ರಾಷ್ಟ್ರಪತಿ ಹುದ್ದೆ: ಮೋದಿಯ ಅಚ್ಚರಿದಾಯಕ ಆಯ್ಕೆಗಳ ಪೈಕಿ ಪರಿಶಿಷ್ಟ ಪಂಗಡದ ಈಕೆಯೂ ಇದ್ದಿರಬಹುದು!

ಡಿಜಿಟಲ್ ಕನ್ನಡ ಟೀಮ್:

ಪ್ರಣಬ್ ಮುಖರ್ಜಿ ಅವರ ನಿರ್ಗಮನದ ನಂತರ ತೆರವಾಗಲಿರುವ ರಾಷ್ಟ್ರಪತಿ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬ ಕಾತುರ ದಿನೇ ದಿನೇ ಹೆಚ್ಚಾಗುತ್ತಿದೆ. ಜೂನ್ 25ಕ್ಕೆ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಈ ಕುರಿತು ಸಾಕಷ್ಟು ಕುತೂಹಲ ಮೂಡಿದೆ.

ಪ್ರತಿ ಪಕ್ಷಗಳೆಲ್ಲವೂ ಒಟ್ಟಾಗಿ ಸೇರಿ ಓರ್ವ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿವೆ. ಇತ್ತ ಬಿಜೆಪಿ ಕಡೆಯಿಂದ ಈ ಸ್ಥಾನಕ್ಕೆ ಪಕ್ಷದ ಧುರೀಣ ಎಲ್.ಕೆ ಅಡ್ವಾಣಿಯಿಂದ ಹಿಡಿದು ಹಿರಿಯ ನಾಯಕ ಮುರಳಿ ಮನೋಹರ್ ಜೋಷಿ, ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಹೆಸರುಗಳು ಕೇಳಿಬಂದಿವೆ.

ಪ್ರತಿಪಕ್ಷಗಳು ಹಾಗೂ ಬಿಜೆಪಿ ಪಾಳಯದಿಂದ ಅಭ್ಯರ್ಥಿ ಹೆಸರು ಅಂತಿಮವಾಗಿಲ್ಲ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ನಾಯಕರ ಹೊರತಾಗಿ ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ ಅಥವಾ ಅಬ್ದುಲ್ ಕಲಾಂ ರೀತಿಯಲ್ಲಿ ಯಾರಾದರು ವಿಜ್ಞಾನಿಗಳ  ಹಾಗೂ ಖ್ಯಾತನಾಮರ ಹೆಸರನ್ನು ಸೂಚಿಸಿ ಅಚ್ಚರಿ ಮೂಡಿಸಿದರೂ ಆಶ್ಚರ್ಯಪಡುವಂತಿಲ್ಲ. ಇಂತಹ ಕುತೂಹಲಕಾರಿ ಚರ್ಚೆಗಳು ಆಗುತ್ತಿರುವ ಬೆನ್ನಲ್ಲೇ ಬಿಜೆಪಿ ಪಾಳಯದಿಂದ ಪರಿಶಿಷ್ಟ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಆ ಪರಿಶಿಷ್ಟ ಸಮುದಾಯವನ್ನು ಪ್ರತಿನಿಧಿಸುವ ಆ ಅಭ್ಯರ್ಥಿ ಯಾರು ಎಂದರೆ, ಜಾರ್ಖಂಡಿನ ಹಾಲಿ ರಾಜ್ಯಪಾಲರಾದ ದ್ರೌಪದಿ ಮುರ್ಮು.

ಹೌದು, ಒಂದು ವೇಳೆ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಆಗಿದ್ದೇ ಆದರೆ, ಹೊಸ ಇತಿಹಾಸ ಬರೆಯಲಿದ್ದಾರೆ. ಅದೇನೆಂದರೆ, ಭಾರತದ ರಾಷ್ಟ್ರಪತಿ ಸ್ಥಾನ ಅಲಂಕರಿಸಿದ ಮೊದಲ ಬುಡಕಟ್ಟು ಸಮುದಾಯದ ನಾಯಕಿ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ. ಒಂದು ಬುಡಕಟ್ಟು ಸಮುದಾಯದ ಅಭ್ಯರ್ಥಿಯನ್ನು ರಾಷ್ಟ್ರಪತಿ ಸ್ಥಾನದಲ್ಲಿ ಕೂರಿಸಿದರೆ, ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಕ್ಕೆ ಒಂದು ವಿಭಿನ್ನ ಸಂದೇಶವನ್ನೇ ರವಾನಿಸಿದಂತಾಗಲಿದೆ.

ಈಗಾಗಲೇ, 2015ರ ಮೇ ನಲ್ಲಿ ಜಾರ್ಖಂಡಿನ ರಾಜ್ಯಪಾಲ ಹುದ್ದೆ ಅಲಂಕರಿಸುವ ಮೂಲಕ ಆ ರಾಜ್ಯದ ಮೊದಲ ಮಹಿಳಾ ರಾಜ್ಯಪಾಲೆ ಎಂಬ ಹೆಗ್ಗಳಿಕೆ ಹಾಗೂ ಒಡಿಶಾದಿಂದ ಭಾರತದ ರಾಜ್ಯವೊಂದಕ್ಕೆ ರಾಜ್ಯಪಾಲರಾದ ಮೊದಲ ಮಹಿಳೆ ಎಂಬ ಗೌರವಕ್ಕೆ ಭಾಜನರಾಗಿದ್ದಾರೆ. ಈಗ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿ ಮತ್ತೊಂದು ಸಾಧನೆ ಮಾಡುವರೇ ಎಂಬ ಕುತೂಹಲ ಮೂಡಿಸಿದೆ.

ಈ ದ್ರೌಪದಿ ಮುರ್ಮು ಅವರು ಯಾರು? ಅವರ ಹಿನ್ನೆಲೆ ಏನು ಎಂಬುದನ್ನು ನೋದುವುದಾದರೆ…, ಮುರ್ಮು ಅವರು ಬುಡಕಟ್ಟು ಸಮುದಾಯಕ್ಕೆ ಸೇರಿದವರಾದರೂ 1997 ರಿಂದ ಇಲ್ಲಿಯವರೆಗೂ ಅಂದರೆ ಸುದೀರ್ಘ 2 ದಶಕಗಳ ಕಾಲ ರಾಜಕೀಯ ಹಾದಿಯಲ್ಲಿ ಸಾಗಿದ್ದಾರೆ. ರಾಜಕೀಯ ಸೇರುವ ಮುನ್ನ ಮುರ್ಮು ಅವರು ಭುವನೇಶ್ವರದ ರಮಾದೇವಿ ಮಹಿಳಾ ಕಲಾ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದಿದ್ದರು. ಅಲ್ಲದೆ ಶ್ರೀ ಒರೊಬಿಂದೊ ಇಂಟೆಗ್ರಲ್ ಎಜುಕೇಶನ್ ಅಂಡ್ ರಿಸರ್ಚ್ ಕಾಲೇಜಿನಲ್ಲಿ ಗೌರವಾನ್ವಿತ ಸಹಾಯಕ ಪ್ರಾಧ್ಯಪಕಿಯಾಗಿ ಕೆಲಸ ಮಾಡಿದ್ದರು.

1997ರಲ್ಲಿ ಒಡಿಶಾದ ರೈರಂಗಪುರ ಜಿಲ್ಲೆಯ ಕೌನ್ಸಿಲರ್ ಆಗಿ ಆಯ್ಕೆಯಾಗುವ ಮೂಲಕ ದ್ರೌಪದಿ ಅವರು ರಾಜಕೀಯಕ್ಕೆ ಪ್ರವೇಶಿಸಿದರು. ನಂತರ ಅದೇ ವರ್ಷ ರೈರಂಗಪುರದ ಉಪಾಧ್ಯಕ್ಷರಾಗಿಯು ಹುದ್ದೆ ಅಲಂಕರಿಸಿದರು. ಮೂರು ವರ್ಷಗಳ ನಂತರ ಇದೇ ಕ್ಷೇತ್ರದಿಂದ ವಿಧಾನ ಸಭೆಗೆ ಆಯ್ಕೆಯಾದರು. 2000-04ರವರೆಗಿನ ನವೀನ್ ಪಟ್ನಾಯಕ್ ಅವರ ಸರ್ಕಾರದಲ್ಲಿ ಸಂಚಾರ, ವಾಣಿಜ್ಯ ಹಾಗೂ ಪಶುಸಂಗೋಪನೆ ಇಲಾಖೆ ಸಚಿವೆಯಾದರು 2002ರಿಂದ 2009ರವರೆಗೆ ಏಳು ವರ್ಷಗಳ ಕಾಲ ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿದ್ದರು. ನಂತರ ಬಿಜೆಪಿಯ ರಾಷ್ಟ್ರೀಯ ಪರಿಶಿಷ್ಟ ಪಂಗಡ ಮೋರ್ಚಾದ ಕಾರ್ಯನಿರ್ವಾಹಕ ಸದಸ್ಯರಾಗಿದ್ದರು.

ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೋವು ಕಂಡಿರುವ ದ್ರೌಪದಿ ಅವರು ಈಗಾಗಲೇ ತಮ್ಮ ಗಂಡ ಹಾಗೂ ಇಬ್ಬರು ಗಂಡು ಮಕ್ಕಳನ್ನು ಕಳೆದುಕೊಂಡಿದ್ದಾರೆ. ಇನ್ನು ಈಕೆಯ ಮಗಳು ಮದುವೆಯಾಗಿದ್ದಾರೆ.

Leave a Reply