ಲಾಲು ಟೇಪ್ ಮೂಲಕ ಅರ್ನಾಬ್ ಗೋಸ್ವಾಮಿ ಸಾಧಿಸುತ್ತಿರುವ 2 ಸಂಗತಿಗಳು

ಡಿಜಿಟಲ್ ಕನ್ನಡ ವಿಶೇಷ:

  1. ರಿಪಬ್ಲಿಕ್ ಸುದ್ದಿವಾಹಿನಿ ಅರ್ನಾಬ್ ಗೋಸ್ವಾಮಿ ಹೇಳಿಕೊಳ್ಳುವಂತೆ ಸ್ವತಂತ್ರವೆಂಬ ವ್ಯಾಖ್ಯೆಯೊಳಗೆ ಬರುವಂಥದ್ದೇನೂ ಅಲ್ಲ. ಏಕೆಂದರೆ ಕೇರಳದ ಎನ್ಡಿಎ ಸಂಚಾಲಕರಾಗಿರುವ ರಾಜೀವ್ ಚಂದ್ರಶೇಖರ್ ಹಣ ಹೂಡಿಕೆ ಇದೆ ಎಂದ ಮೇಲೆ ಸರ್ವಸ್ವತಂತ್ರ ಎಂಬ ಮಾತಿಗರ್ಥವಿಲ್ಲ. ಅಷ್ಟಾಗಿಯೂ ಆಧಾರಗಳನ್ನು ಕೊಟ್ಟು ಯಾವುದೇ ಹಗರಣ ಬಹಿರಂಗಗೊಳಿಸಿದಾಗ ಅಲ್ಲಿ ಸಿದ್ಧಾಂತ, ಪಕ್ಷ ನಿಲುವುಗಳೇನಿದ್ದರೂ ಆ ಕಾರಣ ಕೊಟ್ಟು ಆರೋಪಿ ಸ್ಥಾನದಲ್ಲಿರುವವರು ತಪ್ಪಿಸಿಕೊಳ್ಳಲಾಗುವುದಿಲ್ಲ. ಶಹಾಬುಜ್ಜೀನ್ ಎಂಬ ಜೈಲಲ್ಲಿರುವ ಕ್ರಿಮಿನಲ್ ನ ಆದೇಶಗಳನ್ನು ಲಾಲು ಪ್ರಸಾದ್ ಸ್ವೀಕರಿಸುತ್ತಿರುವುದೇ ಅಪರಾಧ. ಇದು ಮೊದಲಿಂದ ನಡೆದುಬಂದಿರುವುದೇ ಹೌದಾಗಿದ್ದರೂ ಈಗ ಟಿವಿ ವಾಹಿನಿ ಸಾಕ್ಷ್ಯವೊಂದನ್ನು ಎದುರಿಗಿರಿಸುತ್ತಿದೆ. ಈ ಮೂಲಕ ಅರ್ನಾಬ್ ದಾಳಿ ಮಾಡುತ್ತಿರುವುದು ಪರೋಕ್ಷವಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೇಲೆ. ಕಾಂಗ್ರೆಸ್ಸನ್ನೂ ಸೇರಿಸಿಕೊಂಡು ಬಿಹಾರದಲ್ಲಿ ರೂಪುಗೊಂಡಿರುವ ಮಹಾಘಟಬಂಧನದ ಮೇಲೆ. ಎನ್ಡಿಎ ವಿರುದ್ಧ ಗೆದ್ದ ಪ್ರಮುಖ ಶಕ್ತಿ ನಿತೀಶ್ ಕುಮಾರ್ ಅವರ ಕೂಟ ರಾಜಕಾರಣವನ್ನು ಪ್ರಶ್ನೆಗೆ ಒಳಪಡಿಸಿದಷ್ಟೂ ಅದರ ರಾಜಕೀಯ ಲಾಭ ಸಹಜವಾಗಿಯೇ ಬಿಜೆಪಿಗೆ.
  2. ತಾನು ವರ್ಸಸ್ ಮುಖ್ಯವಾಹಿನಿ ಮಾಧ್ಯಮದ ಇತರ ಪ್ರಮುಖರು ಎಂಬಂತೆಯೇ ಅರ್ನಾಬ್ ಗೋಸ್ವಾಮಿ ತಮ್ಮನ್ನು ಬಿಂಬಿಸಿಕೊಂಡು ಬಂದಿದ್ದು. ಮಾಧ್ಯಮದ ಇತರ ಪ್ರಮುಖ ಚಹರೆಗಳಾದ ಬರ್ಖಾ ದತ್, ರಾಜ್ದೀಪ್ ಸರ್ದೇಸಾಯಿ ಇವರಿಗೆಲ್ಲ ಗೋಸ್ವಾಮಿ ಕುರಿತಿರುವ ವಿರೋಧ ತಿಳಿದಿರುವಂಥದ್ದೇ. ಇದೀಗ ತನ್ನ ವಾಹಿನಿಯ ಮೊದಲ ಶೋನಲ್ಲಿ ಲಾಲು ಪ್ರಸಾದ್ ಯಾದವರನ್ನು ಕಟಕಟೆಯಲ್ಲಿ ನಿಲ್ಲಿಸಿರುವ ಅರ್ನಾಬ್ ಗೋಸ್ವಾಮಿ, ಅಲ್ಲೂ ತನ್ನ ಪ್ರತಿಸ್ಪರ್ಧಿಗಳನ್ನು ಅಣುಕಿಸಿದ್ದಾರೆ. ಹೀಗೆ ಕ್ರಿಮಿನಲ್ ಗಳು ಜೈಲಿನಿಂದ ಫೋನ್ ಮೂಲಕ ನೇತಾಗಳನ್ನು ನಿರ್ದೇಶಿಸುವುದು ಇದ್ದದ್ದೇ ಎಂಬ ಮಾತುಗಳು ಚರ್ಚೆಯಲ್ಲಿ ಬರುತ್ತಿವೆಯಾದರೂ ಅದನ್ನು ಬೇರೆ ಮಾಧ್ಯಮಗಳೇಕೆ ಎಕ್ಸ್ಪೋಸ್ ಮಾಡುವ ಸಾಹಸಕ್ಕೆ ಕೈ ಹಾಕಲಿಲ್ಲ ಎಂಬ ಪ್ರಶ್ನೆ ಉಳಿದುಹೋಗುತ್ತದೆ. ಖುದ್ದು ಭ್ರಷ್ಟಾಚಾರ ಆರೋಪದಲ್ಲಿ ಶಿಕ್ಷಿತನಾಗಿ ಬಂದಿರುವ ಲಾಲು ಪ್ರಸಾದ್ ಯಾದವರನ್ನು ಮಾಧ್ಯಮ ಪ್ರಮುಖರೆಲ್ಲ ರಂಜಿಸಿದರೇ ಹೊರತು ಕಟು ಪ್ರಶ್ನೆಗಳನ್ನು ಕೇಳಿದ್ದು ಅಷ್ಟರಲ್ಲೇ ಇದೆ.

ಈ ನಿಟ್ಟಿನಲ್ಲಿ ಅರ್ನಾಬ್ ಪುನರಾಗಮನ ರೋಚಕವಾಗಿಯೇ ಇದೆ. ಪರೋಕ್ಷವಾಗಿ ಅವರು ತಮ್ಮ ಉದ್ಯಮದ ಎನ್ಡಿಎ ಸ್ಟೇಕ್ ಹೋಲ್ಡರ್ ಗಳಿಗೂ ನ್ಯಾಯ ಒದಗಿಸಿದ್ದಾರೆ. ಅಂತೆಯೇ ತಮ್ಮ ಪ್ರತಿಸ್ಪರ್ಧಿಗಳನ್ನು ಬಲಹೀನರನ್ನಾಗಿ ಬಿಂಬಿಸಬಹುದಾದ ಸ್ವಕಾರ್ಯವನ್ನೂ ಈಡೇರಿಸಿಕೊಂಡಿದ್ದಾರೆ.

Leave a Reply