ಮರುಭೂಮಿಯ ಗಾಳಿಯನ್ನು ಹಿಂಡಿ ನೀರು ತೆಗೆದ ಭೂಪರು, ಆಧುನಿಕ ಭಗೀರಥರು

ಮನುಷ್ಯನ ಜಾಯಮಾನವೇ ಹೀಗೆ. ಇರುವುದೆಲ್ಲವನ್ನು ಉಡಾಯಿಸಿ ಅನಂತರ ಪರದಾಡುವುದು. ಹೊಸ ಮೂಲಕ್ಕೆ ಕೈಹಾಕುವುದು-ಸೋಲು, ಗೆಲುವು ಆಮೇಲಿನ ಮಾತು. ನೀರಿನ ವಿಚಾರಕ್ಕೆ ಬಂದಾಗ ನಮ್ಮ ಕಣ್ಣೆದುರಿಗೆ ಎಷ್ಟೆಲ್ಲ ದೃಶ್ಯಗಳಿವೆ. ಬರ ಅಮರಿಸುತ್ತಿದೆ, ಜನ-ಜಾನುವಾರುಗಳು ನೀರಿಗಾಗಿ ಹಪಹಪಿಸುತ್ತಿರುವುದು ಪ್ರತಿವರ್ಷವೂ ಚಕ್ರವೇನೋ ಎನ್ನುವಷ್ಟು ಸರ್ವಸಾಮಾನ್ಯ ಆಗಿಬಿಟ್ಟಿದೆ. ಅಂತರ್ಜಲ ಪಾತಾಳಕ್ಕಿಳಿಯುತ್ತಿದೆ, ಸರ್ವಋತು ನೀರುಣಿಸಬೇಕಾದ ಹಿಮನದಿಗಳು ಹಿಂದೆ ಸರಿಯುತ್ತಿವೆ, ಮಳೆ ಸಕಾಲಕ್ಕೆ ಬರದೆ ಸತಾಯಿಸುತ್ತಿದೆ. ಇದು ನಮ್ಮ ಬವಣೆಯಷ್ಟೇ ಅಲ್ಲ, ಜಗತ್ತಿನ ಅನೇಕ ಭಾಗಗಳು ಅನುಭವಿಸುತ್ತಿರುವ ಸ್ಥಿತಿ.ಇನ್ನು ಅರಬ್ ರಾಷ್ಟ್ರಗಳ ಪರಿಸ್ಥಿತಿಯನ್ನಂತೂ ಹೇಳಬೇಕಾಗಿಯೇ ಇಲ್ಲ. ಅಲ್ಲಿ ಕುಡಿಯುವ ನೀರು ಪೆಟ್ರೋಲಿಗಿಂತಲೂ ಪ್ರಶಸ್ತ. ಹಣ ಎಷ್ಟಾದರೂ ಸರಿಯೇ, ಅದು ನೀರಿಗಾಗಿ ವ್ಯಯಮಾಡಲು ಸಿದ್ಧವಾಗಿದೆ. `ಸುತ್ತ ಬರಿಯೆ ನೀರೇ ಎಲ್ಲ, ಕುಡಿಯಲೊಂದು ಹನಿಯೂ ಇಲ್ಲ’ ಎಂದು ಕವಿ ಸ್ಯಾಮ್ಯುಯೆಲ್ ಕೊಲರಿಡ್ಜ್, ಸಾಗರದ ನೀರನ್ನು ಕುರಿತೇ ಬರೆದದ್ದು. ಈಗ ಸ್ವಲ್ಪ ಪರಿಸ್ಥಿತಿ ಬದಲಾಗಿದೆ ಎನ್ನಿ. ಪಾನಕ ಎಂದರೆ ಸಕ್ಕರೆ ನೀರು ತಾನೆ? ಹಾಗೆಯೇ ಸಾಗರ ಎಂದರೆ ಅದು ನೀರಲ್ಲ, ಉಪ್ಪು ಮಿಶ್ರಿತ ದ್ರಾವಣ ಎನ್ನುತ್ತಾರೆ ಕೆಮಿಸ್ಟ್ರಿ ಅಧ್ಯಾಪಕರು. ಸಾಗರದ ನೀರಿನಲ್ಲಿ ಅವೆಷ್ಟು ಪದಾರ್ಥಗಳು ವಿಲೀನವಾಗಿರುತ್ತವೆ ಎಂದು ಲೆಕ್ಕವಿಡುವುದೂ ಕಷ್ಟ. ವಿಶ್ವಸಂಸ್ಥೆ ಹೇಳುತ್ತದೆ `ನೀವು ಕುಡಿಯಲು ಬಳಸುವ ನೀರಿನಲ್ಲಿ ಒಂದು ಲೀಟರಿನಲ್ಲಿ 500 ಮಿಲಿಗ್ರಾಂಗಿಂತ ಹೆಚ್ಚು ಘನ ಪದಾರ್ಥಗಳು ವಿಲೀನವಾಗಿರಬಾರದು’ ಎಂದು. ಅದು ಸರಿ, ನಿಸರ್ಗ ಎಲ್ಲ ಕಡೆಯೂ ಈ ಅಳತೆಗೆ ಹೊಂದುವಂತೆ ನಮಗೆ ಕುಡಿಯುವ ನೀರನ್ನು ಕೊಡಬೇಕಲ್ಲ!

ಸಮುದ್ರ ನೀರಿನಲ್ಲಿ ಒಂದು ಲೀಟರಿನಲ್ಲಿ 10,000 ಮಿಲಿಗ್ರಾಂ ವಿಲೀನವಾದ ವಸ್ತುಗಳು ಇರುತ್ತವೆ ಎಂಬುದರ ಲೆಕ್ಕ ಸಿಗುತ್ತದೆ. ಇದನ್ನು ಕುಡಿಯಲು ಯೋಗ್ಯ ಮಾಡಬೇಕೆಂದರೆ ಭಾರಿ ಮೊತ್ತದ ಹಣಸುರಿದು ನಿರ್ಲವಣೀಕರಣದ ಸ್ಥಾವರವನ್ನು ಸ್ಥಾಪಿಸಬೇಕು. ಜಗತ್ತಿನಲ್ಲಿ ಸದ್ಯಕ್ಕೆ ಸುಮಾರು 18,500 ನಿರ್ಲವಣೀಕರಣ ಸ್ಥಾವರಗಳು ಹಗಲಿರುಳು ಕೆಲಸ ಮಾಡುತ್ತ 30 ಕೋಟಿ ಜನರ ಬಾಯಾರಿಕೆಯನ್ನು ತೀರಿಸುತ್ತಿದೆ ಎನ್ನುವುದು ಇನ್ನೊಂದು ಲೆಕ್ಕಾಚಾರ. ಸೌದಿ ಅರೇಬಿಯದ ರಾಸ್ ಆಲ್-ಖೈರ್ ಎಂಬಲ್ಲಿ ಪ್ರತಿದಿನ ಸಾಗರ ನೀರಿನ ನಿರ್ಲವಣೀಕರಣ ಮಾಡಿ 100 ಲಕ್ಷ ಘನಮೀಟರು ಕುಡಿಯುವ ನೀರಿನ ಉತ್ಪಾದನೆಯಾಗುತ್ತಿದೆ.

ಇದನ್ನೆಲ್ಲ ನೋಡಿದರೆ ಕುಡಿಯಬಹುದಾದ ನೀರು-ನದಿ ಹರಿಯುವ ಪ್ರದೇಶಗಳು ಶ್ರೀಮಂತ ಪ್ರದೇಶಗಳು. ಆದರೆ ನಿಸರ್ಗ ಇದರ ಜೊತೆಜೊತೆಗೆ ಮರುಭೂಮಿಯನ್ನೂ ಕೊಟ್ಟಿದೆಯಲ್ಲ! ಅಲ್ಲಿ ಜೀವಿಗಳು ಮಿತ ನೀರಿನಲ್ಲಿ ಬದುಕಬೇಕು. ಕೊಟ್ಯಂತರ ವರ್ಷಗಳಿಂದ ಅವೂ ಕೂಡ ತಂತ್ರ ಕಂಡುಕೊಂಡಿವೆ. ತಮ್ಮ ಅಂಗಾಂಗಗಳಲ್ಲೇ ಅನೇಕ ಮಾರ್ಪಾಟು ಮಾಡಿಕೊಂಡಿವೆ. ಕತ್ತಾಳೆ, ಕಳ್ಳಿ ಗಿಡಗಳನ್ನೇ ನೋಡಿ, ನೀರು ಹೆಚ್ಚು ಹೊರಹೋಗುವುದನ್ನು ತಪ್ಪಿಸಲು ಎಲೆಗಳೇ ಮುಳ್ಳಾಗಿಬಿಟ್ಟಿವೆ. ಕಾಂಡಗಳೇ ದ್ಯುತಿಸಂಶ್ಲೇಷಣ ಕ್ರಿಯೆಯನ್ನು ಜರುಗಿಸುತ್ತಿವೆ.

ಪರಿಸ್ಥಿತಿ ಹೀಗಿರುವಾಗ ಇಬ್ಬರು ವಿಜ್ಞಾನಿಗಳು ಮರುಭೂಮಿಯ ಗಾಳಿಯನ್ನೇ ಹಿಂಡಿ ನೀರು ತೆಗೆಯುವ ಸಾಹಸಕ್ಕೆ ಕೈಹಾಕಿ ಜೈ ಎನ್ನಿಸಿಕೊಂಡಿದ್ದಾರೆ. ಏನಿದು ತಂತ್ರ? ನಿಸರ್ಗದ ಸೂರ್ಯ ಶಾಖ ಈ ತಂತ್ರಕ್ಕೆ ಶಕ್ತಿಮೂಲ. ಗಾಳಿಯಲ್ಲಿ ಕಡಿಮೆ ನೀರಿನ ಅಂಶ (ಆದ್ರ್ರತೆ) ಇದ್ದರೂ ಚಿಂತೆ ಇಲ್ಲ, 12 ಗಂಟೆಗಳ ಕಾಲ ಪುಟ್ಟ ಯಂತ್ರದಲ್ಲಿ ಗಾಳಿ ಹಿಂಡಿ, ಅದರಿಂದ 2.8 ಲೀಟರು ನೀರು ಬಸಿದುಕೊಳ್ಳುವಂತೆ ರೂಪಿಸಲಾಗಿದೆ ಈ ಯಂತ್ರವನ್ನು. ಇದನ್ನು ರೂಪಿಸಿದವರು ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ರಸಾಯನ ವಿಜ್ಞಾನಿ ಒಮರ್ ಯಾಗಿ ಮತ್ತು ಮೆಸಾಚ್ಯುಸೆಟ್ ತಾಂತ್ರಿಕ ಸಂಸ್ಥೆಯ ಇವೆಲಿನ್ ವ್ಯಾಂಗ್. ಇವರನ್ನು ಭಗೀರಥ-ಭಾಗೀರಥಿ ಎನ್ನಬಹುದೇನೋ.

ನೀವು ಎಲ್ಲೋ ಸ್ಥಗಿತವಾಗಿಬಿಡುತ್ತೀರಿ. ನೀರಿನ ಮೂಲದಿಂದ ಅನಿವಾರ್ಯವಾಗಿ ದೂರ ಉಳಿಯುವ ಪರಿಸ್ಥಿತಿ ಬರುತ್ತದೆ. ಆದರೆ ಬದುಕಬೇಕಲ್ಲ! ಅಂಥ ಸ್ಥಿತಿ ಬಂದಾಗ, ಈ ಪುಟ್ಟ ಯಂತ್ರ ನಿಮ್ಮ ಜೀವವನ್ನು ಉಳಿಸುತ್ತದೆ ಎನ್ನುವ ನಂಬಿಕೆ ಈ ಇಬ್ಬರದ್ದು. ಈ ಯಂತ್ರದಲ್ಲಿ ಲೋಹ ನಿರ್ಮಿತವಾದ ಭಾಗಗಳಿವೆ. ಇದು ವಿಶಿಷ್ಟವೆನ್ನಿಸಿದರೂ ವಿಚಿತ್ರವಾದ್ದು. ಅಲ್ಯೂಮಿನಿಯಮ್ ಅಥವಾ ಮೆಗ್ನೀಸಿಯಂನ್ನು ಅಗ್ರ್ಯಾನಿಕ್ ಅಣುಗಳೊಡನೆ ಬಂಧಿಸುವಂತೆ ಮಾಡುತ್ತದೆ. ಅವೆಷ್ಟೋ ತರಹದ ಪದಾರ್ಥಗಳು ಹೊಸತಾಗಿ ಇದರಿಂದ ಉತ್ಪಾದನೆಯಾಗಿವೆ. ಕಾರ್ಖಾನೆಯ ಚಿಮಿಣಿಯಿಂದ ಬುಸ್ ಎಂದು ನುಗ್ಗುವ ಹೊಗೆಯಿಂದ ಹೊರಬರುವ ಕಾರ್ಬನ್ ಡೈ ಆಕ್ಸೈಡನ್ನು ಕೆಲವು ಲೋಹಗಳು ಹಿಡಿದಿಡುತ್ತವೆ. ಇನ್ನು ಕೆಲವು ತೈಲಾಗಾರದಲ್ಲಿ ಬೇರೆ ಬೇರೆ ಸ್ಥಿತಿಯಲ್ಲಿರುವ ತೈಲಗಳನ್ನು ಹಿಡಿದಿಡಬಲ್ಲವು.

ನೀರು ಹಿಡಿದಿಡಲು ಏನು ಉಪಾಯ ಮಾಡಿದ್ದಾರೆ? ಜಿಂರ್ಕೊನಿಯಂ ಮತ್ತು ಅಡಿಪಿಕ್ ಆಮ್ಲಕ್ಕೆ ನೀರಿನ ಬಾಷ್ಪವನ್ನು ಹಿಡಿದಿಡುವ ಗುಣವಿದೆ. ಪ್ರೊ. ಯಾಗಿ ಮತ್ತು ವ್ಯಾಂಗ್ ಜಂಟಿಯಾಗಿ ರೂಪಿಸಿರುವ ಈ ಪುಟ್ಟ ಯಂತ್ರದಲ್ಲಿ ಮೇಲೆ ರಂಧ್ರಮಯವಾದ ತೆಳು ಪದರವೊಂದಿದೆ. ಇದರ ಮೂಲಕ ಗಾಳಿ ಒಳಹೋಗಿ ನೀರಿನ ಅಣುಗಳು ಒಳಗೆ ಬಂಧವಾಗುತ್ತ ಹೋಗುತ್ತವೆ. ಸೌರ ಶಾಖದಲ್ಲಿ ಈ ಅಣುಗಳು ಸಾಂದ್ರಕದ (ಕಂಡೆನ್ಸರ್) ಕಡೆ ಹರಿಯುತ್ತವೆ. ಇಲ್ಲಿ ಅವು ದ್ರವರೂಪ ಪಡೆಯುತ್ತವೆ. ಇಷ್ಟನ್ನು ರೂಪಿಸಲು ಹಲವು ವರ್ಷ ಕೆಲಸ ಮಾಡಿದ್ದಾರೆ. ಸದ್ಯಕ್ಕೆ ಈ ಪುಟ್ಟ ಯಂತ್ರಕ್ಕೆ ಒಂದು ಮಿತಿಯಿದೆ. ಅದರ ತೂಕದ ಶೇ.20 ಭಾಗದಷ್ಟು ಮಾತ್ರ ನೀರಿನ ಅಣುಗಳನ್ನು ಹಿಡಿದಿಡಬಲ್ಲದು. ಮುಂದೆ ಇನ್ನಷ್ಟು ಅಭಿವೃದ್ಧಿಯಾದಂತೆ ಇದರ ಸಾಮರ್ಥ್ಯವೂ ಹೆಚ್ಚುತ್ತದೆ. ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದು ಎನ್ನುವುದೇ ಆಶಾಭಾವನೆಯನ್ನು ಮೂಡಿಸಿರುವ ವಿಚಾರ. ನಮ್ಮ ಗಾಂಧಿ ಹೇಳಿದ್ದೂ ಅಷ್ಟೇ: ವಿಜ್ಞಾನ ಸಮಾಜಮುಖಿಯಾಗಬೇಕು ಎಂದು. ಈ ಜೋಡಿ ತಜ್ಞರು ಮಾಡಿರುವುದೂ ಇದೇ ಕೆಲಸವನ್ನು. ಯಾರು ಸ್ಮರಿಸಲಿ, ಬಿಡಲಿ, ವಿಜ್ಞಾನಿಗಳಂತೂ ತಮ್ಮ ಬದುಕನ್ನಂತೂ ಸಂಶೋಧನೆಗೆ ಮುಡುಪಾಗಿಡುತ್ತಾರೆ; ನಾವೆಲ್ಲ ಅದರ ಫಲಾನುಭವಿಗಳು.

Leave a Reply