ಪಾಕಿಸ್ತಾನದ ಉಗ್ರವಾದ ಹಾಗಿರಲಿ, ನಮ್ಮ ನೆಲದಲ್ಲೇ ಈ ಯೋಧನನ್ನು ಕೊಂದವರ ವಿರುದ್ಧ ಏನಿದೆ ಪ್ರತಿಕಾರ?

ಉಮರ್ ಫಯಾಜ್ ಪಾರ್ರಿ

ಡಿಜಿಟಲ್ ಕನ್ನಡ ಟೀಮ್:

ಇತ್ತೀಚೆಗಷ್ಟೇ ಪಾಕಿಸ್ತಾನ ಯೋಧರು ಗಡಿಯಲ್ಲಿ ನಮ್ಮ ಯೋಧರನ್ನು ಹತ್ಯೆ ಮಾಡಿದಾಗ ದೇಶದಾದ್ಯಂತ ಆಕ್ರೋಶ ಮುಗಿಲು ಮುಟ್ಟಿತ್ತು. ಮತ್ತೊಮ್ಮೆ ಪಾಕಿಸ್ತಾನದ ಮೇಲೆ ಗುರಿ ನಿರ್ದಿಷ್ಟ ದಾಳಿ ಆಗಬೇಕು ಎಂಬ ಕೂಗು ಕೇಳಿಬಂದಿತ್ತು. ಆದರೆ ಈಗ, ದೇಶದ ಒಳಗೆ ನಮ್ಮ ಯೋಧರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿ ಹತ್ಯೆ ಮಾಡಲಾಗುತ್ತಿದೆ. ಅದೂ ಎಷ್ಟರ ಮಟ್ಟಿಗೆ ಅಂದರೆ, ಉಮರ್ ಫಯಾಜ್ ಪಾರ್ರಿ ಎಂಬ ಯೋಧ ಪರಿಚಿತರ ಮದುವೆಗಾಗಿ ಪಕ್ಕದ ಜಿಲ್ಲೆಗೆ ಹೋಗಿದ್ದ ವೇಳೆ ಅಪಹರಿಸಿ ಕೊಲ್ಲುವಷ್ಟು.

ಸೈನಿಕರು ಉಗ್ರರ ವಿರುದ್ಧ ನೇರವಾಗಿ ಮುಖಾಮುಖಿ ಸೆಣಸಾಟದಲ್ಲಿ ಕೆಲವೊಮ್ಮೆ ಪ್ರಾಣ ಬಿಟ್ಟು ವೀರ ಮರಣ ಹೊಂದುತ್ತಾರೆ. ಆದರೆ, ಈಗ ನಡೆಯುತ್ತಿರುವ ಪ್ರಕರಣ ಯೋಧರನ್ನೇ ಮುಖ್ಯ ಗುರಿಯಾಗಿಸಿಕೊಂಡು ನಡೆದಿರುವ ದಾಳಿಯಾಗಿದೆ. ನಮ್ಮ ನೆಲದಲ್ಲಿ ಈ ರೀತಿಯಾಗಿ ಯೋಧರನ್ನು ಉಗ್ರರು ಅಪಹರಿಸಿ ಕೊಲ್ಲಬೇಕಾದರೆ ಅವರಿಗೆ ಸ್ಥಳೀಯರ ಸಹಕಾರ ಅಗತ್ಯವಾಗಿರುತ್ತದೆ. ಹೀಗಾಗಿ ಸ್ಥಳೀಯರು ಈ ಹತ್ಯೆಯ ಹಿಂದೆ ಕೈ ಜೋಡಿಸಿರುವುದು ಸ್ಪಷ್ಟವಾಗಿದೆ.

ಕಣಿವೆ ರಾಜ್ಯದಲ್ಲಿ ಮಾನವ ಹಕ್ಕು ಉಲ್ಲಂಘನೆ ಎಂಬ ಕೂಗನ್ನು ಪಕ್ಕಕ್ಕಿಟ್ಟು ಪ್ರತ್ಯೇಕತಾವಾದಿಗಳ ಸಂಹಾರ ಮಾಡಿ, ಉಗ್ರರಿಗೆ ರಕ್ಷಾ ಕವಚವಾಗಿ ನಿಂತಿರುವವರನ್ನು ಮಟ್ಟ ಹಾಕಲೇಬೇಕಾದ ಪರಿಸ್ಥಿತಿ ಎದುರಾಗಿದೆ ಎಂಬ ಸಂದೇಶವನ್ನು ಈ ಪ್ರಕರಣ ಸಾರುತ್ತಿದೆ.

ಇಷ್ಟಕ್ಕೂ ಜಮ್ಮು ಕಾಶ್ಮೀರದಲ್ಲಿ ಆಗಿರುವುದೇನು?

ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಬುಧವಾರ ಭಾರತೀಯ ಸೇನೆಯ ವೈದ್ಯರೊಬ್ಬರ ಗುಂಡೇಟು ತಿಂದ ಮೃತದೇಹ ಪತ್ತೆಯಾಗಿದೆ. ಈ ವೈದ್ಯರನ್ನು ಉಗ್ರರೇ ಕೊಂದಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

ಉಮರ್ ಫಯಾಜ್ ಪಾರ್ರಿ ಎಂಬ ಯೋಧ ಅಂಕೂರ್ ಪ್ರದೇಶದಲ್ಲಿ ಸೇನಾ ವೈದ್ಯರಾಗಿ ನಿಯೋಜನೆಗೊಂಡಿದ್ದರು. ಪಕ್ಕದ ಕುಲ್ಗಾಮ್ ಜಿಲ್ಲೆಯವರೇ ಆದ ಫಯಾಜ್, ಶೋಪಿಯಾನ್ ನಲ್ಲಿ ಸಂಬಂಧಿಕರ ಮದುವೆ ಸಮಾರಂಭದಲ್ಲಿ ಭಾಗವಹಿಸಲು ತೆರಳಿದ್ದರು. ಆದರೆ ಬುಧವಾರ ಇವರ ಮೃತದೇಹ ಪತ್ತೆಯಾಗಿದ್ದು, ಒಟ್ಟು 11 ಗುಂಡೇಟಿನ ಗಾಯಗಳು ಪತ್ತೆಯಾಗಿವೆ.

20ರ ಪ್ರಾಯದ ಫಯಾಜ್ ಇತ್ತೀಚೆಗಷ್ಟೇ ಭಾರತೀಯ ಸೇನೆಗೆ ಸೇರಿದ್ದರು. ರಾಷ್ಟ್ರೀಯ ಭದ್ರತಾ ಅಕಾಡೆಮಿ (ಎನ್ಡಿಎ)ಯಲ್ಲಿ ಫಯಾಜ್ ಜತೆ ತರಬೇತಿ ಪಡೆದಿದ್ದ ಸ್ನೇಹಿತರು ಫಯಾಜ್ ಸಾವಿಗೆ ಬೇಸರ ವ್ಯಕ್ತಪಡಿಸಿದ್ದು, ‘ಫಯಾಜ್ ಓರ್ವ ಅತ್ಯುತ್ತಮ ಕ್ರೀಡಾಪಟು ಆಗಿದ್ದು, ಎನ್ಡಿಎ ವಾಲಿಬಾಲ್ ತಂಡದಲ್ಲಿ ಆಡಿದ್ದರು. ಇವರು ಯಾವಾಗಲೂ ಸಂತೋಷದಿಂದ ಇರುತ್ತಿದ್ದ ವ್ಯಕ್ತಿ’ ಎಂದು ತಮ್ಮ ಹಳೇಯ ದಿನಗಳನ್ನು ನೆನೆದರು.

ಇತ್ತೀಚಿನ ದಿನಗಳಲ್ಲಿ ಭಾರತೀಯ ಸೈನಿಕರ ಮೇಲೆ ನಡೆಯುತ್ತಿರುವ ಉಗ್ರರ ದಾಳಿಯ ಮುಂದುವರಿದ ಭಾಗವಾಗಿ ಈ ಪ್ರಕರಣವನ್ನು ಪರಿಗಣಿಸಲಾಗಿದ್ದು, ಫಯಾಜ್ ಅವರನ್ನು ನಾಲ್ವರು ಉಗ್ರರು ಅಪಹರಿಸಿ ನಂತರ ಗುಂಡಿಕ್ಕಿ ಕೊಂದಿದ್ದಾರೆ ಎಂದು ಹೇಳಲಾಗಿದೆ. ಈ ಉಗ್ರರನ್ನು ಪತ್ತೆ ಹಚ್ಚುವ ಕಾರ್ಯ ಆರಂಭವಾಗಿದೆ ಎಂದು ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

Leave a Reply