ಚರ್ಚ್ ಗಳಿಗೆ ರಾಜಕೀಯವಾಗಿ ಗುರುತಿಸಿಕೊಳ್ಳಲು ಅವಕಾಶ! ಇದು ಡೊನಾಲ್ಡ್ ಟ್ರಂಪ್ ಮುಂದಿನ ಹೆಜ್ಜೆ

ಡಿಜಿಟಲ್ ಕನ್ನಡ ಟೀಮ್:

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಮತ್ತೊಂದು ಕಾನೂನು ಆದೇಶಕ್ಕೆ ಸಹಿ ಹಾಕಲು ಮುಂದಾಗುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಇನ್ನು ಮುಂದೆ ಅಮೆರಿಕದಲ್ಲಿನ ಚರ್ಚ್ ಗಳು ತಮಗೆ ಬೇಕಾದ ರಾಜಕೀಯ ಗುಂಪಿನ ಜತೆ ಮುಕ್ತವಾಗಿ ಗುರುತಿಸಿಕೊಳ್ಳಬಹುದಾಗಿದೆ. ಇದರಿಂದ ಚರ್ಚ್ ಗಳ ಆದಾಯಕ್ಕೆ ಯಾವುದೇ ರೀತಿಯ ಬ್ರೇಕ್ ಹಾಕಲಾಗುವುದಿಲ್ಲ ಎಂಬ ಆದೇಶಕ್ಕೆ ಟಂಪ್ ಸಹಿ ಹಾಕಲಿದ್ದಾರೆ.

ಇಷ್ಟು ದಿನಗಳ ಕಾಲ ಅಮೆರಿಕದಲ್ಲಿ ಚರ್ಚ್ ಗಳು ಯಾವುದೇ ರಾಜಕೀಯ ಗುಂಪಿನೊಂದಿಗೆ ಕಾಣಿಸಿಕೊಳ್ಳುವಂತಿರಲಿಲ್ಲ.  ಒಂದು ವೇಳೆ ಕಾಣಿಸಿಕೊಂಡರೆ ಆ ಚರ್ಚ್ ಗಳಿಗೆ ನೀಡಲಾಗುವ ತೆರಿಗೆ ವಿನಾಯಿತಿಯನ್ನು ತೆಗೆದು ಹಾಕುವ ಅವಕಾಶವು ತೆರಿಗೆ ಕಾನೂನಿನಲ್ಲಿತ್ತು. ಈ ಕಾನೂನು ಬಳಸಿಕೊಂಡು ಯಾರನ್ನೂ ನಿರ್ಬಂಧಿಸಿದ ಉದಾಹರಣೆ ಇಲ್ಲವಾದರೂ ಹಾಗೊಂದು ಅವಕಾಶವಿತ್ತು. ಆದರೆ ಅದನ್ನು ತೆರವುಗೊಳಿಸುವತ್ತ ಹೆಜ್ಜೆ ಹಾಕಿರುವ ಟ್ರಂಪ್ ರಾಜಕಾರಣದಲ್ಲಿ ಧರ್ಮಕಾರಣವನ್ನು ಖುಲ್ಲಂಖುಲ್ಲಾ ಆಗಿಸುತ್ತಿದ್ದಾರೆ.  ಈಗ ಟ್ರಂಪ್ ಅವರ ತಮ್ಮ ಹೊಸ ನಿರ್ಧಾರದಲ್ಲಿ ಚರ್ಚ್ ಗಳು ರಾಜಕೀಯವಾಗಿ ಗುರುತಿಸಿಕೊಂಡರೂ ಅವುಗಳಿಗೆ ನೀಡಲಾಗುವ ತೆರಿಗೆ ವಿನಾಯಿತಿ ಮುಂದುವರಿಯಲಿದೆ. ಆ ಮೂಲಕ ಚರ್ಚ್ ಗಳಿಗೆ ರಾಜಕೀಯವಾಗಿ ಗುರುತಿಸಿಕೊಳ್ಳುವ ಅವಕಾಶ ಮಾಡಿಕೊಡುತ್ತಿದ್ದಾರೆ. ‘ಈ ಬಗ್ಗೆ ಟ್ರಂಪ್ ಗುರುವಾರ ಸಹಿ ಹಾಕುವ ಸಾಧ್ಯತೆ ಇದ್ದು, ಇದು ಅಂತಿಮ ನಿರ್ಧಾರವಲ್ಲ’ ಎಂದು ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ.

ಟ್ರಂಪ್ ಅಧ್ಯಕ್ಷ ಸ್ಥಾನಕ್ಕೆ ಏರುವಲ್ಲಿ ಚರ್ಚ್ ಗಳ ನೆರವು ಪ್ರಮುಖವಾಗಿರುವ ಹಿನ್ನೆಲೆಯಲ್ಲಿ ಟ್ರಂಪ್ ಪ್ರತಿಯಾಗಿ ಈ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಆದೇಶವನ್ನು ಬಳಸಿಕೊಂಡು ಟ್ರಂಪ್ ಸಲಿಂಗ ವಿವಾಹ ಹಾಗೂ ಭ್ರೂಣ ಹತ್ಯೆಯಂತಹ ಕ್ರಮಗಳ ವಿರುದ್ಧ ಕಠಿಣ ನಿಲುವು ತಾಳಬೇಕು ಎಂಬುದು ಕ್ರೈಸ್ತ ಸಂಪ್ರದಾಯವಾದಿಗಳ ನಿರೀಕ್ಷೆಯಾಗಿದೆ.

Leave a Reply