ಕುಲಭೂಷಣಗೆ ಪಾಕ್ ವಿಧಿಸಿದ್ದ ಗಲ್ಲುಶಿಕ್ಷೆಗೆ ಅಂತಾರಾಷ್ಟ್ರೀಯ ನ್ಯಾಯಾಲಯದ ತಡೆ, ಭಾರತದ ರಾಜತಾಂತ್ರಿಕ ವಿಜಯ

ಡಿಜಿಟಲ್ ಕನ್ನಡ ಟೀಮ್:

ಕುಲಭೂಷಣ್ ಜಾಧವರಿಗೆ ಪಾಕಿಸ್ತಾನದ ಮಿಲಿಟರಿ ಕೋರ್ಟ್ ನೀಡಿದ್ದ ಗಲ್ಲು ಶಿಕ್ಷೆಗೆ ಅಂತಾರಾಷ್ಟ್ರೀಯ ನ್ಯಾಯಾಲಯವು ತಡೆ ನೀಡಿದೆ.

‘ಪಾಕಿಸ್ತಾನದ ಕ್ರಮವು ವಿಯೆನ್ನಾ ಅಂತಾರಾಷ್ಟ್ರೀಯ ಒಪ್ಪಂದಗಳಿಗೆ ವಿರುದ್ಧವಾಗಿದೆ’ ಎಂದು ಅಂತಾರಾಷ್ಟ್ರೀಯ ನ್ಯಾಯಾಲಯ ಸಾರಿದೆ.

ಅಂದಹಾಗೆ, ಕುಲಭೂಷಣ್ ಒಂದೊಮ್ಮೆ ಭಾರತದ ಗೂಢಚಾರಿ ಆಗಿದ್ದರೂ ಪಾಕಿಸ್ತಾನವು ಗಲ್ಲು ಶಿಕ್ಷೆ ವಿಧಿಸಲಾಗುವುದಿಲ್ಲ ಎಂದು ಡಿಜಿಟಲ್ ಕನ್ನಡ ಈ ಹಿಂದೆ ವಿಶ್ಲೇಷಿಸಿತ್ತು.

ಹಿರಿಯ ನ್ಯಾಯವಾದಿ ಹರೀಶ್ ಸಾಳ್ವೆ ಭಾರತದ ಪರ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಕಾಲತ್ತು ವಹಿಸಿದ್ದರು. ಈ ತೀರ್ಪು ಬರುತ್ತಲೇ ಈ ಬಗ್ಗೆ ಭಾರತದಲ್ಲಿರುವ ಕುಲಭೂಷಣ್ ತಾಯಿಗೆ ಈ ಬಗ್ಗೆ ತಿಳಿಸಿರುವುದಾಗಿ ವಿದೇಶ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.

ಕುಲಭೂಷಣ್ ಯಾದವಗೆ ನ್ಯಾಯ ಸಹಾಯ ಕೊಡುವುದಕ್ಕೆ ಪಾಕಿಸ್ತಾನವು ಭಾರತಕ್ಕೆ ಅನುಕೂಲ ಮಾಡಿಕೊಡುತ್ತಿಲ್ಲ ಎಂಬುದನ್ನೂ ಭಾರತವು ಅಂತಾರಾಷ್ಟ್ರೀಯ ಕೋರ್ಟಿಗೆ ಮನದಟ್ಟು ಮಾಡಿಕೊಟ್ಟಿತು. ಕುಲಭೂಷಣ್ ಯಾದವರನ್ನು ಇರಾನಿನಿಂದ ಅಪಹರಿಸಿ ಶಿಕ್ಷಿಸಲಾಗಿದೆ ಎಂಬುದು ಭಾರತದ ನಿಲುವಾದರೆ, ಕುಲಭೂಷಣ್ ಭಾರತದ ಗೂಢಚಾರನಾಗಿದ್ದು ಬಲೂಚಿಸ್ತಾನದಲ್ಲಿ ಉಗ್ರವಾದಿ ಕೃತ್ಯ ಯೋಜಿಸುತ್ತಿದ್ದ ಎಂಬುದು ಪಾಕಿಸ್ತಾನದ ಆರೋಪ.

ಇದೀಗ ಅಂತಾರಾಷ್ಟ್ರೀಯ ನ್ಯಾಯಾಲಯದಿಂದ ಪಾಕಿಸ್ತಾನದ ಶಿಕ್ಷೆಗೆ ತಡೆ ತಂದಿರುವುದು ಭಾರತದ ರಾಜತಾಂತ್ರಿಕ ಬಲವನ್ನು ಹಾಗೂ ಜಾಗತಿಕ ವರ್ಚಸ್ಸನ್ನು ಜಗತ್ತಿನೆದುರು ಪ್ರಜ್ವಲಿಸಿದೆ. ಆದರೆ ಪಾಕಿಸ್ತಾನವು ಇದನ್ನು ಒಪ್ಪುವಂತೆ ಮಾಡುವುದಕ್ಕೆ ಇನ್ನೂ ಹೆಚ್ಚಿನ ಒತ್ತಡಗಳು ಬೇಕಾಗಬಹುದು. ಏಕೆಂದರೆ ಪಾಕಿಸ್ತಾನದ ರಾಯಭಾರಿ ಅಬ್ದುಲ್ ಬಸಿತ್ ಇತ್ತೀಚೆಗೆ ಮಾತನಾಡುತ್ತ, ‘ಇದು ಭಾರತ-ಪಾಕಿಸ್ತಾನಗಳ ದ್ವಿಪಕ್ಷೀಯ ವಿಷಯವಾಗಿದ್ದು, ಅಂತಾರಾಷ್ಟ್ರೀಯ ವ್ಯಾಪ್ತಿ ಇಲ್ಲ’ ಎಂದು ವಾದಿಸಿದ್ದರು.

ಆದರೆ ಮೂಲಭೂತವಾಗಿ ಭಾರತಕ್ಕೆ ಕುಲಭೂಷಣರಿಗೆ ನ್ಯಾಯ ಸಹಾಯ ಕೊಡುವ ಸಂಪರ್ಕವನ್ನೇ ಪಾಕ್ ನಿರಾಕರಿಸಿರುವುದರಿಂದ ಅದು ದ್ವಿಪಕ್ಷೀಯ ಹೊಣೆಯನ್ನೂ ನಿರ್ವಹಿಸಿಲ್ಲ. ಅಲ್ಲದೇ ಈ ವಿಷಯದಲ್ಲಿ ವಿಯೆನ್ನಾ ಒಪ್ಪಂದದ ಅಂಶಗಳು ಸ್ಪಷ್ಟವಾಗಿವೆಯಾದ್ದರಿಂದ ಪಾಕಿಸ್ತಾನದ ವಾದ ದುರ್ಬಲವಾಗಿದೆ.

Leave a Reply