ಅಮೆರಿಕದಲ್ಲಿ ಸಿಗರೇಟ್ ಸೇದುವವರ ಪ್ರಮಾಣದಲ್ಲಿ ಕುಸಿತವಾದ್ರೂ ಕಂಪನಿಗಳ ಆದಾಯ ಮಾತ್ರ ಏರಿಕೆ, ಇದು ಸಾಧ್ಯವಾಗಿದ್ದು ಹೇಗೆ?

ಡಿಜಿಟಲ್ ಕನ್ನಡ ಟೀಮ್:

ಸದ್ಯ ಅಮೆರಿಕದಲ್ಲಿ ಸಿಗರೇಟ್ ಸೇದುವವರ ಪ್ರಮಾಣದಲ್ಲಿ ಭಾರಿ ಕುಸಿತವಾಗಿದೆ. ಆದರೆ ಈ ಕುಸಿತ ಸಿಗರೇಟ್ ಕಂಪನಿಗಳ ಆದಾಯದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಬದಲಾಗಿ ಆದಾಯ ಪ್ರಮಾಣದಲ್ಲಿ ಭಾರಿ ಏರಿಕೆಯಾಗಿದೆ. ಈ ತಂಬಾಕು ಕಂಪನಿಗಳ ಆದಾಯ ಎಷ್ಟು ಏರಿಕೆಯಾಗಿದೆ, ಅದು ಹೇಗೆ? ಎಂಬ ಕುತೂಹಲಕಾರಿ ಅಂಶ ಇಲ್ಲಿದೆ ನೋಡಿ…

ಕಳೆದ 15 ವರ್ಷಗಳಲ್ಲಿ ಅಮೆರಿಕದ ಸಿಗರೇಟ್ ಸೇದುವವರ ಪ್ರಮಾಣದಲ್ಲಿ ಶೇ.37 ರಷ್ಟು ಕುಸಿತವಾಗಿದೆ. ಇದು ಸಹಜವಾಗಿಯೇ ಸಿಗರೇಟು ಕಂಪನಿಗಳ ಆದಾಯಕ್ಕೆ ದೊಡ್ಡ ಪೆಟ್ಟು ಬೀಳಬೇಕಿತ್ತು. ಆದರೆ ಕಂಪನಿಗಳು ಲಾಭದಲ್ಲೇ ಮುಂದುವರಿದಿವೆ. ಅದು ಎಷ್ಟರ ಮಟ್ಟಿಗೆ ಅಂದರೆ, ಈ ಕಂಪನಿಗಳು 2016ರಲ್ಲಿ ಶೇ.32 ರಷ್ಟು ಅಂದರೆ 93.4 ಬಿಲಿಯನ್ ಅಮೆರಿಕನ್ ಡಾಲರ್ ಲಾಭ ಗಳಿಸುವಷ್ಟು.

ಈ ಹಿಂದೆ ಒಂದು ಪ್ಯಾಕ್ ಸಿಗರೇಟ್ ಮೊತ್ತ 3.73 ಅಮೆರಿಕನ್ ಡಾಲರ್ ಆಗಿತ್ತು. ಆದರೆ ಈಗ ಅದು 6.42 ಡಾಲರ್ ಆಗಿದೆ. ತಂಬಾಕು ಕಂಪನಿಗಳು ಸಿಗರೇಟ್ ಸೇದುವ ಗ್ರಾಹಕರನ್ನು ಕಳೆದುಕೊಂಡಿರಬಹುದು ಆದರೆ, ಇರುವ ಗ್ರಾಹಕರನ್ನೇ ಇಟ್ಟುಕೊಂಡು ಬೆಲೆ ಏರಿಕೆ ಮಾಡಿ ಅವರು ತಮ್ಮ ಚಟಕ್ಕೆ ಹೆಚ್ಚು ಹಣ ತೆರುವಂತೆ ಮಾಡಿವೆ. ಅದು ಯಾವ ಪ್ರಮಾಣದಲ್ಲಿ ಅಂದರೆ, ಕಳೆದ ವರ್ಷ ಅಮೆರಿಕನ್ನರು ಬಿಯರ್ ಮತ್ತು ಸೋಡಾಗೆ ಖರ್ಚು ಮಾಡಿದ್ದಕ್ಕಿಂತ ಹೆಚ್ಚು ಹಣವನ್ನು ಸಿಗರೇಟಿಗಾಗಿ ವ್ಯವಯಿಸಿದ್ದಾರೆ ಎಂದು ಹೇಳುತ್ತಿದೆ ವಾಲ್ ಸ್ಟ್ರೀಟ್ ಜರ್ನಲ್ ವರದಿ.

ಅಮೆರಿಕದಲ್ಲಿ ಈ ಹಿಂದೆ 7 ಅತಿ ದೊಡ್ಡ ಸಿಗರೇಟ್ ಕಂಪನಿಗಳಿದ್ದವು. ಈಗ ಅವುಗಳ ಸಂಖ್ಯೆ ಕೇವಲ 2 ಮಾತ್ರ. ಅವುಗಳೆಂದರೆ ಆಲ್ಟ್ರಿಯಾ (ಮಾರ್ಲ್ ಬೊರೊ ಮತ್ತು ನೆಕ್ಸ್ಟ್) ಮತ್ತು ರೆನಾಲ್ಡ್ಸ್ ಅಮೆರಿಕನ್ (ನ್ಯೂಪೋರ್ಟ್ ಮತ್ತು ಕ್ಯಾಮೆಲ್). ಇದರಿಂದ ಸಿಗರೇಟಿನ ಉತ್ಪಾದನೆ ವೆಚ್ಚ ಕಡಿಮೆಯಾಗಿದ್ದು, ದರ ಏರಿಕೆಯಲ್ಲಿ ಹೆಚ್ಚಿನ ಸ್ವಾತಂತ್ರ್ಯ ಈ ಕಂಪನಿಗಳಿಗೆ ಸಿಕ್ಕಿದೆ. ಅಮೆರಿಕದಲ್ಲಿ ಸಿಗುವ ಪ್ರತಿ 10 ಸಿಗರೇಟಿನ ಪೈಕಿ 8 ಸಿಗರೇಟುಗಳನ್ನು ಈ ಎರಡು ಕಂಪನಿಗಳೇ ಉತ್ಪಾದಿಸುತ್ತಿವೆ. ಇಷ್ಟೇ ಅಲ್ಲ, ಸಿಗರೇಟ್ ಕಂಪನಿಗಳು ಹೆಚ್ಚಿನ ಲಾಭ ಮಾಡಲು ಮತ್ತೊಂದು ಪ್ರಮುಖ ಕಾರಣ, ಕಡಿಮೆ ತೆರಿಗೆ ದರ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪೈಕಿ ಅಮೆರಿಕದಲ್ಲಿ ಸಿಗರೇಟ್ ಮೇಲಿನ ತೆರಿಗೆ ದರ ಅತ್ಯಂತ ಕಡಿಮೆ ಇದೆ. ಇನ್ನು ಜಾಹೀರಾತು ಹಾಗೂ ಪ್ರಚಾರದ ವಿಷಯದಲ್ಲೂ ನಿಯಮಗಳು ಸಡಿಲವಿದೆ. ಹೀಗಾಗಿ ತಂಬಾಕು ಕಂಪನಿಗಳು ತಮ್ಮ ಗ್ರಾಹಕರನ್ನು ಸುಲಭವಾಗಿ ತಲುಪುವಂತಾಗಿದೆ.

Leave a Reply