ದೂರದ ಮಿಜೋರಾಂನ ಐಜ್ವಾಲ್ ಫುಟ್ಬಾಲ್ ತಂಡದ ವಿಜಯವನ್ನು ಐತಿಹಾಸಿಕ ಎನ್ನುತ್ತಿರುವುದೇಕೆ ಗೊತ್ತೇ?

ಡಿಜಿಟಲ್ ಕನ್ನಡ ಟೀಮ್:

ಭಾರತದ ಪ್ರತಿಷ್ಠಿತ ಫುಟ್ಬಾಲ್ ಟೂರ್ನಿ ಐ-ಲೀಗ್ ನಲ್ಲಿ ಈ ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿರುವುದು ಮಿಜೋರಾಮಿನ ಐಜ್ವಾಲ್ ಎಫ್ ಸಿ ತಂಡ. ಟೂರ್ನಿಯಲ್ಲಿ ಭಾಗವಹಿಸಲು ಅರ್ಹತೆ ಕೈತಪ್ಪಿದ್ದ ಪರಿಸ್ಥಿತಿಯಲ್ಲಿ ತಂಡಕ್ಕೆ ಕೈ ಹಿಡಿದಿದ್ದು ಅದೃಷ್ಟ. ಈ ಅದೃಷ್ಟದ ಬಾಗಿಲಿನ ಮೂಲಕ ಟೂರ್ನಿಗೆ ಪ್ರವೇಶಿಸಿದ ಐಜ್ವಾಲ್ ಎಫ್ ಸಿ ಈಗ ದೇಶಿಯ ಫುಟ್ಬಾಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅದರೊಂದಿಗೆ ಹೊಸ ಇತಿಹಾಸ ಬರೆದಿದೆ.

ಇದೇ ಮೊದಲ ಬಾರಿಗೆ ಈಶಾನ್ಯ ರಾಜ್ಯ ಮಿಜೋರಾಮಿನ ಫುಟ್ಬಾಲ್ ತಂಡವೊಂದು ಐ ಲೀಗ್ ಗೆದ್ದ ಸಾಧನೆ ಐಜ್ವಾಲ್ ಎಫ್ ಸಿ ತಂಡದ್ದಾಗಿದೆ. ಈ ತಂಡದ ಯಶಸ್ಸಿನಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದ್ದು, ತಂಡದ ಕೋಚ್ ಖಲೀದ್ ಜಮಿಲ್. ಹೌದು, ಮುಂಬೈ ಮೂಲದ ಫುಟ್ಬಾಲ್ ತಾರೆಯಾಗಿದ್ದ ಖಲೀದ್ ಜಮೈಲ್, ಆಟಗಾರರಾಗಿರುವಾಗಲೇ ಐ ಲೀಗ್ ಟೂರ್ನಿ ಗೆಲ್ಲಬೇಕೆಂಬ ಕನಸು ಕಂಡಿದ್ದರು. ಆದರೆ ಕಳೆದ 10 ವರ್ಷಗಳ ಆಟಗಾರನಾಗಿ ಮಾಡದ ಸಾಧನೆಯನ್ನು ಈಗ ಕೋಚ್ ಆಗಿ ಮಾಡಿದ್ದಾರೆ.

ದೇಶದಲ್ಲಿ ಹೆಚ್ಚು ಗಮನ ಸೆಳೆಯ ಮಿಜೋರಾಮಿನ ಫುಟ್ಬಾಲ್ ತಂಡವೊಂದು ಚಾಂಪಿಯನ್ ಪಟ್ಟ ಅಲಂಕರಿಸಿರುವುದು ಸಾಮಾನ್ಯ ವಿಷಯವಲ್ಲ. ಈ ವರ್ಷದ ಟೂರ್ನಿ ಆರಂಭಕ್ಕೂ ಮುನ್ನ ಈ ತಂಡ ಐ ಲೀಗ್ ನಲ್ಲಿ ಭಾಗವಹಿಸುವುದೇ ಅನುಮಾನವಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ ಯಾರೊಬ್ಬರೂ ಐಜ್ವಾಲ್ ಎಫ್ ಸಿ ಚಾಂಪಿಯನ್ ಆಗಿ ಹೊರಹೊಮ್ಮಲಿದೆ ಎಂಬ ನಿರೀಕ್ಷೆ ಕಂಡಿರಲಿಲ್ಲ. ಈ ತಂಡ ಟೂರ್ನಿಗೆ ಕಾಲಿಟ್ಟಿದ್ದು ಹೇಗೆ, ನಂತರ ಚಾಂಪಿಯನ್ ಆಗಿ ಹೊರಹೊಮ್ಮಿದ್ದು ಹೇಗೆ ಎಂಬುದನ್ನು ನೋಡೋಣ ಬನ್ನಿ…

ಐಜ್ವಾಲ್ ಎಫ್ ಸಿ ತಂಡ ಕಳೆದ ಆವೃತ್ತಿಯಲ್ಲಿ ಐಜ್ವಾಲ್ ತಂಡ 9 ತಂಡಗಳ ಪೈಕಿ 8ನೇ ಸ್ಥಾನ ಪಡೆದಿತ್ತು. ಅಂತಿಮ ಸ್ಥಾನದಲ್ಲಿ ಇದ್ದ ಡಿಎಸ್ ಕೆ ಶಿವಾಜಿಯನ್ಸ್ ತಂಡಕ್ಕೆ ಎಐಎಫ್ಎಫ್ ನಿಂದ ಮೂರು ವರ್ಷಗಳ ವಿನಾಯಿತಿ ಇದ್ದ ಕಾರಣ ಈ ಬಾರಿಯ ಐ ಲೀಗ್ ಟೂರ್ನಿಗೆ ಐಜ್ವಾಲ್ ತಂಡದ ಬದಲಿಗೆ ಡಿಎಸ್ ಕೆ ಶಿವಾಜಿಯನ್ಸ್ ತಂಡ ಅರ್ಹತೆ ಪಡೆದಿತ್ತು. ಹೀಗಾಗಿ ಈ ಆವೃತ್ತಿಯಲ್ಲಿ ಐಜ್ವಾಲ್ ತಂಡ ಭಾಗವಹಿಸವ ಸಾಧ್ಯತೆ ಇರಲಿಲ್ಲ. ಆದರೆ, ಟೂರ್ನಿ ಆರಂಭದಕ್ಕೂ ಮುನ್ನ ಶಿವಾಜಿಯನ್ಸ್ ತಂಡ ಟೂರ್ನಿಯಿಂದ ಹಿಂದೆ ಸರಿಯಿತು. ಇದರಿಂದ ಐಜ್ವಾಲ್ ತಂಡಕ್ಕೆ ಅದೃಷ್ಟದ ಬಾಗಿಲಿನ ಮೂಲಕ ಟೂರ್ನಿಯಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. ಟೂರ್ನಿಯಲ್ಲಿ ಪ್ರವೇಶ ಪಡೆದ ಐಜ್ವಾಲ್ ಹಂತ ಹಂತವಾಗಿ ಪಂದ್ಯದಿಂದ ಪಂದ್ಯಕ್ಕೆ ನಿರೀಕ್ಷೆಗೂ ಮೀರಿ ಸಾಗಿತು. ಆಡಿದ 18 ಪಂದ್ಯಗಳ ಪೈಕಿ 11 ರಲ್ಲಿ ಜಯ, 4 ರಲ್ಲಿ ಡ್ರಾ ಹಾಗೂ ಕೇವಲ 3 ಪಂದ್ಯಗಳಲ್ಲಿ ಸೋತ ಐಜ್ವಾಲ್ 37 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ ಚಾಂಪಿಯನ್ ಆಯಿತು. ಆ ಮೂಲಕ ಮೊಹನ್ ಬಗಾನ್ (36), ಈಸ್ಟ್ ಬೆಂಗಾಲ್ (33), ಬೆಂಗಳೂರು ಎಫ್ ಸಿ (30) ಯಂತಹ ಮಾಜಿ ಚಾಂಪಿಯನ್ ತಂಡಗಳನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಯಿತು.

ಐಜ್ವಾಲ್ ತಂಡದ ಈ ಐತಿಹಾಸಿಕ ಸಾಧನೆಯನ್ನು ಕಳೆದ ವರ್ಷ ಇಂಗ್ಲೀಷ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಲೆಸಿಸ್ಟರ್ ತಂಡ ಚಾಂಪಿಯನ್ ಆಗಿ 132 ವರ್ಷಗಳ ಇತಿಹಾಸದಲ್ಲಿ ಮಾಡಿದ ಸಾಧನೆಗೆ ಹೋಲಿಕೆ ಮಾಡಲಾಗುತ್ತಿದೆ.

Leave a Reply