ಶಿಕ್ಷಣ ಸುಧಾರಣೆ ಕುರಿತು ಪ್ರಕಾಶ್ ಜಾವಡೇಕರ್ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್:

‘ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಕೌಶಲ್ಯಾಧಾರಿತ ಶಿಕ್ಷಣ ನೀಡುವ ಅಗತ್ಯ ಇದೆ. ಇದಕ್ಕೆ ಸರ್ಕಾರ ಮುಂದಾಗಿದ್ದು, ಈ ಪ್ರಯತ್ನ ರಾಷ್ಟ್ರದ ಹಿತಕ್ಕಾಗಿಯೇ ಹೊರತು ಪಕ್ಷದ ಹಿತಕ್ಕೆ ಅಲ್ಲ’ ಎಂದಿದ್ದಾರೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್.

ಕೇಂದ್ರ ಮಾನವ ಸಂಪನ್ಮೂಲ, ಶಿಕ್ಷಣ ಇಲಾಖೆ ಹಾಗೂ ಸಾಕ್ಷರತೆ ಮಿಷನ್ ನಿಂದ ಏರ್ಪಡಿಸಲಾಗಿದ್ದ ದಕ್ಷಿಣ ಪ್ರಾದೇಶಿಕ ಶಾಲೆಗಳಲ್ಲಿ ಉತ್ತಮ ಅನ್ವೇಷಣೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಹೇಳಿದಿಷ್ಟು…

‘ಪ್ರತಿಯೊಬ್ಬರಿಗೂ ಉತ್ತಮ ಶಿಕ್ಷಣ ನೀಡುವುದೇ ಕೇಂದ್ರ ಸರ್ಕಾರದ ಆದ್ಯತೆ. ಇದಕ್ಕಾಗಿ ಶಿಕ್ಷಕರು ಕೂಡ ಸುಧಾರಣೆಯಾಗಬೇಕು. ಶಿಕ್ಷಣ ಸಿಕ್ಕರೆ ಸಾಲದು, ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಕೌಶಲ್ಯಾಧಾರಿತ ಶಿಕ್ಷಣ ಕೊಡಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮುಂದಾಗಿದ್ದಾರೆ. ಕೂಲಿ ಕಾರ್ಮಿಕನ ಮಗನೊಬ್ಬ ಜೆಇಇನಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆಯುವುದು, ಕೂಲಿ ಮಾಡುತ್ತಿದ್ದ ಮಹಿಳೆಯೊಬ್ಬಳ ಮಗ ಐಎಎಸ್ ಪಡೆಯುವುದು ಉತ್ತಮ ಶಿಕ್ಷಣದಿಂದ ಮಾತ್ರ ಸಾಧ್ಯ. ಉತ್ತರ ಪ್ರದೇಶದಲ್ಲಿ ಪೌರ ಕಾರ್ಮಿಕರ ಹುದ್ದೆಗೆ ಎಂಜಿನಿಯರಿಂಗ್ ಸೇರಿದಂತೆ ಪದವಿ ಪಡೆದಿರುವವರು ಅರ್ಜಿ ಹಾಕಿದ್ದಾರೆ. ಅಂದರೆ ದೇಶದಲ್ಲಿ ಉದ್ಯೋಗಕ್ಕೆ ಎಷ್ಟು ಪ್ರಾಮುಖ್ಯತೆ ಇದೆ ಎಂಬುದನ್ನು ಇದರಿಂದ ಅರಿಯಬೇಕು.

ನಮ್ಮಲ್ಲಿ ಪೋಷಕರಿಗೆ ಸರ್ಕಾರಿ ಶಾಲೆಗಳೆಂದರೆ ಏನೂ ಹೇಳಿ ಕೊಡುವುದಿಲ್ಲ ಆಟ, ಊಟಕ್ಕೆ ಸೀಮಿತ ಎಂಬ ಮನೋಭಾವ ಇದೆ. ಖಾಸಗಿ ಶಾಲೆಗಳಲ್ಲಿ ಎಲ್ಲವೂ ಸಿಗುತ್ತದೆ ಎಂದು ಭಾವಿಸಿದ್ದಾರೆ. ಇಂತಹ ತಾರತಮ್ಯ ಹೋಗಬೇಕು. ಸರ್ಕಾರಿ ಶಾಲೆಗಳು ಕಳಪೆಯಾಗಿದೆ ಎಂಬುದನ್ನು ನಾನು ಅಲ್ಲಗೆಳೆಯುವುದಿಲ್ಲ. ಆದರೆ 7ನೇ ತರಗತಿಯಲ್ಲಿರುವ ವಿದ್ಯಾರ್ಥಿಗೆ 5ನೇ ತರಗತಿಯ ಪಠ್ಯ ಪುಸ್ತಕ ಓದುವುದಕ್ಕೆ ಬರುವುದಿಲ್ಲ, 6ನೇ ತರಗತಿಯಲ್ಲಿರುವ ವಿದ್ಯಾರ್ಥಿಗೆ 3ನೇ ತರಗತಿಯ ಗಣಿತದ ಲೆಕ್ಕ ಬಿಡಿಸಲು ಬರುವುದಿಲ್ಲ ಎಂಬ ಪರಿಸ್ಥಿತಿ ಹೋಗಲಾಡಿಸಬೇಕು.

ಬಿಎಡ್ ಮತ್ತು ಡಿಎಡ್ ಶಿಕ್ಷಣ ಸಂಸ್ಥೆಗಳು ಮಾರುಕಟ್ಟೆಗಳಾಗಿವೆ ಎಂಬ ಆರೋಪ ಕೇಳಿಬಂದಿತ್ತು. ಇಲ್ಲಿ ನಕಲಿ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ ಎಂಬ ದೂರುಗಳಿದ್ದವು. ಹೀಗಾಗಿ ಈ ವರ್ಷ ಒಂದೇ ಒಂದು ಹೊಸ ಬಿಎಡ್ ಮತ್ತು ಡಿಎಡ್ ತೆರೆಯಲು ಅವಕಾಶ ನೀಡಿಲ್ಲ. ಸಾಧ್ಯವಾದರೆ ಮುಂದಿನ ವರ್ಷವು ನೀಡುವುದಿಲ್ಲ.

ಒಂದರಿಂದ ಎಂಟನೇ ತರಗತಿವರೆಗೆ ಮಕ್ಕಳನ್ನು ಅನುತ್ತೀರ್ಣ ಮಾಡಬಾರದೆಂಬ ನಿರ್ಧಾರಕ್ಕೆ ಕೆಲವು ರಾಜ್ಯಗಳು ಒಪ್ಪಿಗೆ ಸೂಚಿಸಿದರೆ, ಮತ್ತೆ ಕೆಲವು ರಾಜ್ಯಗಳು ಅಸಮಾಧಾನ ವ್ಯಕ್ತಪಡಿಸಿದ್ದವು. ಈ ಸಂಬಂಧ ಕೇಂದ್ರ ಸರ್ಕಾರದ ಸಲಹಾ ಮಂಡಳಿಯಲ್ಲಿ ಚರ್ಚಿಸಿ, ಇನ್ನು ಮುಂದೆ ಆಯಾ ರಾಜ್ಯಗಳಿಗೆ ಈ ವಿಷಯ ಕುರಿತು ತೀರ್ಮಾನ ತೆಗೆದುಕೊಳ್ಳಲು ಅಧಿಕಾರ ನೀಡಲಾಗುವುದು. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಮಸೂದೆ ಅಂಗೀಕಾರ ಮಾಡಲಾಗುವುದು.

ಎಟಿಎಂ ಎಂದರೆ  ಎನಿ ಟೈಮ್ ಮನಿ ಎಂಬಂತೆ ಇನ್ನು ಮುಂದೆ ಎನಿ ಟೈಮ್ ಲರ್ನಿಂಗ್ ಮತ್ತು ಎನಿವೇರ್ ಲರ್ನಿಂಗ್ ಎಂಬ ಕಲ್ಪನೆಯೊಂದಿಗೆ ಶಿಕ್ಷಣವನ್ನು ಸುಧಾರಣೆ ಮಾಡಲಾಗುವುದು. ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಅವರ ಜವಾಬ್ದಾರಿ ಹೆಚ್ಚಾಗಿದೆ.’

Leave a Reply