ಎದುರಾಳಿಗಳ ಆತ್ಮವಿಶ್ವಾಸ ಚಿಮ್ಮಿಸಿದ ಬಿಜೆಪಿ ಅಂತರ್ಯುದ್ಧ!

ಬಣ, ತಿಕ್ಕಾಟ, ಒಣ ಪ್ರತಿಷ್ಠೆ ಆಧಾರಿತ ರಾಜ್ಯ ಬಿಜೆಪಿ ಅಂತರ್ಯುದ್ಧ ಬಾಹ್ಯ ರಾಜಕೀಯ ಶಕ್ತಿಗಳ ಆತ್ಮವಿಶ್ವಾಸ ಚಿಮ್ಮಿಸಿದೆ. ಪಕ್ಷದ ಕಾರ್ಯಕಾರಿಣಿ ಮುಗಿದರೂ ಮಾಗದ ಯಡಿಯೂರಪ್ಪ ಮತ್ತು ಈಶ್ವರಪ್ಪ ಮುನಿಸು ಕಾಂಗ್ರೆಸ್ ಮತ್ತು ಜೆಡಿಎಸ್ ಚುನಾವಣೆ ಆಸೆ, ನಿರೀಕ್ಷೆಗಳನ್ನು ಇಮ್ಮಡಿಗೊಳಿಸಿದೆ. ಕೈಯಲ್ಲಿದ್ದ ಚುನಾವಣೆ ಬೆಳಕಿನ ಕಡ್ಡಿಯನ್ನು ಬಾಂಬಾಗಿ ಪರಿವರ್ತಿಸಿಕೊಂಡಿರುವ ನಾಯಕರ ವರ್ತನೆ ಬಿಜೆಪಿ ಕಾರ್ಯಕರ್ತರ ಹುಮ್ಮಸ್ಸು ಅಪಹರಿಸಿದೆ. ಅವರ ಮನಸಿನ ಮೇಲೆ ಆತಂಕದ ಕಾರ್ಮೋಡ ಸುರುವಿದೆ.

ವಿದೇಶಿ ವೈರಿಗಳನ್ನು ಸದೆಬಡಿಯಲು ಸೇನೆಗೆ ತರಬೇತಿ ನೀಡಲಾಗಿರುತ್ತದೆಯೇ ಹೊರತು ಸ್ವದೇಶದ ವಿರುದ್ಧ ಹೋರಾಡಲು ಅಲ್ಲ. ಸೇನೆ ಅಂದರೆ ಶತ್ರು ರಾಷ್ಟ್ರಗಳಷ್ಟೇ ನೆನಪಿಗೆ ಬರಬೇಕು. ಅದೇ ರೀತಿ ಹೊರಗಿನ ರಾಜಕೀಯ ವಿರೋಧಿಗಳ ಜತೆ ಗುದ್ದಾಡಬೇಕಾದ ರಾಜ್ಯ ಬಿಜೆಪಿ ಮುಖಂಡರು ತಮ್ಮ-ತಮ್ಮೊಳಗೇ ಕಚ್ಚಾಡಿಕೊಂಡು ಪಕ್ಷವನ್ನು ಅವನತ್ತಿಯತ್ತ ಸೆಳೆದೊಯ್ಯುತ್ತಿದ್ದಾಾರೆ. ಹೊರಗಿನ ಹಾವು, ಮುಂಗುಸಿ, ಚೇಳುಗಳ ವಿರುದ್ಧ ಹೋರಾಡುವ ಬದಲು ಮನೆಯಂಗಳದ ಗೆದ್ದಲು ಬಡಿಯಲು ಶ್ರಮ ದುರ್ವಿನಿಯೋಗ ಮಾಡುತ್ತಿದೆ. ಇದು ಶತ್ರುಪಾಳೆಯಕ್ಕೆ ಸಹಜ ವರದಾನವಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಅನ್ನು ಮುಂದಿನ ಚುನಾವಣೆಯಲ್ಲಿ ಒಂದು ಕೈ ನೋಡಿಯೇ ಬಿಡುವ ಮನಸ್ಥಿತಿಗೆ ತಂದು ನಿಲ್ಲಿಸಿದೆ.

ನಿಜ, ನಂಜನಗೂಡು ಮತ್ತು ಗುಂಡ್ಲುಪೇಟೆ ಮರುಚುನಾವಣೆಗೆ ಮೊದಲು ಕಾಂಗ್ರೆಸ್ಸಿಗೆ ಆತ್ಮವಿಶ್ವಾಸ ಎಂಬುದೇ ಇರಲಿಲ್ಲ. ಹಿಂದಿನ ಮರುಚುನಾವಣೆಯಲ್ಲಿ ಕಹಿ ಅನುಭವಿಸಿದ್ದ ಆಡಳಿತ ಪಕ್ಷವು ಇಲ್ಲೂ ಅದು ಮರುಕಳಿಸಬಹುದೆನ್ನುವ ಭೀತಿಯಲ್ಲಿತ್ತು. ಆದರೆ ಬಿಜೆಪಿ ಒಳಜಗಳ, ಯಡಿಯೂರಪ್ಪ ಹೊರತುಪಡಿಸಿ ಅನ್ಯ ನಾಯಕರ ಅಸಡ್ಡೆ, ಕಾಂಗ್ರೆಸ್-ಜೆಡಿಎಸ್ ಒಳಒಪ್ಪಂದ ನಿರೀಕ್ಷೆಯನ್ನು ತಿರುವು-ಮುರುವು ಮಾಡಿತು. ಬಿಜೆಪಿ ಎರಡೂ ಕಡೆ ಸೋತಿತು. ಕಾಂಗ್ರೆಸ್ ಗೆದ್ದು ಬೀಗಿತು.

ಇದೀಗ ಮುಂದಿನ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲ್ಲುತ್ತದೆ, ತಾವೇ ಮುಂದಿನ ಬಾರಿಯೂ ತಾವೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಹೇಳಿಕೊಂಡು ತಿರುಗುತ್ತಿದ್ದಾರೆ. ತಾವೇನೂ ಕಮ್ಮಿ ಎಂದು ಜೆಡಿಎಸ್ ಕೂಡ ಈ ಸಾರಿ ಕುಮಾರಣ್ಣ ಎಂದು ಪ್ರಚಾರ ಶುರುಮಾಡಿದೆ. ಈ ಎರಡೂ ಪಕ್ಷಗಳಲ್ಲಿ ಹೀಗೊಂದು ಆತ್ಮವಿಶ್ವಾಸ ಬಲವಾಗಲು ಬಿಜೆಪಿ ಒಳಜಗಳವೇ ಕಾರಣ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಹಾಗಾದರೆ ಬಿಜೆಪಿಯಲ್ಲಿ ಇಷ್ಟೆಲ್ಲ ಆಗಲು ಏನು ಕಾರಣ? ಯಾರಿಂದ, ಯಾಕಾಗಿ ಇಷ್ಟೆಲ್ಲ ಆಯಿತು? ಎಂಬ ಪ್ರಶ್ನೆಗೆ ಉತ್ತರ ರೂಪದಲ್ಲಿ ಸಿಗುವುದು ನಾಯಕರ ಧೋರಣೆ. ಅದರಲ್ಲೂ ವಿಶೇಷವಾಗಿ ಯಡಿಯೂರಪ್ಪನವರ ವರ್ತನೆ ಬಿಜೆಪಿಗೊಂದು ದೊಡ್ಡ ಸವಾಲು. ಬಿಜೆಪಿಯ ಶಕ್ತಿಯೂ ಅವರೇ, ಬಿಜೆಪಿಯೇ ದೌರ್ಬಲ್ಯವೂ ಅವರೇ. ಯಡಿಯೂರಪ್ಪನವರ ಬಗ್ಗೆ ಇರುವ ಬಹುದೊಡ್ಡ ಆರೋಪ ಎಂದರೆ ಅವರು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವುದಿಲ್ಲ, ತಮ್ಮ ಆತ್ಮವರ್ತುಲದಲ್ಲಿರುವ ಕೆಲವರಿಗೆ ಮಾತ್ರ ಮಣೆ ಹಾಕುತ್ತಾರೆ, ಹಿಂದೆ ಬಿಜೆಪಿ ಬಿಟ್ಟು ಕೆಜೆಪಿಗೆ, ನಂತರ ಕೆಜೆಪಿ ಬಿಟ್ಟು ಬಿಜೆಪಿಗೆ ತಮ್ಮೊಂದಿಗೆ ಮರಳಿದವರಿಗೆ ಮನ್ನಣೆ ಕೊಡುತ್ತಾರೆ ಅನ್ನುವುದು. ಅದರಲ್ಲೂ ಪ್ರಮುಖವಾಗಿ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಅಗ್ರ ಆದ್ಯತೆ ಕೊಡುತ್ತಾರೆ ಎನ್ನುವುದು ಉಳಿದ ನಾಯಕರ ಕಣ್ಣನ್ನು ಶಾಶ್ವತ ಕೆಂಪಗಾಗಿಸಿದೆ. ಈಶ್ವರಪ್ಪನವರು ರಾಯಣ್ಣ ಬ್ರಿಗೇಡ್ ಕಟ್ಟಿಕೊಂಡು ಯಡಿಯೂರಪ್ಪನವರಿಗೆ ಹೊಡೆದಿರುವ ಸೆಡ್ಡು ಬಿಜೆಪಿಗೆ ಮುಳುಗು ನೀರಾಗುತ್ತಿರುವುದರ ಹಿಂದೆಯೂ ಇಂಥದ್ದೇ ಆಪಾದನೆಯಿದೆ.

ಹಾಗಾದರೆ ರಾಜ್ಯ ನಾಯಕರು, ಕಾರ್ಯಕರ್ತರು ಯಡಿಯೂರಪ್ಪನವರಿಂದ ಏನನ್ನು ನಿರೀಕ್ಷೆ ಮಾಡುತ್ತಿದ್ದಾರೆ? ಉತ್ತರ ಬಹುಸುಲಭ. ಅವರು ಮೊದಲಿಗೆ ಬಿಜೆಪಿಯೊಳಗಿನ ವೈರಿಗಳನ್ನು ಕಡಿಮೆ ಮಾಡಿಕೊಳ್ಳಬೇಕು. ಕಡಿಮೆ ಮಾಡಿಕೊಳ್ಳಬೇಕು ಎನ್ನುವುದಕ್ಕಿಂತ ಸಂಪೂರ್ಣ ನಿವಾರಣೆ ಮಾಡಿಕೊಳ್ಳಬೇಕು. ಬಣ ರಾಜಕೀಯ ಬಿಡಬೇಕು. ಒಳವಿರೋಧಿಗಳ ಸಖ್ಯ ಬೆಳೆಸಬೇಕು. ಅವರನ್ನು ಜತೆಗೆ ಕೊಂಡೊಯ್ಯಬೇಕು. ಹೋದಲ್ಲಿ-ಬಂದಲ್ಲಿ ಮತ್ತದೇ ಹಳೇ ಮುಖಗಳಲ್ಲಿ ತಮ್ಮ ಮುಖ ನೋಡಿಕೊಳ್ಳುವುದನ್ನು ಬಿಡಬೇಕು. ಎಲ್ಲರಿಗೂ ಸಮಾನ ಅದ್ಯತೆ ನೀಡಬೇಕು. ಆದರೆ ಆಗುತ್ತಿರುವುದಾದರೂ ಏನು? ವೈರಿಗಳನ್ನು ಸರಿಮಾಡಿಕೊಳ್ಳುವ ಬದಲು ಮತ್ತಷ್ಟು ವೈರತ್ವ ಪೋಷಣೆ ಮಾಡುತ್ತಿರುವುದು. ಶಿವಮೊಗ್ಗದಲ್ಲಿ ತಮಗೆ ಪರ್ಯಾಯವಾಗಿ ರುದ್ರೇಶಗೌಡ ಅವರನ್ನು ಯಡಿಯೂರಪ್ಪ ಬೆಳೆಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರಿಗೇ ಟಿಕೆಟ್ ಕೊಟ್ಟು, ತಮಗೆ ಕೈಕೊಡಬಹುದು ಎಂಬ ಕಾರಣಕ್ಕೆ ಈಶ್ವರಪ್ಪ ಯಡಿಯೂರಪ್ಪ ವಿರುದ್ಧ ಸಿಡಿದು ನಿಂತಿದ್ದಾರೆ. ಒಂದೇ ಜಿಲ್ಲೆಯಲ್ಲಿ ಒಟ್ಟಿಗೆ ರಾಜಕೀಯ ಮಾಡಿಕೊಂಡು ರಾಜ್ಯ ಮುಖಂಡರಾಗಿ ಒಟ್ಟೊಟ್ಟಿಗೆ ಬೆಳೆದಿರುವ ಈಶ್ವರಪ್ಪ ಮತ್ತು ಯಡಿಯೂರಪ್ಪ ಗೆಳೆತನಕ್ಕೆ ಈಗ ಉದ್ಭವಿಸಿರುವ ವೈರತ್ವ ತೊಡೆದು ಹಾಕುವ ತಾಕತ್ತು ಇಲ್ಲದೆ ಏನಿಲ್ಲ. ಚಂಡಿ ಹಿಡಿದ ಜಗಮೊಂಡನಂತಾಡುವ ಈಶ್ವರಪ್ಪನವರನ್ನು ಬೆಂಡು ಮಾಡುವುದು ಯಡಿಯೂರಪ್ಪನವರಿಗೆ ದೊಡ್ಡ ವಿಚಾರವೇನೂ ಅಗಿರಲಿಲ್ಲ. ಕರೆದು, ಕೂರಿಸಿಕೊಂಡು ಮಾತಾಡಿದ್ದರೆ ಸಮಸ್ಯೆ ತನ್ನಂತಾನೇ ಬಗೆಹರಿದು ಹೋಗುತ್ತಿತ್ತು.

ಆದರೆ ಯಡಿಯೂರಪ್ಪನವರು ಮಾಡಿದ್ದಾದರೂ ಏನು? ಸಮಸ್ಯೆಯನ್ನು ಮತ್ತಷ್ಟು ರಾಡಿ ಮಾಡಿದ್ದು. ಈಶ್ವರಪ್ಪ ಬೆನ್ನಿಗೆ ನಿಂತು ರಾಷ್ಟ್ರೀಯ ಸಹಸಂಘಟನಾ ಕಾರ್ಯದರ್ಶಿ ಸಂತೋಷ್ ಇಷ್ಟೆಲ್ಲ ರಾದ್ಧಾಂತ ಮಾಡುತ್ತಿದ್ದಾರೆ ಎಂದು ಬಹಿರಂಗವಾಗಿ ಹೇಳಿಕೊಂಡರು. ವೈರಿಗಳು ಮತ್ತು ತಮಗೆ ಬರುವ ವಿರೋಧ ಕಡಿಮೆ ಮಾಡಿಕೊಳ್ಳುವ ಬದಲು ಮತ್ತೊಬ್ಬ ವೈರಿಯನ್ನು ಸ್ವಯಂ ಸೃಷ್ಟಿಸಿಕೊಂಡರು.

ಅವರು ಸಂತೋಷ್ ಹೆಸರು ಹೇಳುವ ಅಗತ್ಯವಿರಲಿಲ್ಲ. ಸಂತೋಷ್ ಹೆಸರು ಹೇಳುವ ಮೂಲಕ ಒಂದೆಡೆ ಅವರು ತಮಗೊಬ್ಬ ಪರ್ಯಾಯ ನಾಯಕ ಎಂಬುದನ್ನು ಜಗಜ್ಜಾಹಿರು ಮಾಡಿದರು. ಇನ್ನೊಂದೆಡೆ ಅವರಿಗೆ ತಮ್ಮ ಶತ್ರು ಪಟ್ಟ ಕಟ್ಟಿದರು. ಈಗೇನಾಗುತ್ತದೆ..? ಬಿಜೆಪಿಯಲ್ಲಿರುವ ಯಡಿಯೂರಪ್ಪ ವಿರೋಧಿಗಳೆಲ್ಲ ಸಂತೋಷ್ ಮನೆಮುಂದೆ ಕ್ಯೂ ಹಚ್ಚಿ ನಿಲ್ಲುತ್ತಾರೆ. ತರೇಹವಾರಿ ದೂರುಗಳನ್ನು ಪೋಣಿಸುತ್ತಾ ಹೋಗುತ್ತಾರೆ. ವಿರೋಧಿಗಳಿಗೆಲ್ಲ ಯಡಿಯೂರಪ್ಪನವರೇ ಒಬ್ಬ ನಾಯಕನನ್ನು ಸೃಜಿಸಿಕೊಟ್ಟಂತೆ ಆಯಿತು. ಸಂಘ ಪರಿವಾರದಲ್ಲಿ ಪ್ರಭಾವಿ ಆಗಿರುವ ಸಂತೋಷ್ ಕಿವಿಗೆ ಬಿದ್ದ ದೂರುಗಳು ಮಾತಾಗಿ ರವಾನೆ ಆಗುವುದು ಎಷ್ಟೊತ್ತಿನ ವಿಚಾರ. ಮಿದುಳು ಮತ್ತು ಮನಸಿನ ಯೋಚನೆಗಳ ನಡುವೆ ವ್ಯತ್ಯಾಸವಿದೆ ಎನ್ನುವುದು ಇದನ್ನೇ. ಸದಾ ಭಾವೋನ್ಮಾದದ ಅಂಬಾರಿಯಲ್ಲೇ ವಿಹರಿಸುವ ಯಡಿಯೂರಪ್ಪನವರಿಗೆ ಕಾಲಬುಡದ ನೆರಳು ಕಾಣುವುದೆಂತು?

ಈಗ ರಾಷ್ಟ್ರ ನಾಯಕರಿಂದ ಹಿಡಿದು ರಾಜ್ಯ ನಾಯಕರವರೆಗೂ ಎಲ್ಲರೂ ಯಡಿಯೂರಪ್ಪನವರೇ ಮುಂದಿನ ಚುನಾವಣೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಅಭ್ಯರ್ಥಿ ಎಂದು ಬಹಿರಂಗವಾಗಿಯೇ ಘೋಷಣೆ ಆದ ಮೇಲೆ ಅವರನ್ನು ಕಾಡುತ್ತಿರುವ ಕಿರಿಕಿರಿಯಾದರೂ ಏನು? ಅವರೇಕೆ ಅನುಮಾನಗಳನ್ನು ಮೈಮೇಲೆ ಆವಾಹನೆ ಮಾಡಿಕೊಂಡು ಒಳಗುದಿಯಲ್ಲಿ ಒದ್ದಾಡುತ್ತಿದ್ದಾರೆ ಎಂಬುದು ನಾಯಕರಿಗೂ ಅರ್ಥವಾಗಿಲ್ಲ, ಕಾರ್ಯಕರ್ತರಿಗೂ ಗೊತ್ತಾಗುತ್ತಿಲ್ಲ.

ಸಂತೋಷ್ ಕೂಡ ಸಿಎಂ ಸ್ಥಾನದ ಅಂತರ್ಮುಖಿ ಆಕಾಂಕ್ಷಿ ಎಂಬ ಮಾತುಗಳು ಪಕ್ಷದ ಒಳವಲಯದಲ್ಲಿವೆ. ಈಗ ಯಡಿಯೂರಪ್ಪನವರೇ ಸಂತೋಷ್ ಹೆಸರು ಹೇಳಿ, ಅವರನ್ನು ಮುಖ್ಯರನ್ನಾಗಿ ಮಾಡಿದ್ದಾರೆ. ಇನ್ನೊಂದೆಡೆ ಯಡಿಯೂರಪ್ಪನವರು ಇಷ್ಟೆಲ್ಲ ಮಾತಾಡಿದರೂ ಸಂತೋಷ್ ಒಂದೇ ಒಂದು ಮಾತು ಆಡಿಲ್ಲ, ಆಡುತ್ತಿಲ್ಲ. ಸಂಘ-ಪರಿವಾರದಲ್ಲಿ ಗುಪ್ತಗಾಮಿನಿಯಾಗಿಯೇ ಕಾರ್ಯಾಚರಣೆ ನಡೆಸುವ ಅವರಿಗೆ ಮಾತಿಗಿಂತ ಮೌನಕ್ಕಿರುವ ಮೌಲ್ಯ ಎಂಥದ್ದು ಎಂಬುದು ಚೆನ್ನಾಗಿ ಗೊತ್ತು. ಇದು ಗೊತ್ತಾಗಬೇಕಿರುವುದು ಯಡಿಯೂರಪ್ಪನವರಿಗೆ ಮಾತ್ರ.

ಹೌದು, ಯಡಿಯೂರಪ್ಪನವರಿಗೆ ಜನ ಬೆಂಬಲವಿದೆ. ಈ ರಾಜ್ಯದ ಪ್ರಬಲ ಸಮುದಾಯ ಲಿಂಗಾಯತರ ಬೆಂಬಲವಿದೆ. ನಾಯಕರು ಮತ್ತು ಕಾರ್ಯಕರ್ತರ ಬೆಂಬಲ ಕೂಡ ಅಷ್ಟೇ ಮುಖ್ಯ ಎಂಬುದನ್ನು ನಂಜನಗೂಡು ಮತ್ತು ಗುಂಡ್ಲುಪೇಟೆ ಮರುಚುನಾವಣೆ ಫಲಿತಾಂಶ ಸಾಬೀತು ಮಾಡಿದೆ.

ಈ ಎರಡೂ ಕ್ಷೇತ್ರಗಳಲ್ಲೂ ಲಿಂಗಾಯತರೇ ಅತಿದೊಡ್ಡ ಸಮುದಾಯವಾಗಿದ್ದರೂ ಚುನಾವಣೆ ಗೆಲ್ಲಲು ಆಗಲಿಲ್ಲ. ಇಲ್ಲಿ ನಕಾರಾತ್ಮಕವಾಗಿ ಕೆಲಸ ಮಾಡಿದ ಅಂಶಗಳನ್ನು ಸರಿಪಡಿಸಿಕೊಂಡು, ಎಲ್ಲರನ್ನು ಜತೆಗೆ ಕೊಂಡೊಯ್ಯುವ ಬದಲು ನಾಯಕರ ಜತೆ ಜಗಳಕ್ಕೆ ನಿಂತರೇ ಅವರು ‘ನಾಯಕರ ನಾಯಕ’ ಎನ್ನಿಸಿಕೊಳ್ಳಲು ಹೇಗೆ ಸಾಧ್ಯ?

ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರ ಜಗಳದಿಂದ ಈ ಇಬ್ಬರೂ ನಾಯಕರಿಗೆ ಮಾತ್ರ ವೈಯಕ್ತಿಕ ನಷ್ಟವಾಗುತ್ತದೆ ಎಂದಾಗಿದ್ದರೆ ಕಾರ್ಯಕರ್ತರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಬದಲಿಗೆ ಇಡೀ ಪಕ್ಷದ ಮೇಲೆ, ಅದರ ಭವಿಷ್ಯದ ಮೇಲೆ ಮಸಿ ಎರಚುತ್ತಿದೆ. ಕಾಂಗ್ರೆಸ್ಸಿಗೆ ಪರ್ಯಾಯ ಶಕ್ತಿಯಾಗಿ ಮುಂಚೂಣಿಯಲ್ಲಿದ್ದ ಬಿಜೆಪಿ ಇದೀಗ ನಾಯಕರ ಜಗಳದಿಂದ ಜನಜುಗುಪ್ಸೆಗೆ ದಾರಿ ಮಾಡಿಕೊಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅಲೆ ಮುಂದೆ ರಾಜ್ಯ ನಾಯಕರ ಕಲಹವೇ ಪ್ರಭಾವಿ ಎಂಬುದು ಈಗಾಗಲೇ ಮರುಚುನಾವಣೆಯಲ್ಲಿ ಸಾಬೀತಾಗಿದೆ. ಮುಂದಿನ ಚುನಾವಣೆ ಹೊತ್ತಿಗೆ ಎಲ್ಲ ಸರಿಹೋಗುತ್ತದೆ ಎಂದು ಕಾರ್ಯಕರ್ತರು ಮಾಡಿಕೊಳ್ಳುವ ಸಮಾಧಾನಕ್ಕೂ ಇದು ಸವಾಲಾಗಿದೆ. ಇದೇ ರೀತಿ ಕಿತ್ತಾಟ ಮುಂದುವರಿದರೆ ಮೋದಿ ಅಲೆಯಿಂದಾಗಲಿ, ಅಮಿತ್ ಶಾ ಕಲೆಯಿಂದಾಗಲಿ ಏನೂ ಮಾಡಲು ಆಗುವುದಿಲ್ಲ. ಕಾಂಗ್ರೆಸ್‌ನಲ್ಲೂ ಕಿತ್ತಾಟವಿದೆ, ಜೆಡಿಎಸ್‌ನಲ್ಲೂ ಒಳಜಗಳವಿದೆ ಎಂಬುದು ಬಿಜೆಪಿ ಕಲಹಕ್ಕೆ ಪರಿಹಾರವಾಗುವುದಿಲ್ಲ.

ಎದುರಾಳಿಯ ಅಸ್ತ್ರಕ್ಕೆ ಪ್ರತ್ಯಸ್ತ್ರ ಪ್ರಯೋಗ ಮಾಡಬೇಕೆ ಹೊರತು, ಎದುರಾಳಿಯ ಬತ್ತಳಿಕೆಯಲ್ಲಿರುವ ಅಸ್ತ್ರವನ್ನೇ ಕದ್ದು ಪ್ರಯೋಗಿಸುತ್ತೇನೆ ಅನ್ನುವುದು ಜಾಣತನವಾಗುವುದಿಲ್ಲ. ಬಿಜೆಪಿ ಕಾರ್ಯಕರ್ತರನ್ನು ನಿಜಕ್ಕೂ ಕಂಗೆಡಿಸಿರುವುದು ಈ ವಿಚಾರಕ್ಕೆ.

ನಾಯಕನಾದವನಿಗೆ ಸಂಯಮ, ಮತ್ತೊಬ್ಬರ ಮಾತುಗಳಿಗೆ ಕಿವಿಯಾಗುವ ತಾಳ್ಮೆ, ಸಮಸ್ಯೆಯನ್ನು ಮೂಲದಲ್ಲೇ ನಿವಾರಿಸಿಕೊಳ್ಳುವ ಜಾಣ್ಮೆ ಇರಬೇಕೆ ಹೊರತು ಕೋಪ-ತಾಪ, ರೋಷಾವೇಷದ ಕೈಗೆ ಬುದ್ಧಿ ಕೊಟ್ಟು ಪರೀಕ್ಷೆ ಮಾಡುವ ಭಂಡತನ ಇರಬಾರದು. ತಮಗೆ ಆಗುವುದಿಲ್ಲ ಎಂಬ ಕಾರಣಕ್ಕೆ ಯಾರನ್ನೋ ಪಕ್ಷದಿಂದ ಕಿತ್ತು ಹಾಕುವುದು, ಅಮಾನತು ಮಾಡುವುದು, ಪದಾಧಿಕಾರಿಗಳ ಸ್ಥಾನ ತಪ್ಪಿಸುವುದು ಇದು ದ್ವೇಷದ ರಾಜಕಾರಣಕ್ಕೆ ಕಾರಣವಾಗುತ್ತದೆಯೇ ಹೊರತು ಪಕ್ಷಕ್ಕಾಗಲಿ, ನಾಯಕರಿಗಾಗಲಿ ಯಾವುದೇ ಲಾಭ ತರುವುದಿಲ್ಲ. ಅದೆಂಥದೇ ಇರಲಿ, ತೀರ್ಮಾನ ಮಾತ್ರ ಯಾವತ್ತೂ ಸಾಮೂಹಿಕವಾಗಿರಬೇಕು.

ಒಬ್ಬರೇ ತೆಗೆದುಕೊಂಡರೂ ತೀರ್ಮಾನವೇ. ನಾಲ್ಕು ಜನರ ಜತೆಗೂಡಿ ತೆಗೆದುಕೊಂಡರೂ ತೀರ್ಮಾನವೇ. ತೀರ್ಮಾನದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಆದರೆ ಈ ಎರಡೂ ಸ್ವರೂಪ ಬಿಂಬಿಸುವ ಸಂದೇಶ ಮಾತ್ರ ಭಿನ್ನ. ಏಕಮುಖ ತೀರ್ಮಾನ ಅನಗತ್ಯ ಗೊಂದಲ, ಪ್ರತಿಷ್ಠೆ, ಸಿಟ್ಟು-ಸೆಡವುಗಳಿಗೆ ಆಸ್ಪದ ಮಾಡಿಕೊಡುತ್ತದೆ. ಮತ್ತಿನ್ನೆಲ್ಲವೂ ನಾಯಕತ್ವದ ಸುತ್ತ ಮಸಿಚಕ್ರವಾಗಿ ಸುತ್ತುತ್ತದೆ. ಈಗ ಬಿಜೆಪಿ ಬಣ ರಾಜಕೀಯದ ಪ್ರತಿಫಲ ಇದೇ ಆಗಿದ್ದು, ಕಾರ್ಯಕರ್ತರ ಸಹನೆ ಪರೀಕ್ಷೆ ಮಾಡುತ್ತಿದೆ.

ಶಿವಮೊಗ್ಗ ವ್ಯಕ್ತಿಗತ ರಾಜಕೀಯವನ್ನು ರಾಜ್ಯಮಟ್ಟಕ್ಕೆ ತಂದು ರಾಡಿ ಎಬ್ಬಿಸಿರುವ ಈಶ್ವರಪ್ಪನವರಿಗೆ ಇದರಿಂದ ಯಾವುದೇ ಲಾಭವಾಗಿಲ್ಲ. ಅವರು ಏನನ್ನೂ ಸಾಧಿಸಲು ಆಗಿಲ್ಲ. ಬದಲಿಗೆ ಅವರು ನಡೆಸುತ್ತಿರುವ ಬ್ರಿಗೇಡ್ ಚಟುವಟಿಕೆಯಿಂದ ಬಿಜೆಪಿಗೂ ಹಾನಿಯಾಗುತ್ತಿದೆ, ಸಂಘ-ಪರಿವಾರದ ಹೆಸರಿಗೂ ಕಪ್ಪುಚುಕ್ಕೆ ಬಿದ್ದಿದೆ.

ಈ ಎಲ್ಲದರಿಂದ ಈಶ್ವರಪ್ಪ ಗಳಿಸಿದ್ದು ಇನ್ನು ಮುಂದೆ ಬ್ರಿಗೇಡ್ ಸಭೆ ನಡೆಸಬಾರದೆನ್ನುವ ವರಿಷ್ಠರ ಎಚ್ಚರಿಕೆ, ಜತೆಗೆ ಪರಿವಾರದ ಮುಖಂಡರಿಂದ ತರಾಟೆ. ಇಷ್ಟಕ್ಕೆ ಅಷ್ಟೆಲ್ಲ ಮಾಡಬೇಕಿತ್ತಾ ಅನ್ನುವ ಪ್ರಶ್ನೆಗೆ ಈಶ್ವರಪ್ಪನವರ ಬಳಿಯೂ ಉತ್ತರವಿಲ್ಲ.

ಇದೀಗ ಮೈಸೂರಲ್ಲಿ ನಡೆದ ಎರಡು ದಿನಗಳ ಬಿಜೆಪಿ ಕಾರ್ಯಕಾರಿಣಿ ಯಡಿಯೂರಪ್ಪ ಮತ್ತು ಈಶ್ವರಪ್ಪ ಜಗಳಕ್ಕೊೊಂದು ತಾರ್ಕಿಕ ಅಂತ್ಯ ಕಾಣಿಸುವ ಪ್ರಯತ್ನ ಮಾಡಿದೆ. ರಾಜ್ಯಾದ್ಯಂತ ಪ್ರವಾಸ ಮಾಡಿ, ಜಿಲ್ಲಾವಾರು ಸಭೆ ನಡೆಸಿ ಪಕ್ಷ ಸಂಘಟಿಸುವಂತೆ ಇಬ್ಬರಿಗೂ ಸೂಚಿಸಿದೆ. ಜತೆಗೆ ಬೇರೆ ನಾಯಕರನ್ನು ಕೂಡ ಸರದಿಯಲ್ಲಿ ಜತೆಗೆ ಕರೆದೊಯ್ಯುವಂತೆ ಹೇಳಿದೆ. ಅಂದರೆ ಇದರ ಹಿಂದಿರುವುದು ಎಲ್ಲ ನಾಯಕರನ್ನು ಜತೆಯಲ್ಲಿ ಕೊಂಡೊಯ್ಯುತ್ತಿಲ್ಲ ಎಂಬ ಆಪಾದನೆಗೆ ಉತ್ತರ ಕೊಡಿಸುವ ಪ್ರಯತ್ನ. ಇನ್ನಾದರೂ ನಾಯಕರು ಕಿತ್ತಾಾಟ ಬದಿಗಿಟ್ಟು ಸರಿ ಹೋಗುತ್ತಾರೋ ಇಲ್ಲ ಮತ್ತದೇ ಚಾಳಿ ಮುಂದುವರಿಸಿ ಪಕ್ಷದ ಬುಡಕ್ಕೆ ಬಿಸಿನೀರು ಬಿಟ್ಟು, ಅನ್ಯಪಕ್ಷಗಳು ನಳನಳಿಸಲು ಅವಕಾಶ ಮಾಡಿಕೊಡುತ್ತಾರೋ ಎನ್ನುವುದು ಕಾರ್ಯಕರ್ತರು ಕುತೂಹಲ ಕೆರಳಿಸಿರುವ ಪ್ರಶ್ನೆ.

ಲಗೋರಿ: ಅನುಭವ ಪಾಠವಾಗಬೇಕೆ ಹೊರತು ಮತ್ತಷ್ಟು ಸಮಸ್ಯೆಗಳಿಗೆ ಗುರುವಾಗಬಾರದು.

(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply