ಬುದ್ಧ ಪೂರ್ಣಿಮೆ ಆಚರಣೆ ಬಂದಿದ್ದು ಹೇಗೆ? ಅದರ ವಿಶೇಷತೆಗಳೇನು?

  ಡಿಜಿಟಲ್ ಕನ್ನಡ ಟೀಮ್:

  ಇಂದು ವಿಶ್ವದಾದ್ಯಂತ ಬುದ್ಧ ಪೂರ್ಣಿಮೆಯನ್ನು ಆಚರಿಸಲಾಗುತ್ತಿದೆ. ಬೌದ್ಧ ಧರ್ಮ ಉಗಮವಾದ ಭಾರತದಲ್ಲಿ ಈ ಬುದ್ಧ ಪೂರ್ಣಿಮೆ ಆಚರಣೆಗೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಈ ಬುದ್ಧ ಪೌರ್ಣಿಮೆಯ ದಿನ ಈ ಆಚರಣೆ ಹೇಗೆ ಬಂತು, ಇದರ ಉದ್ದೇಶವೇನು ಎಂಬುದನ್ನು ನೋಡೋಣ ಬನ್ನಿ.

  ಗೌತಮ ಬುದ್ಧನ ಜನನ, ಮರಣದ ನಿರ್ದಿಷ್ಟ ದಿನಾಂಕ ಯಾರಿಗೂ ಗೊತ್ತಿಲ್ಲ. ಅಲ್ಲದೆ ಬುದ್ಧನಿಗೆ ಜ್ಞಾನೋದಯವಾದ ದಿನಾಂಕವೂ ತಿಳಿದಿಲ್ಲ. ಇತಿಹಾಸಕಾರರ ಪ್ರಕಾರ ಗೌತಮ ಬುದ್ಧ ನೇಪಾಳದ ಲುಂಬಿನಿಯಲ್ಲಿ ಜನಿಸಿದ್ದು, ಕ್ರಿಸ್ತಪೂರ್ವ 563-483ರ ಕಾಲಾವಧಿಯಲ್ಲಿ ಜೀವಿಸಿದ್ದರು. ಬುದ್ಧನ ಜೀವನದ ಪ್ರಮುಖ ಘಟ್ಟಗಳ ಕುರಿತು ನಿರ್ದಿಷ್ಟ ದಿನಾಂಕ ತಿಳಿಯದ ಹಿನ್ನೆಲೆಯಲ್ಲಿ ಬೌದ್ಧ ಧರ್ಮದ ಅನುಯಾಯಿಗಳು 1950 ರಲ್ಲಿ ಶ್ರೀಲಂಕಾದಲ್ಲಿ ದೊಡ್ಡ ಸಭೆ ನಡೆಸಿ ಮೇ ತಿಂಗಳಲ್ಲಿ ಬರುವ ಮೊದಲ ಹುಣ್ಣಿಮೆಯನ್ನು ಬುದ್ಧ ಪೂರ್ಣಿಮೆ ಎಂದು ಆಚರಿಸಲು ನಿರ್ಧರಿಸಿದರು.

  ಭಾರತ ಸರ್ಕಾರ ಈ ಆಚರಣೆಗಾಗಿ ಸರ್ಕಾರಿ ಕಚೇರಿ, ಬ್ಯಾಂಕುಗಳು ಮತ್ತು ಪೋಸ್ಟ್ ಆಫೀಸ್ ಗಳಿಗೆ ರಜೆ ಘೋಷಿಸಿದೆ. ಲುಂಬಿನಿಯ ಜತೆಗೆ ಭಾರತದ ಬೋಧ್ ಗಯಾ, ಖುಷಿನಗರ್ ಹಾಗೂ ಸಾರಾನಾಥ್ ಪ್ರದೇಶಗಳಲ್ಲಿ ಈ ಬುದ್ಧಪೂರ್ಣಿಮೆ ಆಚರಣೆ ಜೋರಾಗಿ ನಡೆಯುತ್ತದೆ. ಕಾರಣ, ಬುದ್ಧ ಜನಿಸಿದ್ದು, ಲುಂಬಿನಿಯಲ್ಲಾದರೂ, ಆತ ಮಹಾತ್ಮನಾಗಿದ್ದು ಜ್ಞಾನೋದಯದ ನಂತರ. ಈ ಜ್ಞಾನೋದಯವಾಗಿದ್ದು ಬಿಹಾರದ ಗಯಾ ಪ್ರದೇಶದಲ್ಲಿ. ನಂತರ ಅದು ಬೋಧ್ ಗಯಾ ಎಂದೇ ಪ್ರಸಿದ್ಧಿ ಪಡೆಯಿತು. ಇನ್ನು ಬುದ್ಧ ಮೊದಲ ಉಪದೇಶ ನೀಡಿದ್ದು ಸಾರಾನಾಥ್ ನಲ್ಲಿ ಹಾಗೂ ಮರಣ ಹೊಂದಿದ್ದು ಖುಷಿನಗರದಲ್ಲಿ. ಹೀಗಾಗಿ ಈ ಬುದ್ಧ ಪೂರ್ಣಿಮೆಯನ್ನು ಈ ನಾಲ್ಕು ಸ್ಥಳಗಳಲ್ಲಿ ವಿಶೇಷವಾಗಿ ಆಚರಿಸಲಾಗುವುದು.

  ಇತ್ತೀಚೆಗೆ ರಾಜತಾಂತ್ರಿಕ ಮಂತ್ರಾಲೋಚನೆಯಲ್ಲೂ ಭಾರತದ ಪಾಲಿಗೆ ಬುದ್ಧ ಪ್ರಮುಖ ಪಾತ್ರವಹಿಸಿದ್ದಾನೆ. ಈ ಕುರಿತ ಸೀಳು ನೋಟವನ್ನು ನೀವು ಈ ಹಿಂದಿನ ಲೇಖನದಲ್ಲಿ ಕಾಣಬಹುದು.

  Leave a Reply