ಪಾತಾಳ ಗಂಗೆ ಯೋಜನೆ ಬಗ್ಗೆ ಸಚಿವ ಎಚ್.ಕೆ ಪಾಟೀಲ್ ಕೊಟ್ಟ ಮಾಹಿತಿ ಏನು?

ಡಿಜಿಟಲ್ ಕನ್ನಡ ಟೀಮ್:

ಬರಗಾಲದ ಪರಿಸ್ಥಿತಿಯಲ್ಲಿ ನೀರಿನ ಪೂರೈಕೆ ಹಾಗೂ ಅಂತರ್ಜಲದ ಮಟ್ಟ ಸುಧಾರಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ‘ಪಾತಾಳ ಗಂಗೆ’ ಕಾರ್ಯಕ್ರಮದ ಮೂಲಕ ಅಂತರ್ಜಲ ಮೂಲಗಳ ಬಳಕೆ ಹಾಗೂ ಅವುಗಳ ಅಭಿವೃದ್ಧಿಗೆ ನಿರ್ಧರಿಸಿತ್ತು. ಆದರೆ ಈ ಯೋಜನೆಗೆ ಸಂಬಂಧಿಸಿದಂತೆ ಜಲ ತಜ್ಞರಲ್ಲಿಯೇ ಆಕ್ಷೇಪಗಳು ಕೇಳಿಬಂದಿದ್ದವು. ಈ ವಿಷಯವಾಗಿ ಮಾಧ್ಯಮಗಳಲ್ಲೂ ಚರ್ಚೆಗಳು ನಡೆದಿದ್ದವು. ಈಗ ಈ ಯೋಜನೆ ಕುರಿತಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್.ಕೆ ಪಾಟೀಲ್ ಪ್ರತಿಕ್ರಿಯೆ ನೀಡಿದ್ದು, ಅದು ಹೀಗಿದೆ…

‘ಯೋಗ್ಯವಾದ ನೀರಿದೆ ಎಂಬ ಖಾತರಿಯಾದ ಬಳಿಕವಷ್ಟೇ ಪಾತಳ ಗಂಗೆ ಕಾರ್ಯಕ್ರಮ ಅನುಷ್ಠಾನದ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ನೀರು ಇಲ್ಲದಿರುವ ಕಡೆಗಳಲ್ಲಿ 300 ರಿಂದ 800 ಮೀಟರ್ ವರೆಗೆ ದೊರಕುವ ಜಲ ಮೂಲವನ್ನು ಗುರುತಿಸಿ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುವುದು. ಭೂಮಿಯ ಒಳ ಭಾಗದಲ್ಲಿರುವ ನೀರನ್ನು ವಿಶೇಷ ತಂತ್ರಜ್ಞಾನದಿಂದ ಗುರುತಿಸಿ ಮೇಲೆತ್ತುವ ಯೋಜನೆ ಇದಾಗಿದೆ. ಸತತ ಬರಗಾಲ, ಕುಸಿದಿರುವ ಅಂತರ್ಜಲ, ಕುಡಿಯುವ ನೀರಿನ ಗಂಭೀರ ಸಮಸ್ಯೆ, ಜನರ ಬವಣೆಗಳನ್ನು ನೀಗಿಸಲು ಸರ್ಕಾರ ಪಾತಾಳ ಗಂಗೆ ಯೋಜನೆ ಕೈಗೊಳ್ಳುವ ಬಗ್ಗೆ ಮುಂದಾಲೋಚನೆ ನಡೆಸಿದೆ. ಕುಡಿಯುವ ನೀರಿನ ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಿದೆ. ಮಳೆಯೇ ಬಾರದಿದ್ದಾಗ ಜಲ ಮರುಪೂರಣ ಸಾಧ್ಯವಿಲ್ಲ. ಆದರೂ ನಿರಂತರವಾಗಿ ಅಂತರ್ಜಲ ಹೆಚ್ಚಿಸಲು ಜಲ ಮರುಪೂರಣ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ.’

Leave a Reply