ಹೊತ್ತಿ ಉರಿಯುತ್ತಿರುವುದು ಇಡೀ ಜಮ್ಮು ಕಾಶ್ಮೀರವಲ್ಲ, ಇಷ್ಟಕ್ಕೂ ಅಲ್ಲಿನ ಪ್ರಕ್ಷುಬ್ಧ ಪ್ರದೇಶಗಳು ಯಾವುವು?

ಡಿಜಿಟಲ್ ಕನ್ನಡ ಟೀಮ್:

ಕಳೆದ ಒಂದು ತಿಂಗಳಿನಿಂದ ಕಣಿವೆ ರಾಜ್ಯ ಜಮ್ಮು ಕಾಶ್ಮೀರ ಅಹಿಂಸೆ, ಉಗ್ರರ ದಾಳಿ, ಸೈನಿಕರ ಹತ್ಯೆ, ಕಲ್ಲುತೂರಾಟ ಹೀಗೆ ಕೆಟ್ಟ ಕಾರಣಗಳಿಂದಲೇ ಸುದ್ದಿಯಾಗುತ್ತಿದೆ. ಅದು ಯಾವ ಮಟ್ಟಿಗೆ ಎಂದರೆ, ಇಡೀ ಜಮ್ಮು ಕಾಶ್ಮೀರವೇ ಹೊತ್ತಿ ಉರಿಯುತ್ತಿದೆಯೋ ಏನೋ ಎಂದು ಸಾಮಾನ್ಯ ಜನರು ಭಾವಿಸುವ ಮಟ್ಟಿಗೆ ಬಿಂಬಿತವಾಗುತ್ತಿದೆ. ಆದರೆ ವಾಸ್ತವದಲ್ಲಿ ಜಮ್ಮು ಕಾಶ್ಮೀರದ ಕೆಲವು ಪ್ರದೇಶಗಳಲ್ಲಿ ಈ ರೀತಿಯಾದ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಅವುಗಳಿಗೆ ಕಾರಣಗಳೂ ಇವೆ.

ಈ ಪ್ರದೇಶಗಳಲ್ಲಿ ಸೈನಿಕರ ಮೇಲೆ ಕಲ್ಲು ತೂರಾಟದಿಂದ ಉಗ್ರರಿಗೆ ನೆರವು ನೀಡುವ ಮೂಲಕ ಸ್ಥಳೀಯರೆ ಭಾರತೀಯ ಸೈನಿಕರ ವಿರುದ್ಧ ನಿಂತಿರುವುದು ಸಹಜವಾಗಿಯೇ ಸೈನಿಕರಿಗೆ ಆತ್ಮಸ್ಥೈರ್ಯಕ್ಕೆ ದೊಡ್ಡ ಸವಾಲಾಗಿದೆ. ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆ ಉಗ್ರರ ದಾಳಿ, ದರೋಡೆ, ಶಸ್ತ್ರಾಸ್ತ್ರ ಕಳ್ಳತನ, ಸೇನಾ ತುಕಡಿಗಳ ಮೇಲಿನ ದಾಳಿಯಂತಹ ಅನೇಕ ಪ್ರಕರಣಗಳಿಗೆ ಸಾಕ್ಷಿಯಾಗಿದ್ದು, ಇದರ ಜತೆಗೆ ಪ್ಯಾಂಪೋರ್, ರಾಜ್ಪೊರ, ಕಕಪೊರಾ, ತ್ರಾಲ್, ಶಹೂರಾ, ಅವಂತಿಪೊರ, ಅರಿಪಾಲ್ ಪ್ರದೇಶಗಳು ಈ ರೀತಿಯಾದ ಉಗ್ರರ ಕೃತ್ಯಕ್ಕೆ ಸಿಲುಕಿ, ಅಪಾಯಕಾರಿ ಪ್ರದೇಶಗಳಾಗಿ ಮಾರ್ಪಟ್ಟಿವೆ.

ಪಾಕಿಸ್ತಾನದ ಪ್ರಜೆ ಹಾಗೂ ಲಷ್ಕರ್ ಇ ತೊಯ್ಬಾ ಸಂಘಟನೆಯ ಕಾಶ್ಮೀರದ ಮುಖ್ಯಸ್ಥ ಅಬು ಕಾಸಿಮ್ ನನ್ನು ಎನ್ ಕೌಂಟರ್ ಮಾಡಿದ ಕಾರಣ, ಸಾವಿರಾರು ನಾಗರೀಕರು ಬೀದಿಗಿಳಿದು ಕಲ್ಲುತೂರಾಟ ಮಾಡಿದ್ದರು. ಇದು ಉಗ್ರರಿಗೆ ಸ್ಥಳೀಯರಿಂದ ಸಿಗುತ್ತಿರುವ ಬೆಂಬಲಕ್ಕೆ ಸಾಕ್ಷಿ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನು ಈ ಪ್ರದೇಶಗಳು ಗಡಿ ಭಾಗದಲ್ಲಿರುವುದರಿಂದ ಉಗ್ರರು ತಮ್ಮ ದಾಳಿ ನಡೆಸಲು ಸೂಕ್ತ ಪ್ರದೇಶವಾಗಿದೆ. ಇನ್ನು ಈ ಪ್ರದೇಶಗಳಲ್ಲಿ ದಟ್ಟವಾಗಿ ಅರಣ್ಯ ಪ್ರದೇಶ ಇರುವುದರಿಂದ ಉಗ್ರರು ಇಲ್ಲಿ ಅವಿತುಕೊಳ್ಳಲು ಅತ್ಯುತ್ತಮ ಜಾಗವಾಗಿಬಿಟ್ಟಿದೆ. ಹೀಗಾಗಿ ಈ ಪ್ರದೇಶಗಳು ಉಗ್ರರ ಸುರಕ್ಷಿತ ಆಶ್ರಯ ತಾಣವಾಗಿದೆ.

Leave a Reply