ಫ್ರಾನ್ಸ್ ಚುನಾವಣೆಯಲ್ಲಿ ಬಲಪಂಥಕ್ಕೆ ಬ್ರೇಕ್, ಅಧ್ಯಕ್ಷನ ಆಯ್ಕೆಯಾದರೂ ‘ಪಿಕ್ಚರ್ ಅಭೀ ಬಾಕಿ’ ಯಾಕೆ ಗೊತ್ತೇ?

ಡಿಜಿಟಲ್ ಕನ್ನಡ ಟೀಮ್:

39 ವರ್ಷದ ಇಮ್ಯಾನುಲ್ ಮೆಕ್ರಾನ್ ಅವರು ಫ್ರಾನ್ಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರಬಲ ಬಲಪಂಥೀಯ ಅಭ್ಯರ್ಥಿ ಎನಿಸಿದ್ದ ಮ್ಯಾರಿನ್ ಲೆ ಪೆನ್ ವಿರುದ್ಧ, ಸೈದ್ಧಾಂತಿಕವಾಗಿ ನಡುಪಂಥೀಯನಾಗಿ ಗುರುತಿಸಿಕೊಂಡಿರುವ ಮೆಕ್ರಾನ್ ಗೆದ್ದಿರುವುದರ ಮಹತ್ವ ಜಾಗತಿಕ ರಾಜಕಾರಣದಲ್ಲಿ ಎಷ್ಟರಮಟ್ಟಿಗಿನದು ಹಾಗೂ ಗೆದ್ದರೂ ಆತನ ಮುಂದಿರುವ ಸವಾಲುಗಳೇನು ಎಂಬುದನ್ನು ಪಾಯಿಂಟ್ ಬೈ ಪಾಯಿಂಟ್  ಹೀಗೆ ವಿವರಿಸಬಹುದು.

  • ಎದುರಾಳಿ ಲೆ ಪೆನ್ ಒಂದರ್ಥದಲ್ಲಿ ಫ್ರಾನ್ಸ್ ಮತ್ತು ಫ್ರಾನ್ಸ್ ಮಾತ್ರ ಎಂಬ ಟ್ರಂಪ್ ಮಾದರಿಯ ಮಾರ್ಗದಲ್ಲಿದ್ದಳು. ಆಕೆ ಗೆದ್ದಿದ್ದರೆ ಬ್ರೆಕ್ಸಿಟ್ ಆದಂತೆ ಫ್ರಾನ್ಸ್ ಸಹ ಯುರೋಪ್ ಒಕ್ಕೂಟದಿಂದ ಹೊರಹೋಗಬಹುದೆಂದು ವಿಶ್ಲೇಷಿಸಲಾಗಿತ್ತು. ಅಂಥ ಸಾಧ್ಯತೆಗಳಿಂದ ಜಾಗತಿಕ ಹಣಕಾಸು ಲೋಕದ ಮೇಲಾಗಬಹುದಾಗಿದ್ದ ಪರಿಣಾಮಗಳು ಈಗಿಲ್ಲ.
  • ಮೆಕ್ರಾನ್ ಎದುರಾಳಿಯಾಗಿದ್ದ ಲೆ ಪೆನ್ ಬಲಪಂಥೀಯಳೆನಿಸಿದ್ದು ಆರ್ಥಿಕ ರಕ್ಷಣಾತ್ಮಕ ನೀತಿಯ ಜತೆ ಜತೆಗೆ ವಲಸೆಯ ಮೇಲೆ ಬಿಗಿ ನಿಲುವು ತೋರಿಸಿದ್ದರಿಂದ. ಬಹಳ ಮುಖ್ಯವಾಗಿ ಮುಸ್ಲಿಂ ವಲಸೆಯ ಮೇಲೆ ಆಕೆ ಸಂಪೂರ್ಣ ಕಡಿವಾಣ ಹಾಕುವ ಸೂಚನೆಗಳಿದ್ದವು. ಇದೀಗ ಮೆಕ್ರಾನ್ ಗೆದ್ದಿರುವುದರಿಂದ, ‘ಉದಾರವಾದಿ ಯುರೋಪಿನ ಚಿತ್ರಣವೇ ಬದಲಾಗಿಬಿಡುತ್ತದೆ’ ಎಂಬ ಎಡಪಂಥೀಯ ಚಿಂತಕರ ಆತಂಕ ಉಪಶಮನವಾಗಿದೆ.
  • ಅವೇನೇ ಇದ್ದರೂ ಹಲವು ವರ್ಷಗಳಿಂದ ಫ್ರಾನ್ಸ್ ಅನ್ನು ಆಳಿಕೊಂಡು ಬಂದಿದ್ದ ತಥಾಕಥಿತ ‘ಉದಾರವಾದಿ ಲೆಫ್ಟ್’ಗೆ ಜಾಗವಿಲ್ಲದಂತಾಗಿರುವುದು ನಿಜ. ಉಗ್ರ ಬಲಪಂಥೀಯವಾದವು ಅಧಿಕಾರಕ್ಕೆ ಬೇಕಾಗುವಷ್ಟು ಮತ ಗಳಿಸುವುದಕ್ಕೆ ಸಾಧ್ಯವಾಗಿಲ್ಲದೇ ಹೋದರೂ, ಎಡದಲ್ಲಲ್ಲದೇ ತನ್ನನ್ನು ಸೆಂಟ್ರಿಸ್ಟ್ ಎಂದು ಬಿಂಬಿಸಿಕೊಳ್ಳುವ ಮೆಕ್ರಾನ್ ಅಧಿಕಾರಕ್ಕೆ ಬಂದಿದ್ದಾರೆಂಬುದು ಗಮನಾರ್ಹ.
  • ಇವೆಲ್ಲ ಸರಿ, ಅಧ್ಯಕ್ಷನಾದ ಬಳಿಕವೂ ಮೆಕ್ರಾನ್ ದೊಡ್ಡ ಸವಾಲಿನೆದುರು ನಿಂತಿದ್ದಾರೆ ಹಾಗೂ ಈ ಕಾರಣದಿಂದಲೇ ಫ್ರಾನ್ಸಿನ ರಾಜಕಾರಣ ಅನಿಶ್ಚಿತವಾಗಿದೆ ಎಂಬುದನ್ನೂ ಗಮನಿಸಬೇಕು. ಏಕೆಂದರೆ ಫ್ರಾನ್ಸ್ ಸಂವಿಧಾನವು ಅಧ್ಯಕ್ಷೀಯ ಹಾಗೂ ಸಂಸದೀಯ ಮಾದರಿಗಳ ಅತಿ ವಿಚಿತ್ರ ಬೆರಕೆ ಹೊಂದಿದೆ. ಅಧ್ಯಕ್ಷನಾದವನು ಪ್ರಧಾನಿಯ ಬೆಂಬಲವಿಲ್ಲದೇ ಸುಸೂತ್ರ ಆಡಳಿತ ನಡೆಸಲಾರ. ಆತ ಪ್ರಧಾನಿಯನ್ನು ನೇಮಿಸಿ, ಮಸೂದೆ ಮತ್ತು ರಾಷ್ಟ್ರೀಯ ನೀತಿಗಳನ್ನು ನಿರ್ದೇಶಿಸುವ ಅಧಿಕಾರ ಹೊಂದಿದ್ದಾನೆ ನಿಜ. ಆದರೆ ನ್ಯಾಷನಲ್ ಅಸೆಂಬ್ಲಿಗೆ ಪ್ರತ್ಯೇಕವಾಗಿ ನಡೆಯುವ ಚುನಾವಣೆಯಲ್ಲಿ ಬೇರೆ ಪಕ್ಷದವ ಪ್ರಧಾನಿಯಾಗುವಷ್ಟು ಸ್ಥಾನ ಪಡೆದರೆ ಆಗ ಹಂತ ಹಂತಕ್ಕೂ ಸಂಘರ್ಷವೇ. ಆಗ ಪ್ರಧಾನಿ ಮತ್ತವನ ಮಂತ್ರಿಮಂಡಲದ ಮಾತೇ ಅಂತಿಮವಾಗಿಬಿಡುತ್ತದೆ. ಸಾಮಾನ್ಯವಾಗಿ ಅಧ್ಯಕ್ಷನ ಪಕ್ಷಕ್ಕೇ ನ್ಯಾಷನಲ್ ಅಸೆಂಬ್ಲಿಯಲ್ಲೂ ಜನ ಹರಸುತ್ತಾರೆ. ಆದರೆ ಈ ಬಾರಿ ಅಧ್ಯಕ್ಷನಾಗಿರುವ ಮೆಕ್ರಾನ್ ಗೆ ಪಕ್ಷವೇ ಇಲ್ಲ! ಎಡ-ಬಲ ಸಿದ್ಧಾಂತಗಳನ್ನು ಮೀರಿ ನಡುಪಂಥೀಯನಾಗುವುದಕ್ಕೆ ಮೆಕ್ರಾನ್ ಪ್ರತಿನಿಧಿಸುತ್ತಿರುವುದು ಎನ್ ಮಾರ್ಷೆ ಎಂಬ ರಾಜಕೀಯ ಆಂದೋಲನವನ್ನು. ಅದಿನ್ನೂ ಪೂರ್ಣ ಪ್ರಮಾಣದ ರಾಜಕೀಯ ಪಕ್ಷವೇ ಆಗಿಲ್ಲ. ದೇಶದ 577 ನ್ಯಾಷನಲ್ ಅಸೆಂಬ್ಲಿ ಸ್ಥಾನಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳಾಗಲೀ, ಅಷ್ಟು ವ್ಯಾಪಕ ನೆಟ್ವರ್ಕ್ ಆಗಲೀ ಇದಕ್ಕಿಲ್ಲ. ಹೀಗಾಗಿ ಆ ದೇಶಕ್ಕೆ ಜೂನ್ ನಲ್ಲಿ ನಡೆಯುವ ನ್ಯಾಷನಲ್ ಅಸೆಂಬ್ಲಿ ಚುನಾವಣೆಯಲ್ಲಿ ಬಲಪಂಥೀಯ ಪಕ್ಷಗಳೇ ಹೆಚ್ಚು ಸ್ಥಾನ ಗಳಿಸಿ, ಮೆಕ್ರಾನ್ ಒಬ್ಬ ಬಲಹೀನ ಅಧ್ಯಕ್ಷನಾಗುವ ಎಲ್ಲ ಸಾಧ್ಯತೆಗಳೂ ಇವೆ.

Leave a Reply