ಬಿಜೆಪಿ ಹಾಗಿರಲಿ, ಕಾಂಗ್ರೆಸ್ ಭಿನ್ನಮತದ ನಮೂನೆ ಏನು?

ಡಿಜಿಟಲ್ ಕನ್ನಡ ಟೀಮ್:

ರಾಜ್ಯದ ಪ್ರತಿಪಕ್ಷ ಬಿಜೆಪಿಯಲ್ಲಿಭಿನ್ನಮತ ಸ್ಫೋಟಗೊಂಡ ರೂಪದಲ್ಲಿದ್ದರೆ, ಕಾಂಗ್ರೆಸ್ಸಿನಲ್ಲಿ ಅದ್ಯಾವಾಗಲೂ ಹೊಗೆಯಾಡಿಕೊಂಡಿರುತ್ತದೆ. ರಾಜ್ಯದ ಕಾಂಗ್ರೆಸ್ ಉಸ್ತುವಾರಿ ಹೊಣೆ ಹೊತ್ತ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಿರುವ ಪಕ್ಷದ ಹಿರಿಯ ನಾಗರೀಕರು, ಪಕ್ಷ ಮತ್ತು ಸರ್ಕಾರದಲ್ಲಿ ನಮ್ಮನ್ನು ನಿರ್ಲಕ್ಷಿಸುವ ಪರಿಸ್ಥಿತಿ ಮುಂದುವರೆದರೆ, ನಮ್ಮ ದಾರಿ ನಾವು ನೋಡಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.

ಕಳೆದ ಎರಡು ದಿನಗಳಿಂದ ಪಕ್ಷ ಸಂಘಟನೆ ಹಾಗೂ ಮುಂಬರುವ ವಿಧಾನಸಭಾ ಚುನಾವಣೆ ಎದುರಿಸುವ ಸಂಬಂಧ ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕರು, ಸಚಿವರು, ಸಂಸದರು, ಶಾಸಕರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ ಸಂದರ್ಭದಲ್ಲಿ ವೇಣುಗೋಪಾಲ್ ಅವರಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ವಿರುದ್ಧ ದೂರುಗಳು ರವಾನೆಯಾಗುತ್ತಿವೆ.

ಇಂದು ಬೆಳಿಗ್ಗೆ ಕುಮಾರಕೃಪಾ ಅತಿಥಿ ಗೃಹದಲ್ಲಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ, ಮಾಜಿ ಸಂಸದ ಹೆಚ್.ವಿಶ್ವನಾಥ್, ಗೃಹ ಮಂಡಳಿ ಅಧ್ಯಕ್ಷ ಮಾಲೀಕಯ್ಯ ಗುತ್ತೇದಾರ್, ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಶಾಸಕ ಶಿವಾನಂದ ಪಾಟೀಲ್, ಅನಿಲ್ ಲಾಡ್ ಸೇರಿದಂತೆ ಹಲವು ಮುಖಂಡರು ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಪಕ್ಷ ತೊರೆಯುವ ಇಂಗಿತ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.

ಆ ಪೈಕಿ ಹೆಚ್.ವಿಶ್ವನಾಥ್ ಅವರು ಮೂರು ಪುಟಗಳ ಮನವಿ ಪತ್ರವೊಂದನ್ನು ಸಲ್ಲಿಸಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸರ್ವಾಧಿಕಾರಿ ಧೋರಣೆಯಿಂದ ಪಕ್ಷ ಮುಳುಗುತ್ತಿದ್ದು ತಕ್ಷಣವೇ ಎಚ್ಚೆತ್ತುಕೊಳ್ಳದಿದ್ದರೆ ಪಕ್ಷ ಕುಸಿದು ಬೀಳಲಿದೆ ಎಂದು ಪತ್ರದಲ್ಲಿ ಎಚ್ಚರಿಸಿದ್ದಾರೆ.

ಮತ್ತೊಂದೆಡೆ ಪಕ್ಷದಲ್ಲಿ ಅಸಮಾಧಾನ ಇರುವುದನ್ನು ಒಪ್ಪಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು, ಈ ಅಸಮಾಧಾನ ಬಗೆಹರಿಸಲು ಇದೇ ತಿಂಗಳು 22ರಿಂದ ಮಹತ್ವದ ಸರಣಿ ಸಭೆಗಳನ್ನು ನಡೆಸಲಾಗುವುದು ಎಂದಿದ್ದಾರೆ. ಈ ಬಗ್ಗೆ ಅವರು ಹೇಳಿದ ಮಾತುಗಳು ಹೀಗಿವೆ…

‘ಪಕ್ಷದಲ್ಲಿ ಕೆಲವರಿಗೆ ಅಸಮಾಧಾನಗಳಿರುವುದು ನಿಜ. ಆದರೆ ಯಾರೂ ಪಕ್ಷ ಬಿಡುವುದಿಲ್ಲ. ವಿಶ್ವನಾಥ್ ಅವರೂ ಪಕ್ಷ ಬಿಡುವುದಿಲ್ಲ. ಈಗಾಗಲೇ ಈ ಸಂಬಂಧ ಅವರ ಜತೆ ಮಾತನಾಡಿದ್ದೇನೆ. 22ರಂದು ನಾನು ಹಾಗೂ ಮುಖ್ಯಮಂತ್ರಿಗಳು ಪಕ್ಷದಲ್ಲಿ ಎದ್ದಿರುವ ಅಸಮಾಧಾನಗಳ ಕುರಿತಂತೆಯೇ ಪ್ರತ್ಯೇಕವಾಗಿ ಸಭೆ ನಡೆಸಲಿದ್ದೇವೆ. ಪಕ್ಷ ಬಿಡದಂತೆ ಈಗಾಗಲೇ ವಿಶ್ವನಾಥ್ ಅವರ ಮನವೊಲಿಸುವ ಕೆಲಸ ನಡೆದಿದೆ. ಈ ಮಧ್ಯೆ ನಾಯಕರು, ಕಾರ್ಯಕರ್ತರನ್ನು ಕರೆದು ಮಾತನಾಡಿಸುವ ಕೆಲಸ ಮೇ 22 ರಿಂದ ಆರಂಭವಾಗಲಿದ್ದು ಎಲ್ಲ ಗೊಂದಲಗಳು ಬಗೆಹರಿಯಲಿವೆ. ವಿಶ್ವನಾಥ್ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರಿಗೆ ಪತ್ರ ಬರೆದಿರುವ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ನಾನು ಆ ಪತ್ರವನ್ನು ನೋಡಿಲ್ಲ’ ಎಂದರು.

Leave a Reply