ಕದನ ಕುತೂಹಲ-2: ಫೇಸ್ಬುಕ್  ಗೂಗಲ್ ಎಲ್ಲವೂ ಸಮರದಲ್ಲಿ ಭಾಗಿ, ನಿಮಗಿಲ್ಲ ಇಲ್ಲಿ ತಪ್ಪಿಸಿಕೊಳ್ಳುವ ದಾರಿ!

ಸ್ವಾರಸ್ಯದ ವಿಚಾರಗಳು ಎಲ್ಲಿಂದ ಬಂದರೂ ಹೀರಿಕೊಳ್ಳಬೇಕಷ್ಟೆ. ಇದು ಭಾರತೀಯ ಸೇನೆಯ ನಿವೃತ್ತ ಕ್ಯಾಪ್ಟನ್ ರಘು ರಾಮನ್ ಹಲವೆಡೆಗಳಲ್ಲಿ ಮಾಡಿದ ಉಪನ್ಯಾಸ ಸಾರವಿದು. ಹತ್ತು ವರ್ಷ ಸೇನೆಯಲ್ಲಿ ಸೇವೆ, ಮುಂಬೈ ದಾಳಿ ನಂತರ ನ್ಯಾಟ್ ಗ್ರಿಡ್ ರಕ್ಷಣಾ ವ್ಯವಸ್ಥೆ ನಿರ್ಮಾಣದ ಹೊಣೆ, ಕಾರ್ಪೊರೇಟ್ ವಲಯದಲ್ಲಿ ದಶಕಗಳ ಸೇವೆ ಇವರ ಹಿನ್ನೆಲೆ. ಸೇನೆಯ ಕಾರ್ಯತಂತ್ರ-ನಿರ್ವಹಣ ಮಾದರಿ ಹಿನ್ನೆಲೆಯಲ್ಲಿ ಉದ್ಯಮ, ದಿನನಿತ್ಯದ ಬದುಕನ್ನು ನೋಡುವ ದೃಷ್ಟಿ ಇವರದ್ದು. ಇವರ ಆಂಗ್ಲ ಮಾತುಗಳ ಸರಣಿಯನ್ನು ರಮಾ ಎಂ ಎನ್  ಭಾವಾನುವಾದ ಮಾಡಿದ್ದಾರೆ. ಭವಿಷ್ಯದ ಯುದ್ಧಗಳ ರಣರಂಗವೆಲ್ಲಿ ಗೊತ್ತಾ? ನಿಮ್ಮ ಮನೆ (ನ) ಬಾಗಿಲಿನಲ್ಲಿ! ಎಂಬುದನ್ನು ಮೊದಲ ಕಂತಿನಲ್ಲಿ ಓದಿದ್ದಿರಿ. ಇದೀಗ ಈ ಉಪನ್ಯಾಸದ ಎರಡನೇ ಮತ್ತು ಕೊನೆ ಕಂತು.

ನಾವೆಲ್ಲಾ ತಾಂತ್ರಿಕ ತಿಳುವಳಿಕೆ ಉಳ್ಳವರು (ಟೆಕ್ಟಿಕಲಿ ಸ್ಯಾವಿ ) ಎಂದು ಪರಿಭಾವಿಸಿದ್ದೇವೆ.  ಫೇಸ್ ಬುಕ್, ಟ್ವಿಟ್ಟರ್, ಲಿಂಕ್ಡ್ ಇನ್ ಇವೆಲ್ಲ ನಮ್ಮ ಜೀವನದ ಅವಿಭಾಜ್ಯ ಅಂಗಗಳಂತೆ ಆಗಿದೆ.  ಆದರೆ ನಿಮಗಿದು ತಿಳಿದಿರಲಿ- ಫೇಸ್ ಬುಕ್ ಆಪ್ ಉಪಯೋಗಿಸುವ ಮೊದಲು ನಾವು ಆ ಸಂಸ್ಥೆಯ ನಿಯಮಗಳನ್ನು ಒಪ್ಪಿಕೊಂಡು ಸಹಿ ಮಾಡುತ್ತೇವೆ.  ಹಾಗೆ ಮಾಡಿದ ಕ್ಷಣದಿಂದ ನಮ್ಮ ಮೊಬೈಲ್ ಕಂಪ್ಯೂಟರ್ ಅಥವಾ ಯಾವುದೇ ಎಲೆಕ್ಟ್ರಾನಿಕ್ ಮಾಪನದಲ್ಲಿ ಸ್ಟೋರ್ ಆಗಿರುವ ಡೇಟಾ ಕೇವಲ ನಮ್ಮದಾಗಿ ಉಳಿಯುವುದಿಲ್ಲ.  ಅದು ಫೇಸ್ ಬುಕ್ ಸ್ವತ್ತು ಸಹ ಎಂದು ನಾವು ಒಪ್ಪಿಕೊಂಡಂತೆ.  ಗೂಗಲ್ ಡಾಕ್ಸ್ ಉಪಯೋಗಿಸಿ ರಚಿಸಿದ ನಮ್ಮ ಡಾಕ್ಯುಮೆಂಟ್ಸ್ ಗೂಗಲ್ ನ ಸ್ವತ್ತು.  ಅವನ್ನು ಅವರು ಎಲ್ಲಿ ಬೇಕೋ ಹೇಗೆ ಬೇಕೋ ತಿರುಚಿ ಉಪಯೋಗಿಸುವ ಹಕ್ಕು ನಾವು ಅವರಿಗೆ ಕೊಡುತ್ತೇವೆ.  ಒಂದೊಮ್ಮೆ ಜೆ ಕೆ ರೋಲಿಂಗ್ ಗೂಗಲ್ ಡಾಕ್ಸ್ ಉಪಯೋಗಿಸಿ ಹ್ಯಾರಿ ಪಾಟರ್ ಪುಸ್ತಕಗಳನ್ನು ಬರೆದಿದ್ದಾದರೆ ಅದು ಸಹ ಗೂಗಲ್ ಡಾಕ್ಸ್ ಸ್ವತ್ತಾಗುತಿತ್ತು !

ಫೇಸ್ ಬುಕ್ ನಲ್ಲಿ ನಮ್ಮ ಗೌಪ್ಯತೆ ಕಾಪಾಡಿಕೊಳ್ಳಲು ಸೆಟ್ಟಿಂಗ್ಸ್ ನಲ್ಲಿ 142 ಕಡೆ ಬದಲಾವಣೆ ಮಾಡಿಕೊಳ್ಳಬೇಕು.  ಆದಾಗ್ಯೂ ಫೇಸ್ ಬುಕ್ ಒಮ್ಮೆ ತನ್ನ ನೀತಿ ನಿಯಮಾವಳಿ (ಪಾಲಿಸಿ) ಬದಲಿಸಿದರೆ ನಾವು ಬದಲಿಸಿಕೊಂಡ ಸೆಟ್ಟಿಂಗ್ಸ್ ಎಲ್ಲ ಪುನಃ ಯಥಾಸ್ಥಿತಿಗೆ ಬಂದು ತಲುಪುತ್ತೆ.  ಹೀಗೆ ಫೇಸ್ ಬುಕ್ ತನ್ನ ಪಾಲಿಸಿ ಕನಿಷ್ಠ ತಿಂಗಳಿಗೊಮ್ಮೆ ಬದಲಾಯಿಸುತ್ತೆ.  ವಸ್ತುಸ್ಥಿತಿ ಹೀಗಿರುವಾಗ ಫೇಸ್ ಬುಕ್ ಬಳಕೆದಾರರು ತಮ್ಮ ಗೌಪ್ಯತೆ ಹೇಗೆ ಕಾಪಾಡಿಕೊಳ್ಳಬೇಕು?

ಇನ್ನೊಂದು ಸಣ್ಣ ಉದಾಹರಣೆ ತೊಗೊಳ್ಳಿ.  ಆಂಡ್ರಾಯ್ಡ್ ಮೊಬೈಲ್ ನಲ್ಲಿ ಟಾರ್ಚ್ ಉಪಯೋಗಿಸುವ ಸೌಲಭ್ಯ ಇದೆ. ಅದಕ್ಕೆ ಆ್ಯಪ್ ಡೌನ್ಲೊಡ್ ಮಾಡಿಕೊಳ್ಳಬೇಕು. ತಾಂತ್ರಿಕ ನಿಪುಣರು ಎಂದುಕೊಂಡಿರುವ  ನಾವು  ತಿಳಿದಂತೆ ಟಾರ್ಚ್ ಉಪಯೋಗಿಸಿದಾಗ ಮೊಬೈಲ್ ನ ಹಿಂದೆ ಇರುವ ಲೈಟ್ ಗೆ ಬ್ಯಾಟರಿಯ ಸಂಪರ್ಕ ಉಂಟಾಗಿ ದೀಪ ಹೊತ್ತಿಕೊಳ್ಳುತ್ತೆ ಎಂದು. ಆದರೆ ಇಲ್ಲಿ ನಡೆಯುವುದೇ ಬೇರೆ. ನಾವು ಟಾರ್ಚ್ ಅನ್ನು ನಮ್ಮ ಮೊಬೈಲ್ ನಲ್ಲಿ ಅಳವಡಿಸಿಕೊಳ್ಳಲು ಒಂದು ಒಪ್ಪಂದಕ್ಕೆ ಸಹಿ ಹಾಕುತ್ತೇವೆ. ಅದರ ಅನುಸಾರ ನಮ್ಮ ಸಂದೇಶಗಳನ್ನು ಓದಲು, ರವಾನೆ ಮಾಡುವುದಲ್ಲದೆ ನಮ್ಮ ಪರವಾಗಿ ಸಂದೇಶಗಳನ್ನು ಕಳುಹಿಸಲು, ನಮ್ಮ ಮೊಬೈಲ್ ಕ್ಯಾಮೆರಾ ಬಳಸಿಕೊಂಡು ಫೋಟೋ ಕ್ಲಿಕ್ಕಿಸಿ ಕಳಿಸಲು …. ಈ ರೀತಿ ಒಂದು ಮೊಬೈಲ್ ಫೋನ್ ಉಪಯೋಗಿಸಿ ನಾವು ಏನೆಲ್ಲಾ ಮಾಡಬಹುದೋ ಅದೆಲ್ಲವನ್ನು ಮಾಡುವ ಅಧಿಕಾರವನ್ನು ಕೇವಲ ಒಂದು ಒಪ್ಪಿಗೆಗೆ ಸಹಿ ಹಾಕುವುದರಿಂದ ಕೊಟ್ಟುಬಿಡುತ್ತೇವೆ.

ಮೈಕ್ರೋಸಾಫ್ಟ್, ಗೂಗಲ್, ಲಿಂಕ್ಡ್ ಇನ್, ಟ್ವಿಟ್ಟರ್, ಇನ್ಸ್ತಾಗ್ರಾಮ್  ಈ ಸಂಸ್ಥೆಗಳೆಲ್ಲದರಲ್ಲಿ ಒಂದು ಸಾಮ್ಯತೆ ಇದೆ.  ಇವೆಲ್ಲ ಪ್ರಿಸಂ ಎಂಬ ಪ್ರೋಗ್ರಾಮ್ ಜೊತೆಗೂಡಿವೆ.  ಪ್ರಿಸಂ ಅಮೆರಿಕದ NSA (ನ್ಯಾಷನಲ್ ಸೆಕ್ಯೂರಿಟಿ ಏಜನ್ಸಿ) ಯ ಭಾಗ.  ಪ್ರಿಸಂ ನ ಒಂದು ಪ್ರಾಜೆಕ್ಟ್ ಹೆಸರು ‘ಕೀಹೋಲ್’ ಎಂದು. ಸಾಮಾನ್ಯರ ಮಾತಿನಲ್ಲಿ ಪರಿಚಯಿಸುವುದಾದರೆ ಇದು ಮತ್ತೇನಲ್ಲ- ಗೂಗಲ್ ಅರ್ಥ್.  ಈ ಪ್ರಕಾರ ಜಗತ್ತಿನ ಎಲ್ಲ ಪ್ರದೇಶಗಳನ್ನೂ ಗುರುತಿಸಲಾಗಿದೆ. ಪೊಖ್ರಾನ್ ನಂಥ ನಿಷಿದ್ಧ ಸ್ಥಳಗಳನ್ನು ಗುರುತಿಸಲಾಗಿಲ್ಲ. ಆದರೆ ‘ಹೋಗಲಾಗದ ಜಾಗ’ ಎಂಬುದೂ ಸಹ ಮಾಹಿತಿಯೇ ಆಗುತ್ತದೆ.

ಅಂದಮೇಲೆ ಎಲ್ಲಿದೆ ಖಾಸಗಿತನ?

ಕೇವಲ ಒಂದೂವರೆ ಲಕ್ಷ ರುಪಾಯಿಗಳಲ್ಲಿ ಪೆಂಟಕಾಲ್ ಎಂಬ ಟವರ್ ನಿರ್ಮಿಸಿಕೊಳ್ಳಬಹುದು. ಆಗ ಸಮೀಪದ ಕಟ್ಟಡಗಳಿಂದ ಹೊರಹೋಗುವ, ಒಳಬರುವ ಸಂದೇಶಗಳೆಲ್ಲ ಅದರ ಮೂಲಕವೇ ಹೋಗುವಂತಾಗುತ್ತದೆ. ಆಗಾಗ ನಾವು ನ್ಯೂಕ್ಲಿಯರ್ ವಿಜ್ಞಾನಿಯೊಬ್ಬರು ಅನುಮಾನಾಸ್ಪದವಾಗಿ ಕಾಣೆಯಾಗಿದ್ದಾರೆ ಎಂಬ ಸುದ್ದಿ ಕೇಳುತ್ತೇವೆ.  ಇದರ ಹಿಂದಿನ ಮರ್ಮ ನೀವೇ ಅರ್ಥ ಮಾಡಿಕೊಳ್ಳಿ.  ಮಿಲಿಟರಿಯ ಒಂದು ತುಕುಡಿ ಒಂದು ಕ್ಯಾಂಪ್ ಬೇಸ್ ನಿಂದ ಇನ್ನೊಂದು ನೆಲೆಗೆ ಪಯಣ ಬೆಳೆಸಿದರೆ ಅದರ ಸುಳಿವು ಮಿಲಿಟರಿ ಹೆಡ್ ಕ್ವಾರ್ಟರ್ಸ್ ತಲುಪುವ  ಮುನ್ನ ಮೊಬೈಲ್ ಕಂಪನಿಗೆ ಗೊತ್ತಾಗುತ್ತೆ. 2012 ರಲ್ಲಿ ಫೇಸ್ ಬುಕ್ ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಒಂದು ಸಮೀಕ್ಷೆಗೆ ಗುರಿಮಾಡಿತು. ಒಟ್ಟು ಏಳು ಲಕ್ಷ ವಿದ್ಯಾರ್ಥಿಗಳನ್ನು ಎರಡು ಗುಂಪುಗಳಾಗಿ ಮಾಡಿ, ಒಂದು ಗುಂಪಿಗೆ ಸಕಾರಾತ್ಮಕ ಸಂದೇಶಗಳನ್ನು (ಒಂದು ಮಗು ಹೇಗೆ ಸುನಾಮಿಯ ಅಪ್ಪಳಿಕೆಯಿಂದ ತಪ್ಪಿಸಿಕೊಂಡಿತು… ಇತ್ಯಾದಿ) ಇನ್ನೊಂದು ಗುಂಪಿಗೆ ನಕಾರಾತ್ಮಕ ಸಂದೇಶಗಳನ್ನೇ (ಕೊಲೆ, ಭೂಕಂಪ, ದರೋಡೆ… ಹೀಗೆ)  ರವಾನಿಸಿತು.  ಸಮೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದ ಫೇಸ್ ಬುಕ್ ಹೆಮ್ಮೆಯಿಂದ ಹೇಳಿಕೊಂಡಿದ್ದು ಹೀಗೆ ” ಸಕಾರಾತ್ಮಕ ಫೀಡ್ ಗೆ ಸ್ಪಂದಿಸಿದ ವಿದ್ಯಾರ್ಥಿಗಳು ಆಶಾವಾದಿಗಳಾಗಿ, ಜಗತ್ತನ್ನೇ ಗೆಲ್ಲಬಲ್ಲೆವು ಎಂಬ ಮನಃ ಸ್ಥಿತಿ ಹೊಂದಿದರು.  ನಕಾರಾತ್ಮಕ ಫೀಡ್ ಸ್ವೀಕರಿಸಿದ ವಿದ್ಯಾರ್ಥಿಗಳು ಧೃತಿಗೆಟ್ಟು ಖಿನ್ನತೆಗೆ ಒಳಗಾಗಿದ್ದರು.  ಇದರಿಂದ ಸಾಮಾಜಿಕ ಮಾಧ್ಯಮಗಳು ಮನುಷ್ಯನ ಮನಸ್ಸನ್ನು ಹತೋಟಿಗೆ ತಂದುಕೊಳ್ಳಬಹುದು” ಎಂದು.  ಫೇಸ್ ಬುಕ್ ಈ ಸಮೀಕ್ಷೆ ನಡೆಸುವ ಮುನ್ನ , ಮೂರೂವರೆ ಲಕ್ಷ ನಕಾರಾತ್ಮಕ ಸಂದೇಶಗಳನ್ನು ಸ್ವೀಕರಿಸಿದ ವಿದ್ಯಾರ್ಥಿಗಳಲ್ಲಿ ಈಗಾಗಲೇ ಖಿನ್ನತೆಯ ಅಂಚಿನಲ್ಲಿರುವ ಮಂದಿ ಇದ್ದರೆ, ಅವರನ್ನು ಈ ಸಂದೇಶಗಳು ಮತ್ತಷ್ಟು ಪ್ರಪಾತಕ್ಕೆ ದೂಡಿ ಒಂದು ವಿಷಗಳಿಗೆಯಲ್ಲಿ ಆತ್ಮಹತ್ಯೆಯಂತಹ ನಿರ್ಧಾರಕ್ಕೂ ಬರಬಹುದಾದ ಸಾಧ್ಯತೆಗಳಿದೆ ಎಂದು ಫೇಸ್ ಬುಕ್ ಸಂಸ್ಥೆ ಯಾಕೆ ಯೋಚಿಸಲಿಲ್ಲ?.  ಇಷ್ಟಕ್ಕೂ ಈ ಸಮೀಕ್ಷೆ ನಡೆಸಲು ಫೇಸ್ ಬುಕ್ ಗೆ ಅಧಿಕಾರ ಕೊಟ್ಟವರ್ಯಾರು ? ಉತ್ತರ ಸರಳ.  ಫೇಸ್ ಬುಕ್ ನ ಬಳಕೆದಾರರು ಅವರು ಮಾಡುವ ಯಾವ ಸಮೀಕ್ಷೆಗಾದರು ಒಳಗಾಗಲು ನಾವು ಸಿದ್ಧ ಎಂದು ಸಹಿ ಹಾಕಿರುತ್ತಾರೆ.

ನಮ್ಮ ಮೊಬೈಲ್ ಕಂಪ್ಯೂಟರ್ ಗಳಲ್ಲಿ ಬಳಸಿರುವ ಚಿಪ್ ನಮ್ಮ ದೇಶದಲ್ಲಿ ತಯಾರಾದದ್ದಲ್ಲ, ನಾವು ಉಪಯೋಗಿಸುವ ಮೊಬೈಲ್ ಫೋನ್, ಕಂಪ್ಯೂಟರ್ ನಮ್ಮ ದೇಶದಲ್ಲಿ ಉತ್ಪಾದನೆಯಾಗೋಲ್ಲ, ನಮ್ಮ ಡೇಟಾ ಸ್ಟೋರ್ ಆಗಿರುವ ಕ್ಲೌಡ್ ಗಳು ನಮ್ಮ ರಾಷ್ಟ್ರದ್ದಲ್ಲ, ಡೇಟಾ ಹಾದುಹೋಗುವ ಪೈಪ್ ಲೈನ್ ಗಳು ಸರಾಸರಿ ನೂರಕ್ಕೆ ತೊಂಭತ್ತು ಭಾಗ ಯು ಎಸ್, ಯು ಕೆ, ( US, UK) ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ಮೂಲಕ ಹಾದು ಹೋಗುತ್ತೆ. ಇದು ಡಿಜಿಟಲ್ ಇಂಡಿಯಾದ ಅಡಿಪಾಯ!

ರಮಾ ಎಂ ಎನ್

Leave a Reply