ಲಾಲು- ಕೇಜ್ರಿವಾಲರಿಗಿದು ಕಾಲವಲ್ಲ..!

ಡಿಜಿಟಲ್ ಕನ್ನಡ ಟೀಮ್:

ಸದ್ಯ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಸಮಯ ಸಂಪೂರ್ಣವಾಗಿ ಕೆಟ್ಟಂತಿದೆ. ಕಾರಣ, ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ವಿರುದ್ಧದ ಆರೋಪಪಟ್ಟಿಯನ್ನು ಮುಂದುವರಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ಮತ್ತೊಂದೆಡೆ ಭ್ರಷ್ಟಾಚಾರ ಪ್ರಕರಣದಲ್ಲಿ ಅರವಿಂದ ಕೇಜ್ರಿವಾಲ್ ವಿರುದ್ಧ ಆರೋಪ ಕೇಳಿಬಂದಿದ್ದು, ಸ್ವತಃ ಎಎಪಿ ಪಕ್ಷದ ಶಾಸಕ ಕಪಿಲ್ ಮಿಶ್ರಾ ಅವರೇ ಕೇಜ್ರಿವಾಲ್ ವಿರುದ್ಧ ಸಾಕ್ಷ್ಯಾಧಾರಗಳನ್ನು ಸಿಬಿಐಗೆ ಒದಗಿಸಿದ್ದಾರೆ.

₹ 900 ಕೋಟಿ ಮೊತ್ತದ ಮೇವು ಹಗರಣದಲ್ಲಿ ಲಾಲು ಪ್ರಸಾದ್ ವಿರುದ್ಧದ ಆರೋಪ ದಟ್ಟವಾಗಿ ಕೇಳಿಬಂದಿದ್ದರೂ ಈವರೆಗೂ ಯಾರೋಬ್ಬರು ಲಾಲು ಅವರನ್ನು ಪ್ರಶ್ನೆ ಮಾಡಲು ಮುಂದಾಗಿರಲಿಲ್ಲ. ಆದರೆ ಇತ್ತೀಚೆಗೆ ಅರ್ನಾಬ್ ಗೋಸ್ವಾಮಿ ಅವರ ರಿಪಬ್ಲಿಕ್ ಸುದ್ದಿ ವಾಹಿನಿಯಲ್ಲಿ ಲಾಲು ಪ್ರಸಾದ್ ಯಾದವ್ ಜೈಲು ಶಿಕ್ಷೆ ಅನುಭವಿಸುತ್ತಿರುವ ಅಪರಾಧಿ ಶಹಬುದ್ದೀನ್ ಆದೇಶಗಳನ್ನು ಪಾಲಿಸುತ್ತಿರುವ ಬಗ್ಗೆ ದೊಡ್ಡ ವರದಿಯನ್ನೇ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಮೇವು ಹಗರಣದಲ್ಲಿ ಲಾಲು ಪ್ರಸಾದ್ ಅವರ ಮೇಲಿನ ಆರೋಪ ಪಟ್ಟಿ ಮುಂದುವರಿಕೆಗೆ ಸಮ್ಮತಿ ಸೂಚಿಸಿರುವುದು ಲಾಲು ಪಾಲಿಗೆ ದೊಡ್ಡ ಮುಖಭಂಗವೇ ಆಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಜಾರ್ಖಂಡ್ ಹೈ ಕೋರ್ಟ್ ಲಾಲು ಪ್ರಸಾದ್ ಯಾದವ್ ವಿರುದ್ಧದ ಆರೋಪ ಪಟ್ಟಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಜತೆಗೆ ಲಾಲು ಪ್ರಸಾದ್ ವಿರುದ್ಧದ ವಿಚಾರಣೆಯನ್ನು ಪ್ರತ್ಯೇಕವಾಗಿ ನಡೆಸಬೇಕು ಎಂದು ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ದ್ವಿಸದಸ್ಯತ್ವ ಪೀಠ ಲಾಲು ವಿರುದ್ಧದ ಆರೋಪ ಪಟ್ಟಿಯನ್ನು ಜೀವಂತವಾಗಿಸಿದೆ. ಅಲ್ಲದೆ ಪ್ರತ್ಯೇಕ ವಿಚಾರಣೆಗೆ ಸಮ್ಮತಿ ಸೂಚಿಸಿದ್ದು, ಈ ವಿಚಾರಣೆಯನ್ನು 9 ತಿಂಗಳ ಒಳಗಾಗಿ ಮುಗಿಸುವಂತೆ ನಿರ್ದೇಶನ ನೀಡಿದೆ.

20 ವರ್ಷಗಳ ಹಳೇಯ ಹಗರಣದಲ್ಲಿ ಭಾಗಿಯಾಗಿದ್ದರೂ ರಾಜಾರೋಷವಾಗಿ ಓಡಾಡಿಕೊಂಡಿದ್ದ ಲಾಲು ಪ್ರಸಾದ್ ಅವರಿಗೆ ಈ ತೀರ್ಪು ಶಾಕ್ ಕೊಟ್ಟಿದೆ. ಇದರೊಂದಿಗೆ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಲಾಲು ಪ್ರಸಾದ್ ವಿರುದ್ಧ ವಿಚಾರಣೆ ನಡೆಯುವುದು ಪಕ್ಕಾ ಆಗಿದೆ.

ಇನ್ನು ಮತ್ತೊಂದೆಡೆ ಭ್ರಷ್ಟಾಚಾರ ವಿರೋಧಿ ಹೋರಾಟದ ಮೂಲಕ ರಾಜಕೀಯಕ್ಕೆ ಕಾಲಿಟ್ಟು, ದೆಹಲಿಯ ಅಧಿಕಾರ ಹಿಡಿದು ಸಂಚಲನ ಮೂಡಿಸಿದ್ದ ಅರವಿಂದ್ ಕೇಜ್ರಿವಾಲ್ ವಿರುದ್ಧವೇ ಈಗ ಭ್ರಷ್ಟಾಚಾರ ಆರೋಪಗಳು ಸುತ್ತಿಕೊಂಡಿವೆ.

ನೀರಿನ ಟ್ಯಾಂಕರ್ ಹಗರಣದಲ್ಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರನ್ನು ರಕ್ಷಿಸುವ ಸಲುವಾಗಿ ಪ್ರಕರಣದ ವಿಚಾರಣೆಯನ್ನು ಹಳ್ಳ ಹಿಡಿಸಲು ಅರವಿಂದ ಕೇಜ್ರಿವಾಲ್ ಹಾಗೂ ಅವರ ಆಪ್ತ ನಾಯಕರು ನಿರ್ಧರಿಸಿ, ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಸ್ವತಃ ಆಮ್ ಆದ್ಮಿ ಪಕ್ಷದ ಶಾಸಕ ಕಪಿಲ್ ಮಿಶ್ರಾ ಆರೋಪ ಮಾಡಿದ್ದಾರೆ. ಕೇವಲ ಆರೋಪ ಮಾಡುವುದಲ್ಲದೇ ಈ ಆರೋಪಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಸಿಬಿಐಗೆ ನೀಡಿರುವ ಕಪಿಲ್ ಮಿಶ್ರಾ, ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೋರಿದ್ದಾರೆ.

ಭ್ರಷ್ಟಾಚಾರ ನಿಗ್ರಹ ವಿಭಾಗಕ್ಕೆ ದೂರು ನೀಡಿದ ಮೇಲೆ ಮಾಧ್ಯಮದವರೊಂದಿಗೆ ಮಾತನಾಡಿದ ಕಪಿಲ್ ಮಿಶ್ರಾ, ‘ನೀರಿನ ಟ್ಯಾಂಕರ್ ಹಗರಣದಲ್ಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರನ್ನು ರಕ್ಷಿಸಲು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಅವರ ನಿಕಟ ನಾಯಕರಾದ ಆಶೀಶ್ ತಲ್ವಾರ್ ಮತ್ತು ವೈಭವ್ ಕುಮಾರ್ ಅವರು ಹೇಗೆ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂಬ ಪ್ರಕರಣದಲ್ಲಿ ನಾನು ದೂರುದಾರನಾಗಿದ್ದೇನೆ. ಜತೆಗೆ ಈ ಪ್ರಕರಣದ ಪ್ರಮುಖ ಸಾಕ್ಷಿಯೂ ನಾನೇ ಆಗಿದ್ದೇನೆ’ ಎಂದಿದ್ದಾರೆ.

ಇಷ್ಟು ದಿನಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು ತಮ್ಮ ರಾಜಕೀಯ ವಿರೋಧಿಗಳ ಮೇಲೆ ಭ್ರಷ್ಟಾಚಾರ ಆರೋಪಗಳನ್ನು ಮಾಡುತ್ತಾ ತಿರುಗಾಡುತ್ತಿದ್ದ ಕೇಜ್ರಿವಾಲ್ ವಿರುದ್ಧವೇ ಈಗ ಆರೋಪ ಕೇಳಿಬಂದಿದೆ. ಭ್ರಷ್ಟಾಚಾರ ಪ್ರಕರಣಗಳಲ್ಲಿ ಎಲ್ಲರಿಂದ ಉತ್ತರ ನಿರೀಕ್ಷಿಸುತ್ತಿದ್ದ ಕೇಜ್ರಿವಾಲ್, ಈಗ ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಉತ್ತರ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹೀಗೆ ಭ್ರಷ್ಟಾಚಾರ ಪ್ರಕರಣಗಳಲ್ಲಿ ಲಾಲು ಪ್ರಸಾದ್ ಯಾದವ್ ಹಾಗೂ ಅರವಿಂದ ಕೇಜ್ರಿವಾಲ್ ವಿರುದ್ಧ ಗುರುತರ ಆರೋಪಗಳು ಕೇಳಿಬರುವುದರಿಂದ ಇವರಿಗೆ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿರುವುದು ಸ್ಪಷ್ಟವಾಗಿದೆ.

Leave a Reply