ಜಮ್ಮು ಕಾಶ್ಮೀರದಲ್ಲಿ 15 ವರ್ಷಗಳಲ್ಲೇ ಅತಿ ದೊಡ್ಡ ತಪಾಸಣಾ ಕಾರ್ಯಾಚರಣೆ, ಯೋಧರು ಪ್ರತಿ ಮನೆಯನ್ನು ಶೋಧಿಸುತ್ತಿರುವುದೇಕೆ ಗೊತ್ತೆ?

ಡಿಜಿಟಲ್ ಕನ್ನಡ ಟೀಮ್:

ನಿರಂತರವಾಗಿ ನಡೆಯುತ್ತಿರುವ ಉಗ್ರರ ದಾಳಿಗೆ ಬ್ರೇಕ್ ಹಾಕುವ ಸಲುವಾಗಿ ಜಮ್ಮು ಕಾಶ್ಮೀರ ಪೊಲೀಸರು ಹಾಗೂ ಸೇನಾ ಪಡೆ ಜಂಟಿಯಾಗಿ ‘ರಕ್ಷಣಾ ಕಾವಲು ಹಾಗೂ ಶೋಧಕಾರ್ಯ’ ಆರಂಭಿಸಿದೆ. ನಿನ್ನೆ ಸಂಜೆ ಶೋಪಿಯಾನ್ ಪ್ರದೇಶದಲ್ಲಿ 62 ರಾಷ್ಟ್ರೀಯ ರೈಫಲ್ಸ್ ಭದ್ರತಾ ಸಿಬ್ಬಂದಿ ಕರೆದೊಯ್ಯುತ್ತಿದ್ದ ವಾಹನದ ಮೇಲೆ ಉಗ್ರರ ದಾಳಿ ನಡೆದಿದ್ದು, ಚಾಲಕ ಮೃತಪಟ್ಟರೆ, ನಾಲ್ವರು ಯೋಧರಿಗೆ ಗಾಯವಾಗಿದೆ.

ಈ ದಾಳಿಯ ಹೊಣೆಯನ್ನು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಹೊತ್ತುಕೊಂಡಿದೆ. ಈ ಪ್ರಕರಣದ ಬೆನ್ನಲ್ಲೇ ಪೊಲೀಸ್ ಹಾಗೂ ಸೈನಿಕರ ಪಡೆಗಳು ಜಂಟಿಯಾಗಿ ಕಳೆದ 15 ವರ್ಷಗಳಲ್ಲಿ ದೊಡ್ಡ ಮಟ್ಟದ ರಕ್ಷಣೆ ಹಾಗೂ ಶೋಧ ಕಾರ್ಯವನ್ನು ಆರಂಭಿಸಿವೆ. ಈ ಶೋಧಕಾರ್ಯದ ಬಗ್ಗೆ ಸೇನಾ ಮುಖ್ಯಸ್ಥ ಜೆನರಲ್ ಬಿಪಿನ್ ರಾವತ್ ಪ್ರತಿಕ್ರಿಯೆ ನೀಡಿದ್ದು, ‘ಜಮ್ಮು ಕಾಶ್ಮೀರದಲ್ಲಿ ಕೆಲವು ಬ್ಯಾಂಕುಗಳ ದರೋಡೆ ಮತ್ತು ಪೊಲೀಸರ ಹತ್ಯೆಯಾಗಿರುವ ಹಿನ್ನೆಲೆಯಲ್ಲಿ ಶೋಧ ಕಾರ್ಯ ಆರಂಭವಾಗಿದೆ. ಈ ಕಾರ್ಯವನ್ನು ನಿರಂತರವಾಗಿ ಮುಂದುವರಿಸಲಿದ್ದು, ಜಮ್ಮು ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸುವವರೆಗೂ ಈ ಕಾರ್ಯಾಚರಣೆ ನಡೆಸುತ್ತೇವೆ’ ಎಂದಿದ್ದಾರೆ.

ಇತ್ತೀಚೆಗೆ ಬ್ಯಾಂಕುಗಳ ಲೂಟಿ, ಕಲ್ಲುತೂರಾಟ, ಸೇನಾ ಪಡೆಗಳ ಮೇಲೆ ದಾಳಿ ಪ್ರಕರಣಗಳು ಹೆಚ್ಚಾಗಿದ್ದು, ಜಮ್ಮು ಕಾಶ್ಮೀರದಲ್ಲಿ ಉಗ್ರರು ಯಾರು, ನಾಗರೀಕರು ಯಾರು ಎಂದು ತಿಳಿಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ನಾಗರೀಕರು ಕಲ್ಲು ತೂರಾಟ ನಡೆಸಿರುವುದು, ನಾಗರೀಕರ ನಡುವೆ ಬ್ಯಾಂಕುಗಳಿಗೆ ನುಗ್ಗಿ ದೋಚಿರುವುದು ಈ ಗೊಂದಲಕ್ಕೆ ಕಾರಣವಾಗಿದ್ದು, ಹೀಗಾಗಿ ಉಗ್ರರನ್ನು ಜಾಲಾಡಲು ಈ ಕಾರ್ಯಾಚರಣೆ ಆರಂಭಿಸಲಾಗಿದೆ.

ಇನ್ನು ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿರುವ ಹಿರಿಯ ಸೇನಾ ಅಧಿಕಾರಿಯೊಬ್ಬರು ಈ ಕಾರ್ಯಾಚರಣೆ ಬಗ್ಗೆ ಹೇಳಿರೋದಿಷ್ಟು…

‘ಈ ಪ್ರದೇಶದಲ್ಲಿ ಪೊಲೀಸ್ ಹಾಗೂ ಸೇನಾ ಪಡೆಗಳ ಜಂಟಿ ರಕ್ಷಣಾ ಕಾರ್ಯ ಕಳೆದ 15 ವರ್ಷಗಳಲ್ಲೇ ದೊಡ್ಡ ಪ್ರಮಾಣದ್ದಾಗಿದೆ. ಈ ಕಾರ್ಯಾಚರಣೆ ಮೂಲಕ ಉಗ್ರರ ಮೇಲೆ ಒತ್ತಡ ಹಾಕಿ ಅವರು ನೆಮ್ಮದಿಯಾಗಿರುವುದನ್ನು ಅಡ್ಡಿ ಪಡಿಸಲಾಗುವುದು. ರಾಂಬಿ ಅರಾ ನದಿಯ ಸುತ್ತ ಮುತ್ತಲ ಪ್ರದೇಶ ಉಗ್ರರಿಗೆ ಅವಿತುಕೊಳ್ಳಲು ಉತ್ತಮ ಜಾಗವಾಗಿದೆ. ಈಗ ರಕ್ಷಣಾ ಕಾರ್ಯ ಆರಂಭವಾಗಿರುವುದರಿಂದ ಅವರು ದೊಡ್ಡ ಸಂಖ್ಯೆಯಲ್ಲಿ ದಾಳಿ ಮಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಒಟ್ಟು 4000 ಸಿಬ್ಬಂದಿ ಭಾಗಿಯಾಗಿದ್ದಾರೆ. ಆ ಪೈಕಿ ರಾಷ್ಟ್ರೀಯ ರೈಫಲ್ ಪಡೆಯ 4 ಬೆಟಾಲಿಯನ್, ಸಿಆರ್ ಪಿಎಫ್ ನ 8 ಪಡೆಗಳು, ಜಮ್ಮು ಕಾಶ್ಮೀರ ಪೊಲೀಸ್ ಇಲಾಖೆಯ ಐದು ಪಡೆಗಳು, 30 ಮಹಿಳಾ ಕಾನ್ಸ್ ಸ್ಟೇಬಲ್ ಗಳು ಹಾಗೂ ಭಾರತೀಯ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.’

Leave a Reply