ಕಳೆದ ವಾರ ನೀವು ಓದಿದ್ದ ಸುಳ್ಳು ಸುದ್ದಿಗಳು ಯಾವುವು ಗೊತ್ತಾ?

ಡಿಜಿಟಲ್ ಕನ್ನಡ ವಿಶೇಷ:

ಕಳೆದ ವಾರ ನೀವು ಓದಿದ ಅನೇಕ ಸುದ್ದಿಗಳು ಸುಳ್ಳು ಸುದ್ದಿ. ದೇಶದ ಪ್ರಮುಖ ಸುದ್ದಿ ಮಾಧ್ಯಮಗಳೇ ಸುದ್ದಿ ನೀಡುವ ಭರಾಟೆಯಲ್ಲಿ ಸತ್ಯಾಂಶ ಪರಿಶೀಲಿಸದೇ ಸುಳ್ಳು ಸುದ್ದಿಯನ್ನು ಪ್ರಕಟಿಸಿದಾಗ ಅದರ ಸತ್ಯಾಸತ್ಯತೆ ತಿಳಿಯದೇ ಅವುಗಳನ್ನು ನಿಜ ಎಂದು ಸಾಮಾನ್ಯ ಜನರು ಓದುತ್ತಾರೆ. ಈಗಲೂ ಆಗಿರುವುದು ಅದೇನೆ. ನೀವು ಓದಿದ್ದ ಸುಳ್ಳು ಸುದ್ದಿಗಳು ಯಾವುವು, ಅವುಗಳ ಹಿಂದಿರುವ ನಿಜಾಂಶ ಏನು ಎಂಬುದನ್ನು ನಾವು ಹೇಳುತ್ತೇವೆ …

  1. ‘ಜೂನ್ 15ರ ಒಳಗಾಗಿ ಉತ್ತರ ಪ್ರದೇಶದ ರಸ್ತೆಗಳನ್ನು ಕತ್ತೆ ಮುಕ್ತ ಮಾಡುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಹೇಳಿಕೆ ನೀಡಿದ್ದಾರೆ. ’ ಇಂತಹದೊಂದು ಸುದ್ದಿಯನ್ನು ಟೈಮ್ಸ್ ಆಫ್ ಇಂಡಿಯಾ ಸೇರಿದಂತೆ ಅನೇಕ ಮಾಧ್ಯಮಗಳಲ್ಲಿ ನೀವು ಓದಿದ್ದಿರಿ. ಇಲ್ಲಿ ಆಗಿರೋದು ಮಾತ್ರ ತಮಾಷೆಯಾಗಿದೆ. ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ್ದ ಯೋಗಿ ಆದಿತ್ಯನಾಥರು, ಹಿಂದಿಯಲ್ಲಿ ಭಾಷಣ ಮಾಡುತ್ತಾ ಉತ್ತರ ಪ್ರದೇಶದ ರಸ್ತೆಗಳನ್ನು ಗುಂಡಿ ಮುಕ್ತ ಮಾಡುವುದಾಗಿ ಹೇಳಿದ್ದರು. ಹಿಂದಿಯಲ್ಲಿ ಗುಂಡಿ ಎಂದು ಹೇಳಲು ಆದಿತ್ಯನಾಥರು ‘ಗಡ್ಡಾ’ ಎಂಬ ಪದ ಬಳಕೆ ಮಾಡಿದ್ದರು. ಅದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದ ವರದಿಗಾರರು, ‘ಗಧಾ’ (ಕತ್ತೆ) ಎಂದು ಭಾವಿಸಿ, ಈ ವರದಿಯನ್ನು ತಪ್ಪಾಗಿ ಕೊಟ್ಟಿದ್ದರು.
  2. ಇನ್ನು ಇದೇ ಟೈಮ್ಸ್ ಆಫ್ ಇಂಡಿಯಾ ಮಾಧ್ಯಮವು ನಾಗ್ಪುರದಿಂದ ಒಂದು ವರದಿ ನೀಡಿತ್ತು. ಅದು ಏನೆಂದರೆ, ‘ಎನ್ ಸಿಇಆರ್ ಟಿ ಪಠ್ಯಪುಸ್ತಕಗಳಲ್ಲಿ ನಕ್ಸಲರ ನಾಯಕ ಕಿಶನ್ ಜಿ ಅವರ ಕುರಿತಾದ ಪಾಠವನ್ನೇ ಅಳವಡಿಸಲಾಗಿದೆ’ ಎಂದು ವರದಿಯಲ್ಲಿ ಹೇಳಲಾಗಿತ್ತು. ನಕ್ಸಲರ ದಾಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಸುದ್ದಿ ನೋಡಿ ಅನೇಕರು ಆಕ್ರೋಶ ವ್ಯಕ್ತಪಡಿಸಿದರು. ಆದರೆ ನಂತರ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಇದು ನಕ್ಸಲರ ನಾಯಕ ಕಿಶನ್ ಜಿ ಅವರ ಕುರಿತ ಪಾಠವಲ್ಲ, ಬದಲಿಗೆ ಸಂಬಲ್ ಪುರ ಲೋಕಸಭಾ ಕ್ಷೇತ್ರದಿಂದ ಪ್ರಜಾ ಸೋಷಿಯಲಿಸ್ಟ್ ಪಕ್ಷದ ಪರವಾಗಿ ಸಂಸತ್ತಿಗೆ ಆಯ್ಕೆಯಾಗಿದ್ದ ಮಾಜಿ ಸಂಸದ ಕಿಶೆನ್ ಪಟ್ನಾಯಕ್ ಅವರ ಕುರಿತಾಗಿ ಇದ್ದ ಪಾಠ. ಇಲ್ಲಿ ಕಿಶೆನ್ ಜಿ ಎಂಬುದನ್ನು ನಕ್ಸಲರ ನಾಯಕ ಎಂದು ತಪ್ಪಾಗಿ ಭಾವಿಸಿ ಈ ವರದಿ ನೀಡಲಾಗಿತ್ತು.
  3. ‘ಭಾರತೀಯ ಸೇನೆ ಪಾಕಿಸ್ತಾನದ 2 ಬಂಕರ್ ಗಳನ್ನು ಹೊಡೆದು ಹಾಕಿದೆ.’ ಈ ಒಂದು ಸುದ್ದಿಯನ್ನು ಓದಿದ್ದ ಅನೇಕ ಓದುಗರು ಹೆಮ್ಮೆಯಿಂದ ಆ ಸುದ್ದಿಯನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಶೇರ್ ಮಾಡಿದ್ದರು. ಭಾರತದ ಗಡಿಯಲ್ಲಿ ನಮ್ಮ ಸೈನಿಕರ ಶಿರಚ್ಛೇಧನ ಪ್ರಕರಣದ ನಂತರ ಇಂತಹುದೊಂದು ಸುದ್ದಿ ಮಾಧ್ಯಮಗಳಲ್ಲಿ ದೊಡ್ಡದಾಗಿ ಬಿತ್ತರವಾಗಿತ್ತು. ಆದರೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತೀಯ ಸೇನಾ ಹಿರಿಯ ಅಧಿಕಾರಿಗಳು, ‘ಮಾಧ್ಯಮಗಳು ನಮ್ಮನ್ನು ಸಂಪರ್ಕಿಸದೇ ಅವರ ಇಚ್ಛೆಗೆ ಬಂದಂತೆ ವರದಿ ಮಾಡಿವೆ. ನಾವು ಇಂತಹ ಕ್ರಮ ಕೈಗೊಂಡರೆ ಆ ಬಗ್ಗೆ ನಾವೇ ಅಧಿಕೃತ ಮಾಹಿತಿ ನೀಡುತ್ತೇವೆ’ ಎಂದು ಹೇಳಿತ್ತು. ಡಿಜಿಟಲ್ ಕನ್ನಡ ಸಹ ಇದನ್ನು ಹಿಂದೆಯೇ ವಿಶ್ಲೇಷಿಸಿತ್ತು.
  4. ‘ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರದಿಂದ ಗೋರಕ್ಷಕರ ನೆರವಿಗಾಗಿ ಕಾನೂನು’ ಎಂಬ ಸುದ್ದಿಯನ್ನು ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿತ್ತು. ಕರ್ನಾಟಕ ಸರ್ಕಾರ ಈ ಕುರಿತ ತನ್ನ ನಿರ್ಧಾರವನ್ನು ಸುಪ್ರೀಂ ಕೋರ್ಟ್ ನಲ್ಲಿ ಸಮರ್ಥಿಸಿಕೊಂಡಿದ್ದು, ‘ಉತ್ತಮ ಉದ್ದೇಶ ಇಟ್ಟುಕೊಂಡು ಗೋ ರಕ್ಷಣೆ ಮಾಡುವವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಈ ಕಾನೂನು ತರಲಾಗುತ್ತಿದೆ’ ಎಂದು ತಿಳಿಸಿರುವುದಾಗಿ ವರದಿಯಲ್ಲಿ ಪ್ರಕಟಿಸಲಾಗಿತ್ತು. ಈ ಸುದ್ದಿ ಪ್ರಕಟವಾದ ಬೆನ್ನಲ್ಲೇ ಕರ್ನಾಟಕ ಮುಖ್ಯಮಂತ್ರಿ ಟ್ವಿಟರ್ ಖಾತೆ ಮೂಲಕ ಸ್ಪಷ್ಟನೆ ನೀಡಲಾಗಿದ್ದು, ‘ಕಾನೂನು ಜಾರಿ ವ್ಯವಸ್ಥೆ ರಾಜ್ಯದಲ್ಲಿ ಸುಭದ್ರವಾಗಿದೆ. ಕರ್ನಾಟಕದಲ್ಲಿ ಗೋ ರಕ್ಷಣೆಯ ಹೆಸರಿನಲ್ಲಿ ಸಾಮಾಜದ ಶಾಂತಿಗೆ ಧಕ್ಕೆ ಉಂಟು ಮಾಡಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕರ್ನಾಟಕ ಸರ್ಕಾರ ಎಂದಿಗೂ ಈ ರೀತಿಯ ರಕ್ಷಣೆ ನೀಡಿಲ್ಲ. ಪ್ರತಿಷ್ಠಿತ ಸುದ್ದಿ ಮಾಧ್ಯಮಗಳಿಂದಲೇ ತಪ್ಪು ಮಾಹಿತಿ ರವಾನೆಯಾಗಿರುವುದು ದುರಾದೃಷ್ಟಕರ. ರಾಜ್ಯದಲ್ಲಿ ಯಾವುದೇ ವ್ಯಕ್ತಿ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಲು ಅವಕಾಶವಿಲ್ಲ’ ಎಂದು ಹೇಳಲಾಗಿದೆ.
  5. ಸುದ್ದಿಯಾದ ಚೇತನ್ ಭಗತ್ ಅವರ ಹೆಸರಿನ ನಕಲಿ ಫೇಸ್ ಬುಕ್ ಖಾತೆಯ ಪೋಸ್ಟ್. ಏಪ್ರಿಲ್ 26ರಂದು ಖ್ಯಾತ ಬರಹಗಾರ ಚೇತನ್ ಭಗತ್ ಎಂಬ ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ‘ಲೆಟ್ ಹರ್ ಟೇಕ್ ಹರ್ ಟೈಮ್’ ಎಂಬ ಶೀರ್ಷಿಕೆ ಇದ್ದ ಪೋಸ್ಟ್ ಪ್ರಕಟವಾಗಿತ್ತು. ಈ ಪೋಸ್ಟ್ ಅನ್ನು ಚೇತನ್ ಭಗತ್ ಅವರೇ ಪ್ರಕಟಿಸಿದ್ದಾರೆ ಎಂದು ಅನೇಕ ಮಾಧ್ಯಮಗಳು ಸುದ್ದಿ ಮಾಡಿದ್ದವು. ನಂತರ ಟ್ವಿಟರ್ ಮೂಲಕ ಇದಕ್ಕೆ ಸ್ಪಷ್ಟನೆ ನೀಡಿದ ಚೇತನ್ ಭಗತ್ ಅವರು, ‘ಈ ವರದಿ ಬರೆಯುವ ಮುನ್ನ ಆ ಖಾತೆ ನನ್ನ ನಿಜವಾದ ಖಾತೆಯೇ ಅಥವಾ ನಕಲಿ ಖಾತೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ’ ಎಂದು ಸಲಹೆ ನೀಡಿದರು.

Leave a Reply