ನ್ಯಾಯಾಂಗ ನಿಂದನೆ: ನ್ಯಾಯಮೂರ್ತಿ ಕರ್ಣನ್ ಗೆ 6 ತಿಂಗಳ ಜೈಲು ಶಿಕ್ಷೆ! ಈ ಪ್ರಕರಣ ಸಾರುತ್ತಿರುವ 2 ಪ್ರಮುಖ ಅಂಶಗಳೇನು?

ಡಿಜಿಟಲ್ ಕನ್ನಡ ಟೀಮ್:

ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸಾಕಷ್ಟು ಸುದ್ದಿ ಮಾಡಿದ್ದ ಕೋಲ್ಕತಾ ಹೈ ಕೋರ್ಟ್ ನ್ಯಾಯಾಧೀಶ ಸಿ.ಎಸ್ ಕರ್ಣನ್ ಅವರಿಗೆ 6 ತಿಂಗಳು ಜೈಲು ಶಿಕ್ಷೆ ವಿಧಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ನ್ಯಾಯಾಂಗ ನಿಂದನೆ ಮಾಡಿ ಸುಪ್ರೀಂ ಕೋರ್ಟಿನ ಕೆಂಗಣ್ಣಿಗೆ ಗುರಿಯಾಗಿದ್ದ ಕರ್ಣನ್, ಇದೇ ವರ್ಷ ಜೂನ್ 11 ರಂದು ಹೈಕೋರ್ಟ್ ನ್ಯಾಯಾಧೀಶರಾಗಿ ನಿವೃತ್ತಿ ಪಡೆಯಲಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಜೆ.ಎಸ್ ಖೆಹೆರ್ ನೇತೃತ್ವದ ಏಳು ಸದಸ್ಯರ ಪೀಠ ಕರ್ಣನ್ ಅವರ ತಪ್ಪಿಗೆ ಶಿಕ್ಷೆಯಾಗಲೇ ಬೇಕು ಎಂಬ ಒಮ್ಮತದ ನಿರ್ಧಾರಕ್ಕೆ ಬಂದಿದ್ದು, 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಇದರೊಂದಿಗೆ ಕರ್ಣನ್ ತಮ್ಮ ವೃತ್ತಿ ಜೀವನದ ಅಂತಿಮ ತಿಂಗಳ ಅವಧಿಯನ್ನು ಜೈಲಿನಲ್ಲಿ ಕಳೆಯುವಂತಾಗಿದೆ. ಈ ಆದೇಶ ನೀಡುತ್ತಿದ್ದಂತೆ ಕರ್ಣನ್ ಅವರನ್ನು ಕೂಡಲೇ ವಶಕ್ಕೆ ಪಡೆಯುವಂತೆ ಪಶ್ಚಿಮ ಬಂಗಾಳ ಪೊಲೀಸ್ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ಈ ಪ್ರಕರಣದಿಂದ ನಮಗೆ ಎರಡು ಪ್ರಮುಖ ಅಂಶಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಅವುಗಳೆಂದರೆ…

1 ನ್ಯಾಯಾಂಗ ವ್ಯವಸ್ಥೆಯ ಪರಾಮರ್ಶೆ:

ನ್ಯಾಯಾಧೀಶರನ್ನು ನೇಮಕ ಮಾಡುವ ಕುರಿತಾಗಿ ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಸರ್ಕಾರ ನಡುವೆ ನಡೆಯುತ್ತಿರುವ ತಿಕ್ಕಾಟವನ್ನು ಹಲವು ತಿಂಗಳಿನಿಂದ ನೋಡುತ್ತಲೇ ಬಂದಿದ್ದೇವೆ. ಸದ್ಯ ಭಾರತದ ನ್ಯಾಯಾಲಯಗಳ ನ್ಯಾಯಾಧೀಶರನ್ನು ಸುಪ್ರೀಂ ಕೋರ್ಟಿನ ಕೊಲೆಜಿಯಂ ವ್ಯವಸ್ಥೆ ಮೂಲಕ ನೇಮಕ ಮಾಡಲಾಗುತ್ತಿದೆ. ಇದು ಬದಲಾಗಬೇಕು ಎಂಬ ಕೇಂದ್ರದ ಪ್ರಸ್ತಾವವನ್ನು, ರಾಜಕೀಯ ಹಸ್ತಕ್ಷೇಪಕ್ಕೆ ಕಾರಣವಾಗುತ್ತದೆಂಬ ಕಾರಮಕ್ಕೆ ಸುಪ್ರೀಂಕೋರ್ಟ್ ವಿರೋಧಿಸುತ್ತ ಬಂದಿದೆ. ಆದರೆ ಇದೇ ವ್ಯವಸ್ಥೆಯಲ್ಲಿ ಕರ್ಣನ್ ನಂತಹ ವ್ಯಕ್ತಿಗಳು ನ್ಯಾಯಾಧೀಶರಾಗಿ ಆಯ್ಕೆಯಾಗಿರುವುದು ಈ ವ್ಯವಸ್ಥೆ ಕುರಿತಾಗಿ ಪರಾಮರ್ಶೆ ನಡೆಸಬೇಕಾದ ಅನಿವಾರ್ಯತೆಯನ್ನು ಸಾರುತ್ತಿದೆ. ಕರ್ಣನ್ ತನ್ನ ದಲಿತ ಗುರುತನ್ನು ಅಸ್ತ್ರವಾಗಿಸಿಕೊಂಡು ಮದ್ರಾಸ್ ಹಾಗೂ ಕೋಲ್ಕತಾ ಹೈಕೋರ್ಟಿನ ಸಹೋದ್ಯೋಗಿಗಳ ವಿರುದ್ಧವೇ ಜಾತಿ ನಿಂದನೆ ಆರೋಪಗಳನ್ನು ಅಸ್ತ್ರವಾಗಿ ಬಳಸಿದ ಉದಾಹರಣೆಗಳು ಸಿಕ್ಕಿವೆ. ಅವುಗಳ ಜತೆಗೆ ತಮ್ಮ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟಿನ 7 ಸದಸ್ಯರ ಪೀಠದಲ್ಲಿರುವ ನ್ಯಾಯಾಧೀಶರ ಮೇಲೂ ಕರ್ಣನ್ ಜಾತಿ ನಿಂದನೆ ಆರೋಪ ಹೊರಿಸಿದ್ದರು.  ಇವೆಲ್ಲ ಈಗಿರುವ ಕೊಲೆಜಿಯಂ ವ್ಯವಸ್ಥೆಯ ಲೋಪವನ್ನೂ ಬಿಂಬಿಸುವುದಿಲ್ಲವೇ? ಕರ್ಣನ್ ಥರದ ಇನ್ನೆಷ್ಟು ತಿಕ್ಕಲುಗಳು ಪ್ರಮುಖ ಹುದ್ದೆಯಲ್ಲಿ ಕುಳಿತಿರಬಹುದು?

2 ಕರ್ಣನ್ ಅಧಿಕಾರವಧಿಯಲ್ಲಿ ಇನ್ನೆಂಥ ನ್ಯಾಯದಾನವಾಗಿದ್ದಿರಬಹುದು?

ಸುಪ್ರಿೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯೇ ತನ್ನೆದುರು ಹಾಜಾರಾಗಲಿ ಎಂಬ ದರ್ಪ, ಬಾಲಿಶತನಗಳನ್ನು ಕರ್ಣನ್ ತೋರಿದ್ದು ಎಲ್ಲರೆದುರು ಇದೆ. ಹೀಗಿರುವಾಗ ಇದೇ ದರ್ಪದಲ್ಲಿ ತಮ್ಮ ನ್ಯಾಯದಾನದ ಹುದ್ದೆಯನ್ನು ಕರ್ಣನ್ ಹೇಗೆಲ್ಲ ನಿಭಾಯಿಸಿದ್ದಿರಬಹುದು ಎಂದು ಊಹಿಸಿಕೊಂಡರೆ ಭಯವಾಗುತ್ತದೆ. ಇವರು ನ್ಯಾಯಾಧೀಶ ಸ್ಥಾನದಲ್ಲಿ ಕುಳಿತು ವಿಚಾರಣೆ ನಡೆಸಿದ ಪ್ರಕರಣಗಳಲ್ಲಿ ಎಷ್ಟರ ಮಟ್ಟಿಗೆ ನ್ಯಾಯ ಒದಗಿರಬಹುದು ಎಂಬ ಪ್ರಶ್ನೆ ಸಹ ಮೂಡುತ್ತಿದೆ. ಈಗಾಗಲೇ ಕರ್ಣನ್ ಅವರ ಬೌದ್ದಿಕ ಮಟ್ಟ ಎಷ್ಟು ಕೆಳಮಟ್ಟದಲ್ಲಿದೆ ಎಂಬುದಕ್ಕೆ ಅನೇಕ ಉದಾಹರಣೆಗಳು ನಮ್ಮ ಮುಂದೆ ಇದ್ದು, ಇವರು ನಡೆಸಿರುವ ವಿಚಾರಣೆಯಲ್ಲಿ ಎಷ್ಟು ಜನರಿಗೆ ನ್ಯಾಯ ಸಿಕ್ಕಿದೆ, ಎಷ್ಟು ಜನರಿಗೆ ಅನ್ಯಾಯವಾಗಿದೆ ಎಂಬ ಅಂಶ ಕಾಡಲಾರಂಭಿಸಿದೆ.

Leave a Reply