ಇನ್ಫೋಸಿಸ್, ವಿಪ್ರೊ, ಕಾಗ್ನಿಸೆಂಟ್ ಆಯ್ತು ಈಗ ಟೆಕ್ ಮಹೀಂದ್ರ: ಐಟಿ ಕ್ಷೇತ್ರದಲ್ಲಿ ಬರಿದಾಗ್ತಿದೆ ಭಾರತೀಯರ ಉದ್ಯೋಗ

ಡಿಜಿಟಲ್ ಕನ್ನಡ ಟೀಮ್:

ಭಾರತೀಯ ಐಟಿ ವೃತ್ತಿಪರರಿಗೆ ಪ್ರಮುಖ ವೇದಿಕೆಯಾಗಿದ್ದ ಇನ್ಫೋಸಿಸ್, ವಿಪ್ರೊ ಹಾಗೂ ಕಾಗ್ನಿಸೆಂಟ್ ಕಂಪನಿಗಳು ನೂರಾರು ಹಾಗೂ ಸಾವಿರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ನಿರ್ಧರಿಸಿವೆ. ಈಗ ಈ ಸಾಲಿಗೆ ಮತ್ತೊಂದು ಸೇರ್ಪಡೆ ಟೆಕ್ ಮಹೀಂದ್ರ.

ಸದ್ಯಕ್ಕೆ ಬರುತ್ತಿರುವ ವರದಿಗಳ ಪ್ರಕಾರ ಟೆಕ್ ಮಹೀಂದ್ರ ಕಂಪನಿ ಈ ತಿಂಗಳಲ್ಲಿ ಸಾವಿರ ಸಿಬ್ಬಂದಿಯನ್ನು ಮನೆಗೆ ಕಳುಹಿಸುವ ನಿರ್ಧಾರಕ್ಕೆ ಬಂದಿದೆ. ಕಳೆದ ವರ್ಷ ಡಿಸೆಂಬರ್ 31ರ ವೇಳೆಗೆ ಈ ಕಂಪನಿಯ ಸಿಬ್ಬಂದಿ ಸಂಖ್ಯೆ 1,17,095 ಇತ್ತು.  ಇನ್ನು ಸಾಫ್ಟ್ ವೇರ್ ವಿಭಾಗದಲ್ಲಿ 80,858 ಸಿಬ್ಬಂದಿ ಇದ್ದರು. ಈ ತಿಂಗಳು ಸುಮಾರು ಸಾವಿರ ಸಿಬ್ಬಂದಿಯನ್ನು ಕಂಪನಿ ತೆಗೆದುಹಾಕುತ್ತಿದ್ದು, ‘ಪ್ರತಿ ವರ್ಷವೂ ಕಂಪನಿಯಲ್ಲಿ ಕನಿಷ್ಠ ಪ್ರದರ್ಶನ ತೋರಿದ ಸಿಬ್ಬಂದಿಗಳನ್ನು ತೆಗೆದುಹಾಕುವ ಪ್ರಕ್ರಿಯೆ ಇದೆ. ಈ ವರ್ಷವೂ ಅದನ್ನೇ ಮಾಡಲಾಗುತ್ತಿದೆ’ ಎಂದು ಕಂಪನಿಯ ವಕ್ತಾರರು ಸಮರ್ಥಿಸಿಕೊಂಡಿದ್ದಾರೆ. ಕಳೆದ ತಿಂಗಳಾಂತ್ಯದಲ್ಲಿ ವಿಪ್ರೊ ವೇತನ ಹೆಚ್ಚಳ ಪ್ರಕ್ರಿಯೆಯ ಕಾರಣ ಕೊಟ್ಟು 500 ಸಿಬ್ಬಂದಿಯನ್ನು ಕಿತ್ತುಹಾಕಿತ್ತು.

ಕಾಗ್ನಿಸೆಂಟ್ ತನ್ನ ಕೆಲಸದ ಬಲದ ಶೇ. 2.3ನ್ನು ಕಡಿಮೆ ಮಾಡಿಕೊಳ್ಳುವ ಯತ್ನದಲ್ಲಿದೆ ಎಂಬ ವರದಿಗಳಿವೆ. ಇಲ್ಲಿ ಉನ್ನತ ಹುದ್ದೆಯಲ್ಲಿರುವವರಿಗೆ ನಿರ್ಗಮನ ಪ್ಯಾಕೇಜುಗಳನ್ನು ಆಫರ್ ಮಾಡಲಾಗುತ್ತಿದ್ದು, ಎಕ್ಸಿಕ್ಯುಟಿವ್ ಹಂತದ ಸಾವಿರ ಉದ್ಯೋಗಿಗಳನ್ನು ತೆಗೆದುಹಾಕುವ ಸೂಚನೆಗಳಿವೆ. ಇದರ ವಿರುದ್ಧ ಕೆಲವರು ಒಕ್ಕೂಟ ಮಾಡಿಕೊಂಡು ನ್ಯಾಯಾಲಯದ ಬಾಗಿಲನ್ನೂ ಬಡಿದಿದ್ದಾರೆ.

ಹೀಗೆ ಪ್ರತಿಷ್ಠಿತ ಐಟಿ ಕಂಪನಿಗಳು ಈಗ ಭಾರತೀಯರನ್ನು ಉದ್ಯೋಗದಿಂದ ತೆಗೆದುಹಾಕುವ ಪರ್ವವನ್ನು ಆರಂಭಿಸಲು ಪ್ರಮುಖ ಕಾರಣಗಳೇನು ಎಂದು ನೋಡುವುದಾದರೆ, ನಮಗೆ ಸಿಗುವ ಉತ್ತರ ಕೇವಲ ಅಮೆರಿಕದ ವಿಸಾ ನೀತಿ ಮಾತ್ರವಲ್ಲ. ಜತೆಗೆ ಈ ಕ್ಷೇತ್ರದಲ್ಲಿ ಯಾಂತ್ರೀಕರಣದ ಅಳವಡಿಕೆ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನಂತಹ ತಂತ್ರಜ್ಞಾನ ಬಳಕೆ ಕೂಡ ಪ್ರಮುಖ ಕಾರಣವಾಗಿವೆ. ಈ ಎಲ್ಲಾ ಕಾರಣಗಳಿಂದಾಗಿ ಐಟಿ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲದ ಬೇಡಿಕೆ ಕುಸಿದಿದ್ದು, ಭಾರತೀಯ ಐಟಿ ವೃತ್ತಿಪರರಿಗೆ ಈಗ ದೊಡ್ಡ ಆಘಾತ ಎದುರಾಗಿದೆ. ತಜ್ಞರ ಪ್ರಕಾರ ಈ ಎಲ್ಲದರಿಂದ ಹೆಚ್ಚು ಪರಿಣಾಮ ಅನುಭವಿಸುತ್ತಿರುವವರು 10-15 ವರ್ಷಗಳ ಅನುಭವ ಹೊಂದಿರುವ ನೌಕರರು ಎನ್ನಲಾಗುತ್ತಿದೆ.

ಈ ವರ್ಷ ಭಾರತೀಯ ಐಟಿ ಕಂಪನಿಗಳು ಮಂದಗತಿಯ ಆದಾಯ ಏರಿಕೆ ಕಂಡಿವೆ. ಇದು ಈ ದಶಕದಲ್ಲೇ ಕಡಿಮೆ ಮಟ್ಟದ ಆದಾಯ ಏರಿಕೆಯಾಗಿದ್ದು, ಈ ಸಂದರ್ಭದಲ್ಲಿ ಕಂಪನಿಗಳು ಸಾಂಪ್ರದಾಯಿಕ ಐಟಿ ಕ್ಷೇತ್ರಕ್ಕೆ ಹೆಚ್ಚು ಬಂಡವಾಳ ಹಾಕಲು ಮನಸ್ಸು ಮಾಡುತ್ತಿಲ್ಲ. ಬದಲಿಗೆ ಈ ಕಂಪನಿಗಳು ಡಿಜಿಟಲ್ ಹಾಗೂ ಕ್ಲೌಡ್ ವ್ಯವಸ್ಥೆಗಳತ್ತ ಗಮನಹರಿಸುತ್ತಿವೆ. ಮಾನವ ಸಂಪನ್ಮೂಲಗಳ ನಿರ್ವಹಣೆಗೆ ತಗುಲುವ ವೆಚ್ಚಕ್ಕಿಂತ ಈ ತಂತ್ರಜ್ಞಾನ ವ್ಯವಸ್ಥೆ ನಿರ್ವಹಣೆ ಕಡಿಮೆಯಾಗಿದ್ದು ಸಹಜವಾಗಿಯೇ ಅನೇಕ ಕಂಪನಿಗಳು ತಮ್ಮ ಸಿಬ್ಬಂದಿ ಪ್ರಮಾಣ ಕಡಿಮೆ ಮಾಡಿಕೊಳ್ಳಲು ಮುಂದಾಗಿವೆ. ಇದರ ಜತೆಗೆ ಕ್ಯಾಂಪಸ್ ಗಳಲ್ಲಿ ಹೊಸಬರ ಆಯ್ಕೆಯನ್ನು ಕಡಿಮೆ ಮಾಡುತ್ತಿವೆ.

Leave a Reply