ಇಂಗ್ಲೆಂಡ್, ಸ್ಪೇನ್, ಪೋರ್ಚುಗಲ್, ರಷ್ಯಾಗಳ ಮೇಲೆ ಸೈಬರ್ ಬಾಂಬ್! ಡಿಜಿಟಲ್ ಇಂಡಿಯಾಕ್ಕೂ ಇದು ಎಚ್ಚರಿಕೆಯ ಗಂಟೆಯೇ?

ಡಿಜಿಟಲ್ ಕನ್ನಡ ಟೀಮ್:

ಬ್ರಿಟಿಷ್ ಆಸ್ಪತ್ರೆ ವ್ಯವಸ್ಥೆಯೇ ಅಲ್ಲೋಲಕಲ್ಲೋಲವಾಗಿದೆ. ಆಂಬುಲೆನ್ಸ್ ಗಳು ದಿಕ್ಕು ತಪ್ಪಿವೆ. ಮಾಹಿತಿಜಾಲ ತುಂಡರಿಸಿಹೋಗಿರುವ ಸಂದರ್ಭದಲ್ಲಿ ಎಲ್ಲವೂ ಇದ್ದೂ ಏನೂ ಇಲ್ಲದ ಕಗ್ಗತ್ತಲ ಅನುಭವ. ಜರ್ಮನಿಯ ರೈಲ್ವೆ ವ್ಯವಸ್ಥೆ ಅಂಧಕಾರದಲ್ಲಿ ಮುಳುಗಿದೆ. ಈ ದೇಶದ ಖಾಸಗಿ ಕೊರಿಯರ್ ವ್ಯವಸ್ಥೆ ಫೆಡೆಕ್ಸ್ ಪಾರ್ಶ್ವವಾಯು ಬಡಿಸಿಕೊಂಡಂತಾಗಿದೆ. ಸ್ಪೇನ್ ನತ್ತ ದೃಷ್ಟಿ ಹಾಯಿಸಿದರೆ ಅಲ್ಲಿನ ದೈತ್ಯ ದೂರಸಂಪರ್ಕ ಕಂಪನಿ ಟೆಲಿಫೋನಿಕಾ ಸೇವೆಯನ್ನು ಸ್ಥಗಿತಗೊಳಿಸಿದೆ. ಕಂಪ್ಯೂಟರ್ ಕೆಲಸಕ್ಕೆ ಬಾರದೇ ಸಧ್ಯಕ್ಕೆ ಎಲ್ಲ ನೌಕರರನ್ನು ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ.

ಇಷ್ಟಕ್ಕೂ ಆಗಿರುವುದು ಏನೆಂದಿರಾ? ಉಹುಂ.. ಇವರ್ಯಾರ ಮೇಲೂ ಬಾಂಬ್ ಬಿದ್ದಿಲ್ಲ. ಆದರೆ ಕಂಪ್ಯೂಟರ್ ವೈರಸ್ ದಾಳಿಯಾಗಿದೆ. ಆ ಮೂಲಕ, ಮೇಲೆ ವಿವರಿಸಿದ ರೀತಿಯಲ್ಲಿ ವ್ಯವಸ್ಥೆಗಳೆಲ್ಲ ಅಲ್ಲೋಲಕಲ್ಲೋಲವಾಗಿವೆ!  ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳು ಒಂದು ಕಡೆ, ಚೀನಾ/ ರಷ್ಯಾ ಮಿತ್ರ ರಾಷ್ಟ್ರಗಳೆಲ್ಲ ಒಂದು ಕಡೆಯಾಗಿ ಮೂರನೇ ಮಹಾಯುದ್ಧವಾಗುತ್ತದೆ ಅಂತ ನಾವೆಲ್ಲ ಲೆಕ್ಕಾಚಾರಗಳ ಕತೆ ಹೊಸೆಯುತ್ತಿರುವಾಗ, ಈ ಎಲ್ಲ ಸಮೀಕರಣಗಳಾಚೆ ಇಗೋ ಯುದ್ಧವೊಂದು ತೆರೆದುಕೊಂಡೇಬಿಟ್ಟಿದೆ.

ಇಲ್ಲಿ ಒಂದೇ ಒಂದು ಬುಲೆಟ್ ಸಹ ಸಿಡಿದಿಲ್ಲ. ಆದರೇನಂತೆ ಇಡೀ ವ್ಯವಸ್ಥೆ ಆತಂಕಕ್ಕೆ, ಅಸ್ತಿತ್ವದ ಪ್ರಶ್ನೆಗೆ ಸಿಲುಕಿಬಿಟ್ಟಿದೆ. ಈ ಯುದ್ಧದಲ್ಲಿ ಎದುರಾಳಿ ಯಾರೆಂದು ಸಹ ನೀವು ಗುರುತಿಸಲಾರಿರಿ. ಚೀನಾದವರೇ ಹಿಂಗೆಲ್ಲ ಮಾಡಿರುತ್ತಾರೆ ಅಂತ ಮಾತುಗಳು ಬರುತ್ತಿವೆಯಾದರೂ, ಖುದ್ದು ಚೀನಾದ ಕಂಪ್ಯೂಟರುಗಳು ವೈರಸ್ ತಗುಲಿಸಿಕೊಂಡಿವೆ. ಅತ್ತ ರಷ್ಯಾದ ಒಳಾಡಳಿತ ಖಾತೆಯ ಕಂಪ್ಯೂಟರುಗಳೆಲ್ಲವೂ ವೈರಸ್ ತಗುಲಿಸಿಕೊಂಡು ಕೈಚೆಲ್ಲಿ ಕುಳಿತಿವೆ! ಬರೋಬ್ಬರಿ 99 ರಾಷ್ಟ್ರಗಳ ಹಲವು ಅಂತರ್ಜಾಲ ವ್ಯವಸ್ಥೆಗಳಿಗೆ ಈ ವೈರಸ್ ಹುಣ್ಣು ತಗುಲಿದೆ. ಎಲ್ಲರಲ್ಲೂ ಆತಂಕ. ಕೈಕಟ್ಟಿರುವ ಸ್ಥಿತಿ.

ಆಗಿರುವುದೇನು?

ವೈರಸ್ ತಗುಲಿಕೊಂಡಿರುವ ಕಂಪ್ಯೂಟರ್ ಹಾಗೂ ದೂರಸಂಪರ್ಕ ವಿಭಾಗಗಳಿಗೆ ಕೆಲಸ ಮಾಡುವುದೇ ಸಾಧ್ಯವಾಗುತ್ತಿಲ್ಲ. ಅವರ ಕಂಪ್ಯೂಟರ್ ಪರದೆಯ ಮೇಲೆ ಒಂದು ಸಂದೇಶ ಬಂದು ಕುಳಿತಿದೆ. ಪ್ರತಿ ಕಂಪ್ಯೂಟರಿಗೆ 600 ಡಾಲರ್ ಮೊತ್ತವನ್ನು ಬಿಟ್ ಕಾಯಿನ್ ಮೂಲಕ ಪಾವತಿಸಿ, ಆಗ ಮಾತ್ರ ನಿಮ್ಮನ್ನು ವೈರಸ್ ಮುಕ್ತಗೊಳಿಸುತ್ತೇವೆ ಅಂತ. ಶಾಡೊ ಬ್ರೇಕರ್ಸ್ ಎಂಬ ಹೆಸರಿನ ಗುಂಪು ಹೀಗೊಂದು ಧಮಕಿ ಹಾಕಿದ್ದು ಎಫ್ಬಿಐ, ಐರೋಪ್ಯ ತನಿಖಾ ಸಂಸ್ಥೆಗಳೆಲ್ಲ ರಂಗಕ್ಕಿಳಿದು ಇದನ್ನು ಬಗೆಹರಿಸುವ ಯತ್ನದಲ್ಲಿವೆ. ಬೆಚ್ಚಿ ಬೀಳಿಸುವ ಅಂಶವೇನೆಂದರೆ, ಅಮೆರಿಕದ ರಾಷ್ಟ್ರೀಯ ಭದ್ರತಾ ಏಜೆನ್ಸಿಯಿಂದಲೇ ಈ ಹ್ಯಾಕಿಂಗ್ ಉಪಕರಣವನ್ನು ಕದ್ದು ಜಾಲಚೋರ ಉಗ್ರರು ಅದನ್ನು ಜಗತ್ತಿನ ಮೇಲೆ ಪ್ರಯೋಗಿಸಿದ್ದಾರೆ ಅಂತ ವಿಶ್ಲೇಷಿಸಲಾಗುತ್ತಿದೆ.

ಇದು ವಿಲನ್ ಯಾರು, ಯಾರು ಸುಭಗರು, ಇನ್ಯಾರು ನಾಟಕವಾಡುತ್ತಿದ್ದಾರೆ ಅಂತ ಗೊತ್ತಾಗದ ರೀತಿಯಲ್ಲಿ ತೆರೆದುಕೊಂಡಿರುವ ಹೊಸಬಗೆಯ ಯುದ್ಧ. ಎಲ್ಲವೂ ಅಂತರ್ಜಾಲ ಮತ್ತು ಗಣಕೀಕೃತ ವ್ಯವಸ್ಥೆಗೆ ಒಳಪಟ್ಟು ನಡೆಯುತ್ತಿರುವ ಈ ಯುಗದಲ್ಲಿ ಇಂಥ ದಾಳಿಗಳು ಇನ್ನೂ ವ್ಯಾಪಕವಾದರೆ ಜಗತ್ತಿನಲ್ಲಿ ಏಳಬಹುದಾದ ದಂಗೆ, ಜನಾಕ್ರೋಶಗಳನ್ನು ಊಹಿಸಿಕೊಳ್ಳಿ!

ನಾವೂ ಡಿಜಿಟಲ್ ಇಂಡಿಯಾ ಎನ್ನುತ್ತಿದ್ದೇವೆ. ಒಂದು ಆಧಾರ ನಂಬರಿನಲ್ಲಿ ನಮ್ಮೆಲ್ಲ ಶಕ್ತಿಯನ್ನು ಜಮೆಯಾಗಿರಿಸುವ ಮಾತನಾಡುತ್ತಿದ್ದೇವೆ. ಆಧುನಿಕರಾಗುವ ದೃಷ್ಟಿಯಿಂದ ಇವೆಲ್ಲ ಒಳ್ಳೆಯದೇ. ಆದರೆ ಇವತ್ತಿಗೆ ಪಾಶ್ಚಾತ್ಯರು ಎದುರಿಸುತ್ತಿರುವ ಸೈಬರ್ ದಾಳಿಯನ್ನು ನಾವೆದುರಿಸುವುದಕ್ಕೆ ಎಷ್ಟರಮಟ್ಟಿಗೆ ಶಕ್ತರಾಗಿದ್ದೇವೆ?

ಇದೀಗ ನಮ್ಮ ಮನದಲ್ಲಿ ಏಳಲೇಬೇಕಾದ ಆತಂಕಿತ ಪ್ರಶ್ನೆ.

Leave a Reply