ಡೆಲ್ಲಿ- ಗುಜರಾತ್ ಐಪಿಎಲ್ ಪಂದ್ಯ ಫಿಕ್ಸ್? ಬಂಧಿತ ಬುಕ್ಕಿಗಳು ಪೊಲೀಸರಿಗೆ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ಈ ಬಾರಿಯ ಐಪಿಎಲ್ ಟೂರ್ನಿಗೂ ಫಿಕ್ಸಿಂಗ್ ಕಳಂಕ ಅಂಟಿಕೊಳ್ಳುವ ಸೂಚನೆಗಳು ದಟ್ಟವಾಗುತ್ತಿವೆ. ಕಾರಣ, ಉತ್ತರ ಪ್ರದೇಶ ಪೊಲೀಸರು ಗುರುವಾರ ಕಾನ್ಪುರದ ಹೊಟೇಲ್ ಮೇಲೆ ದಾಳಿ ಮಾಡಿದ್ದು, ಮೂವರು ಬುಕ್ಕಿಗಳನ್ನು ಬಂಧಿಸಿದ್ದಾರೆ. ಈ ಬುಕ್ಕಿಗಳು ಪೊಲೀಸರಿಗೆ ನೀಡಿರುವ ಮಾಹಿತಿ ಪ್ರಕಾರ, ಇಬ್ಬರು ಗುಜರಾತ್ ಲಯನ್ಸ್ ಆಟಗಾರರು ಬುಕ್ಕಿಗಳ ಜತೆ ಸಂಪರ್ಕದಲ್ಲಿದ್ದರು.

ಈ ದಾಳಿಯ ವೇಳೆ ಪೊಲೀಸರು ಬಂಧಿತರಿಂದ ₹ 40.90 ಲಕ್ಷ ನಗದು ಹಾಗೂ ಐದು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದು, ಇವರ ವಿರುದ್ಧ ಬೆಟ್ಟಿಂಗ್ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತ ಬುಕ್ಕಿಗಳನ್ನು ಮುಂಬೈನ ಥಾನೆ ಮೂಲದ ರಮೇಶ್ ನಯನ್ ಶಾ, ಕಾನ್ಪುರ ಮೂಲದ ರಮೇಶ್ ಕುಮಾರ್ ಹಾಗೂ ವಿಕಾಸ್ ಚೌಹಾಣ್ ಎಂದು ಗುರುತಿಸಲಾಗಿದೆ.  ಶಾ ಮತ್ತು ವಿಕಾಸ್ ನನ್ನು ಕಾನ್ಪುರದ ಲ್ಯಾಂಡ್ ಮಾರ್ಕ್ ಹೊಟೇಲಿನಲ್ಲಿ ಬಂಧಿಸಲಾಗಿದ್ದು, ಇದೇ ಹೊಟೇಲಿನಲ್ಲಿ ಡೆಲ್ಲಿ ಹಾಗೂ ಗುಜರಾತ್ ತಂಡದ ಆಟಗಾರರು ತಂಗಿದ್ದರು. ಮತ್ತೊಬ್ಬ ರಮೇಶ್ ಕುಮಾರ್ ಎಂಬಾತ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಹೊಲ್ಡಿಂಗ್ಸ್ ಹಾಕುವ ಗುತ್ತಿಗೆ ಪಡೆದಿದ್ದು, ಈತನನ್ನು ಕ್ರೀಡಾಂಗಣದ ಆವರಣದಲ್ಲಿ ಬಂಧಿಸಲಾಗಿದೆ.

2013ರ ಬೆಟ್ಟಿಂಗ್ ಹಾಗೂ ಸ್ಪಾಟ್ ಫಿಕ್ಸಿಂಗ್ ಪ್ರಕರಣದಿಂದ ವಜಾಗೊಂಡ ಚೆನ್ನೈಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ಜಾಗಕ್ಕೆ ಗುಜರಾತ್ ಲಯನ್ಸ್ ತಂಡ ಅವಕಾಶ ಪಡೆದಿತ್ತು. ಈಗ ಗುಜರಾತ್ ತಂಡಕ್ಕೆ ಮೋಸದಾಟದ ಮಸಿ ಅಂಟಿಕೊಳ್ಳುವ ಆತಂಕ ಶುರುವಾಗಿದೆ.

ಬಂಧಿತ ರಮೇಶ್ ಶಾ ವಿಚಾರಣೆ ವೇಳೆ, ‘ತನ್ನ ಜತೆ ಇಬ್ಬರು ಗುಜರಾತ್ ಲಯನ್ಸ್ ತಂಡದ ಆಟಗಾರರು ಸಂಪರ್ಕದಲ್ಲಿದ್ದಾರೆ’ ಎಂದು ಬಾಯಿಬಿಟ್ಟಿದ್ದಾನೆ. ಅಲ್ಲದೆ ಬಂಟಿ ಎಂಬ ಹೆಸರಿನ ಮೂಲಕ ವಾಟ್ಸಪ್ ನಲ್ಲಿ ಕಳುಹಿಸಲಾದ ಮೆಸೇಜ್ ಗಳಲ್ಲಿ, ‘ಗುಜರಾತ್ ಲಯನ್ ತಂಡ 200ಕ್ಕೂ ಹೆಚ್ಚಿನ ರನ್ ಗಳಿಸಿದರೂ ಈ ಪಂದ್ಯವನ್ನು ಸೋಲಲಿದೆ’ ಎಂದು ಹೇಳಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಆ ಪಂದ್ಯದಲ್ಲಿ ಗುಜರಾತ್ ತಂಡ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿತ್ತು. ನಂತರ ಡೆಲ್ಲಿ ಡೇರ್ ಡೆವಿಲ್ಸ್ ತಂಡ 19.4 ಓವರ್ ಗಳಲ್ಲಿ 8 ವಿಕೆಟ್ ಗೆ 197 ರನ್ ಗಳಿಸಿ ಜಯ ಸಾಧಿಸಿತ್ತು. ಬುಕ್ಕಿಯ ವಾಟ್ಸಪ್ ಮೇಸೆಜ್ ಹಾಗೂ ಪಂದ್ಯದ ಫಲಿತಾಂಶಕ್ಕೆ ಹೋಲಿಕೆಯಾಗಿರುವುದು ಈ ಪಂದ್ಯ ಫಿಕ್ಸ್ ಆಗಿರುವ ಅನುಮಾನ ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಇದೇ ವೇಳೆ ಬುಕ್ಕಿಗಳ ಜತೆ ಸಂಪರ್ಕದಲ್ಲಿದ್ದ ಗುಜರಾತ್ ತಂಡದ ಆ ಇಬ್ಬರು ಆಟಗಾರರು ಯಾರು ಎಂಬುದರ ಬಗ್ಗೆ ಪೊಲೀಸರು ಯಾವುದೇ ಮಾಹಿತಿ ನೀಡದಿದ್ದರೂ ಸದ್ಯದಲ್ಲೇ ಆ ಇಬ್ಬರು ಆಟಗಾರರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿರುವುದಾಗಿ ಹಿಂದೂಸ್ಥಾನ ಟೈಮ್ಸ್ ವರದಿ ಮಾಡಿದೆ.

Leave a Reply