ಚೀನಿ ಪ್ರಭಾವಕ್ಕೆ ಸಿಲುಕಿರುವ ಶ್ರೀಲಂಕಾದಲ್ಲಿ ಮೋದಿಯ ಬುದ್ಧ ಮಾರ್ಗ ಹಾಗೂ ತಮಿಳು ದಾರಿ!

ಡಿಜಿಟಲ್ ಕನ್ನಡ ಟೀಮ್:

ಭಾರತದ ಪ್ರಧಾನಿ ನರೇಂದ್ರ ಮೋದಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದಾರೆ. ಮೋದಿ ಅವರ ಈ ಪ್ರವಾಸ ಭಾರತದ ಪಾಲಿಗೆ ಬಹಳ ಪ್ರಮುಖವೇ ಆಗಿದೆ. ಕಾರಣ, ಚೀನಾ ಪ್ರಭಾವದಲ್ಲಿರುವ ಶ್ರೀಲಂಕಾ ಜತೆಗೆ ಭಾರತ ತನ್ನ ಬಾಂಧವ್ಯ ಮರುಸ್ಥಾಪಿಸಿಕೊಳ್ಳುವ ಕಾರ್ಯ ಆರಂಭವಾಗಿದೆ. ಭಾರತದ ಈ ಕಾರ್ಯ ಕೈಗೂಡುವಂತೆ ಮಾಡಲು ಮೋದಿ ಆಯ್ಕೆ ಮಾಡಿಕೊಂಡಿದ್ದು ಬುದ್ಧ ಹಾಗೂ ತಮಿಳಿನ ಮಾರ್ಗವನ್ನು.

ಎರಡು ದಿನಗಳ ಲಂಕಾ ಪ್ರವಾಸ ಕೈಗೊಂಡಿರುವ ಮೋದಿ ಶುಕ್ರವಾರ ಕೊಲಂಬೊದಲ್ಲಿ ನಡೆದ ಪ್ರತಿಷ್ಠಿತ ಬೌದ್ಧ ಧರ್ಮದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಭೆಯಲ್ಲಿ ಮೋದಿ ಬುದ್ಧನ ಆದರ್ಶಗಳನ್ನು ನೆನಪಿಸುತ್ತಾ ಲಂಕನ್ನರ ಮನಗೆಲ್ಲುವ ಪ್ರಯತ್ನ ನಡೆಸಿದರು. ಈ ಸಭೆಯಲ್ಲಿ ಮೋದಿ ಹೇಳಿದ್ದು ಇಷ್ಟು…

‘ಭಾರತ ದೇಶ ಬುದ್ಧನ ಜನ್ಮಸ್ಥಾನ. ಮುಂದಿನ ಆಗಸ್ಟ್ ತಿಂಗಳಿನಿಂದ ಕೊಲಂಬೊದಿಂದ ನೇರವಾಗಿ ವಾರಣಾಸಿಗೆ ವಿಮಾನ ಸಂಚಾರ ಸೇವೆ ಆರಂಭಿಸಲಾಗುವುದು. ಆ ಮೂಲಕ ಬುದ್ಧನ ದೇಶಕ್ಕೆ ನೀವು ನೇರವಾಗಿ ತಲುಪಬಹುದು. ನಾನು ಬೌದ್ಧ ಧರ್ಮದ ಸಂದೇಶಗಳನ್ನು ನಂಬುತ್ತೇನೆ. ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಸೃಷ್ಟಿಯಾಗಿರುವ ಹಿಂಸಾಚಾರದ ವಾತಾವರಣದಲ್ಲಿ ಶಾಂತಿಯನ್ನು ಮರುಕಳಿಸಲು ಬೌದ್ಧ ಧರ್ಮದ ಸಂದೇಶಗಳು ಉತ್ತಮ ಮಾರ್ಗ. ವಿಶ್ವದ ಶಾಂತಿಗೆ ಇಂದು ದೊಡ್ಡ ಸವಾಲಾಗಿರುವುದು ದೇಶ ದೇಶಗಳ ನಡುವಣ ತಿಕ್ಕಾಟವಲ್ಲ, ಬದಲಿಗೆ ಹಿಂಸಾಚಾರ, ದ್ವೇಷದಂತಹ ಮನಸ್ಥಿತಿ. ಹೀಗಾಗಿ ಈ ಎಲ್ಲ ಸಮಸ್ಯೆಗಳಿಗೂ ಬೌದ್ಧ ಧರ್ಮದ ತತ್ವಗಳೇ ಉತ್ತರವಾಗಲಿವೆ.’

ಈ ಸಭೆಯ ನಂತರ ಭಾರತದ ಮೂಲದ ತಮಿಳು ನಾಗರೀಕರನ್ನು ಭೇಟಿ ಮಾಡಿದ ಪ್ರಧಾನಿ ಅವರೊಂದಿಗೆ ಮಾತುಕತೆ ನಡೆಸಿದರು. ನಂತರ ಕ್ಯಾಂಡಿಯಲ್ಲಿರುವ ಶ್ರೀ ದಲದ ಮಾಲಿಗವಾ ದೇವಸ್ಥಾನಕ್ಕೆ ಭೇಟಿ ನೀಡಿದರು.

ಮೋದಿ ಅವರ ಈ ಎರಡು ಹೆಜ್ಜೆಗಳು ಭಾರತಕ್ಕೆ ಮಹತ್ವದ್ದಾಗಿವೆ. ಅದು ಹೇಗೆ ಎಂಬುದನ್ನು ಹೀಗೆ ವಿಶ್ಲೇಷಿಸಬಹುದು… ಇತ್ತೀಚಿನ ದಿನಗಳಲ್ಲಿ ಶ್ರೀಲಂಕಾ ಮೇಲೆ ಚೀನಾ ಹಿಡಿತ ಹೆಚ್ಚಾಗುತ್ತಿರುವುದು ಗಮನಾರ್ಹ ಸಂಗತಿ. ಶ್ರೀಲಂಕಾದ ಬಂದರು ಅಭಿವೃದ್ಧಿಗೆ ಕೈ ಹಾಕಿರುವ ಚೀನಾ, ಕ್ರಮೇಣವಾಗಿ ಲಂಕಾ ಮೇಲೆ ಪರೋಕ್ಷವಾಗಿ ತನ್ನ ಹಿಡಿತ ಹೆಚ್ಚಿಸಿಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರಧಾನಿ ಮೋದಿ ಭೇಟಿ ಭಾರತ ಹಾಗೂ ಲಂಕಾ ನಡುವಣ ಬಾಂಧವ್ಯ ವೃದ್ಧಿಗೆ ಅನಿವಾರ್ಯವಾಗಿದೆ.

ಮೋದಿ ಅವರ ಭೇಟಿಯ ಬೆನ್ನಲ್ಲೇ ಚೀನಾಗೆ ನಿರಾಸೆಯೊಂದು ಎದುರಾಗಿದೆ. ಅದೇನೆಂದರೆ, ತನ್ನ ಜಲಾಂತರ್ಗಾಮಿಯನ್ನು ಲಂಕಾದ ಸಮುದ್ರ ತೀರದಲ್ಲಿ ನಿಲ್ಲಿಸಲು ಚೀನಾ ನಿರ್ಧರಿಸಿತ್ತು. ಆದರೆ ಶ್ರೀಲಂಕಾ ಈ ಕುರಿತ ತನ್ನ ನಿರ್ಧಾರವನ್ನು ಮುಂದೂಡಿದೆ. ಇದು ಸಹಜವಾಗಿಯೇ ಚೀನಾಗೆ ಹಿನ್ನಡೆ ಎಂದು ಹೇಳಬಹುದು. ಮೋದಿಯ ಭೇಟಿಯ ಸಂದರ್ಭದಲ್ಲಿನ ಈ ಬೆಳವಣಿಗೆ ದೊಡ್ಡ ಸಾಧನೆಯಲ್ಲದಿದ್ದರೂ ಚೀನಿಯರ ಬಿಗಿ ಹಿಡಿತಕ್ಕೆ ಸಿಗುತ್ತಿರುವ ಲಂಕಾದಲ್ಲಿ ಭಾರತ ತನ್ನ ಛಾಪು ಮೂಡಿಸಲು ಆರಂಭಿಸಿರುವುದು ನಮ್ಮೆಲ್ಲರ ಪಾಲಿಗೆ ಸಕಾರಾತ್ಮಕ ಬೆಳವಣಿಗೆ. ಸದ್ಯ ಇದು ಪ್ರಾರಂಭಿಕ ಹೆಜ್ಜೆಯಾಗಿದ್ದು, ಮುಂದಿನ ದಿನಗಳಲ್ಲಿ ಭಾರತ ತನ್ನ ನೀತಿಯ ಮೂಲಕ ಲಂಕಾ ಜತೆಗಿನ ಸಂಬಂಧವನ್ನು ಹೆಚ್ಚಿಸಿಕೊಳ್ಳುವ ಸವಾಲನ್ನು ಹೊಂದಿದೆ.

Leave a Reply