ಭಾರತವಾಯ್ತು ಈಗ ಉಗ್ರರನ್ನು ನಿಗ್ರಹಿಸಿ ಎಂದು ಪಾಕಿಸ್ತಾನಕ್ಕೆ ತಾಕೀತು ಮಾಡುತ್ತಿದೆ ಇರಾನ್!

ಡಿಜಿಟಲ್ ಕನ್ನಡ ಟೀಮ್:

‘ನಿಮ್ಮ ನೆಲದಲ್ಲಿ ಆಶ್ರಯ ಪಡೆಯುತ್ತಿರುವ ಉಗ್ರರನ್ನು ಮಟ್ಟಹಾಕಿ. ಗಡಿ ಪ್ರದೇಶದಲ್ಲಿ ಶಾಂತಿ ವಾತಾವರಣ ನಿರ್ಮಿಸಿ…’ ಇಂತಹ ಒಂದು ಎಚ್ಚರಿಕೆಯನ್ನು ಪಾಕಿಸ್ತಾನಕ್ಕೆ ನೀಡುತ್ತಿರುವುದು ಭಾರತವಲ್ಲ. ಬದಲಿಗೆ ಇರಾನ್!

ಹೌದು, ಇಷ್ಟು ದಿನಗಳ ಕಾಲ ಪಾಕಿಸ್ತಾನಕ್ಕೆ ಇಂತಹ ಎಚ್ಚರಿಕೆಯನ್ನು ನೀಡುತ್ತಿದ್ದದ್ದು, ಭಾರತವೇ. ಆದರೆ ಭಾರತದ ಮಾತನ್ನು ಲೆಕ್ಕಿಸದೇ ದರ್ಪ ತೋರುತ್ತಿರುವ ಪಾಕಿಸ್ತಾನಕ್ಕೆ ಈಗ ಇರಾನ್ ಸಹ ಎಚ್ಚರಿಕೆ ರವಾನಿಸಿದೆ. ಇರಾನ್ ಸುಖಾಸುಮ್ಮನೆ ಪಾಕಿಸ್ತಾನಕ್ಕೆ ಇಂತಹ ಎಚ್ಚರಿಕೆ ನೀಡುತ್ತಿಲ್ಲ. ಪಾಕಿಸ್ತಾನದಲ್ಲಿ ಆಶ್ರಯ ಪಡೆದಿರುವ ಉಗ್ರರು ತನ್ನ ಗಡಿ ಪ್ರದೇಶದಲ್ಲಿ ನಡೆಸುತ್ತಿರುವ ದಾಳಿಗಳನ್ನು ಸಹಿಸಲಾಗದೇ ಇರಾನ್ ಈ ಎಚ್ಚರಿಕೆ ರವಾನಿಸಿದೆ.

ಪಾಕಿಸ್ತಾನದಲ್ಲಿ ನೆಲೆಯೂರಿ ಇರಾನ್ ಗಡಿ ಪ್ರದೇಶದಲ್ಲಿ ದಾಳಿ ನಡೆಸುತ್ತಿರುವುದು ಜೈಶ್ ಅಲ್ ಅದಲ್ ಎಂಬ ಸುನ್ನಿ ಉಗ್ರ ಸಂಘಟನೆ. ಜಮ್ಮು ಕಾಶ್ಮೀರದ ಗಡಿಯಲ್ಲಿ ಹೇಗೆ ಉಗ್ರರು ದಾಳಿ ಮಾಡುತ್ತಿದ್ದಾರೋ ಅಂತಹುದೇ ಕೆಲಸ ಇರಾನ್ ಗಡಿಯಲ್ಲು ಉಗ್ರರಿಂದ ನಡೆಯುತ್ತಿದೆ. ಈ ಉಗ್ರರ ದಾಳಿಯಿಂದಾಗಿ ಕಳೆದ ತಿಂಗಳು 10 ಇರಾನ್ ಯೋಧರು ಮೃತಪಟ್ಟಿದ್ದಾರೆ. ಪಾಕಿಸ್ತಾನದ ಗಡಿಯೊಳಗೆ ಅವಿತುಕೊಂಡು ಲಾಂಗ್ ರೇಂಜ್ ಗನ್ ಗಳ ಮೂಲಕ ಗುಂಡು ಹಾರಿಸುತ್ತಿರುವ ಉಗ್ರರು, ಇಂತಹ ದಾಳಿ ನಡೆಸುವ ಮೂಲಕ ಡ್ರಗ್ಸ್ ಕಳ್ಳಸಾಗಾಣೆ ಗುಂಪಿನ ಜತೆ ಕೈಜೋಡಿಸಿದ್ದಾರೆ. ಆ ಮೂಲಕ ಇರಾನ್ ಯೋಧರ ಪಾಲಿಗೆ ದೊಡ್ಡ ಸಮಸ್ಯೆಯಾಗಿದ್ದಾರೆ. ತನ್ನ ಯೋಧರ ಹತ್ಯೆಯಿಂದ ಸಿಟ್ಟಿಗೆದ್ದಿರುವ ಇರಾನ್, ಉಗ್ರರ ವಿರುದ್ಧ ಕೆಂಡಕಾರುತ್ತಿದೆ.

ಈ ಬಗ್ಗೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿರುವ ಇರಾನ್ ಸೇನೆಯ ಮೇಜರ್ ಜೆನರಲ್ ಮೊಹಮದ್ ಬಕೇರ್ ಹೇಳಿರುವುದಿಷ್ಟು…

‘ಗಡಿ ಪ್ರದೇಶದಲ್ಲಿ ಇಂತಹ ಉಗ್ರರ ದಾಳಿಯ ಪರಿಸ್ಥಿತಿ ಮುಂದುವರಿದರೆ ಅದನ್ನು ಸಹಿಸಲು ಸಾಧ್ಯವಿಲ್ಲ. ಪಾಕಿಸ್ತಾನ ಸರ್ಕಾರ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿ ಅವರನ್ನು ವಶಕ್ಕೆ ಪಡೆಯಬೇಕು. ಜತೆಗೆ ಉಗ್ರರ ನೆಲೆಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸುತ್ತೇವೆ. ಮುಂದಿನ ದಿನಗಳಲ್ಲೂ ಉಗ್ರರಿಂದ ಇಂತಹುದೇ ದಾಳಿ ಮುಂದುವರಿದರೆ, ಪಾಕಿಸ್ತಾನದಲ್ಲಿ ಸುರಕ್ಷಿತವಾಗಿರುವ ಉಗ್ರರ ನೆಲೆಗಳ ಮೇಲೆ ನಾವು ದಾಳಿ ಮಾಡಬೇಕಾಗುತ್ತದೆ. ಈ ಉಗ್ರರ ನೆಲೆ ಎಲ್ಲಿಯೇ ಇರಲಿ ಅಲ್ಲಿಗೆ ನುಗ್ಗಿ ಅವರನ್ನು ಬೇಟೆಯಾಡಬೇಕಾಗುತ್ತದೆ.’

ಕಳೆದ ವಾರವಷ್ಟೇ ಇರಾನ್ ವಿದೇಶಾಂಗ ಸಚಿವರಾದ ಮೊಹಮದ್ ಜಾವದ್ ಜರೀಫ್ ಪಾಕಿಸ್ತಾನಕ್ಕೆ ಭೇಟಿಯಾಗಿದ್ದ ಸಂದರ್ಭದಲ್ಲಿ ಗಡಿಯಲ್ಲಿ ಸೇನಾ ಭದ್ರತೆಯನ್ನು ಹೆಚ್ಚಿಸಿ ಎಂದು ಮನವಿ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಹೆಚ್ಚುವರಿ ಸೇನಾ ಪಡೆಗಳನ್ನು ನಿಯೋಜಿಸುವುದಾಗಿ ಮಾತುಕೊಟ್ಟಿತ್ತು.

ಈ ಹಿಂದೆ ಭಾರತದ ಜತೆಗೂ ಇಂತಹ ಅನೇಕ ಮಾತುಕತೆ ಹಾಗೂ ಭರವಸೆ ನೀಡಿದ ಬೆನ್ನಲ್ಲೇ ಗಡಿಯಲ್ಲಿ ಉಗ್ರರ ದಾಳಿ ನಡೆಸಿರುವುದು ಪಾಕಿಸ್ತಾನದ ನೀಚ ಬುದ್ಧಿಗೆ ಸಾಕ್ಷಿ. ಈಗ ಇರಾನ್ ಗಡಿಯಲ್ಲೂ ಆಗುತ್ತಿರುವುದು ಅದೇ ಕುತಂತ್ರ ಎಂಬುದು ಸ್ಪಷ್ಟವಾಗಿದೆ.

ಅಂದಹಾಗೆ ಇರಾನ್ ಸೈನಿಕರ ಮೇಲೆ ಇದೇ ಮೊದಲ ಬಾರಿಗೆ ಉಗ್ರರಿಂದ ದಾಳಿ ನಡೆಸುತ್ತಿಲ್ಲ. 2014ರಲ್ಲಿ ಈ ಉಗ್ರ ಸಂಘಟನೆ ಇರಾನಿನ ಐವರು ಯೋಧರನ್ನು ಅಪಹರಿಸಿತ್ತು. ಆಗ ಇರಾನ್ ತನ್ನ ಸೇನೆಯನ್ನು ಪಾಕಿಸ್ತಾನ ಗಡಿಯೊಳಗೆ ಕಳುಹಿಸಲಾಗುವುದು ಎಂಬ ಎಚ್ಚರಿಕೆ ರವಾನಿಸಿತ್ತು. ಆಗ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪಾಕಿಸ್ತಾನ, ಇರಾಕ್ ಸೇನೆ ನಮ್ಮ ಗಡಿಯೊಳಗೆ ಪ್ರವೇಶಿಸಿದರೆ ಅದು ಅಂತಾರಾಷ್ಟ್ರೀಯ ಗಡಿ ನಿಯಮ ಉಲ್ಲಂಘನೆಯಾಗಲಿದೆ ಎಂದು ಇರಾನಿಗೆ ಎಚ್ಚರಿಕೆ ನೀಡಿತ್ತು. ನಂತರ 2015ರ ಏಪ್ರಿಲ್ ನಲ್ಲಿ ದಾಳಿ ಮಾಡಿದ್ದ ಈ ಉಗ್ರ ಸಂಘಟನೆ 8 ಇರಾನ್ ಯೋಧರನ್ನು ಬಲಿ ಪಡೆದಿತ್ತು.

ಕೇವಲ ಭಾರತ ಮಾತ್ರವಲ್ಲದೇ ಇರಾನ್ ಗಡಿಯಲ್ಲೂ ಉಗ್ರರ ಮೂಲಕ ಪಾಕಿಸ್ತಾನ ಪದೇ ಪದೇ ಪರೋಕ್ಷವಾಗಿ ದಾಳಿ ಮಾಡುತ್ತಿದೆ. ಜಮ್ಮು ಕಾಶ್ಮೀರದಲ್ಲಿನ ಹಿಂಸಾಚಾರದ ಪ್ರಾಯೋಜಕತ್ವವನ್ನು ವಹಿಸಿಕೊಂಡಿರುವುದು ಪಾಕಿಸ್ತಾನವೇ ಎಂಬುದಕ್ಕೆ ದಾಖಲೆಗಳು ಬಹಿರಂಗವಾಗಿರುವ ಸಂದರ್ಭದಲ್ಲೇ ಅತ್ತ ಇರಾನ್ ಸಹ ಪಾಕಿಸ್ತಾನಕ್ಕೆ ಈ ಬಗ್ಗೆ ಎಚ್ಚರಿಕೆ ರವಾನಿಸುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಪಾಕಿಸ್ತಾನ ಇನ್ಯಾವರೀತಿ ತನ್ನ ಮೊಂಡುತನ ಪ್ರದರ್ಶಿಸಲಿದೆ ಕಾದು ನೋಡಬೇಕು.

1 COMMENT

  1. Iron or Iraq?
    ‘ನಿಮ್ಮ ನೆಲದಲ್ಲಿ ಆಶ್ರಯ ಪಡೆಯುತ್ತಿರುವ ಉಗ್ರರನ್ನು ಮಟ್ಟಹಾಕಿ. ಗಡಿ ಪ್ರದೇಶದಲ್ಲಿ ಶಾಂತಿ ವಾತಾವರಣ ನಿರ್ಮಿಸಿ…’ ಇಂತಹ ಒಂದು ಎಚ್ಚರಿಕೆಯನ್ನು ಪಾಕಿಸ್ತಾನಕ್ಕೆ ನೀಡುತ್ತಿರುವುದು ಭಾರತವಲ್ಲ. ಬದಲಿಗೆ ಇರಾಕ್!

Leave a Reply