ತೆರಿಗೆ ವ್ಯಾಪ್ತಿಗೆ 91 ಲಕ್ಷ ಜನರ ಹೊಸ ಸೇರ್ಪಡೆ, ನೋಟು ಅಮಾನ್ಯ ನಿರ್ಧಾರದ ಸಮರ್ಥನೆಗೆ ಕೇಂದ್ರ ಸಿಕ್ತು ಹೊಸ ಅಸ್ತ್ರ

ಡಿಜಿಟಲ್ ಕನ್ನಡ ಟೀಮ್:

ಕಳೆದ ಹಣಕಾಸು ವರ್ಷದಲ್ಲಿ ತೆರಿಗೆ ವ್ಯಾಪ್ತಿಗೆ 91 ಲಕ್ಷ ಮಂದಿ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ ಎಂದು ಕೇಂದ್ರ ಸರ್ಕಾರದ ಮೂಲಗಳು ಮಾಹಿತಿ ನೀಡಿವೆ. 2015-16ನೇ ಸಾಲಿಗೆ ಹೋಲಿಕೆ ಮಾಡಿದರೆ 2016-17ನೇ ಸಾಲಿನಲ್ಲಿ ತೆರಿಗೆದಾರರ ಸಂಖ್ಯೆಯಲ್ಲಿ ಏಕಾಏಕಿ ಹೆಚ್ಚಳವಾಗಿದೆ. ಇದು ಸರ್ಕಾರಕ್ಕೆ ದೊಡ್ಡ ಯಶಸ್ಸಾಗಿದ್ದು, ಈ ಯಶಸ್ಸಿನ ಶ್ರೇಯವನ್ನು ಕೇಂದ್ರ ಸರ್ಕಾರ ತನ್ನ ನೋಟು ಅಮಾನ್ಯ ನಿರ್ಧಾರಕ್ಕೆ ನೀಡುತ್ತಿದೆ.

2015-16ನೇ ಸಾಲಿನಲ್ಲಿ ಭಾರತದ ತೆರಿಗೆದಾರರ ಸಂಖ್ಯೆ 5.59 ಕೋಟಿಯಷ್ಟಿತ್ತು. ಆದರೆ ಕಳೆದ ವರ್ಷ ಅಂದರೆ 2016-17ನೇ ಸಾಲಿನಲ್ಲಿ 91 ಲಕ್ಷ ಜನರು ಹೊಸದಾಗಿ ತೆರಿಗೆ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಆ ಮೂಲಕ ವರ್ಷದಿಂದ ವರ್ಷಕ್ಕೆ ಸರ್ಕಾರದ ತೆರಿಗೆದಾರರ ಹೆಚ್ಚಳ ಪ್ರಮಾಣದಲ್ಲಿ ಶೇ.80 ರಷ್ಟು ಏರಿಕೆಯಾಗಿದೆ.

ಆದರೆ ನೋಟು ಅಮಾನ್ಯದ ನಂತರ ತಿರುಗಿ ಬಂದ ನೋಟುಗಳೆಷ್ಟು ಎಂಬುದರ ಬಗ್ಗೆ ಆರ್ ಬಿಐ ಲೆಕ್ಕ ಕೊಟ್ಟಿಲ್ಲ. ನೋಟು ಅಮಾನ್ಯ ನಿರ್ಧಾರದಿಂದ ನಿಜಕ್ಕೂ ಹಣಕಾಸು ಲಾಭ ಆಗಿದೆಯೇ ಎಂಬುದಕ್ಕೆ ಸ್ಪಷ್ಟ ಉತ್ತರಗಳಿಲ್ಲ. ಇಂತಹ ಸಂದರ್ಭದಲ್ಲೇ ಈ ಮೇಲಿನ ಅಂಕಿ ಅಂಶಗಳನ್ನು ನೋಟು ಅಮಾನ್ಯ ನಿರ್ಧಾರದ ಯಶಸ್ಸು ಎಂದು ಹೇಳಲು ಸರ್ಕಾರ ಮುಂದಾಗಿದೆ.

ಈಗ ತೆರಿಗೆದಾರರ ಸಂಖ್ಯೆ ಹೆಚ್ಚಿರುವುದು ಕೇಂದ್ರ ಸರ್ಕಾರದ ಪಾಲಿಗೆ ಮಹತ್ವದ ಬೆಳವಣಿಗೆ. ಕಾರಣ, ನೋಟು ಅಮಾನ್ಯದ ನಿರ್ಧಾರದಿಂದ ಕಪ್ಪು ಹಣ ತಡೆಗಟ್ಟುವಿಕೆ, ನಕಲಿ ನೋಟಿನ ಹಾವಳಿ ತಡೆ, ಉಗ್ರರರಿಗೆ ಆರ್ಥಿಕ ನೆರವು ನಿಲ್ಲಿಸವಂತಹ ಪ್ರಮುಖ ಉದ್ದೇಶಗಳು ಈಡೇರಿಲ್ಲ ಎಂಬ ಟೀಕೆಗಳು ಹೆಚ್ಚಾಗುತ್ತಿದ್ದವು. ಈ ಸಂದರ್ಭದಲ್ಲಿ ತೆರಿಗೆದಾರರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗಿರುವುದು ನೋಟು ಅಮಾನ್ಯದ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ದೊಡ್ಡ ಕಾರಣ ಸಿಕ್ಕಂತಾಗಿದೆ. ಈ ಅಂಶವನ್ನು ಮುಂದಿಟ್ಟುಕೊಂಡು ಸರ್ಕಾರ ಈಗ ಟೀಕಾಕಾರರ ಬಾಯಿಗೆ ಬೀಗ ಹಾಕಲು ಸಜ್ಜಾಗಿದೆ.

ಕೇಂದ್ರ ಸರ್ಕಾರದ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, 2015-16ನೇ ಸಾಲಿನಲ್ಲಿ ತೆರಿಗೆದಾರರಿಗೆ ಸಂಬಂಧಿಸಿದ ಪ್ರಮುಖ ಅಂಕಿ ಅಂಶಗಳು ಹೀಗಿವೆ…

2015-16ನೇ ಸಾಲಿನಲ್ಲಿ 3.70 ಕೋಟಿ ಮಂದಿ ತೆರಿಗೆ ಮರುಪಾವತಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ 2016-17ನೇ ಸಾಲಿನಲ್ಲಿ (ಮೇ 3ರವರೆಗಿನ ಅಂಕಿ ಅಂಶ) 95 ಲಕ್ಷ ಮಂದಿ ತೆರಿಗೆ ಮರುಪಾವತಿಗಾಗಿ ಅರ್ಜಿ ಸಲ್ಲಿಸಿದ್ದಾರೆ. 2015-16ನೇ ಸಾಲಿನಲ್ಲಿ ತೆರಿಗೆ ಮರುಪಾವತಿ ಅರ್ಜಿ ಸಲ್ಲಿಸಿದ್ದವರ ಪೈಕಿ 99 ಲಕ್ಷ ಮಂದಿ ತಮ್ಮ ವಾರ್ಷಿಕ ಆದಾಯ ₹2.5 ಲಕ್ಷಕ್ಕಿಂತ ಕಡಿಮೆ ಇದೆ ಎಂದರೆ, 1.95 ಕೋಟಿ ಮಂದಿ ತಮ್ಮ ವಾರ್ಷಿಕ ಆದಾಯ ₹ 2.5 ಲಕ್ಷದಿಂದ ₹ 5 ಲಕ್ಷದವರೆಗೆ ಇರುವುದಾಗಿ ತೋರಿಸಿದ್ದರು. ಇನ್ನು 52 ಲಕ್ಷ ಮಂದಿ ತಮ್ಮ ಆದಾಯ ₹ 5 ರಿಂದ ₹ 10 ಲಕ್ಷದವರೆಗಿದೆ ಎಂದು ಹೇಳಿದರೆ, 24 ಲಕ್ಷ ಮಂದಿ ತಮ್ಮ ಆದಾಯ ₹ 10 ಲಕ್ಷಕ್ಕಿಂತ ಹೆಚ್ಚಿದೆ ಎಂದಿದ್ದರು.

ಇನ್ನು ₹ 5 ಲಕ್ಷಕ್ಕೂ ಹೆಚ್ಚು ಆದಾಯವಿರುವುದಾಗಿ ಮಾಹಿತಿ ನೀಡಿದ್ದ 76 ಲಕ್ಷ ಜನರ ಪೈಕಿ 56 ಲಕ್ಷ ಮಂದಿ ವೇತನ ಪಡೆಯುವ ವರ್ಗದವರಾಗಿದ್ದಾರೆ. ಈ ಎಲ್ಲದರ ನಡುವೆ ದೇಶದಾದ್ಯಂತ ವಾರ್ಷಿಕ ಆದಾಯ ₹ 50 ಲಕ್ಷಕ್ಕಿಂತ ಹೆಚ್ಚಿದೆ ಎಂದು ಘೋಷಿಸಿದವರ ಸಂಖ್ಯೆ ಮಾತ್ರ ಕೇವಲ 1.72 ಲಕ್ಷ ಮಾತ್ರ ಇತ್ತು. ಈಗ ನೋಟು ಅಮಾನ್ಯದ ನಿರ್ಧಾರದ ನಂತರ ತೆರಿಗೆದಾರರ ಸಂಖ್ಯೆ ಹೆಚ್ಚುವುದರ ಜತೆಗೆ ಈ ಮೇಲಿನ ತೆರಿಗೆ ವರ್ಗಕ್ಕೆ ಸೇರುವವರ ಸಂಖ್ಯೆಯೂ ಹೆಚ್ಚುವ ನಿರೀಕ್ಷೆ ಇದೆ. ಹೀಗೆ ನೋಟು ಅಮಾನ್ಯದ ನಿರ್ಧಾರದ ನಂತರ ತೆರಿಗೆದಾರರ ಸಂಖ್ಯೆ ಹೆಚ್ಚಾಗಿದ್ದು, ಸರ್ಕಾರದ ಬೊಕ್ಕಸದಲ್ಲಿ ತೆರಿಗೆ ಸಂಗ್ರಹದ ಪ್ರಮಾಣವೂ ಏರಿಕೆಯಾಗಲಿದೆ ಎಂಬುದು ಸರ್ಕಾರದ ವಾದ.

Leave a Reply