ಮುಂದಿನ ಐಪಿಎಲ್ ಟೂರ್ನಿಗೆ ಆಸೀಸ್ ಸ್ಟಾರ್ ಆಟಗಾರರು ಡೌಟು? ಇದಕ್ಕೆ ಕಾರಣ ಏನು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಮುಂದಿನ ವರ್ಷದಿಂದ ಆಸ್ಟ್ರೇಲಿಯಾದ ಸ್ಟಾರ್ ಆಟಗಾರರು ಐಪಿಎಲ್ ನಲ್ಲಿ ಆಡುವುದು ಅನುಮಾನವಾಗಿದೆ. ಇದಕ್ಕೆ ಕಾರಣ ಕ್ರಿಕೆಟ್ ಆಸ್ಟ್ರೇಲಿಯಾ ಆಟಗಾರರ ಜತೆಗೆ ಮಾಡಿಕೊಳ್ಳಲು ನಿರ್ಧರಿಸಿರುವ ಒಪ್ಪಂದ.

ಹೌದು, ಇಷ್ಟು ದಿನಗಳ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ತನ್ನ ಆಟಗಾರರ ಜತೆಗೆ ಒಂದು ವರ್ಷದ ಅವಧಿಗೆ ಒಪ್ಪಂದ ಮಾಡಿಕೊಳ್ಳುತ್ತಿತ್ತು. ಆದರೆ, ಈಗ ಆಟಗಾರರ ಜತೆ ಹಲವು ವರ್ಷಗಳ (3 ವರ್ಷಗಳ ಕುರಿತಾಗಿ ಚರ್ಚೆ ನಡೆಯುತ್ತಿದೆ) ಕೇಂದ್ರಿಕೃತ ಒಪ್ಪಂದಕ್ಕೆ ಮುಂದಾಗಿದೆ ಸಿಎ. ಈ ಒಪ್ಪಂದಕ್ಕೆ ಒಳಪಡುವ ಆಟಗಾರರು ಮುಂದಿನ ವರ್ಷ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಲು ಕ್ರಿಕೆಟ್ ಆಸ್ಟ್ರೇಲಿಯಾ ನಿರಾಕರಿಸುವ ಸಾಧ್ಯತೆ ಹೆಚ್ಚಾಗಿದೆ.

ಸಾಮಾನ್ಯವಾಗಿ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಆಟಗಾರರಿಗೆ ವಿಶ್ರಾಂತಿ ನೀಡುವ ಸಲುವಾಗಿ ಯಾವುದೇ ಅಂತಾರಾಷ್ಟ್ರೀಯ ಟೂರ್ನಿಯನ್ನು ಆಯೋಜಿಸಿರುವುದಿಲ್ಲ. ಹೀಗಾಗಿ ಆಸ್ಟ್ರೇಲಿಯಾದ ಆಟಗಾರರು ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ವಿದೇಶಿ ಆಟಗಾರರು ಐಪಿಎಲ್ ನಲ್ಲಿ ಭಾಗವಹಿಸುತ್ತಾರೆ. ಆ ಮೂಲಕ ಹೆಚ್ಚಿನ ಹಣ ಗಳಿಸುತ್ತಿದ್ದಾರೆ. ವಿಶ್ರಾಂತಿ ಪಡೆಯುವ ಸಮಯದಲ್ಲಿ ಆಟಗಾರರು ಐಪಿಎಲ್ ನಲ್ಲಿ ಆಡುವ ಮೂಲಕ ದಣಿಯಲಿದ್ದು, ಕೆಲವೊಮ್ಮೆ ಆಟಗಾರರು ಗಾಯಗೊಳ್ಳುವ ಸಾಧ್ಯತೆ ಇದೆ. ಇದರಿಂದ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ತಂಡದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬುದು ಕ್ರಿಕೆಟ್ ಆಸ್ಟ್ರೇಲಿಯಾದ ಆತಂಕ. ಹೀಗಾಗಿ ಸಿಎ ತನ್ನ ಪ್ರಮುಖ ಆಟಗಾರರನ್ನು ಐಪಿಎಲ್ ನಿಂದ ದೂರ ಉಳಿಯುವಂತೆ ಸೂಚಿಸಲಿದೆ ಎಂಬ ಮಾತುಗಳು ದಟ್ಟವಾಗುತ್ತಿವೆ.

ಮತ್ತೊಂದು ಪ್ರಮುಖ ಅಂಶ ಎಂದರೆ, ಸದ್ಯ ಆಸ್ಟ್ರೇಲಿಯಾ ಆಟಗಾರರು ತಮಗೆ ಹೆಚ್ಚಿನ ಸಂಭಾವನೆ ಬೇಕೆಂದು ಪಟ್ಟು ಹಿಡಿದಿದ್ದಾರೆ. ಈ ವಿಷಯವಾಗಿ ಆಟಗಾರರು ಮತ್ತು ಸಿಎ ನಡುವೆ ಸ್ವಲ್ಪ ಪ್ರಮಾಣದ ಅಸಮಾಧಾನವೂ ಇದೆ. ಈ ಕಾರಣಗಳಿಂದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಆಟಗಾರರ ಜತೆ ಹಲವು ವರ್ಷಗಳ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ. ಅಷ್ಟೇ ಅಲ್ಲದೆ ಈ ಒಪ್ಪಂದದ ಮೂಲಕ ಆಸ್ಟ್ರೇಲಿಯಾ ಆಟಗಾರರು ಐಪಿಎಲ್ ನಲ್ಲಿ ಆಡುವುದಕ್ಕೆ ಬ್ರೇಕ್ ಹಾಕುವ ಪ್ರಯತ್ನಕ್ಕೆ ಸಿಎ ಮುಂದಾಗಿದೆ ಎನ್ನಲಾಗುತ್ತಿದೆ.

ಒಂದು ವೇಳೆ ಈ ಒಪ್ಪಂದದಿಂದ ಆಸೀಸ್ ಆಟಗಾರರು ಐಪಿಎಲ್ ನಿಂದ ದೂರ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾದರೆ, ಸ್ಟೀವನ್ ಸ್ಮಿತ್, ಡೇವಿಡ್ ವಾರ್ನರ್, ಗ್ಲೆನ್ ಮ್ಯಾಕ್ಸ್ ವೆಲ್, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ಸೇರಿದಂತೆ ಇತರೆ ಆಟಗಾರರು ಐಪಿಎಲ್ ನಲ್ಲಿ ಆಡುವುದಿಲ್ಲ.

ಆಸ್ಟ್ರೇಲಿಯಾದ ಸ್ಟಾರ್ ಆಟಗಾರರು ಈ ಒಪ್ಪಂದದಿಂದಾಗಿ ಐಪಿಎಲ್ ನಿಂದ ದೂರ ಉಳಿದರೆ, ಅವರ ವೈಯಕ್ತಿಕ ಆದಾಯಕ್ಕೆ ದೊಡ್ಡ ಹೊಡೆತ ಬೀಳಲಿದೆ. ಉದಾಹರಣೆಗೆ, ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ಈ ಒಪ್ಪಂದಕ್ಕೆ ಒಳಪಟ್ಟರೆ ಮುಂದಿನ ಮೂರು ವರ್ಷಗಳಲ್ಲಿ ಅವರು 2 ಮಿಲಿಯನ್ ಅಮೆರಿಕನ್ ಡಾಲರ್ ನಷ್ಟು ಸಂಪಾದನೆ ಮಾಡಲಿದ್ದಾರೆ. ಆದರೆ, ವಾರ್ನರ್ ಮುಂದಿನ ಮೂರು ವರ್ಷಗಳಲ್ಲಿ ಐಪಿಎಲ್ ಆಡಿದರೆ ಸುಮಾರು 10 ಮಿಲಿಯನ್ ಅಮೆರಿಕನ್ ಡಾಲರ್ ಸಂಪಾದಿಸುವ ಸಾಧ್ಯತೆ ಇದೆ. ಹೀಗಾಗಿ ಈ ಒಪ್ಪಂದ ಆಸೀಸ್ ಆಟಗಾರರ ಮೇಲೆ ಮುಂದಿನ ದಿನಗಳಲ್ಲಿ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕು.

Leave a Reply