ಭಾರತೀಯ ಯೋಧರ ರಕ್ಷಣೆಗೆ ಮುಂದಾದ 1000 ಸಂತರು, ಒಂದು ಟ್ರಕ್ ಕಲ್ಲಿನ ಸಮೇತ ಕಣಿವೆ ರಾಜ್ಯಕ್ಕೆ ಪಯಣ

ಡಿಜಿಟಲ್ ಕನ್ನಡ ಟೀಮ್:

ಕಳೆದ ಒಂದು ತಿಂಗಳಿನಿಂದ ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೈನಿಕರ ಮೇಲೆ ಕಲ್ಲು ತೂರಾಟದ ಪ್ರಕರಣಗಳು ಹೆಚ್ಚಾಗಿವೆ. ಇಂತಹ ಸಂದರ್ಭದಲ್ಲಿ ಸೈನಿಕರಿಗೆ ನೈತಿಕ ಬಲ ಹೆಚ್ಚಿಸಲು ಹಾಗೂ ಅವರ ರಕ್ಷಣೆ ಮಾಡಲು ನಿರ್ಧರಿಸಿದ್ದಾರೆ ಜನ್ ಸೇನಾ ಧಾರ್ಮಿಕ ಸಂಘಟನೆಯ 1000 ಸಂತರು.

ನಮ್ಮನ್ನು ಕಾಯುವ ಸೈನಿಕರಿಗೆ ರಕ್ಷಣೆ ನೀಡುತ್ತಾರಾ ಸಂತರು? ಅದು ಹೇಗೆ? ಎಂಬ ಪ್ರಶ್ನೆ ಮೂಡುವುದು ಸಹಜ. ಕಾನ್ಪುರ ಮೂಲದ ಜನ್ ಸೇನಾ ಸಂಘಟನೆ ಈ ನಿರ್ಧಾರಕ್ಕೆ ಬಂದಿದ್ದು, ತಮ್ಮ 1000 ಸದಸ್ಯರನ್ನು ಕಣಿವೆ ರಾಜ್ಯಕ್ಕೆ ಕಳುಹಿಸಿ ಅಲ್ಲಿ ಕಲ್ಲು ತೂರಾಟ ಮಾಡುವವರಿಗೆ ಪ್ರತಿಯಾಗಿ ಇವರೂ ಸಹ ಕಲ್ಲು ತೂರಾಟ ಮಾಡಲು ನಿರ್ಧರಿಸಿದ್ದಾರೆ.

ಈ ಹಿಂದೆ ಬುಡಕಟ್ಟು ಮಂದಿ ತಮ್ಮ ಕಲ್ಲು ಬೀಸುವ ಸಾಮರ್ಥ್ಯವನ್ನು ಕಾಶ್ಮೀರಿ ಕಲ್ಲು ತೂರಾಟಗಾರರ ವಿರುದ್ಧ ಪ್ರದರ್ಶಿಸಬೇಕೆಂಬುದರ ಬಗ್ಗೆ ವಿನಂತಿ ಮಾಡಿಕೊಂಡಿದ್ದರೆಂಬ ಬಗ್ಗೆ ವರದಿ ಓದಿರುತ್ತೀರಿ. ಈಗ ಸಂತರ ಸರದಿ. ಇವಕ್ಕೆಲ್ಲ ಸರ್ಕಾರ ಅನುಮತಿಸುವುದಿಲ್ಲವಾದರೂ ಈ ವಿದ್ಯಮಾನಗಳಿಂದ ಒಂದಂತೂ ಸ್ಪಷ್ಟವಾಗಿದೆ. ಜಮ್ಮು-ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳ ಆಟಾಟೋಪ ನಿಲ್ಲಲಿ ಎಂದು ಭಾರತದ ಇತರ ಭಾಗದ ಜನರೆಲ್ಲ ಒಂದಾಗುತ್ತಿದ್ದಾರೆ. ಹೀಗಾಗಿ ಜಮ್ಮು-ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳ ತುಷ್ಟೀಕರಣಕ್ಕಿಳಿಯುವ ಯಾವುದೇ ರಾಷ್ಟ್ರೀಯ ಪಕ್ಷಕ್ಕೆ ದೇಶದ ಬೇರೆಡೆ ಮತಬ್ಯಾಂಕ್ ಕರಗಲಿದೆ.

ಕಲ್ಲುತೂರಾಟಗಾರರನ್ನು ಮೆಟ್ಟಿ ನಿಂತು ಸೈನಿಕರ ಪ್ರಾಣ ರಕ್ಷಣೆ ಮಾಡುವುದಾಗಿ ತಿಳಿಸಿರುವ ಈ ಸಂಘಟನೆ, ಮೇ 7ರಂದು ತನ್ನ 1000 ಸಂತರನ್ನು ಜಮ್ಮು ಕಾಶ್ಮೀರಕ್ಕೆ ಕಳುಹಿಸಲಿದೆ. ನಂತರ ಅಗತ್ಯಕ್ಕೆ ಅನುಗುಣವಾಗಿ ಇನ್ನಷ್ಟು ಸಂತರನ್ನು ಕಳುಹಿಸುವುದಾಗಿ ಸಂಘಟನೆಯ ಸಂಸ್ಥಾಪಕರಾದ ಬಾಲಯೋಗಿ ಅರುಣ್ ಪುರಿ ಚೈತನ್ಯ ಮಹರಾಜ್.

ಈ ಸಂಘಟನೆ ‘ಯುದ್ಧ ವಿಜಯ ಯಾಗ’ ಎಂಬ ಕಾರ್ಯಕ್ರಮದ ಮೂಲಕ ಸೈನಿಕರಿಗೆ ಬೆಂಬಲ ನೀಡಲು ಈ ಒಂದು ಹೆಜ್ಜೆ ಇಟ್ಟಿದೆ. ಸಂಘಟನೆಯ ಈ ನಿರ್ಧಾರದ ಬಗ್ಗೆ ಅರುಣ್ ಪುರಿ ಅವರು ಹೇಳಿದಿಷ್ಟು…

‘ಕಾಶ್ಮೀರದಲ್ಲಿ ಕಲ್ಲುತೂರಾಟಗಾರರಿಂದ ಸೈನಿಕರನ್ನು ರಕ್ಷಿಸಲು ಹಾಗೂ ಅವರಲ್ಲಿ ಆತ್ಮಸ್ಥೈರ್ಯ ತುಂಬಲು ನಮ್ಮ ಸಂತರು ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಲು ಅವಕಾಶ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೋರಿದ್ದೆವು. ಆದರೆ ಅನುಮತಿ ಸಿಗಲಿಲ್ಲ. ಜಮ್ಮು ಕಾಶ್ಮೀರದ ಜಿಲ್ಲಾಡಳಿತ ಸಹ ಅನುಮತಿಯನ್ನು ನಿರಾಕರಿಸಿತು. ಅನುಮತಿ ಸಿಗದಿದ್ದರೂ ಪರವಾಗಿಲ್ಲ ಎಂತಹ ಪರಿಸ್ಥಿತಿ ಎದುರಾದರೂ ಸರಿಯೇ ನಾವು ಕಣಿವೆ ರಾಜ್ಯಕ್ಕೆ ಹೋಗಲು ಮನಸ್ಸು ಮಾಡಿದ್ದೇವೆ. ನಮ್ಮ ಸದಸ್ಯರನ್ನು ಒಟ್ಟಾಗಿ ತಡೆದರೆ, ನಂತರ ಸದಸ್ಯರು ಒಬ್ಬೊಬ್ಬರಾಗಿ ತಮ್ಮ ಶಕ್ತಿಯಿಂದ ಅಲ್ಲಿಗೆ ಪ್ರಯಾಣ ಬೆಳೆಸಲಿದ್ದಾರೆ. ನಂತರ ಅಲ್ಲಿ ಮತ್ತೆ ಒಂದುಗೂಡುತ್ತಾರೆ. ಭಾನುವಾರ ಬೆಳಗ್ಗೆ ನಮ್ಮ ಸದಸ್ಯರು 100 ಕಾರುಗಳಲ್ಲಿ, 3 ಬಸ್ ಗಳಲ್ಲಿ ತೆರಳಲಿದ್ದು, ಮತ್ತೆ ಕೆಲವರು ರೈಲಿನ ಮೂಲಕ ಪ್ರಯಾಣ ಬೆಳೆಸಿ ಮೇ 14ರಂದು ಜಮ್ಮು ಕಾಶ್ಮೀರ ತಲುಪಲಿದ್ದಾರೆ. ನಮ್ಮ ಸಂತರ ಜತೆಗೆ ಒಂದು ಟ್ರಕ್ ನಲ್ಲಿ ಕಲ್ಲುಗಳನ್ನು ಕೂಡ ಕಳುಹಿಸಲಾಗುತ್ತಿದ್ದು, ಈ ಸದಸ್ಯರಿಗೆ ಕಲ್ಲುತೂರಾಟದ (ಪತರ್ ಬಾಜಿ) ತರಬೇತಿ ನೀಡಿದ್ದೇವೆ. ಕಾಶ್ಮೀರ ಪ್ರತ್ಯೇಕತಾವಾದಿಗಳು ಕಲ್ಲಿನ ಮೂಲಕ ದಾಳಿ ಮಾಡಲು ಮುಂದಾದರೆ, ನಾವು ಅದೇ ರೀತಿ ಉತ್ತರ ನೀಡುತ್ತೇವೆ. ಕಲ್ಲುತೂರಾಟಗಾರರು ಮತ್ತೆ ದಾಳಿ ಮಾಡಿದರೆ, ಆ ದಾಳಿಯನ್ನು ಮುಂದಿನ ಸಾಲಿನಲ್ಲಿ ನಿಂತು ಎದುರಿಸಲು ಅವಕಾಶ ಮಾಡಿಕೊಡಿ ಎಂದು ಯೋಧರನ್ನು ಕೇಳಿಕೊಳ್ಳುತ್ತೇವೆ. ಅದರಿಂದ ಸೈನಿಕರಿಗೆ ಪೆಟ್ಟು ಅಥವಾ ಅನಾಹುತ ಆಗುವುದು ತಪ್ಪಲಿದೆ. ನಮ್ಮ ಸೈನಿಕರ ರಕ್ಷಣೆಗಾಗಿ ನಮ್ಮ ಪ್ರಾಣವನ್ನು ತ್ಯಾಗ ಮಾಡಲು ನಾವು ಹಿಂಜರಿಯುವುದಿಲ್ಲ.’

Leave a Reply