ಮಹೇಂದ್ರ ಸಿಂಗ್ ಧೋನಿ- ಇಂಡಿಯಾ ಸಿಮೆಂಟ್ಸ್ ಕುರಿತಾಗಿ ಲಲಿತ್ ಮೋದಿ ಬಹಿರಂಗಗೊಳಿಸಿದ ಸತ್ಯ ಏನು?

ಡಿಜಿಟಲ್ ಕನ್ನಡ ಟೀಮ್:

ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಈಗ ಮತ್ತೊಮ್ಮೆ ತಮ್ಮ ಟ್ವಿಟರ್ ಮೂಲಕ ಸದ್ದು ಮಾಡಿದ್ದಾರೆ. ಈ ಹಿಂದೆ ಬಿಸಿಸಿಐ ಹಾಗೂ ಎನ್.ಶ್ರೀನಿವಾಸನ್ ವಿರುದ್ಧ ದಾಳಿ ನಡೆಸಿದ್ದ ಲಲಿತ್ ಮೋದಿ ಈ ಬಾರಿ ಸಿಎಸ್ ಕೆ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಟಾರ್ಗೆಟ್ ಮಾಡಿದ್ದಾರೆ.

ಧೋನಿ, ಇಂಡಿಯಾ ಸಿಮೆಂಟ್ಸ್ ಮಾಲೀಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರನಷ್ಟೇ ಆಗಿರಲಿಲ್ಲ. ಬದಲಿಗೆ ಇಂಡಿಯಾ ಸಿಮೆಂಟ್ಸ್ ಕಂಪನಿಯ ನೌಕರನೂ ಆಗಿದ್ದು, ಅದಕ್ಕಾಗಿ ತಿಂಗಳಿಗೆ ಲಕ್ಷಾಂತರ ರುಪಾಯಿ ವೇತನ ಪಡೆಯುವ ಬಗ್ಗೆ ದಾಖಲೆ ಸಮೇತ ಆರೋಪ ಮಾಡಿದ್ದಾರೆ.

ಟ್ವಿಟರ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ಈ ವಿಷಯ ಬಹಿರಂಗ ಪಡಿಸಿರುವ ಲಲಿತ್ ಮೋದಿ, ‘ಕೇವಲ ಭಾರತದಲ್ಲಿ ಮಾತ್ರ ಬಿಸಿಸಿಐನ ಮಾಜಿ ನಾಯಕರು ಇಂತಹ ತಪ್ಪುಗಳನ್ನು ಮುಂದುವರಿಸಲು ಸಾಧ್ಯ. ಪ್ರತಿ ವರ್ಷ ₹ 100 ಕೋಟಿಗೂ ಹೆಚ್ಚು ಆದಾಯ ಹೊಂದಿರುವ ಮಹೇಂದ್ರ ಸಿಂಗ್ ಧೋನಿ, ಶ್ರೀನಿವಾಸನ್ ಅವರ ಇಂಡಿಯಾ ಸಿಮೆಂಟ್ ಕಂಪನಿಯ ನೌಕರನಾಗಿರಲು ಹೇಗೆ ಒಪ್ಪಿದರು? ಅದರ ಹಿಂದಿರುವ ಕಾರಣ ಏನು? ಈ ಒಂದು ದಾಖಲೆ ಇಂತಹ ಆಶ್ಚರ್ಯಕಾರಿ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ. ಇಂತಹ ಅನೇಕ ಒಪ್ಪಂದಗಳು ನಡೆದಿರುವ ಬಗ್ಗೆ ನಾನು ಖಚಿತವಾಗಿ ಹೇಳಬಲ್ಲೆ.’ ಎಂದಿದ್ದಾರೆ ಲಲಿತ್ ಮೋದಿ.

ಲಲಿತ್ ಮೋದಿ ಅವರು ಬಿಡುಗಡೆ ಮಾಡಿರುವ ದಾಖಲೆ ಪ್ರಕಾರ 2012ರಲ್ಲಿ ಮಹೇಂದ್ರ ಸಿಂಗ್ ಧೋನಿ ಅವರನ್ನು ಇಂಡಿಯಾ ಸಿಮೆಂಟ್ಸ್ ಕಂಪನಿಯ ಮಾರ್ಕೆಟಿಂಗ್ ವಿಭಾಗದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿಕೊಂಡಿದೆ. ಈ ನೇಮಕಾತಿ ವೇಳೆ ನಡೆದಿರುವ ಒಪ್ಪಂದದ ಪ್ರಕಾರ ಧೋನಿಗೆ ಪ್ರತಿ ತಿಂಗಳಿಗೆ ಮೂಲ ವೇತನವಾಗಿ ₹ 43 ಸಾವಿರ, ಡಿಎ ಆಗಿ ₹ 21,970, ವಿಶೇಷ ವೇತನವಾಗಿ ₹ 20 ಸಾವಿರ ಹಾಗೂ ವಿಶೇಷ ಭತ್ಯೆ ರೂಪದಲ್ಲಿ ₹ 60 ಸಾವಿರ ಹಣ ನೀಡಲಾಗುವುದು ಎಂದು ತಿಳಿಸಿದೆ. ಆ ಮೂಲಕ ಒಟ್ಟಾರೆಯಾಗಿ ಧೋನಿ ತಿಂಗಳಿಗೆ  ₹ 1.7 ಲಕ್ಷ ವೇತನ ಪಡೆಯಲಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಈ ವೇತನದ ಜತೆಗೆ ಧೋನಿ ಈ ಹುದ್ದೆಯಲ್ಲಿರುವವರೆಗೂ ಪ್ರತಿ ತಿಂಗಳು ಪತ್ರಿಕೆ ಹಾಗೂ ಶಿಕ್ಷಣ ವೆಚ್ಚಕ್ಕಾಗಿ ತಿಂಗಳಿಗೆ ₹ 175, ಮನರಂಜನೆಯ ವೆಚ್ಚವಾಗಿ ₹4500 ನೀಡಲಾಗುವುದು. ಅಲ್ಲದೆ, ಧೋನಿ ಮನೆಯ ವಿದ್ಯುತ್, ನೀರಿನ ಹಾಗೂ ಗ್ಯಾಸ್ ಬಿಲ್ ಅನ್ನು ಕಟ್ಟಿಕೊಡಲಾಗುವುದು ಎಂಬ ಅಂಶಗಳು ದಾಖಲೆಯಲ್ಲಿವೆ.

ಈ ದಾಖಲೆಯನ್ನು ಪ್ರಕಟಿಸಿರುವ ಲಲಿತ್ ಮೋದಿ, ಧೋನಿ ವಿರುದ್ಧ ನಿರ್ದಿಷ್ಟ ಆರೋಪಗಳನ್ನು ಮಾಡಿಲ್ಲವಾದರೂ ಈ ಹುದ್ದೆಯ ಹಿಂದೆ ಬೇರೆ ಉದ್ದೇಶವಿರಬಹುದು ಎಂಬ ಅನುಮಾನ ಮೂಡುವಂತೆ ಮಾಡಿದ್ದಾರೆ. ಹೀಗಾಗಿ ಮೋದಿ ಅವರು ಸಿಡಿಸಿರುವ ಬಾಂಬ್ ಮುಂದಿನ ದಿನಗಳಲ್ಲಿ ಧೋನಿ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಕಾದುನೋಡಬೇಕು.

Leave a Reply