ಅಷ್ಟುದ್ದ ಇದ್ದರೂ ಕತ್ತು, ತಪ್ಪಲಿಲ್ಲ ಜಿರಾಫೆಗೆ ಕುತ್ತು: ಅಳಿವಿನಂಚಿಗೆ ಸಾಗುತ್ತಿರುವುದಕ್ಕೆ ಕಾರಣ ಗೊತ್ತೇ?

ಯಾವ ಯಾವ ಪ್ರಾಣಿಗಳು ಅಳಿವಿನಂಚಿಗೆ ತಲುಪಿವೆ ಎಂಬುದನ್ನು ಪಟ್ಟಿಮಾಡುವ ಬದಲು ಯಾವುದು `ಇಲ್ಲ’ ಎಂದು ಪಟ್ಟಿ ಮಾಡುವುದೇ ಕಷ್ಟ. ಆನೆ, ಸಿಂಹ, ಹುಲಿಗಳ ಸಂರಕ್ಷಣೆಗೆ ಜಗತ್ತು ಈಗ ಒತ್ತುಕೊಡುತ್ತಿರುವುದು ಇದೇ ಭಯದಿಂದ. ಇದೀಗ ಜಿರಾಫೆಯ ಬದುಕಿಗೂ ಕುತ್ತು ಒದಗಿದೆ ಎಷ್ಟುದ್ದ ಅದಕ್ಕೆ ಕತ್ತಿದ್ದರೂ. ಇದರ ತವರು ಆಫ್ರಿಕ ಖಂಡ. ಉಳಿದೆಲ್ಲೆಡೆ ಅವನ್ನು ನೋಡುವುದು ಮ್ಯೂಸಿಯಂಗಳಲ್ಲಿ, ರಾಷ್ಟ್ರೀಯ ಉದ್ಯಾನಗಳಲ್ಲಿ. 70 ಲಕ್ಷ ವರ್ಷಗಳ ಹಿಂದೆ ಭೂಮಿಯ ಮೇಲೆ ಅವು ಅವತರಿಸಿದಾಗ ಎಂಟು ಪ್ರಭೇದಗಳಿದ್ದುವಂತೆ. ಈಗ ಇರುವುದು ಒಂದೇ ಪ್ರಭೇದ, ಉಳಿದೆಲ್ಲವೂ ನಿರ್ನಾಮವಾಗಿಹೋಗಿವೆ.

ಮನುಷ್ಯನಿಗಿಂತಲೂ ಎತ್ತರದ ಕಾಲು, ನಿಂತರೆ ಬರೋಬ್ಬರಿ ಐದೂವರೆ ಮೀಟರ್ ಎತ್ತರ. ಅದರ ಕತ್ತೇ ಎರಡೂವರೆ ಮೀಟರ್ ಉದ್ದ. ಇಷ್ಟುದ್ದದ ಕತ್ತಿನ ಬಗ್ಗೆ ಯಾವುಯಾವುದೋ ಥಿಯರಿಗಳು ಬಂದವು. ಆಹಾರದ ಸ್ಪರ್ಧೆಗಾಗಿ ಇತರ ಜೀವಿಗಳನ್ನು ಹಿಮ್ಮೆಟ್ಟಿಸಲು ಕತ್ತನ್ನು ಮುಂದೆ ಮಾಡುತ್ತ ಮಾಡುತ್ತ ಎತ್ತರದ ಮರಗಳ ಎಲೆಗಳನ್ನು ತಿನ್ನುತ್ತ ಕತ್ತು ಉದ್ದವಾಗುತ್ತ ಹೋಯಿತು ಎಂಬುದು ಡಾರ್ವಿನ್ ಕಾಲದ ಕಲ್ಪನೆ. ಅದರ ವಿಕಾಸದ ಒಂದು ಘಟ್ಟದಲ್ಲಿ ಕೋಶಗಳ ವಿಕೃತಿ (ಮ್ಯುಟೇಷನ್) ಆಗಿ ಉದ್ದನೆಯ ಕತ್ತು ಬಂತು ಎಂಬುದು ನವಡಾರ್ವಿನ್ ಶೋಧ. ತಮಾಷೆಯೆಂದರೆ ಆ ಉದ್ದನೆಯ ಕತ್ತಿಗೆ ಅಂದರೆ ಎರಡೂವರೆ ಮೀಟರ್ ಆಚೆಯವರೆಗೆ  ಈ ಪ್ರಾಣಿಯ ರಕ್ತಪರಿಚಲನೆ ಹೇಗಾಗುತ್ತದೆ? ರಕ್ತ ಪಂಪ್ ಆಗುವ ಬಗೆ ಹೇಗೆ? ಪ್ರಕೃತಿ ಜಿರಾಫೆಗೆ ಬೇಕಾದ ವ್ಯವಸ್ಥೆಯ ಬಗ್ಗೆ ಸಾಕಷ್ಟು ಕಸರತ್ತು ಮಾಡಿ ಒಂದು ತಂತ್ರಜ್ಞಾನವನ್ನು ಕೊಟ್ಟಿದೆ. ಜೀರಾಫೆಯ ಹೃದಯ ಹೆಚ್ಚು ಕಡಿಮೆ 11 ಕಿಲೋಗ್ರಾಂ ತೂಕ. ಹೃದಯದ ಭಿತ್ತಿ ಏಳು ಸೆಂಟಿಮೀಟರ್ ದಪ್ಪ. ಪ್ರತಿನಿಮಿಷಕ್ಕೆ 150 ಬಾರಿ ಹೃದಯ ಬಡಿದುಕೊಂಡರೆ ತಾನೆ ಕತ್ತಿನವರೆಗ ರಕ್ತ ಸಾಗಣೆ ಸಾಧ್ಯ. ಕತ್ತನ್ನು ಅದು ಕೆಳಕ್ಕೆ ಬಾಗಿಸಿತು ಎನ್ನಿ, ವಿಪರೀತ ರಕ್ತ ಏಕ್‍ದಂ ಅದರ ಮಿದುಳಿಗೆ ಹರಿದು ಡ್ಯಾಮೇಜ್ ಆಗಬೇಕಲ್ಲ! ನಿಜ. ಕತ್ತು ಬಗ್ಗಿಸಿದಾಗ ರಕ್ತ ಕೆಳಮುಖವಾಗಿ ಭರ್ರೆಂದು ಹರಿದುಬರುತ್ತದೆ. ಅದನ್ನು ನಿಯಂತ್ರಿಸಲೆಂದೇ ಕತ್ತಿನಲ್ಲಿ ರಕ್ತದ ಸಿರಗಳು (ವೆಯಿನ್ಸ್) ಇವೆ. ಒಡನೆಯೇ ಅದು ಚಟುವಟಿಕೆ ಪ್ರಾರಂಭಿಸುತ್ತದೆ. ಹೀಗಾಗಿ ಎಷ್ಟು ಬೇಕೋ ಅಷ್ಟು ಮಾತ್ರ ರಕ್ತ ಹರಿಯುತ್ತದೆ. ಜಿರಾಫೆಯ ಬಗ್ಗೆ ಉದ್ದಕ್ಕೂ ಇಂಥ ಮಾಹಿತಿ ಕೊಡುತ್ತ ಹೋಗಬಹುದು.

ಜಿರಾಫೆಗಳ ಸ್ಥಿತಿ ಈಗ ಕಳವಳಕಾರಿಯಾಗಿದೆ. ನಿಧಾನವಾಗಿ ಅಳಿವಿನಂಚಿಗೆ ಬರುತ್ತಿವೆ ಎನ್ನುತ್ತಾರೆ ಸಂರಕ್ಷಕರು. ಐ.ಯು.ಸಿ.ಎನ್. (ಇಂಟರ್‍ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಷನ್ ಆಫ್ ನೇಚರ್) ಕಳೆದ ವರ್ಷ ಮಾಡಿದ ಸಮೀಕ್ಷೆ ಗಾಬರಿ ಹುಟ್ಟಿಸುತ್ತದೆ. ಇವು ಸುಲಭವಾಗಿ ನಾಶವಾಗಿ ಹೋಗಿಬಿಡುವುದು ಸಾಧ್ಯ. ತಾಂಜೇನಿಯದ ರಾಷ್ಟ್ರೀಯ ಪ್ರಾಣಿ ಇದು. ಈ ಶತಮಾನದ ಆರಂಭಕ್ಕೆ ಜಗತ್ತಿನಲ್ಲಿ ಒಟ್ಟು 1,40,000 ಜಿರಾಫೆಗಳಿದ್ದುವಂತೆ. ಕಳೆದ ವರ್ಷ ಎಣಿಸಿದಾಗ 97,500 ಇಳಿದಿದೆ. ಅಂದರೆ ಕೆಂಪುಪಟ್ಟಿಗೆ ಸೇರಿಸಲು ಲಾಯಕ್ಕಾಗಿದೆ. ಜಗತ್ತು ಹುಲಿ, ಆನೆ, ಘೇಂಡಾಮೃಗಗಳ ಸಂರಕ್ಷಣೆಗೆ ಕೊಟ್ಟಷ್ಟು ಪ್ರಾಮುಖ್ಯವನ್ನು ಜಿರಾಫೆಗಳ ಸಂರಕ್ಷಣೆಗೆ ಕೊಟ್ಟಿಲ್ಲ. ರಾಷ್ಟ್ರೀಯ ಉದ್ಯಾನ ಮತ್ತು ಸಂರಕ್ಷಿತ ಪ್ರದೇಶಗಳಲ್ಲಿ ಅವುಗಳ ಬದುಕು ಇದ್ದುದರಲ್ಲಿ ವಾಸಿ. ಉಳಿದೆಡೆ ಅವು ಆವಾಸ ಕಳೆದುಕೊಳ್ಳುತ್ತಿವೆ ಜೊತೆಗೆ ಬೇಟೆಗಾರರ ಕಾಟ. ವಿಶೇಷವಾಗಿ ಆಫ್ರಿಕ ಖಂಡದ ದೇಶಗಳ ಆಂತರಿಕ ಹೊಡೆದಾಟಗಳು ಜಿರಾಫೆ ಸಂತತಿಯನ್ನು ಬಹುವಾಗಿ ಇಳಿಸಿದೆ. ಒಂದೆಡೆ ಕಾಡಿನ ಒತ್ತುವರಿ, ಭರ್ಜರಿ ಗಣಿಗಾರಿಕೆ, ಹೆಚ್ಚುತ್ತಿರುವ ಆಫ್ರಿಕ ಖಂಡದ ಜನಸಂಖ್ಯೆ- ವೆಲ್ಲವೂ ಒಟ್ಟಾಗಿಯೇ ಅಲ್ಲಿನ ಜೀವಿಜಗತ್ತನ್ನು ಬಾಧಿಸಿದ್ದರೂ ಜಿರಾಫೆ ಸಂತತಿಗೆ ಮಾತ್ತ ದೊಡ್ಡ ಹೊಡೆತವನ್ನೇ ಕೊಟ್ಟಿವೆ.

ಇದಕ್ಕಿಂತಲೂ ಘೋರ ಸಂಗತಿ ಎಂದರೆ ತಾಂಜೇನಿಯದಲ್ಲಿ ರಾಷ್ಟ್ರೀಯ ಪ್ರಾಣಿ ಎಂದು ಅದನ್ನು ಘೋಷಿಸಿದ್ದರೂ ಉಳಿದೆಡೆಗಳಿಗಿಂತ ಅವುಗಳ ಜೀವಕ್ಕೆ ಹೆಚ್ಚು ಆಪತ್ತು ಬಂದಿರುವುದು ಇಲ್ಲೇ. ಜಿರಾಫೆಯ ಮಿದುಳು, ಮೃದ್ವಸ್ಥಿ (ಬೋನ್ ಮಾರೋ) ತಿಂದರೆ ಏಡ್ಸ್ ರೋಗ ವಾಸಿಯಾಗುತ್ತದೆಂಬ ಯಾರದೋ ಹುಚ್ಚು ಹೇಳಿಕೆ ಅವುಗಳ ಸಂತತಿಗೇ ಕುತ್ತು ತರುತ್ತಿದೆ. ಇದರ ಜೊತೆಗೆ ಪಶ್ಚಿಮ ಆಫ್ರಿಕದಲ್ಲಿ 1990ರ ಹೊತ್ತಿಗೆ ಜಿರಾಫೆಗಳು ಪೂರ್ಣವಾಗಿ ಮರೆಯಾದವು. ವರ್ಷಾನುಗಟ್ಟಳೆ ಬರ ಅನುಭವಿಸಿ ಅವುಗಳಿಗೆ ಮೇವೇ ಸಿಕ್ಕದಾಗಿತ್ತು. ಕೊನೆಗೆ ಸಂರಕ್ಷಕರು ಹಠತೊಟ್ಟು ಮತ್ತೆ ಜಿರಾಫೆ ಸಂತತಿ ತಂದರು, ಹಿಂದಿದ್ದಕ್ಕಿಂತ ಐದು ಪಟ್ಟು ಹೆಚ್ಚು ಸಂತತಿ ಬೆಳೆಯಿತು. ಬೇರೆಡೆ ಕೇವಲ 15 ವರ್ಷಗಳಲ್ಲಿ ಜಿರಾಫೆಗಳ ಒಟ್ಟು ಸಂತತಿಯ ಶೇ.40 ಭಾಗ ಕಣ್ಣೆದುರಿಗೇ ಮರೆಯಾಗುತ್ತ ಹೋಯಿತು. ಇದನ್ನೇ ಸರ್ ಡೇವಿಡ್ ಅಟನ್‍ಬರೋ `ಮೌನ ನಿರ್ಗಮನ’ ಎಂದದ್ದು. ಈ `ಪಶುಪ್ರಿಯ’ ಉಗಾಂಡಕ್ಕೆ ಹತ್ತು ಪ್ರಭೇದದ ಪ್ರಾಣಿಗಳನ್ನು ಸ್ಥಳಾಂತರಿಸಿ ಅವುಗಳನ್ನು ಸಂರಕ್ಷಿಸಿದ್ದ.

ಇಂದಿನ ಲೆಕ್ಕಾಚಾರದಂತೆ ಆಫ್ರಿಕದ ಏಳು ದೇಶಗಳಲ್ಲಿ ಜಿರಾಫೆಗಳು ಸಂಪೂರ್ಣವಾಗಿ ನಿರ್ಗಮನವಾಗಿವೆ. ಅದರಲ್ಲೂ ಉಗಾಂಡದಲ್ಲಿ ತೈಲ ನಿಕ್ಷೇಪ ಪತ್ತೆಯಾದಾಗ ಅದು ಜಿರಾಫೆಗಳ ಆವಾಸವನ್ನೇ ನಾಶಮಾಡಿತ್ತು. ತೈಲ ಮುಖ್ಯವೋ ಜಿರಾಫೆಯೋ ಎಂದಾಗ ಉಗಾಂಡ ಕೈ ಎತ್ತಿದ್ದು ತೈಲಕ್ಕೆ. ಜಿರಾಫೆಗಳನ್ನು ಸ್ಥಳಾಂತರಿಸಲು ಒಮ್ಮೊಮ್ಮೆ ಅವುಗಳ ಎತ್ತರವೂ ಅಡ್ಡಬರುವುದುಂಟು. ಬಲವಂತವಾಗಿ ಹಿಡಿಯಲು ಹೊರಟಾಗ ಅವು ಬಿದ್ದು ಕಾಲು ಮುರಿದುಕೊಳ್ಳುವುದೇ ಹೆಚ್ಚು ಎಂಬ ಸತ್ಯವನ್ನು ಸಂರಕ್ಷಕರು ಕಂಡುಕೊಂಡಿದ್ದಾರೆ. ಒಂದು ಟನ್ ತೂಗುವ ಈ ಪ್ರಾಣಿ ಕಾಲಿನಿಂದ ಲಾತಾ ಕೊಟ್ಟರೆ ಒಂದೇ ಬಾರಿಗೆ ಮನುಷ್ಯ ನೆಗೆದುಬೀಳುತ್ತಾನೆ. ಆದರೆ ಬಂದೂಕಿನ ಮುಂದೆ ಜಿರಾಫೆಗಳ ಕಾಲು ಏನು ಮಾಡಿಯಾವು? ಅವುಗಳ ಚರ್ಮವೇ ಆಕರ್ಷಕ, ಅದೇ ಮಾರಾಟದ ವಸ್ತು ಕೂಡ. ಅದರ ಮಾಂಸದ ಸವಿ ಕಂಡವರು ಕಳ್ಳಬೇಟೆಯಾಡಿದರೂ ಸರಿಯೇ ಖಯಾಲಿ ತೀರಿಸಿಕೊಳ್ಳುತ್ತಾರೆ.

ಜಿರಾಫೆಯೊಂದೇ ಅಲ್ಲ, ಈಗ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ಲೆಕ್ಕ ಹಾಕುತ್ತ ಹೋದರೆ ಅದೇ ಒಂದು ಪುಸ್ತಕವಾದೀತು. ಐ.ಯು.ಸಿ.ಎನ್. ಹೇಳುವಂತೆ ಇತ್ತೀಚೆಗೆ ಹೊಸದಾಗಿ ಪತ್ತೆಮಾಡಿದ 700 ಪಕ್ಷಿ ಪ್ರಭೇದಗಳಲ್ಲಿ ಹತ್ತರಲ್ಲಿ ಒಂದು ಶಾಶ್ವತವಾಗಿ ನಿರ್ಗಮನವಾಗುವ ಹಂತ ತಲುಪಿವೆ. ವಿಷಾದವೆಂದರೆ ಅವುಗಳ ಸ್ವಭಾವ, ಆಹಾರಪದ್ಧತಿ, ಚಲನೆ, ಸಂತಾನಾಭಿವೃದ್ಧಿ ಮುಂತಾದವನ್ನು ಅಧ್ಯಯನ ಮಾಡುವ ಮೊದಲೇ ಅವು ಭೂಮಿಯಿಂದ ಕಣ್ಮರೆಯಾಗುತ್ತಿರುವುದು ಪಕ್ಷಿಪ್ರಿಯರಲ್ಲಿ ಆತಂಕಹುಟ್ಟಿಸಿದೆ. ಈ ಬಗೆಯ ದೃಶ್ಯಗಳು ಆಫ್ರಿಕ ಖಂಡಕ್ಕಷ್ಟೇ ಸೀಮಿತವಾಗಿಲ್ಲ, ಎಲ್ಲ ಖಂಡಗಳಲ್ಲೂ, ಎಲ್ಲ ದೇಶಗಳಲ್ಲೂ ನಮ್ಮ ಕಣ್ಣಮುಂದೆ ಆಗುತ್ತಿರುವ ಅಸಹನೀಯ ನಿರ್ಗಮನ. ಸಂರಕ್ಷಣೆಗೆ ಉತ್ತರವೂ ನಮ್ಮ ಬಳಿಯೇ ಇದೆ. ಆದರೆ ಅತ್ತ ಗಮನವಿಲ್ಲ ಅಷ್ಟೆ.

Leave a Reply