ದ್ವಿತೀಯ ಪಿಯು ಫಲಿತಾಂಶ: ಪರೀಕ್ಷೆ ಬಿಗುಗೊಂಡಿದ್ದೇ ಕುಸಿತಕ್ಕೆ ಕಾರಣವೇ? ಉಡುಪಿ ಫಸ್ಟ್- ಬೀದರ್ ಲಾಸ್ಟ್

ಡಿಜಿಟಲ್ ಕನ್ನಡ ಟೀಮ್:

2016-17ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಶೇ.52.38 ರಷ್ಟು ವಿದ್ಯಾರ್ಥಿಗಳು ಮಾತ್ರ ತೇರ್ಗಡೆ ಹೊಂದಿದ್ದಾರೆ. ಜಿಲ್ಲಾವಾರು ಫಲಿತಾಂಶದಲ್ಲಿ ಉಡುಪಿ ಶೇ.90.01ರಷ್ಟು ಫಲಿತಾಂಶ ಪಡೆದು ಆಗ್ರಸ್ಥಾನದಲ್ಲಿದೆ.

ಈ ಬಾರಿ ಪರೀಕ್ಷೆಯಲ್ಲಿ ಅಕ್ರಮಗಳನ್ನು ತಡೆಯಲು ಬಿಗಿಗೊಳಿಸಿದ್ದೆ ಫಲಿತಾಂಶ ಕುಸಿತಕ್ಕೆ ಕಾರಣವೆ? ಹೌದೆನ್ನುವ ಉತ್ತರ ಬಂದಿದ್ದು ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರಿಂದಲೇ. ‘ಈ ಬಾರಿ ಪರೀಕ್ಷೆಗಳನ್ನು ಅತ್ಯಂತ ಕಟ್ಟುನಿಟ್ಟಾಗಿ ಅಕ್ರಮಕ್ಕೆ ಎಡೆ ಇಲ್ಲದಂತೆ ಮಾಡಲಾಗಿತ್ತು. ಹಾಗಾದರೆ ಈ ಹಿಂದೆ ಅಕ್ರಮಗಳಿಗೆ ಅವಕಾಶ ಇತ್ತೇ ಎಂದು ಕೇಳಬೇಡಿ. ಹಿಂದೆ ನಡೆದಿದ್ದನ್ನು ಸಮರ್ಥಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ. ಅದು ಎಲ್ಲರಿಗೂ ತಿಳಿದಿದೆ’ ಎಂದೆನ್ನುವ ಮೂಲಕ ಪರೀಕ್ಷೆ ಬಿಗುವಾಗಿದ್ದೇ ಫಲಿತಾಂಶ ಕುಸಿತಕ್ಕೆ ಕಾರಣ ಎಂದು ಪರೋಕ್ಷವಾಗಿ ಸೂಚಿಸಿದರು ಸಚಿವರು.

ಗುರುವಾರ ಮಧ್ಯಾಹ್ನ ಮಲ್ಲೇಶ್ವರಂನಲ್ಲಿರುವ ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಫಲಿತಾಂಶ ಪ್ರಕಟಿಸಿದರು. ಈ ಬಾರಿ 6,79,0681 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 3,55,697 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಕಳೆದ ವರ್ಷ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಶೇ.57.20 ಯಷ್ಟು ಫಲಿತಾಂಶ ದಾಖಲಾದರೆ, ಈ ವರ್ಷ ಶೇ.52.38 ರಷ್ಟು ಫಲಿತಾಂಶದೊಂದಿಗೆ ಕುಸಿತ ಕಂಡಿದೆ.

ಜಿಲ್ಲಾವಾರು ಫಲಿತಾಂಶದಲ್ಲಿ ಉಡುಪಿ ಅಗ್ರಸ್ಥಾನ ಪಡೆದರೆ, ದಕ್ಷಿಣ ಕನ್ನಡ (89.92) ದ್ವಿತೀಯ ಹಾಗೂ ಉತ್ತರ ಕನ್ನಡ (71.99) ತೃತೀಯ ಸ್ಥಾನವನ್ನು ಪಡೆದಿದೆ. ಇನ್ನು ಬೀದರ್ (42.05) ಕಡೆಯ ಸ್ಥಾನ ಪಡೆದಿದೆ. ಇನ್ನು 132 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಕಂಡುಬಂದಿರುವುದು ಕಳಪೆ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ. ಈ ಬಾರಿ 45,983 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಫಲಿತಾಂಶ ಪಡೆದರೆ, 1,92,012 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ವಿಭಾಗವಾರು ಫಲಿತಾಂಶದಲ್ಲಿ ವಿಜ್ಞಾನ ವಿಭಾಗದಲ್ಲಿ (60.71), ವಾಣಿಜ್ಯ (60.09) ಹಾಗೂ ಕಲಾ (35.05) ರಷ್ಟು ಫಲಿತಾಂಶ ಬಂದಿದೆ. ಈ ಪರೀಕ್ಷೆಯಲ್ಲಿ ಫೇಲ್ ಆದ ವಿದ್ಯಾರ್ಥಿಗಳಿಗೆ ಜೂನ್ 28ರಿಂದ ಜುಲೈ 8ರವರೆಗೆ ಪೂರಕ ಪರೀಕ್ಷೆ ನಡೆಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಇನ್ನು ಉತ್ತರ ಪತ್ರಿಕೆ ನಕಲು ಪಡೆಯಲು ಮೇ 19ರಂದು ಕಡೇಯ ದಿನಾಂಕವಾಗಿದ್ದು, ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಮೇ 24 ಅಂತಿಮ ದಿನವಾಗಿದೆ. ಇನ್ನು ಪೂರಕ ಪರೀಕ್ಷೆಯ ಶುಲ್ಕ ಪಾವತಿಗೆ ಜೂನ್ 23 ಕೊನೆಯ ದಿನವಾಗಿದೆ.

ಫಲಿತಾಂಶವನ್ನು ಈ ವೆಬ್ ಸೈಟ್ ನಲ್ಲಿ ಪಡೆಯಬಹುದು. pue.car.nic.in

Leave a Reply