ ಯೋಧನಾಗಿ ಅನೇಕ ಯುದ್ಧಗಳನ್ನು ನೋಡಿದ್ದೇನೆ. ಹೀಗಾಗಿ ಇಂತಹ ಬೆದರಿಕೆಗಳಿಗೆಲ್ಲ ತಲೆಕೆಡಿಸಿಕೊಳ್ಳುವವನು ನಾನಲ್ಲ. ನನ್ನ ಭದ್ರತೆ ಹೇಗೆ ಮಾಡಿಕೊಳ್ಳಬೇಕು ಎಂಬುದು ಚೆನ್ನಾಗಿ ಗೊತ್ತಿದೆ.’

ಗಡಿಯಲ್ಲಿ ಯೋಧರ ಮೇಲೆ ಉಗ್ರರ ದಾಳಿಗೆ ಉತ್ತರ:

‘ನಾವು ಭಾರಿ ಸಭ್ಯ ಸೇನೆ ಎಂದು ಹೆಸರುಗಳಿಸಿಕೊಳ್ಳುವ ಅನಿವಾರ್ಯ ಬೇಕಿಲ್ಲ. ಪಾಕಿಸ್ತಾನಿಗಳು ನಮ್ಮ ಒಬ್ಬ ಯೋಧನ ತಲೆ ಕಡಿದರೆ, ನಾವು ಪಾಕಿಸ್ತಾನದ ಮೂವರ ತಲೆಗಳನ್ನು ಕಡಿದು ತರಬೇಕು. ಭಾರತೀಯ ಸೇನೆ ಈ ವಿಚಾರದಲ್ಲಿ ಮೇಲುಗೈ ಸಾಧಿಸುವವರೆಗೂ ಈ ಪ್ರದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ. ಹಾಗೆಂದು ಗಡಿಯಲ್ಲಾಗಿದ್ದಕ್ಕೆ ಹಾಗೂ ನಕ್ಸಲ ದಾಳಿಗೆ ಪ್ರಧಾನಿಯನ್ನು ಹೊಣೆಗಾರಿಕೆ ಮಾಡಿಬಿಡುವುದಕ್ಕೆ ನಾನು ತಯಾರಿಲ್ಲ. ಆದರೆ ಈ ದೇಶಕ್ಕೆ ಒಬ್ಬ ಪೂರ್ಣಾವಧಿ ರಕ್ಷಣಾ ಮಂತ್ರಿ ಬೇಕು ಎಂಬುದನ್ನು ಮಾತ್ರ ನಾನು ಪ್ರತಿಪಾದಿಸುತ್ತೇನೆ. ಗಡಿಯಲ್ಲಿ ನಮ್ಮ ಶಸ್ತ್ರಾಸ್ತ್ರಗಳ ಸಾಮರ್ಥ್ಯ ಹೆಚ್ಚಾದರೆ ಮಾತ್ರ ನಾವು ಗಡಿಯಲ್ಲಿನ ಈ ತಿಕ್ಕಾಟವನ್ನು ಮೆಟ್ಟಿನಿಲ್ಲಲು ಸಾಧ್ಯ. ಒಂದು ವೇಳೆ ಯುದ್ಧದ ಪರಿಸ್ಥಿತಿ ಎದುರಾದರೆ, ನಾವೆಲ್ಲರೂ ಪಕ್ಷಭೇದ ಮರೆತು ಒಟ್ಟಾಗಿ ನಮ್ಮ ಎದುರಾಳಿಗಳನ್ನು ಎದುರಿಸಲು ಸನ್ನದ್ಧವಾಗಿದ್ದೇವೆ.’

ನಕ್ಸಲರ ದಾಳಿ ಕುರಿತಾದ ಹೇಳಿಕೆ:

‘ಸುಕ್ಮಾ ದಾಳಿಯು ಈವರೆಗಿನ ಅತ್ಯಂತ ಭೀಕರ ನಕ್ಸಲರ ದಾಳಿಯಾಗಿದೆ. ನಕ್ಸಲರ ವಿರುದ್ಧದ ಕಾರ್ಯಾಚರಣೆಯಲ್ಲಿ ನಮ್ಮ ಕಾರ್ಯತಂತ್ರ ಬದಲಾಗಬೇಕಿದೆ. ಏಕಕಾಲದಲ್ಲಿ 25 ಸಿಆರ್ ಪಿಎಫ್ ಯೋಧರು ಬಲಿಯಾಗಿರುವುದು, ಆ ಯೋಧರಿಗೆ ಸೂಕ್ತ ರೀತಿಯ ತರಬೇತಿ ಸಿಕ್ಕದಿರುವುದು ಸಾಬೀತಾಗಿದೆ. ಅಲ್ಲಿ ಹುತಾತ್ಮರಾದ ಯೋಧರ ಬಗ್ಗೆ ಅಭಿಮಾನವಿದೆ. ಆದರೆ ಒಬ್ಬ ಸೈನಿಕನಾದ್ದರಿಂದ ಹೇಳುತ್ತಿದ್ದೇನೆ. ಇಂಥ ಸೂಕ್ಷ್ಮ ಪ್ರದೇಶಗಳಿಗೆ ಕಳುಹಿಸುವಾಗ ಹೆಚ್ಚಿನ ತಯಾರಿ ಬೇಕಾಗುತ್ತದೆ. ಅದು ಇದ್ದಂತಿಲ್ಲ. ಹಾಗೆಂದೇ ಇಷ್ಟು ದೊಡ್ಡ ಪ್ರಮಾಣದಲ್ಲಿ ಸೈನಿಕರು ಮೃತಪಟ್ಟಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸಿಆರ್ ಪಿಎಫ್ ವಿಭಾಗದಲ್ಲಿರುವ ಲೋಪಗಳನ್ನು ಸರಿಪಡಿಸಿಕೊಳ್ಳಬೇಕಿದೆ.’

Leave a Reply