ಪಕ್ಷದ ಕಾರ್ಯಕಾರಣಿಯಲ್ಲೂ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ ಯಡಿಯೂರಪ್ಪ, ಸಂಘಟನೆಯ ಮಂತ್ರ ಜಪಿಸುವಾಗ ಕಾಣದ ಒಗ್ಗಟ್ಟಿನ ಉತ್ಸಾಹ?

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ಬಗೆಹರಿಸಲು ರಾಷ್ಟ್ರೀಯ ನಾಯಕರು ಎಷ್ಟೇ ತೇಪೆ ಹಾಕುವ ಕೆಲಸ ಮಾಡಿದರು, ಅದು ಸರಿಹೋಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಮೈಸೂರಿನಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಕಾರ್ಯಕಾರಣಿ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅಧ್ಯಕ್ಷೀಯ ಭಾಷಣ ಮಾಡುವಾಗ ಈಶ್ವರಪ್ಪ ಹಾಗೂ ಜಗದೀಶ್ ಶೆಟ್ಟರ್ ಅವರ ಮೇಲಿರುವ ತಮ್ಮ ಅಸಮಾಧಾನವನ್ನು ಪರೋಕ್ಷವಾಗಿ ಹೊರಹಾಕಿರುವುದೇ ಇದಕ್ಕೆ ಕಾರಣ.

ವೇದಿಕೆ ಮೇಲೆ ಪಕ್ಷದ ನಾಯಕರು ಒಬ್ಬರನ್ನೊಬ್ಬರು ಸ್ವಾಗತಿಸಿಕೊಳ್ಳುತ್ತಿರುವಾಗ ಈಶ್ವರಪ್ಪನವರು ನಮಸ್ಕರಿಸಿದರೂ ಅವರತ್ತ ತಿರುಗಿ ನೋಡದ ಯಡಿಯೂರಪ್ಪ ತಮ್ಮ ಮುನಿಸು ಪ್ರದರ್ಶಿಸಿದರು. ಇನ್ನು ಯಡಿಯೂರಪ್ಪನವರು ತಮ್ಮ ಭಾಷಣ ಆರಂಭಿಸಿದಾಗ, ವೇದಿಕೆ ಮೇಲೆ ಉಪಸ್ಥಿತರಿದ್ದ ಪಕ್ಷದ ನಾಯಕರುಗಳ ಹೆಸರನ್ನು ಹೇಳುತ್ತಾ ಬಂದರು. ಆದರೆ ಈಶ್ವರಪ್ಪ ಹಾಗೂ ಜಗದೀಶ್ ಶೆಟ್ಟರ ಅವರನ್ನು ಎರಡು ಮನೆಗಳು ವಿರೋಧ ಪಕ್ಷದ ನಾಯಕರು ಎಂದು ಉಚ್ಛರಿಸಿ ಅವರುಗಳ ಹೆಸರನ್ನು ಹೇಳದೇ ನಿರ್ಲಕ್ಷಿಸಿದರು.

‘ನಾನು ಎಂದಿಗೂ ಅಧಿಕಾರಕ್ಕೆ ಅಂಟಿ ಕೊಂಡವನಲ್ಲ. ಜೆಡಿಎಸ್ ಜತೆಗೆ ಮೈತ್ರಿ ಮಾಡಿಕೊಂಡಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿಯಾದ ಕೇವಲ ನಾಲ್ಕೈದು ದಿನಗಳಲ್ಲಿ ಆ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ರಾಜ್ಯದ ಉದ್ದಗಲ ಪ್ರವಾಸ ಮಾಡಿ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೆ. ನಾನು ಹಾಗೂ ಅನಂತಕುಮಾರ್ ಅವರು ಜತೆಯಾಗಿ ಈ ಪಕ್ಷವನ್ನು ಕಟ್ಟಿ ಬೆಳೆಸಿದ್ದೇವೆ. ಮುಂದಿನ ವಿಧಾನಸಭೆ ಚುನಾವಣೆ ಸಂಬಂಧ ನಾವು ಕೆಲಸ ಆರಂಭಿಸಬೇಕಿದ್ದು, 45 ದಿನಗಳ ಕಾಲ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಭೇಟಿ ಕೊಟ್ಟು ಅಲ್ಲಿನ ಎಲ್ಲ ವರ್ಗಗಳ ಮುಖಂಡರ ಜತೆ ಚರ್ಚಿಸಿ ಪಕ್ಷವನ್ನು ಸಂಘಟಿಸಬೇಕಿದೆ’ ಎಂದು ಹೇಳುತ್ತಾ ತಮ್ಮ ಮಾತಿನ ಮೂಲಕವು ಈ ಇಬ್ಬರು ನಾಯಕರಿಗೆ ಟಾಂಗ್ ಕೊಟ್ಟರು.

ಪಕ್ಷದ ರಾಷ್ಟ್ರೀಯ ನಾಯಕರುಗಳು ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯವನ್ನು ಬಹಿರಂಗವಾಗಿ ಹೊರಹಾಕುವಂತಿಲ್ಲ ಎಂಬ ಎಚ್ಚರಿಕೆ ರವಾನಿಸಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪನವರು ಪರೋಕ್ಷವಾಗಿ ಮಾತಿನ ಮೂಲಕ ಬಿಸಿ ಮುಟ್ಟಿಸುವ ಪ್ರಯತ್ನ ಮಾಡಿದ್ದು ಸ್ಪಷ್ಟವಾಗಿ ಕಾಣುತ್ತಿತ್ತು.

ಇನ್ನು ಮುಂದಿನ ಚುನಾವಣೆಯಲ್ಲಿ ಪಕ್ಷ ಒಗ್ಗಟ್ಟಾಗಿರಬೇಕಾದ ಅನಿವಾರ್ಯತೆ ಬಗ್ಗೆ ಕೇಂದ್ರ ಸಚಿವ ಅನಂತ್ ಕುಮಾರ್, ರಾಜ್ಯ ಉಸ್ತುವಾರಿ ಮುರಳಿಧರ್ ರಾವ್ ಅವರು ಭಾಷಣ ಮಾಡುತ್ತಿದ್ದರೆ ಪಕ್ಷದ ಸದಸ್ಯರು ನಿದ್ದೆಗೆ ಜಾರಿದ್ದರು. ಯಡಿಯೂರಪ್ಪನವರು ತಮ್ಮ ಭಾಷಣದ ಅಂತ್ಯದಲ್ಲಿ ‘ತಾವುಗಳು ಚಪ್ಪಾಳೆ ತಟ್ಟುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಬೇಕು’ ಎಂದು ಕೇಳಿ ಚಪ್ಪಾಳೆ ಹೊಡೆಸಿಕೊಂಡಿದ್ದು, ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರ ನಿರುತ್ಸಾಹಕ್ಕೆ ಸಾಕ್ಷಿಯಾಗಿತ್ತು.

Leave a Reply