ಒಬ್ಬ ಮಹಾರಾಣಾ ಪ್ರತಾಪಗೆ ಭಾರತೀಯರೇಕೆ ಚಿರಋಣಿಗಳಾಗಿರಬೇಕು ಗೊತ್ತೇನು?

ಡಿಜಿಟಲ್ ಕನ್ನಡ ವಿಶೇಷ:

ಇಂದು ಮಹಾರಾಣ ಪ್ರತಾಪರ ಜನ್ಮದಿನ. ಮೊಘಲರ ವಿರುದ್ಧದ ದಣಿವರಿಯದ ಆತನ ಸೆಣಸಿಗೆ ಆತನನ್ನು ಹಿಂದು ರಜಪೂತ ಪರಂಪರೆಯ ಅತ್ಯಂತ ಹೆಮ್ಮೆಯ ಬಿಂದುವಾಗಿ ಇವತ್ತಿಗೂ ನೆನಪಿಸಿಕೊಳ್ಳಲಾಗುತ್ತದೆ.

1540ರ ಮೇ 9 ಮೇವಾರದ ರಾಜನ ಜನ್ಮದಿನ. 1597ರ ಜನವರಿ 29ಕ್ಕೆ ಆತನ ಕಾಲ ಸಮಾಪ್ತಿಯಾದುದಾಗಿ ಇತಿಹಾಸ ಗುರುತಿಸುತ್ತದೆ.

ಈ ದೇಶ ಕೇವಲ ಮಹಾಗೆಲುವುಗಳನ್ನು ದಾಖಲಿಸಿದವರನ್ನಷ್ಟೇ ಸ್ಮರಿಸುತ್ತದೆ ಎಂದಲ್ಲ, ರಾಜಿಯಾಗದ ಸಿದ್ಧಾಂತನಿಷ್ಠರನ್ನೂ ಅಭಿಮಾನದಿಂದ ನೆನಪಿಡುತ್ತದೆ ಎಂಬುದಕ್ಕೆ ರಾಮಾ ಪ್ರತಾಪನ ನೆನಪು ಇಂದಿಗೂ ಹೆಮ್ಮೆ ಉಕ್ಕಿಸುತ್ತಿರುವುದೇ ಉದಾಹರಣೆ. ಏಕೆಂದರೆ ಅಕ್ಬರನ ಅತಿ ಶಕ್ತಿಶಾಲಿ ಸೈನ್ಯದ ವಿರುದ್ಧ ತುಲನಾತ್ಮಕವಾಗಿ ಅತಿ ಯಕಶ್ಚಿತ ಬಲವಿದ್ದರೂ ರಾಣಾ ಪ್ರತಾಪ ಕೊನೆಯವರೆಗೂ ಶರಣಾಗಲಿಲ್ಲ. ಅಕ್ಬರನ ಆಸ್ಥಾನಕ್ಕೆ ಬಂದು ತಲೆಬಾಗಿದ್ದೇ ಆದರೆ ಆತನಿಗೆ ಎಲ್ಲ ವೈಭವಗಳನ್ನೂ ನೀಡುವುದಾಗಿ ಸಂಧಾನದ ಮಾತುಗಳು ಪ್ರಸ್ತಾಪವಾದಾಗಲೂ ಆತನ ಸ್ವಾಭಿಮಾನ ಅದಕ್ಕೊಪ್ಪಲಿಲ್ಲ. ಅಕ್ಬರನ ರಾಜ್ಯಭಾರದ ಉತ್ತರಾರ್ಧದಲ್ಲಿ ಬಹುತೇಕ ರಜಪೂತ ರಾಜರೆಲ್ಲ ಆತನ ಸಾಮ್ರಾಜ್ಯ ಒಪ್ಪಿಕೊಂಡು ವಿವಾಹ ಸಂಬಂಧ ಕುದುರಿಸಿಕೊಂಡಿದ್ದರೆ ಒಬ್ಬ ರಾಣಾ ಪ್ರತಾಪ ಮಾತ್ರ ಅದಕ್ಕೆ ವ್ಯತಿರಿಕ್ತನಾಗಿ ಕಾಡುಮೇಡುಗಳಲ್ಲಿದ್ದುಕೊಂಡು ಪ್ರತಿರೋಧ ಒಡ್ಡುತ್ತಲೇ ಹೋದ.

ಸಂಧಾನ ಮುರಿದುಬಿದ್ದಾಗ ಅಕ್ಬರನ ಸೇನೆಗೂ ಈತನಿಗೂ ಹಲ್ದಿಘಾಟ್ ನಲ್ಲಿ ನಡೆದ ಯುದ್ಧವನ್ನು ಚರಿತ್ರೆ ಪುಳಕದಿಂದ ಹೊತ್ತಿದೆ. 80 ಸಾವಿರ ಅಕ್ಬರನ ಸೈನ್ಯಬಲದ ಎದುರು ಕೇವಲ 3 ಸಾವಿರ ಬಲದ ಮಹಾರಾಣ ಪ್ರತಾಪನ ಸೇನೆ. ರಜಪೂತ ಸಮುದಾಯದಲ್ಲೇ ಹೆಚ್ಚಿನವರೆಲ್ಲ ಅಕ್ಬರನ ಪಾಳೆಯದಲ್ಲಿದ್ದರೂ ಅಪ್ಘನ್ನರು, ಭಿಲ್ ಬುಡಕಟ್ಟು ಸಮುದಾಯ ಇಂಥವರನ್ನೆಲ್ಲ ತರಬೇತುಗೊಳಿಸಿ ವೀರ ಅಸ್ತಿತ್ವ ಕಾಪಾಡಿಕೊಂಡವನು ಮಹಾರಾಣ ಪ್ರತಾಪ. ಆ ಯುದ್ಧದಲ್ಲಿ ಮಹಾರಾಣ ಪ್ರತಾಪ ಹಿಂದಕ್ಕೆ ಎಳಸಬೇಕಾಗಿ ಬಂತಾದರೂ ಮೊಘಲರ ಸೇನೆಗೆ ಉಂಟುಮಾಡಿದ್ದ ನಷ್ಟ ಬೆಚ್ಚಿಬೀಳಿಸುವಂತಿತ್ತು.

ಇವತ್ತಿನ ಪ್ರಾಕ್ಟಿಕಲ್ ಯುಗದಲ್ಲಿ ನಿಂತು, ಅಕ್ಬರನೊಂದಿಗೆ ರಾಜಿ ಮಾಡಿಕೊಂಡು ಮಹಾರಾಣ ಪ್ರತಾಪ ಆರಾಮಾಗಿ ಇರಬಹುದಿತ್ತಲ್ಲ ಅಂತ ಯೋಚಿಸಬಹುದು. ಆದರೆ ಯುದ್ಧ ಗೆಲ್ಲದಿದ್ದರೂ ಹಿಂದುಗಳ ಬದುಕನ್ನು ಪರೋಕ್ಷವಾಗಿ ಉನ್ನತೀಕರಿಸಿದ ಶ್ರೇಯಸ್ಸು ಮಹಾರಾಣ ಪ್ರತಾಪನಿಗೇ ಸಲ್ಲುತ್ತದೆ.

ಹೇಗೆ ಗೊತ್ತೇ?

ಅಕ್ಬರ್- ಬೀರ್ಬಲ್ ಕತೆ ಕೇಳುತ್ತ, ಶಾಲಾಪಠ್ಯಗಳಲ್ಲಿ ಅಕ್ಬರ್ ಮಹಾ ಸಹಿಷ್ಣು ರಾಜ ಎಂದೆಲ್ಲ ಓದಿರುವುದರಿಂದ ನಮಗೆ ಅಕ್ಬರ್ ಕುರಿತೇನೂ ಸಿಟ್ಟಿಲ್ಲ. ಆದರೆ ಮಹಾರಾಣ ಪ್ರತಾಪನಂಥವರು ವಿರುದ್ಧ ನೆಲೆಯಲ್ಲಿ ನಿಂತು ರಜಪೂತರ ಸ್ವಾಭಿಮಾನ ಬಿಂಬವಾಗಿ ಅನವರತ ಹೋರಾಡದಿದ್ದರೆ ಅಕ್ಬರ್ ‘ಸಹಿಷ್ಣು’ವಾಗುತ್ತಿರಲಿಲ್ಲ ಎಂಬುದು ಸೂಕ್ಷ್ಮಕ್ಕೆ ಸಿಗುವ ಸತ್ಯ.

ಮೊಘಲರ ಇಸ್ಲಾಂ ಸಾಮ್ರಾಜ್ಯ ಸ್ಥಾಪನೆಯ ಸಿದ್ಧಾಂತದಲ್ಲೇ ಅರಳಿದವ ಅಕ್ಬರ್. ರಜಪೂತರ ವಿರುದ್ಧದ ಪ್ರಾರಂಭಿಕ ಯುದ್ಧಗಳಲ್ಲಿ ಆತ ಮೆರೆದ ಕ್ರೌರ್ಯವೇನು ಕಡಿಮೆಯದ್ದಲ್ಲ. ರಜಪೂತ ಮಹಿಳೆಯರನ್ನು ಸತಿಯ ಚಿತಾಗ್ನಿಗೆ ದೂಡಿದ ಪಾಪಕಾರ್ಯದಲ್ಲಿ ಅಕ್ಬರನ ಪಾತ್ರ ದೊಡ್ಡದೇ ಇದೆ. 1568ರಲ್ಲಿ ನಾಲ್ಕು ತಿಂಗಳ ಕದನದ ನಂತರ ಚಿತ್ತೋಡಗಢದ ಕೋಟೆ ಅಕ್ಬರನ ವಶವಾಯಿತು. ಆಗ ಸಮರದಲ್ಲಿ ಬದುಕುಳಿದಿದ್ದ 30,000 ಹಿಂದುಗಳನ್ನು ಮಾರಣಹೋಮ ಮಾಡಿ ಇಸ್ಲಾಂ ಸಾಮ್ರಾಜ್ಯದ ಆಗಮನವಾಗಿದೆಯೆಂದು ಸಾರಿದ್ದು ಇದೇ ಅಕ್ಬರ್. ಮುಸ್ಲಿಮೇತರರ ರುಂಡಗಳನ್ನು ಆ ಪ್ರಾಂತ್ಯದಲ್ಲೆಲ್ಲಾ ಗೋಪುರಗಳ ಮೇಲೆ ನೇತುಹಾಕಿಸಿ ತನ್ನ ಪ್ರಾಬಲ್ಯ ಸಾರಿದ ವಿಕೃತ ನಡೆ ಅಕ್ಬರನದಾಗಿತ್ತು.

ಇಂಥ ಅಕ್ಬರ್ ಕಾಲಾನಂತರದಲ್ಲಿ ರಜಪೂತರ ಜತೆ ಸಮಜಾಯಿಷಿ ಮಾಡಿಕೊಂಡಿದ್ದಕ್ಕೆ, ಮೃದುವಾಗಿದ್ದಕ್ಕೆ ಪರೋಕ್ಷ ಕಾರಣವೇ ರಾಣಾ ಪ್ರತಾಪ. ತನ್ನ ವಿರುದ್ಧ ನಿರಂತರವಾಗಿ ಸೆಣೆಸುತ್ತ, ದೊಡ್ಡ ಸಾಮ್ರಾಜ್ಯವಿಲ್ಲದಿದ್ದರೂ ಸೋಲೊಪ್ಪದ ಮನೇಭಾವವನ್ನು ತೋರಿಸುತ್ತಿರುವ ರಾಣಾ ಪ್ರತಾಪ ಯಾವತ್ತಿಗೂ ಅಕ್ಬರನ ಎದೆಯಲ್ಲೊಂದು ಆತಂಕವಿರುವಂತೆ ನೋಡಿಕೊಂಡ. ರಾಣಾ ಪ್ರತಾಪನ ಹೋರಾಟಕ್ಕೆ ರಜಪೂತ ಸಮುದಾಯವೆಲ್ಲ ಧ್ರುವೀಕರಣವಾಗದಂತೆ ತಡೆಯುವುದಾದರೂ ಹೇಗೆ? ಅವರನ್ನು ಪ್ರಸನ್ನರಾಗಿ ಇರಿಸಿಕೊಳ್ಳಲೇಬೇಕು. ಇಲ್ಲದಿದ್ದರೆ ಇವರಲ್ಲಿನ ಅತೃಪ್ತಿ ರಾಣಾ ಪ್ರತಾಪನನ್ನು ಸೇರಿಕೊಳ್ಳುವಂತೆ ಮಾಡುತ್ತದೆ. ಇಂಥದೊಂದು ಒತ್ತಡ ರೂಪುಗೊಂಡಾಗ ಮೆದುವಾದ ಅಕ್ಬರ ‘ಸೆಕ್ಯುಲರ್’ ಆಗಿದ್ದಕ್ಕೆ ಹಿಂದು ಸಮಾಜ ಕೃತಜ್ಞವಾಗಬೇಕಿರುವುದು ರಾಣಾ ಪ್ರತಾಪಗೆ.

ಮಿಲಿಟರಿಯಲ್ಲಿ ಹಾಗೂ ಆಸ್ಥಾನದಲ್ಲಿ ರಜಪೂತರಿಗೂ ಒಳ್ಳೆಯ ಹುದ್ದೆಗಳನ್ನು ಅಕ್ಬರ ನೀಡಲಾರಂಭಿಸಿದ್ದು ಆತನ ಆಡಳಿತದ ಉತ್ತರಾರ್ಧದಲ್ಲಿ. ಪೂರ್ವಾರ್ಧದಲ್ಲಿ ಆಸ್ಥಾನದಲ್ಲಿ ಹಿಂದುಗಳಿಗೆ ಜಾಗವಿರುವುದು ಹಾಗಿರಲಿ, ಇಲ್ಲಿನ ಮುಸ್ಲಿಮರನ್ನೂ ಮುಟ್ಟಿಸಿಕೊಳ್ಳುತ್ತಿರಲಿಲ್ಲ. ವಿದೇಶಿ ಪಂಡಿತರೇ ಆತನ ಆಸ್ಥಾನದಲ್ಲಿ ತುಂಬಿದ್ದರು. ಇಲ್ಲಿನವರೆಲ್ಲ ಆಳಿಸಿಕೊಳ್ಳುವುದಕ್ಕಷ್ಟೇ ಯೋಗ್ಯರೆಂಬುದನ್ನು ಅಕ್ಬರ್ ಬಲವಾಗಿ ನಂಬಿದ್ದ. ಹಾಗಲ್ಲದೇ, ತಾನು ರಜಪೂತರೊಂದಿಗೆ ಸಂಬಂಧ ಸುಧಾರಿಸಿಕೊಳ್ಳದಿದ್ದರೆ ಸಾಮ್ರಾಜ್ಯದಲ್ಲಿ ಸ್ಥಿರತೆ ಸಾಧ್ಯವಿಲ್ಲ ಎಂಬ ಒತ್ತಡಕ್ಕೆ ಸಿಲುಕಿ, ಅಕ್ಬರ್ ತನ್ನ ಕ್ರೌರ್ಯಮಾರ್ಗ ಬದಲಾಯಿಸಿಕೊಂಡಿದ್ದರ ಹಿಂದೆ ಕೆಲಸ ಮಾಡಿದ್ದು ರಾಣಾ ಪ್ರತಾಪನ ದಣಿವರಿಯದ ಹೋರಾಟಗಳೇ.

ಅಕ್ಬರ್ ನಂತರ ಕರಾಚಿಯತ್ತ ತನ್ನ ಗಮನ ಕೇಂದ್ರೀಕರಿಸಿದಾಗ ರಾಣಾ ಪ್ರತಾಪ ಹಳೆಯ ಸಾಮ್ರಾಜ್ಯದ ಬಹುಭಾಗವನ್ನು ತಿರುಗಿ ಗೆದ್ದದ್ದೂ ಆಯ್ತು. ಬೇಟೆಗೆ ಹೋದಾಗಿನ ಆಕಸ್ಮಿಕದಲ್ಲಿ ಗಾಯಗೊಂಡು ನಂತರ ರಾಣಾ ಪ್ರತಾಪ ಮರಣ ಹೋದಿದ್ದಾಗಿ ಹೇಳುತ್ತದೆ ಚರಿತ್ರೆ.

ಮುಂದೆಯೂ ಇತಿಹಾಸದಲ್ಲಿ ಮೊಘಲರ ಅತಿದೊಡ್ಡ ಬಲದೆದುರು ಹಿಂದು ರಾಜರುಗಳು ಪ್ರತಿರೋಧ ಸಲ್ಲಿಸುತ್ತಲೇ ಬಂದಿದ್ದಕ್ಕೆ, ಆ ಮೂಲಕ ಸಮುದಾಯದ ಅಸ್ತಿತ್ವ ಕಾಪಾಡಿಕೊಂಡು ಬಂದಿದ್ದಕ್ಕೆ ಸ್ಫೂರ್ತಿಯಾಗುತ್ತಲೇ ಹೋಗಿದ್ದು ಮಹಾರಾಣ ಪ್ರತಾಪರ ನೆನಪು.

Leave a Reply