ಪೊಖ್ರಾನ್ ನೆನಪಲ್ಲಿಂದು ರಾಷ್ಷ್ರೀಯ ತಂತ್ರಜ್ಞಾನ ದಿನ: ಮೋದಿ ಮಾತುಗಳಲ್ಲಿ ವಾಜಪೇಯಿ ಪ್ರಶಂಸೆ

ಡಿಜಿಟಲ್ ಕನ್ನಡ ಟೀಮ್:

ಮೇ 11 ಭಾರತದ ಪಾಲಿಗೆ ‘ರಾಷ್ಟ್ರೀಯ ತಂತ್ರಜ್ಞಾನ ದಿನ’. 1998ರ ಮೇ 11ರಂದು ಪೊಖ್ರಾನ್ ಪ್ರದೇಶದಲ್ಲಿ ನಡೆಸಿದ ಅಣ್ವಸ್ತ್ರ ಪರೀಕ್ಷೆ ಯಶಸ್ವಿಯಾದ ಹಿನ್ನೆಲೆಯಲ್ಲಿ 1999ರಿಂದ ಈ ದಿನವನ್ನು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ.

ಗುರುವಾರ ರಾಷ್ಟ್ರೀಯ ತಂತ್ರಜ್ಞಾನ ದಿನ ಅಂಗವಾಗಿ ದೇಶದ ನಾಗರೀಕರಿಗೆ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ, ‘ವಿಜ್ಞಾನಿಗಳಿಗೆ ಹಾಗೂ ತಂತ್ರಜ್ಞಾನದ ಬಗ್ಗೆ ಅತೀವ ಆಸಕ್ತಿ ಹೊಂದಿದವರಿಗೆ ಹಾಗೂ ಎಲ್ಲರಿಗೂ ರಾಷ್ಟ್ರೀಯ ತಂತ್ರಜ್ಞಾನ ದಿನ ಶುಭಾಷಯಗಳು. 1998ರಲ್ಲಿ ಪೊಖ್ರಾನ್ ನಲ್ಲಿ ನಮ್ಮ ವಿಜ್ಞಾನಿಗಳು ಹಾಗೂ ರಾಜಕೀಯ ನಾಯಕರು ತೋರಿದ ಧೈರ್ಯಕ್ಕೆ ನಾವೆಲ್ಲರೂ ಧನ್ಯವಾದ ಅರ್ಪಿಸಲೇಬೇಕು’ ಎಂದು ಟ್ವೀಟ್ ಮಾಡಿದ್ದಾರೆ.

ಈ ಅಣ್ವಸ್ತ್ರ ಪರೀಕ್ಷೆಯಲ್ಲಿ ವಿಜ್ಞಾನಿಗಳ ಪಾತ್ರ, ದೇಶದ ಪ್ರಧಾನಿಯಾಗಿ ಅಟಲ್ ಬಿಹಾರಿ ವಾಜಪೇಯಿ ಅವರ ದಿಟ್ಟ ನಿರ್ಧಾರ ಹಾಗೂ ಇದಕ್ಕೆ ಸಹಕಾರ ಕೊಟ್ಟ ಜನರನ್ನು ನರೇಂದ್ರ ಮೋದಿ ಅವರು ತಮ್ಮ ವೆಬ್ ಸೈಟಿನಲ್ಲಿ ಈ ಹಿಂದಿನ ಬರಹವೊಂದರಲ್ಲಿ ಪ್ರಶಂಶಿಸಿದ್ದು ಹೀಗೆ…

‘ಪೊಖ್ರಾನ್ ಪರೀಕ್ಷೆ ಮೇಲೆ ಇಡೀ ವಿಶ್ವವೇ ಗಮನಹರಿಸಿತ್ತು. ಅಟಲ್ ಬಿಹಾರಿ ವಾಜಪೇಯಿ ಅವರ ನಾಯಕತ್ವದಲ್ಲಿ ಈ ಅಣ್ವಸ್ತ್ರ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಆ ಮೂಲಕ ಇಡೀ ವಿಶ್ವಕ್ಕೆ ಭಾರತದ ಶಕ್ತಿ ಏನು ಎಂಬುದು ರವಾನೆಯಾಯಿತು. ಆ ಮೂಲಕ ಇಡೇ ದೇಶವೇ ಹೆಮ್ಮೆಪಡುವಂತೆ ನಮ್ಮ ವಿಜ್ಞಾನಿಗಳು ಸಾಧನೆ ಮಾಡಿದ್ದರು.

ಭಾರತ ಮೊದಲ ಸರಣಿಯ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ ಹಿನ್ನೆಲೆಯಲ್ಲಿ ವಿಶ್ವದ ಇತರೆ ರಾಷ್ಟ್ರಗಳು ಭಾರತಕ್ಕೆ ದಿಗ್ಭಂಧನಗಳನ್ನು ಹಾಕಿದ್ದವು. ಆದರೆ ಇದಕ್ಕೆ ಜಗ್ಗದ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಏಪ್ರಿಲ್ 13 ರಂದು ಮತ್ತೊಂದು ಪರೀಕ್ಷೆಗೆ ಮುಂದಾಗಿ, ತನ್ನ ಗುಂಡಿಗೆ ಎಂತಹದು ಎಂಬುದನ್ನು ಸಾಬೀತುಪಡಿಸಿದರು. ಒಂದು ವೇಳೆ ನಾವು ಆಗ ದುರ್ಬಲ ಪ್ರಧಾನಿಯನ್ನು ಹೊಂದಿದ್ದರೆ, ಆ ದಿನ ಭಯಗೊಂಡು ಈ ಪರೀಕ್ಷೆಯಿಂದ ಅವರು ದೂರ ಉಳಿಯುತ್ತಿದ್ದರು. ಆದರೆ ಅಟಲ್ ಜಿ ಅವರು ವಿಭಿನ್ನವಾದರು.

ಈ ಪರೀಕ್ಷೆಗೆ ಅತ್ಯುತ್ತಮ ಸಹಕಾರ ನೀಡಿದ ಪೊಖ್ರಾನ್ ಪ್ರದೇಶದ ಜನರಿಗೆ ನಿಜಕ್ಕೂ ಪ್ರಶಂಸೆ ಸಲ್ಲಲೇಬೇಕು. ಇಡೀ ಪರೀಕ್ಷೆ ಪೂರ್ಣಗೊಳ್ಳುವವರೆಗೂ ಅಲ್ಲಿನ ಜನರು ಯಾವುದೇ ಚಕಾರ ಎತ್ತಲಿಲ್ಲ. ಆ ಜನರು ತಮಗಿಂತ ದೇಶದ ಹಿತಾಸಕ್ತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದರು.’

Leave a Reply