ಕದನ ಕುತೂಹಲ-1: ಭವಿಷ್ಯದ ಯುದ್ಧಗಳ ರಣರಂಗವೆಲ್ಲಿ ಗೊತ್ತಾ? ನಿಮ್ಮ ಮನೆ (ನ) ಬಾಗಿಲಿನಲ್ಲಿ!

ಸ್ವಾರಸ್ಯದ ವಿಚಾರಗಳು ಎಲ್ಲಿಂದ ಬಂದರೂ ಹೀರಿಕೊಳ್ಳಬೇಕಷ್ಟೆ. ಇದು ಭಾರತೀಯ ಸೇನೆಯ ನಿವೃತ್ತ ಕ್ಯಾಪ್ಟನ್ ರಘು ರಮಣ್ ಹಲವೆಡೆಗಳಲ್ಲಿ ಮಾಡಿದ ಉಪನ್ಯಾಸ ಸಾರವಿದು. ಹತ್ತು ವರ್ಷ ಸೇನೆಯಲ್ಲಿ ಸೇವೆ, ಮುಂಬೈ ದಾಳಿ ನಂತರ ನ್ಯಾಟ್ ಗ್ರಿಡ್ ರಕ್ಷಣಾ ವ್ಯವಸ್ಥೆ ನಿರ್ಮಾಣದ ಹೊಣೆ, ಕಾರ್ಪೊರೇಟ್ ವಲಯದಲ್ಲಿ ದಶಕಗಳ ಸೇವೆ ಇವರ ಹಿನ್ನೆಲೆ. ಸೇನೆಯ ಕಾರ್ಯತಂತ್ರ-ನಿರ್ವಹಣ ಮಾದರಿ ಹಿನ್ನೆಲೆಯಲ್ಲಿ ಉದ್ಯಮ, ದಿನನಿತ್ಯದ ಬದುಕನ್ನು ನೋಡುವ ದೃಷ್ಟಿ ಇವರದ್ದು. ಇವರ ಆಂಗ್ಲ ಮಾತುಗಳ ಸರಣಿಯನ್ನು ರಮಾ ಎಂ ಎನ್  ಭಾವಾನುವಾದ ಮಾಡಿದ್ದಾರೆ. ಎರಡು ಕಂತುಗಳಲ್ಲಿದೆ ಈ ಸ್ವಾರಸ್ಯಕಾರಿ ಉಪನ್ಯಾಸ.

ಹಿಂದೆ ಮಾನವ ಭೂಮಿಯ ಮೇಲೆ ಯುದ್ಧ ಮಾಡುತಿದ್ದ. ಕುದುರೆ ಮೇಲೆ ಕೂತು ಕತ್ತಿ ಪ್ರಹಾರ ಮಾಡುತಿದ್ದ, ಬಿಲ್ಲು ಬಾಣ ಕಲ್ಲುಗಳೆ  ಅವನ ಆಯುಧಗಳು. ನಂತರ ಯುದ್ಧಕ್ಕೆ ನೌಕಾಪಡೆ, ವಾಯುಪಡೆ ಸೇರಿಕೊಂಡವು  ಆಮೇಲೆ ಹುಟ್ಟಿಕೊಂಡದ್ದು ಸೈಬರ್ ಯುದ್ಧ.

ಆದರೆ ಇದೆಲ್ಲದರ ನಡುವೆ ನಮಗರಿವೆ ಇಲ್ಲದಂತೆ ಯುದ್ಧದ  ಪರಿಭಾಷೆಯೆ ಬದಲಾಗಿದೆ. ಈ ಯುದ್ಧ ಮಾಡಲು ಸೈನಿಕರು ಮುಖಾಮುಖಿ ಆಗಬೇಕಿಲ್ಲ. ಈಗೇನಿದ್ದರೂ ಯುದ್ಧಗಳು ನಡೆಯುವುದು ಮನೋಭಿತ್ತಿಯಲ್ಲಿ. ಆ ಶಕ್ತಿ ಸಾಮಾಜಿಕ ಮಾಧ್ಯಮಕ್ಕಿದೆ. ಸಾಮಾಜಿಕ  ಮಾಧ್ಯಮವೆಂದರೆ ಕೇವಲ ವಾಟ್ಸ್ ಆಪ್, ಟ್ವಿಟ್ಟರ್, ಫೇಸ್ ಬುಕ್ ಇತ್ಯಾದಿ ಮಾತ್ರವಲ್ಲ. ಒಂದು ಹಳ್ಳಿಕಟ್ಟೆ ಮೇಲೆ ಕೂತು ಹೊಡೆಯುವ ಹರಟೆಯೂ ಸಾಮಾಜಿಕ ಮಾಧ್ಯಮವೆ.  ಜನರ ಮನಸ್ಸಿನ ಮೇಲೆ ಸರಕಾರ ಏನು ಕಟ್ಟುಪಾಡು ಹಾಕಲು ಸಾಧ್ಯ?

LTTE  ಉದಾಹರಣೆಯನ್ನೇ ತೆಗೆದು ಕೊಳ್ಳಿ.  ಅದರ ಬಳಿ ಯಾವುದೇ ನೌಕಾಪಡೆ , ವಾಯುಪಡೆ ಇರಲಿಲ್ಲ.  ಕೇವಲ ಒಬ್ಬ ಪ್ರಭಾಕರನ್ ಇಡೀ ಪಡೆಯ ಮನಸ್ಸನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ರಾಜೀವ್ ಗಾಂಧೀಯವರ ಹತ್ಯೆಯ ಸಂಚನ್ನು ರೂಪಿಸಿ ಅದನ್ನು ಕಾರ್ಯಗೊಳಿಸುವಲ್ಲಿ ಯಶಸ್ವಿಯಾದ. ಒಬ್ಬ ಸೂಸೈಡ್ ಬಾಂಬರ್ ಆ ಕ್ಷಣದ ಉದ್ರೇಕದಲ್ಲಿ ಅಲ್ಲದೇ ಒಂಬತ್ತು ತಿಂಗಳ ನಂತರ ಹತ್ಯೆ ಮಾಡುವುದಕ್ಕೆ ಆತ ಪ್ರೇರೇಪಿಸುತ್ತಿದ್ದ.

ಮನುಷ್ಯನ ಮನಸ್ಸನ್ನು ದುರ್ಬಲಗೊಳಿಸಲು ಅವನ ಗಮನಕ್ಕೆ ತಂದ ಸುದ್ದಿ ನಿಜವಾಗಿರಲೇಬೇಕೆಂದಿಲ್ಲ. ಒಂದೇ ವಿಷಯವನ್ನು ಪದೇ ಪದೆ ಬಿತ್ತರಿಸುವುದರಿಂದ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದರಿಂದ ಅವನು ಅದು ನಿಜವೇ ಎಂದು ನಂಬುವ ಮಟ್ಟಕ್ಕೆ ತಲುಪುತ್ತಾನೆ. ಅದು ತಮ್ಮ ನಾಯಕನ ಸಾಮರ್ಥ್ಯದ ಬಗ್ಗೆ ಇರುವ ನಂಬಿಕೆಯನ್ನು ಜಟಿಲಗೊಳಿಸುವುದಿರಬಹುದು, ಒಂದು ವರ್ಗದ ಜನ , ಒಂದು ಸಮುದಾಯದ ಬಗ್ಗೆ ಇತರರು ಪ್ರತಿಕ್ರಿಯಿಸುವ ರೀತಿ ಇರಬಹುದು. ಉದಾಹರಣೆಗೆ ಇತ್ತೀಚಿಗೆ ಒಂದು ಸಮುದಾಯದ ದೇವಾನುದೇವಿಗಳ ಚಿತ್ರಗಳನ್ನು ಅವಹೇಳನಕಾರಿಯಾಗಿ ನಿತ್ಯ ಜೀವನದ ವಸ್ತುಗಳ ಮೇಲೆ ಮುದ್ರಿಸಿ ಆ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ಹರಿಬಿಡಲಾಗಿತ್ತು.

ಕ್ಯಾ. ರಘು ರಮಣ್

ಅನೇಕ ಬಾರಿ ನಾವು ಅಂದುಕೋತೀವಿ  “ಭಯೋತ್ಪಾದಕರ ಬ್ರೈನ್ ವಾಶ್ ಮಾಡಲಾಗಿದೆ ‘ ಅಂತ. ಆದರೆ ಓರ್ವ ಸಾಮಾನ್ಯ ಮನುಷ್ಯ ಕೂಡ ಹತ್ಯೆಯಂತಹ ಕೃತ್ಯ ಎಸಗಬಲ್ಲ ಎಂಬುದರ ನಿದರ್ಶನವೆಂದರೆ ಇತ್ತೀಚಿಗೆ ಅಮೆರಿಕದ ನೌಕಾಪಡೆಯ  ನಿವೃತ್ತ ಅಧಿಕಾರಿ ‘ನಮ್ಮ ದೇಶ ಬಿಟ್ಟು ತೊಲಗಿ’ ಎಂದು ಚೀರುತ್ತ ಭಾರತೀಯ ಮೂಲದ ಇಂಜಿನಿಯರ್ ನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದು.  ಒಬ್ಬ ಯೋಧ ಹದಿನೆಂಟು ತಿಂಗಳ ತರಬೇತಿ ಪಡೆದು, ಸಮವಸ್ತ್ರ ಧರಿಸಿ ದೇಶದ ಸೇವೆ ಮಾಡುವ ಪಣ ತೊಟ್ಟವನು  ಈ ಪರಿಯ ಉದ್ರೇಕಕ್ಕೆ ಒಳಗಾಗಲು  ಕಾರಣ ಪದೇ ಪಡೆ ಅಮೆರಿಕನ್ನರ ಮನಸ್ಸಿನ ಮೇಲೆ ಭಾರತೀಯರ ಬಗ್ಗೆ ಹೇರಿದ ಭಾವನೆಗಳು.

ಸದ್ದಾಮ್ ಹುಸೇನ್ ಇಪ್ಪತೈದು ವರ್ಷಗಳ ಕಾಲ ಇರಾಕಿನ ಮೇಲೆ ಹತೋಟಿ ಸಾಧಿಸಿದ್ದ.  ಹಿಟ್ಲರನ ನೇತೃತ್ವದಲ್ಲಿ  ಎರಡನೇ ಮಹಾಯುದ್ಧದಲ್ಲಿ ಜರ್ಮನಿ ವಿಶ್ವದ ಇತರೆ ರಾಷ್ಟ್ರಗಳ ಮೇಲೆ ಮೇಲುಗೈ ಸಾಧಿಸಿತು. ಇಷ್ಟಕ್ಕೂ ಹಿಟ್ಲರ್ ಜರ್ಮನ್ ಪ್ರಜೆ ಕೂಡ ಅಲ್ಲ. ಒಸಾಮಾ ಬಿನ್ ಲಾಡೆನ್ ವಿಮಾನಗಳನ್ನೇ ಬಾಂಬಿನಂತೆ ಬಳಸಿ ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಅನ್ನು ನೆಲಕ್ಕುರುಳಿಸಿದ.  ಅದು ಅಮೆರಿಕನ್ನರ ಜಂಘಾ ಬಲವನ್ನೆ ಉಡುಗಿಸಿತು.   ಈ ಎಲ್ಲ ನಾಯಕರ ನೈತಿಕತೆಯನ್ನು ಬದಿಗಿಟ್ಟು, ಒಮ್ಮೆ ಕೇವಲ ಅವರ ನಾಯಕತ್ವದ ಬಗ್ಗೆ ಚಿಂತಿಸಿ.  ಆಗ ನಿಜಕ್ಕೂ ನಾವು ಅವರನ್ನು ನೋಡುವ ಪರಿಯೇ ಬದಲಾಗಿ ಬಿಡುತ್ತೆ.

ಇಂದು ಯುದ್ಧದ ಸ್ವರೂಪವೇ ಬದಲಾಗಿದೆ.  ದೊಡ್ಡ ಯುದ್ಧಗಳಿಂದ ಸಣ್ಣ ಯುದ್ಧಗಳತ್ತ ಹೊರಳುತಿದ್ದೇವೆ. ಸಣ್ಣ ದೇಶಗಳು ದೊಡ್ಡ ದೇಶಗಳ ಮೇಲೆ ಮೇಲುಗೈ ಸಾಧಿಸುತ್ತಿವೆ   ಉದಾಹರಣೆಗೆ ಅಮೆರಿಕನ್ ಸೈನ್ಯ ವಿಯಟ್ನಾಮ್ ನಿಂದ ಹೊರಬಂದದ್ದು ಸೋಲನ್ನು ಒಪ್ಪಿಕೊಂಡೋ ಅಥವಾ ಅಮೆರಿಕನ್ನರ ಅಪಾರವಾದ ಸೈನ್ಯ ನಾಶವಾಯಿತೋ ಎಂದಲ್ಲ.  ಆದರೆ ವಿಯಟ್ನಾಮ್ ನಿಂದ ಅಮೆರಿಕಾದ ಸೈನಿಕರ ಮೃತ ದೇಹಗಳನ್ನು ಹೊತ್ತು ತರುತ್ತಿದ್ದ ಚೀಲಗಳನ್ನು ನೋಡಿ ಸಹಿಸಿಕೊಳ್ಳುವ ಮಾನಸಿಕ ಸ್ಥೈರ್ಯ ಅಮೆರಿಕನ್ನರಿಗೆ ಇರಲಿಲ್ಲ.  ಸೋವಿಯೆತ್ ಅಫ್ಘಾನಿಸ್ತಾನ ದಿಂದ ಹೊರ ಬಂದದ್ದು ತಾಲಿಬಾನ್ ನೊಂದಿಗೆ ಸೆಣಸಲು ಸಾಧ್ಯವಿಲ್ಲ ಎಂದಲ್ಲ.  ಆದರೆ ತಾಲಿಬಾನರ ಗನ್ ಸಮರ ಮುಖಾಮುಖಿ ಎದುರಿಸುವ ಮನಃ ಸ್ಥಿತಿಯಲ್ಲಿ ಸೋವಿಯೆತ್ ಸೈನ್ಯ ಇರಲಿಲ್ಲ.  ಐಸಿಸ್ ಬಿಡುಗಡೆ ಮಾಡಿದ ಒಂದು ವಿಡಿಯೋದಲ್ಲಿ ವ್ಯಕ್ತಿಯೊಬ್ಬನ ತಲೆಯನ್ನು ಹಿಂದಕ್ಕೆಳೆದು ಅವನ ಕೊರಳನ್ನು  ಕತ್ತಿಯಿಂದ ಕೊಯ್ದು ರಕ್ತಸಿಕ್ತವಾದ ಅವನ ದೇಹವನ್ನು ನೆಲಕ್ಕೆ ದೂಡುವುದು ಚಿತ್ರಿಸಲಾಗಿತ್ತು.  ಆ ವಿಡಿಯೋ ಎಷ್ಟು ಘೋರವಾಗಿತ್ತೆಂದರೆ ಅದು ವಿಶ್ವದಾದ್ಯಂತ ಆಘಾತದ ಅಲೆಗಳನ್ನೇ ಶೃಷ್ಟಿಸಿತು. ನಿಜಕ್ಕಾದರೂ ಬಾಂಬ್, ಮಿಸೈಲ್, ವಾಯುಯುದ್ಧ ಇದ್ಯಾವುದು ಬೀರಲಾಗದಂತ ಕೆಟ್ಟ ಪರಿಣಾಮ ಈ ಮೂರು ನಿಮಿಷದ ವಿಡಿಯೋ ಮಾಡಿಬಿಟ್ಟಿತು. ಸೈನಿಕರ ಜಂಘಾ ಬಲವನ್ನೇ ಉಡುಗಿಸಿಬಿಟ್ಟಿತು.  ಹೀಗಾಗಿ ಮುಂದೆ ನಡೆಯುವ ಯುದ್ಧಗಳು ಭೂಮಿಯ ಮೇಲೆ ನಡೆಯಬೇಕೆಂದಿಲ್ಲ.  ಮನುಷ್ಯನ ಮನಸ್ಸಿನ ಮೇಲೆ, ಸೈನಿಕರ ಇಚ್ಚಾ ಶಕ್ತಿಯ ಮೇಲೆ, , ಒಬ್ಬ ರಾಜಕೀಯ ನಾಯಕನ ಸಾಮರ್ಥ್ಯದ ಬಗ್ಗೆ ಜನರಲ್ಲಿ ಹುಟ್ಟುಹಾಕಿದ ಗೊಂದಲಗಳ ಮುಖೇನ ನಡೆಯುತ್ತವೆ.

ಸೈನ್ಯದ ಇಚ್ಚಾ ಶಕ್ತಿ, ಜನರ ನಂಬಿಕೆಯ ಬುಡವೇ ಅಲುಗಾಡಿದರೆ , ಯುದ್ಧ  ಪ್ರಾರಂಭವಾಗುವ ಮೊದಲೇ ಅರ್ಧ ಸೋತಂತೆ!

ರಮಾ ಎಂ ಎನ್

1 COMMENT

  1. 1. Hitler was in second world ward not in first world war. 2. Two planes clashed in america twin towers not 5 planes.

Leave a Reply