ಸುಪ್ರೀಂನಲ್ಲಿ ತ್ರಿವಳಿ ತಲಾಖ್ ವಿಚಾರಣೆ ಆರಂಭ: ಇದಕ್ಕೂ ಮುಂಚೆ ಹನುಮಂತಗೆ ಮೊರೆಯಿಟ್ಟರು ಮುಸ್ಲಿಂ ಮಹಿಳೆಯರು!

 

ಡಿಜಿಟಲ್ ಕನ್ನಡ ಟೀಮ್:

ಇಂದು ಸುಪ್ರೀಂಕೋರ್ಟಿನಲ್ಲಿ ತ್ರಿವಳಿ ತಲಾಖ್ ಕುರಿತ ವಿಚಾರಣೆ ಆರಂಭವಾಗಿದೆ. ಐದು ಸದಸ್ಯರ ನ್ಯಾಯಪೀಠದಲ್ಲಿ ಪ್ರತಿಯೊಬ್ಬರೂ ಬೇರೆ ಬೇರೆ ಮತಗಳಿಂದ ಬಂದವರಾಗಿರುವುದು ವಿಶೇಷ.

ತ್ರಿವಳಿ ತಲಾಖ್ ಎಂಬುದು ಇಸ್ಲಾಂಗೆ ಮೂಲಭೂತವಾದುದೋ ಇಲ್ಲವೋ ಎಂಬುದನ್ನು ಪರಿಶೀಲಿಸುತ್ತೇವಾಗಲೀ, ಇದು ಬಹುಪತ್ನಿತ್ವದ ಬೇಕು-ಬೇಡದ ಬಗ್ಗೆ ಅಲ್ಲ ಎಂದು ಮುಖ್ಯ ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದ್ದಾರೆ.

ಕಟ್ಟರ್ ಇಸ್ಲಾಂ ರಾಷ್ಟ್ರಗಳಲ್ಲೇ ತಲಾಖ್ ಪದ್ಧತಿ ಇಲ್ಲ, ಖುರಾನಿನಲ್ಲಿಯೂ ಇದರ ಉಲ್ಲೇಖವಿಲ್ಲ ಎಂಬುದು ಅರ್ಜಿದಾರ ಮುಸ್ಲಿಂ ಮಹಿಳಾ ಸಮೂಹದ ವಾದ. ಈ ಬಗ್ಗೆ ವಿಚಾರಣೆಯ ಹಕ್ಕೇ ಇಲ್ಲ ಎಂಬುದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ಮುಲ್ಲಾಗಳು ಹಾಗೂ ಅವರ ಪರ ವಕೀಲರಾದ ಕಾಂಗ್ರೆಸ್ಸಿಗ ಸಲ್ಮಾನ್ ಖುರ್ಷಿದ್, ಕಪಿಲ್ ಸಿಬಲ್ ಇವರೆಲ್ಲರ ವಾದ. ತ್ರಿವಳಿ ತಲಾಖ್ ಲಿಂಗ ತಾರತಮ್ಯ ಎಸಗುತ್ತದೆಯಾದ್ದರಿಂದ ಅದು ರದ್ದಾಗಬೇಕು ಎಂದು ಕೇಂದ್ರ ತನ್ನ ಪ್ರತಿಕ್ರಿಯೆಯಲ್ಲಿ ತಿಳಿಸಿದೆ.

ಇವೆಲ್ಲವನ್ನಿಟ್ಟುಕೊಂಡು ಶುರುವಾಗಿರುವ ಸುಪ್ರೀಂಕೋರ್ಟ್ ವಿಚಾರಮೆ ಒಂದೆಡೆಯಾದರೆ, ಇದಕ್ಕೆ ಒಂದು ದಿನ ಮೊದಲು, ಅಂದರೆ ಬುಧವಾರ, ‘ಮುಸ್ಲಿಂ ಮಹಿಳಾ ಫೌಂಡೇಶನ್’ನ ಮಹಿಳಾಮಣಿಗಳು ವಾರಾಣಸಿಯ ಸಂಕಟಮೋಚನ ಹನುಮಾನ್ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದು ವಿಶೇಷ.

ತ್ರಿವಳಿ ತಲಾಖ್ ಪದ್ಧತಿಯಿಂದ ತಮಗೆ ವಿಮೋಚನೆ ಸಿಗಲಿ ಎಂದು ಈ ಮುಸ್ಲಿಂ ಮಹಿಳೆಯರು ಹನುಮಾನ್ ಚಾಲೀಸಾ ಪಠಿಸುವ ಮೂಲಕ ಪ್ರಾರ್ಥಿಸಿಕೊಂಡರು. ‘ಈ ದೇವಾಲಯ ವಿಶೇಷವಾದದ್ದು. ಇಲ್ಲಿ ಹನುಮಾನ್ ಚಾಲೀಸಾವನ್ನು 100 ಬಾರಿ ಪಠಿಸಿದರೆ ಮನಕಾಮನೆಗಳು ಈಡೇರುವ ನಂಬಿಕೆ ಇದೆ. ಹಾಗೆಂದೇ ಸುಪ್ರೀಂ ವಿಚಾರಣೆ ಆರಂಭವಾಗುತ್ತಿರುವಾಗ ತೀರ್ಪು ನಮ್ಮ ಪರ ಬರಲೆಂದು ಪ್ರಾರ್ಥಿಸಿಕೊಳ್ಳುತ್ತಿದ್ದೇವೆ’ ಎಂದಿದ್ದಾರೆ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷೆ ನಜ್ನೀನ್ ಅನ್ಸಾರಿ.

ಈ ಕಾರ್ಯಕ್ರಮವನ್ನು ಸಂಘಟಿಸಿದ್ದು ಆರೆಸ್ಸೆಸ್ ನ ಕಾರ್ಯಕರ್ತರಾದ ಇಂದ್ರೇಶ್ ಕುಮಾರ್ ಅವರು. ಮುಸ್ಲಿಮರನ್ನು ಮೂಲಧರ್ಮಕ್ಕೆ ಕರೆತರುವ ಚಳವಳಿಯಲ್ಲಿ ಇಂದ್ರೇಶ್ ತೊಡಗಿಸಿಕೊಂಡಿದ್ದಾರೆಂಬುದು ಉಲ್ಲೇಖಾರ್ಹ.

Leave a Reply