ಟೀಂ ಇಂಡಿಯಾ ನೂತನ ಜೆರ್ಸಿ ಬಿಡುಗಡೆ, ಹೊಸ ಪ್ರಾಯೋಜಕತ್ವಕ್ಕಾಗಿ ಒಪ್ಪೊ ನೀಡುತ್ತಿರುವ ಮೊತ್ತ ಎಷ್ಟು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಮುಂದಿನ ತಿಂಗಳು ನಡೆಯಲಿರುವ ಮಿನಿ ವಿಶ್ವಕಪ್ ಖ್ಯಾತಿಯ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಟೀಂ ಇಂಡಿಯಾ ಭಾಗವಹಿಸುತ್ತೋ ಇಲ್ಲವೊ ಎಂಬ ಅನುಮಾನ ಇರುವ ಹೊತ್ತಿನಲ್ಲೇ, ಟೀಂ ಇಂಡಿಯಾದ ನೂತನ ಜೆರ್ಸಿ ಅನಾವರಣಗೊಂಡಿದೆ.

ಈ ಬಾರಿಯ ಟೀಂ ಇಂಡಿಯಾ ಜೆರ್ಸಿ ಆಕರ್ಷಕವಾಗಿದ್ದು, ಈ ಹಿಂದಿನ ನೀಲಿ ಬಣ್ಣವನ್ನೇ ಉಳಿಸಿಕೊಂಡಿದೆ. ಇನ್ನು ಕಳೆದ ಕೆಲವು ವರ್ಷಗಳಿಂದ ಟೀಂ ಇಂಡಿಯಾ ಪ್ರಾಯೋಜಕತ್ವದ ಹಕ್ಕನ್ನು ಹೊಂದಿದ್ದ ಸ್ಟಾರ್ ಇಂಡಿಯಾ, ಈಗ ಪ್ರಾಯೋಜಕತ್ವದಿಂದ ಹಿಂದೆ ಸರಿದಿದ್ದು, ಈ ಪ್ರಾಯೋಜಕತ್ವದ ಹಕ್ಕನ್ನು ಒಪ್ಪೊ ಮೊಬೈಲ್ಸ್ ಇಂಡಿಯಾ ಪ್ರೈ.ಲಿ ಕಂಪನಿ ಪಡೆದುಕೊಂಡಿದೆ. ಒಪ್ಪೊ ಕಂಪನಿ ಈ ವರ್ಷ ಏಪ್ರಿಲ್ ನಿಂದ 2022ರವರೆಗೂ ಅಂದರೆ ಐದು ವರ್ಷಗಳ ಅವಧಿಗೆ ಟೀಂ ಇಂಡಿಯಾ ಪ್ರಾಯೋಜಕತ್ವದ ಹಕ್ಕು ಪಡೆದಿದೆ.

ಬಿಸಿಸಿಐ ಈ ಪ್ರಾಯೋಜಕತ್ವದ ಹರಾಜಿನಲ್ಲಿ ₹ 2.2 ಕೋಟಿ ಮೂಲಬೆಲೆಯನ್ನು ನಿಗದಿಪಡಿಸಿತ್ತು. ಆದರೆ ಒಪ್ಪೊ ಮೊಬೈಲ್ ಕಂಪನಿ ಈ ಹಕ್ಕು ಖರೀದಿಸಲು ನೀಡಿರುವ ಮೊತ್ತ ಕೇಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಕಾರಣ, ಒಪ್ಪೊ ಈ ಪ್ರಾಯೋಜಕತ್ವಕ್ಕಾಗಿ 162 ಮಿಲಿಯನ್ ಅಮೆರಿಕನ್ ಡಾಲರ್ (₹ 1,079 ಕೋಟಿ) ಹಣ ತೆತ್ತಿದೆ. ಇದರ ಜತೆಗೆ ಕಂಪನಿಯು ಉಭಯ ದೇಶಗಳ ಸರಣಿಯ ಪ್ರತಿ ಪಂದ್ಯಕ್ಕೆ ₹ 4.61 ಕೋಟಿ ಹಾಗೂ ಐಸಿಸಿ ಆಯೋಜಿಸುವ ಟೂರ್ನಿಯ ಪ್ರತಿ ಪಂದ್ಯಕ್ಕೆ ₹ 1.56 ಕೋಟಿ ನೀಡಬೇಕಿದೆ ಎಂದು ವರದಿಗಳು ತಿಳಿಸಿವೆ.

ಸದ್ಯ ಆದಾಯ ಹಂಚಿಕೆ ವಿಷಯವಾಗಿ ಬಿಸಿಸಿಐ ಹಾಗೂ ಐಸಿಸಿ ನಡುವಣ ಹಗ್ಗಜಗ್ಗಾಟ ಚಾಂಪಿಯನ್ಸ್ ಟ್ರೋಫಿ ಸರಣಿ ಮೇಲೆ ಕರಿ ನೆರಳು ಆವರಿಸುವಂತೆ ಮಾಡಿದೆ. ಒಂದು ವೇಳೆ ಭಾರತ ಚಾಂಪಿಯನ್ಸ್ ಟ್ರೋಫಿ ಆಡಿದರೆ ಈ ಟೂರ್ನಿಯಿಂದಲೇ ಈ ಹೊಸ ಜೆರ್ಸಿಯಲ್ಲಿ ಭಾರತದ ಆಟಗಾರರು ಕಣಕ್ಕಿಳಿಯಲಿದ್ದಾರೆ.

Leave a Reply