ಭ್ರಷ್ಟಾಚಾರ ವಿರೋಧಿಯಾಗಿ ಹುಟ್ಟಿಕೊಂಡಿದ್ದ ಆಪ್ ವಿರುದ್ಧ ಸ್ವಪಕ್ಷೀಯನಿಂದಲೇ ಭ್ರಷ್ಟಾಚಾರ ಆರೋಪ!

ಡಿಜಿಟಲ್ ಕನ್ನಡ ಟೀಮ್:

‘ಸತ್ಯೇಂದ್ರ ಜೈನ್ ರಿಂದ ಅರವಿಂದ ಕೇಜ್ರಿವಾಲ್ ₹2 ಕೋಟಿ ಹಣ ಪಡೆದಿದ್ದನ್ನು ಕಣ್ಣಾರೆ ಕಂಡಿದ್ದೇನೆ’ – ಹೀಗೆ ಆರೋಪ ಹೊರೆಸಿರುವುದು ಆಮ್ ಆದ್ಮಿ ಪಕ್ಷದ ರಾಜಕೀಯ ಎದುರಾಳಿಗಳಲ್ಲ. ಕೇಜ್ರಿವಾಲ್ ಸಂಪುಟ ಸದಸ್ಯರೇ ಆಗಿದ್ದ ಕಪಿಲ್ ಮಿಶ್ರ.

ಶನಿವಾರವಷ್ಟೆ ಕಪಿಲ್ ಮಿಶ್ರರಿಂದ ನೀರು ಮತ್ತು ಪ್ರವಾಸೋದ್ಯಮ ಖಾತೆಯನ್ನು ಕಿತ್ತುಕೊಂಡು ಸಂಪುಟದಿಂದ ಹೊರಹಾಕಲಾಗಿತ್ತು. ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಆರೋಪ ಮಾಡಿದ್ದಾರೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈ ಹಿಂದೆಯೂ ಆಪ್ ನಿಂದ ಪ್ರಶಾಂತ್ ಭೂಷಣ್, ಯೋಗೇಂದ್ರ ಯಾಗವ್ ಹೀಗೆ ಸಂಸ್ಥಾಪಕ ಸದಸ್ಯರೆಲ್ಲ ಹೊರಬಿದ್ದಿದ್ದರು. ಆದರೆ ಅವರ್ಯಾರೂ ಅರವಿಂದ ಕೇಜ್ರಿವಾಲರ ವಿರುದ್ಧ ಭ್ರಷ್ಟಾಚಾರ ಆರೋಪ ಹೊರೆಸಿರಲಿಲ್ಲ. ಕೇಜ್ರಿವಾಲರದ್ದು ನಿರಂಕುಶ ನಡವಳಿಕೆ ಎಂಬುದಷ್ಟೇ ಅವರೆಲ್ಲರ ಆಕ್ರೋಶಿತ ನಿರ್ಗಮನಕ್ಕೆ ಕಾರಣವಾಗಿತ್ತು.

ಆದರೆ 15 ವರ್ಷಗಳ ಆಂದೋಲನ ಸಾಥಿ ಹಾಗೂ ಸಂಸ್ಥಾಪಕ ಸದಸ್ಯ ಕಪಿಲ್ ಮಿಶ್ರ ಹೇಳುತ್ತಿರುವುದು ದೆಹಲಿಯಲ್ಲಿ 400 ಕೋಟಿ ರುಪಾಯಿಗಳ ನೀರಿನ ಟ್ಯಾಂಕ್ ಹಗರಣ ನಡೆದಿದೆ ಹಾಗೂ ಆಪ್ ನ ಸತ್ಯೇಂದ್ರ ಜೈನ್ ಅವರ ಪರಿಚಿತರೊಬ್ಬರಿಗೆ ಸಹಾಯ ಮಾಡಿಕೊಡುವುದಕ್ಕೆ ₹2 ಕೋಟಿಯನ್ನು ಖುದ್ದು ಕೇಜ್ರಿವಾಲರೇ ಪಡೆದಿದ್ದಾರೆ.

ಟ್ಯಾಂಕರ್ ಹಗರಣಕ್ಕೆ ಸಂಬಂಧಿಸಿದಂತೆ 2014ರ ಜುಲೈನಲ್ಲಿ ಇದೇ ಕಪಿಲ್ ಮಿಶ್ರಾರ ವಿಚಾರಣೆ ನಡಸಿತ್ತು ಭ್ರಷ್ಟಾಚಾರ ನಿಗ್ರಹ ದಳ. ನಂತರದಲ್ಲಿ ತನಿಖೆ ನಿಧಾನವಾಗಿದ್ದಾರೂ ಏಕೆ ಎಂಬುದೀಗ ಮಿಶ್ರ ಒಡ್ಡುತ್ತಿರುವ ಪ್ರಶ್ನೆ.

ತಾನು ವಿಷಯವನ್ನು ಈಗ ಹೊರಗೆಡವುತ್ತಿರುವುದೇಕೆ ಎಂದು ಪ್ರಶ್ನಿಸಬೇಡಿ. ಈ ಹಿಂದಿನ ಟ್ವಿಟ್ಟರ್ ಸಂವಹನಗಳಲ್ಲೂ ನೀರು ಪೂರೈಕೆ ವಿಷಯಕ್ಕೆ ಸಂಬಂಧಿಸಿ ಅಸಮಾಧಾನ ಹೊರಹಾಕಿದ್ದೆ ಎನ್ನುತ್ತಿದ್ದಾರೆ ಮಿಶ್ರ. ಸಾಕ್ಷಿ ಹೇಳುವುದಕ್ಕೆ ಸಿಬಿಐವರೆಗೂ ಹೋಗುತ್ತೇನೆ ಎಂದಿರುವ ಮಿಶ್ರ, ತಾನಾಗಿ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ಮುಂದುವರೆದು ಮಿಶ್ರ ಹೇಳಿರುವುದು- ಪಂಜಾಬ್ ಚುನಾವಣೆ ಎದುರಿಸುವಾಗ ಫಂಡ್ ವಿಚಾರದಲ್ಲಿ, ಪಕ್ಷದ ಕೆಲವರು ತಮ್ಮವರಿಗೆ ಅನುಕೂಲ ಮಾಡಿಕೊಡುತ್ತಿರುವ ವಿಚಾರದಲ್ಲಿ ಮೊದಲಿನಿಂದಲೂ ಪ್ರಶ್ನೆಗಳಿದ್ದವು. ಆದರೆ ನಾಲ್ಕೈದು ಮಂದಿ ಹೀಗೆ ಮಾಡುತ್ತಿದ್ದಾರೆ, ಆದರೆ ಕೇಜ್ರಿವಾಲ್ ಇವನ್ನೆಲ್ಲ ಸರಿಪಡಿಸುತ್ತಾರೆ ಎಂದು ನಂಬಿದ್ದೆವು. ಆದರೆ ನನ್ನೆದುರೇ ಕೇಜ್ರಿವಾಲ್ ಹಣ ತೆಗೆದುಕೊಂಡಿದ್ದನ್ನು ಪ್ರಶ್ನಿಸಿದಾಗಲೂ ಅವರು ಉತ್ತರಿಸಲಿಲ್ಲ. ನಾನು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಈ ಬಗ್ಗೆ ಪತ್ರ ಬರೆದ ನಂತರ ನನ್ನನ್ನು ಸಚಿವ ಸ್ಥಾನದಿಂದ ತೆಗೆದುಹಾಕಲಾಗಿದೆ. ಹೀಗಾಗಿ ಸಚಿವ ಸ್ಥಾನದಿಂದ ಹೊರಹಾಕಿದ್ದರಿಂದ ಹೀಗೆ ಆರೋಪಿಸುತ್ತಿದ್ದೇನೆ ಎನ್ನುವುದು ಸರಿಯಲ್ಲ.

Leave a Reply