ಎಫ್ಬಿಐ ಮುಖ್ಯಸ್ಥನನ್ನು ಕಿತ್ತೊಗೆಯುವಾಗ ಅಮೆರಿಕ ಅಧ್ಯಕ್ಷ ಟ್ರಂಪ್ ಬರೆದ ಪತ್ರದ ಗಡಸಿಗೆ ನೀವು ಬೆಚ್ಚಿಬೀಳ್ತೀರಿ!

ಡಿಜಿಟಲ್ ಕನ್ನಡ ಟೀಮ್:

ಎರಡು ದಿನಗಳ ಹಿಂದೆ ಅಮೆರಿಕದ ಪ್ರಖ್ಯಾತ ಆಂತರಿಕ ತನಿಖಾ ಸಂಸ್ಥೆಯಾಗಿರುವ ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್ (ಎಫ್ಬಿಐ) ಮುಖ್ಯಸ್ಥ ಸ್ಥಾನದಿಂದ ಜೇಮ್ಸ್ ಕಾಮಿ ಎಂಬುವವರನ್ನು ಕಿತ್ತುಹಾಕಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರಿ ಸುದ್ದಿ ಮಾಡಿದರು. ಕಾರಣ, ಇತಿಹಾಸದಲ್ಲೇ ಇಂಥ ಬಿರುಸು ಕ್ರಮ ದಾಖಲಾಗುವಂಥ ವಿದ್ಯಮಾನ. ವಾಟರ್ ಗೇಟ್ ಹಗರಣ ಮುಚ್ಚಿಕೊಳ್ಳುವಾಗ ಆಗಿನ ಅಧ್ಯಕ್ಷ ರಿಚರ್ಡ್ ನಿಕ್ಸನ್ ಹೀಗೆಲ್ಲ ಅಧಿಕಾರ ಚಲಾಯಿಸಿದ್ದುಬಿಟ್ಟರೆ ಇಂಥ ಬಿರುಸು ಕ್ರಮಗಳು ಮತ್ಯಾವಾಗಲೂ ಆಗಿರಲಿಲ್ಲ.

ಈಗಲೂ ಟ್ರಂಪ್ ಕ್ರಮದ ಹಿಂದೆ, ಎಫ್ಬಿಐ ನಿರ್ದೇಶಕ ತನ್ನ ಎರಡು ಉದ್ದೇಶಗಳ ವಿಚಾರದಲ್ಲಿ ಅನುಕೂಲಕರವಾಗಿ ನಡೆದುಕೊಳ್ಳಲಿಲ್ಲ ಎಂಬ ಸಿಟ್ಟಿದೆ ಎನ್ನುತ್ತಾರೆ ವಿಶ್ಲೇಷಕರು. ಅವೆಂದರೆ…

  • ಡೊನಾಲ್ಡ್ ಟ್ರಂಪ್ ವಿಜಯದ ಹಿಂದೆ ರಷ್ಯಾದ ಪಾತ್ರವೇನಾದರೂ ಇದೆಯಾ ಎಂಬ ಆಯಾಮ ತನಿಖೆಗೆ ಒಳಗಾಗುತ್ತಿತ್ತು. ಇದನ್ನು ಮುಚ್ಚಿಹಾಕುವುದಕ್ಕೆ ಎಫ್ಬಿಐ ನಿರ್ದೇಶಕ ತನ್ನ ಜತೆಗೆ ನಿಲ್ಲಲಿಲ್ಲ ಎಂಬುದು ಟ್ರಂಪ್ ಕ್ರಮಕ್ಕೆ ಕಾರಣ ಎಂಬುದು ಟೀಕಾಕಾರರ ಆರೋಪ.
  • ಅಧ್ಯಕ್ಷೀಯ ಚುನಾವಣೆ ನಡೆಯುತ್ತಿರುವಾಗಲೇ ಪ್ರತಿಸ್ಪರ್ಧಿ ಹಿಲರಿ ಮೇಲೆ ಟ್ರಂಪ್ ಹೊರೆಸಿದ್ದ ಆರೋಪವೆಂದರೆ, ಆಕೆ ತನ್ನ ಸ್ವಕಾರ್ಯಗಳಿಗೆ ಸರ್ಕಾರಿ ಸರ್ವರ್ ಬಳಸುವ ಮೂಲಕ ರಾಷ್ಟ್ರೀಯ ಭದ್ರತೆಯನ್ನು ಗಾಳಿಗೆ ತೂರಿದ್ದಾಳೆ ಅನ್ನೋದು. ಮಿಂಚಂಚೆಗಳ ವಿಚಾರದಲ್ಲಿ ಹಿಲರಿ ಕ್ಲಿಂಟನ್ ಹೀಗೆ ಆರೋಪ ಎದುರಿಸುತ್ತಿದ್ದ ಸಂದರ್ಭದಲ್ಲಿ ಎಫ್ಬಿಐ ನಿರ್ದೇಶಕ ಜೇಮ್ಸ್ ಕಾಮಿ, ‘ಈ ಬಗ್ಗೆ ನಿಖರ ಆಧಾರಗಳಿಲ್ಲದಿರುವುದರಿಂದ ತನಿಖೆ ಕೊನೆಗೊಳಿಸುವ ಯೋಚನೆ ಇದೆ’ ಅಂತ ಹೇಳಿಕೆ ಕೊಟ್ಟಿದ್ದರು. ಆದರೆ ಅದಾಗಿ ಕೆಲವಾರಗಳಲ್ಲೇ, ‘ಹೊಸಸಾಕ್ಷ್ಯಗಳು ಸಿಕ್ಕಿರುವುದರಿಂದ ತನಿಖೆ ಮುಂದುವರಿಯುತ್ತದೆ’ ಅಂತಲೂ ಹೇಳಿದ್ದರು. ಆದರೆ ಅದಾಗಲೇ ಟ್ರಂಪ್ ಮತ್ತು ಕಾಮಿ ನಡುವಿನ ಅವಿಶ್ವಾಸ ಗಟ್ಟಿಯಾಗಿಬಿಟ್ಟಿತ್ತು.

ಅದೇನೇ ಇರಲಿ. ಕಾಮಿಯನ್ನು ಕೆಲಸದಿಂದ ತೆಗೆಯುವ ಪತ್ರ ಅದೆಷ್ಟು ಬಿರುಸಾಗಿದೆ ಎಂದರೆ, ಓದಿದರೆ ನಮಗೇ ಮುಜುಗರವಾಗುತ್ತದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಮಾಡಿರುವ ಈ ಪತ್ರ ಜೇಮ್ಸ್ ಕಾಮಿಯನ್ನು ತಲುಪಿದ್ದು ಆತ ಎಫ್ಬಿಐ ಏಜೆಂಟರನ್ನು ಉದ್ದೇಶಿಸಿ ಸಭೆಯೊಂದರಲ್ಲಿ ಮಾತನಾಡುತ್ತಿದ್ದಾಗ. ಯಾರೋ ಹಾಸ್ಯ ಮಾಡುವುದಕ್ಕೆ ಇಂಥ ಪತ್ರ ಕಳುಹಿಸಿದ್ದಾರೆಂದುಕೊಂಡು ಅದನ್ನು ಪಕ್ಕಕ್ಕಿಟ್ಟು ಭಾಷಣ ಮುಂದುವರಿಸಿದ್ದರಾತ!

ಅಂದಹಾಗೆ, ನಿಷ್ಠುರ ನುಡಿಯ ಆ ಪತ್ರ ಹೀಗಿದೆ-

ಡಿಯರ್ ಡೈರೆಕ್ಟರ್ ಕಾಮಿ

ನಿಮ್ಮನ್ನು ಎಫ್ಬಿಐ ನಿರ್ದೇಶಕ ಸ್ಥಾನದಿಂದ ತೆಗೆಯುವಂತೆ ಅಮೆರಿಕದ ಅಟಾರ್ನಿ ಜನರಲ್ ಹಾಗೂ ಡೆಪ್ಯುಟಿ ಅಟಾರ್ನಿ ಜನರಲ್ ಬರೆದಿರುವ ಪತ್ರ ತಲುಪಿದೆ. ನಾನು ಆ ಶಿಫಾರಸುಗಳನ್ನು ಅಂಗೀಕರಿಸಿದ್ದೇನೆ ಹಾಗೂ ಈ ಕ್ಷಣದಿಂದಲೇ ಜಾರಿಗೆ ಬರುವಂತೆ ನಿಮ್ಮನ್ನು ನಿರ್ದೇಶಕ ಸ್ಥಾನದಿಂದ ತೆಗೆದುಹಾಕಲಾಗುತ್ತಿದೆ.

ನಾನಂತೂ ತನಿಖೆಯ ವಿಷಯವಾಗಿಲ್ಲ ಎಂದು ನೀವು ಬೇರೆ ಬೇರೆ ಸಂದರ್ಭಗಳಲ್ಲಿ ಹೇಳಿರುವುದನ್ನು ಪ್ರಶಂಸಿಸುತ್ತೇನೆ. ಆದರೆ ಎಫ್ಬಿಐ ಮುನ್ನಡೆಸಲು ನೀವು ಸಮರ್ಥರಲ್ಲ ಎಂಬ ಕಾಯ್ದೆ ಇಲಾಖೆಯ ಅಭಿಪ್ರಾಯವನ್ನು ನಾನು ಒಪ್ಪಿದ್ದೇನೆ.

ಕಾನೂನು ಜಾರಿಯ ಅಭಿಯಾನದಲ್ಲಿ ಜನರ ವಿಶ್ವಾಸವನ್ನು ಮರು ಸ್ಥಾಪಿಸುವ ನಿಟ್ಟಿನಲ್ಲಿ ಎಫ್ಬಿಐಗೆ ಹೊಸ ನಾಯಕನನ್ನು ಹುಡುಕುವ ಅಗತ್ಯ ನಮ್ಮ ಮುಂದಿದೆ.

ನಿಮ್ಮ ಭವಿಷ್ಯದ ಪ್ರಯತ್ನಗಳಿಗೆ ಶುಭವಾಗಲಿ.

-ಡೊನಾಲ್ಡ್ ಟ್ರಂಪ್

Leave a Reply