ಕೇಸರಿಯ ತುಸು ರಂಗೀಗ ಎಲ್ಲರಿಗೂ ಬೇಕು! ಕುಮಾರ್ ವಿಶ್ವಾಸರನ್ನು ಆಪ್ ನಲ್ಲೇ ಉಳಿಸಿಕೊಂಡ ಕೇಜ್ರಿವಾಲ್ ನಡೆ ಸಾರುತ್ತಿರುವ ಸತ್ಯ

ಚೈತನ್ಯ ಹೆಗಡೆ

ತನ್ನ ವಿರುದ್ಧ ತುಸುವೇ ಪ್ರತಿರೋಧ ಒಡ್ಡಿದವರನ್ನು ಅರವಿಂದ ಕೇಜ್ರಿವಾಲ್ ಪಕ್ಷದಲ್ಲಿರಿಸಿಕೊಂಡ ಉದಾಹರಣೆಯೇ ಇಲ್ಲ. ಕಾನೂನು ಸಮರಗಳ ವೇಳೆಯಲ್ಲೆಲ್ಲ ಆಸ್ತಿಯಾಗಬಲ್ಲ ಪ್ರಶಾಂತ್ ಭೂಷಣ್, ದೆಹಲಿ ಮಟ್ಟದಲ್ಲಿ ಮಾಧ್ಯಮ ಪ್ರಭಾವ ಉಳಿಸಿಕೊಂಡಿರುವ ಯೋಗೇಂದ್ರ ಯಾದವ್ ಇಂಥವರನ್ನೇ ಆಪ್ ನಿಂದ ಹೊರಗಟ್ಟಿದ ಖ್ಯಾತಿ ಕೇಜ್ರಿವಾಲರದ್ದು.

ಹೀಗಿರಲಾಗಿ ಕುಮಾರ್ ವಿಶ್ವಾಸ್, ಆಪ್ ನೀತಿಯ ವಿರುದ್ಧ ಬಹಿರಂಗವಾಗಿ ಆಕ್ಷೇಪಗಳನ್ನು ವ್ಯಕ್ತಪಡಿಸಿದ ಮೇಲೂ ಪಕ್ಷದಲ್ಲೇ ಮುಂದುವರಿದಿದ್ದು, ಸಂಘಟನೆ ದೃಷ್ಟಿಯಿಂದ ಜವಾಬ್ದಾರಿ ಹೆಚ್ಚಿಸಿಕೊಂಡಿರುವುದು ಮ್ಯಾಜಿಕ್ ರೀತಿಯಲ್ಲಿ ಕಾಣದಿರದೇ? ಅದೂ ‘ಕುಮಾರ್ ವಿಶ್ವಾಸ್ ಬಿಜೆಪಿ-ಆರೆಸ್ಸೆಸ್ ಏಜೆಂಟ್’ ಎಂದು ಆರೋಪಿಸಿದ ಅಮಾನತುಲ್ಲಾ ಎಂಬ ಮುಸ್ಲಿಂ ಶಾಸಕನನ್ನು ಅಮಾನತು ಮಾಡಿ ಕುಮಾರ ವಿಶ್ವಾಸರನ್ನು ಉಳಿಸಿಕೊಳ್ಳುವಷ್ಟು ‘ಒಳ್ಳೆತನ’ ಅರವಿಂದ ಕೇಜ್ರಿವಾಲರಿಗೆ ಬಂದಿದ್ದೆಲ್ಲಿಂದ? ಇಷ್ಟಕ್ಕೂ ಈ ಕುಮಾರ್ ವಿಶ್ವಾಸ್ ಒಂದು ಚುನಾವಣೆಯನ್ನೂ ಗೆದ್ದವರಲ್ಲ. ಜನರನ್ನು ಆಕರ್ಷಿಸುವ, ಕವಿತೆ ಹೊಸೆದು ಮರಳು ಮಾಡುವ ಚಾಕಚಕ್ಯತೆ ಇದೆಯಾದರೂ ಅಮೇಥಿಯಲ್ಲಿ ರಾಹುಲ್ ಗಾಂಧಿ ಮತ್ತು ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸಿ ಕೇವಲ 25 ಸಾವಿರ ಮತ ಗಳಿಸಿ ಮೂಲೆಗುಂಪಾದ ವ್ಯಕ್ತಿ.

ಆದರೆ…

ಎಡಪಂಥೀಯ ಎನ್ಜಿಒಗಳ ಪ್ರತಿನಿಧಿಯಂತಿರುವ ಆಮ್ ಆದ್ಮಿ ಪಕ್ಷದಲ್ಲಿ ತುಸು ಕೇಸರಿಯ ಅರ್ಥಾತ್ ತುಸು ಬಲಪಂಥೀಯ ರಾಷ್ಟ್ರವಾದದ ರಂಗು ಮೆತ್ತಿಕೊಂಡಿರುವುದು ಕುಮಾರ್ ವಿಶ್ವಾಸಗೆ ಮಾತ್ರ. ಬಹುಶಃ, ತಾನೆಷ್ಟೇ ದ್ವೇಷಿಸಿದರೂ ಇಂಥದೊಂದು ಕೇಸರಿಯ ರಂಗೇ ಚುನಾವಣೆಗಳಲ್ಲಿ ಜನಮನ್ನಣೆ ಗಳಿಸುತ್ತಿದೆ ಎಂಬ ಹೇಳಿಕೊಳ್ಳಲಾಗದ ಜ್ಞಾನೋದಯವೊಂದು ಕೇಜ್ರಿವಾಲರಿಗೆ ಆಗಿದೆ.

ಜಮ್ಮು-ಕಾಶ್ಮೀರದಲ್ಲಿ ಪಾಕಿಸ್ತಾನ ಹೇಳಿದಂತೆ ಜನಮತವಾಗಬೇಕು ಎನ್ನುವುದರಿಂದ ಬುದ್ಧಿಜೀವಿಗಳ ಚಪ್ಪಾಳೆ ಗಿಟ್ಟಿಸಬಹುದಾಗಲೀ, ಭಾರತೀಯರ ವೋಟುಗಳನ್ನಲ್ಲ ಎಂಬುದು ಗಟ್ಟಿಯಾಗುತ್ತಿದೆ. ಗುರಿ ನಿರ್ದಿಷ್ಟ ದಾಳಿಗೆ ಶಂಕೆ ವ್ಯಕ್ತಪಡಿಸುವುದು, ಆತ್ಮಹತ್ಯೆ ಪ್ರಕರಣಗಳನ್ನಿಟ್ಟುಕೊಂಡು ದಲಿತೋದ್ಧಾರದ ಸ್ಲೋಗನ್ ಹಾಕುವುದು ಇವೆಲ್ಲ ಸುದ್ದಿಯಲ್ಲಿರುವುದಕ್ಕೆ ಸಹಕರಿಸುತ್ತವೆಯಾದರೂ ಜನರಿಂದ ದೂರವಾಗಿಸುತ್ತಿವೆ ಎಂಬುದು ಎಂಥ ದಡ್ಡನಿಗೂ ಅರ್ಥವಾಗಬೇಕಾದ ಸತ್ಯ. ಇಂಥ ಕ್ಷುಲ್ಲಕ ಕೇಜ್ರಿವಾಲ್ ಸೂತ್ರಗಳಿಗೆ ಭಿನ್ನ ಧ್ವನಿ ಕುಮಾರ್ ವಿಶ್ವಾಸ್ ಅವರದ್ದು.

ಕುಮಾರ್ ವಿಶ್ವಾಸ್ ನಿಜಕ್ಕೂ ಕೇಸರಿಯೋ ಅಥವಾ ಅವಕಾಶವಾದಿಯೋ ಎಂಬುದೆಲ್ಲ ಬೇರೆಯದೇ ಚರ್ಚೆಯ ವಿಷಯ. ಅಂಥ ಚರ್ಚೆಗಳನ್ನು ಎಲ್ಲ ಸಿದ್ಧಾಂತವಾದಿಗಳ ಕುರಿತೂ ಮಾಡಬಹುದು. ಆದರೆ, ದೇಶದ ಭದ್ರತೆ ಅದರ ಶೌರ್ಯದ ಅಭಿವ್ಯಕ್ತಿ ಬಹಳ ಪ್ರಮುಖ ಎನ್ನುವ ಅಭಿಪ್ರಾಯವನ್ನು ಕುಮಾರ್ ವಿಶ್ವಾಸ್ ತಮ್ಮ ಕವಿತಾ ಪ್ರದರ್ಶನಗಳಲ್ಲೂ ಹೇಳುತ್ತಲೇ ಬಂದಿದ್ದಾರೆ. ಕೆಲವಾದರೂ ವಿಷಯಗಳಲ್ಲಿ ನರೇಂದ್ರ ಮೋದಿಯನ್ನು ಪ್ರಶಂಸಿಸುವುದಕ್ಕೆ ಯಾವತ್ತೂ ಹಿಂಜರಿಕೆ ಇಟ್ಟುಕೊಂಡಿಲ್ಲ. ಆಪ್ ಹೊರತುಪಡಿಸಿ ನೀವು ಕುಮಾರ್ ವಿಶ್ವಾಸರ ಖಾಸಗಿ ಕಾರ್ಯಕ್ರಮಗಳನ್ನು ನೋಡಿದರೆ ಅಲ್ಲೆಲ್ಲ ಬಲಪಂಥೀಯರ ಪರಿಕಲ್ಪನೆಗಳಾದ ಭಾರತದ ಪರಂಪರೆಯ ಕುರಿತಾದ ಹೆಮ್ಮೆ, ಸಂತ ಪರಂಪರೆಯ ಹೆಮ್ಮೆಯ ಉಲ್ಲೇಖ… ಇಂಥವೆಲ್ಲ ಕಾಣುತ್ತವೆ.

ಪಂಜಾಬಿನಲ್ಲಿ ಹಿನ್ನಡೆ ಹಾಗೂ ದೆಹಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹೀನಾಯ ಸೋಲಿನ ನಂತರ ಅರವಿಂದ ಕೇಜ್ರಿವಾಲರಿಗೆ ತಮ್ಮ ಪಕ್ಷ ಸಹ ತುಸು ಕೇಸರಿಯ ರಂಗಿರಿಸಿಕೊಂಡರೆ ಅದರಿಂದ ಲಾಭ ಏನಾಗುತ್ತದೋ ಬಿಡುತ್ತದೋ ಆದರೆ ಲುಕ್ಸಾನಂತೂ ಆಗುವುದಿಲ್ಲ ಎಂಬುದು ಮನದಟ್ಟಾದಂತಿದೆ. ಹಾಗಂತ ಕೇಜ್ರಿವಾಲ್ ಸಂಪೂರ್ಣ ವರಸೆ ಬದಲಾಯಿಸುತ್ತಾರೆ ಅಂತಲ್ಲ. ಆದರೆ ಕೇಜ್ರಿವಾಲರಿಗಾಗಲೀ, ಕಾಂಗ್ರೆಸ್ಸಿಗಾಗಲೀ ಅಥವಾ ಇನ್ಯಾವುದೇ ಪಕ್ಷಕ್ಕಾಗಲೀ ಮುಂಬರುವ ದಿನಗಳಲ್ಲಿ ಭಾರತದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಾದರೆ ರಾಷ್ಟ್ರವಾದದ ಧ್ವನಿಗಳಿಗೆ ಜಾಗ ಕೊಡಲೇಬೇಕಾದ, ಕೇಸರಿಯೆಂಬುದು ತಮಗೆ ಒಗ್ಗದ ಬಣ್ಣ ಎಂಬ ಭಾವನೆಯಿಂದ ಹೊರಬರಲೇಬೇಕಾದ ಒತ್ತಡ ಸೃಷ್ಟಿಯಾಗಿದೆ.

ಹಾಗೆ ನೋಡಿದರೆ ಬಲಪಂಥೀಯ ವಿಚಾರಧಾರೆ, ರಾಷ್ಟ್ರವಾದಗಳು ಕೇವಲ ಭಾರತದಲ್ಲಿ ಮಾತ್ರ ಪ್ರಜ್ವಲಿಸುತ್ತಿರುವುದೇನಲ್ಲ. ಅಮೆರಿಕ, ಫ್ರಾನ್ಸ್ ಹೀಗೆ ಒಂದೊಂದಾಗಿ ಪಾಶ್ಚಾತ್ಯ ಶಕ್ತಿಗಳೆಲ್ಲ ಅತಿ ಉದಾರವಾದದ ಮಾತುಗಳನ್ನು ಪಕ್ಕಕ್ಕಿಟ್ಟು ದೇಶ ಮೊದಲೆಂಬ ಭಾವನೆಯನ್ನು ಪ್ರಖರವಾಗಿಸುತ್ತಿವೆ.

ರಾಷ್ಟ್ರಮಟ್ಟದಲ್ಲಿ ತೀರ ಬಲಹೀನವಾಗಿರುವ ಕಾಂಗ್ರೆಸ್ಸಿನಲ್ಲಿ ಸಹ ಇವತ್ತಿಗೆ ಪ್ರಸ್ತುತ ಎನಿಸುವಂಥವರು, ಕಾಂಗ್ರೆಸ್ ವಿರೋಧಿ ಸಮೂಹವೂ ತುಸು ಆಸಕ್ತಿ ವಹಿಸುವಂಥವರೆಂದರೆ ಶಶಿ ತರೂರ್ ಅಂಥವರು. ಅವರ ಮೇಲಿನ ಶಂಕೆಗಳೇನೇ ಇರಲಿ, ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನು ಖಂಡಿಸುತ್ತ ಭಾರತದ ಪುರಾತನ ಅಂತಃಸತ್ವವನ್ನು ಕಟ್ಟಿಕೊಟ್ಟ ಅವರ ಕೆಲವೇ ನಿಮಿಷಗಳ ಡಿಬೇಟು ವೈರಲ್ ಆಗಿಬಿಟ್ಟಿತು. ಅವರ ಬಗ್ಗೆ ಆಪ್ತಭಾವವನ್ನೂ ಚಿಮ್ಮಿಸಿಬಿಟ್ಟಿತು.

ಬುದ್ಧಿಜೀವಿ ಬಳಗವು ಅದೆಷ್ಟೇ ನಿರಾಕರಣ ಮನಸ್ಥಿತಿ ತೋರಿದರೂ ಕೊನೆಗೂ ಕೇಸರಿಯ ರಂಗೇ ಭಾರತೀಯರ ಮನಸೂರೆ ಮಾಡುತ್ತಿದೆ ಎಂಬುದು ವರ್ತಮಾನದ ಸತ್ಯ.

 

Leave a Reply