ಕಪಿಲ್ ಮಿಶ್ರ ಹೇಳಿದ್ದು- ಒಂದಂತೂ ಸ್ಪಷ್ಟ; ಕೇಜ್ರಿವಾಲ್ ಭ್ರಷ್ಟ: ಆಪ್ ವಿರುದ್ಧ ಭ್ರಷ್ಟಾಚಾರ ಆರೋಪ ಮತ್ತು ಪ್ರತಿಕ್ರಿಯೆಗಳೇನು?  

 

ಡಿಜಿಟಲ್ ಕನ್ನಡ ಟೀಮ್:

ಆಮ್ ಆದ್ಮಿ ಪಕ್ಷದ ಅಮಾನತಾದ ಸದಸ್ಯ ಕಪಿಲ್ ಮಿಶ್ರ ಭಾನುವಾರ ಪತ್ರಿಕಾಗೋಷ್ಟಿಯಲ್ಲಿ ಪಕ್ಷದ ವಿರುದ್ಧ ಹವಾಲಾ ಮತ್ತು ಕಪ್ಪುಹಣದ ಆರೋಪ ಹೊರೆಸಿದ್ದಾರೆ. ಈ ಹಿಂದೆ, ಅರವಿಂದ ಕೇಜ್ರಿವಾಲ್ ಅವರು ಸತ್ಯೇಂದ್ರ ಜೈನ್ ರಿಂದ ₹2ಕೋಟಿ ಸ್ವೀಕರಿಸುತ್ತಿರುವುದನ್ನು ಕಣ್ಣಾರೆ ಕಂಡಿದ್ದಾಗಿ ಆರೋಪಿಸಿದ್ದರು.

ಕೆಲವು ಕಾಗದ ಪತ್ರಗಳೊಂದಿಗೆ ಮಿಶ್ರ ಇಂದು ನಡೆಸಿದ ಪತ್ರಿಕಾಗೋಷ್ಟಿ ಪ್ರಮುಖಾಂಶಗಳು.

– ಆದಾಯ ತೆರಿಗೆಯಲ್ಲಿ 5 ಸಾವಿರ ಡೊನೇಷನ್ ಎಂದು ತೋರಿಸಿರುವ ವ್ಯಕ್ತಿಗಳು ಆಪ್ ಗೆ ಕೋಟಿ ರುಪಾಯಿಗಳಷ್ಟು ಡೊನೇಷನ್ ನೀಡಿದ್ದಾರೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನಲ್ಲಿ ರಮೇಶ ಬೆಲಮಕೊಂಡ ಎಂಬ ದಾನಿಯನ್ನು ಹೆಸರಿಸಿ, ಅವರ ಡೊನೇಷನ್ ವಿವರಗಳನ್ನು ನೀಡಿದ್ದಾರೆ.

– ಒಂದೇ ವಿಳಾಸದಲ್ಲಿ 187 ಕಂಪನಿಗಳು ದಾಖಲಾಗಿವೆ. ಅವೆಲ್ಲವೂ ಆಪ್ ಗೆ ದೇಣಿಗೆ ನೀಡಿವೆ.

– ಅರ್ಧರಾತ್ರಿಯಲ್ಲಿ 50 ಲಕ್ಷ ರುಪಾಯಿಗಳ ಹೆಸರಿಲ್ಲದ ಚೆಕ್ ಆಪ್ ಗೆ ರಾತ್ರಿ 12 ಗಂಟೆಗೆ ಸಂದಾಯವಾಗಿದೆ. ನೋಟು ಅಮಾನ್ಯದ ವೇಳೆಯಲ್ಲಿ ಅವ್ಯವಹಾರ ಪತ್ತೆಯಾಗಿದ್ದ ಆಕ್ಸಿಸ್ ಬ್ಯಾಂಕಿನ ಬ್ರಾಂಚಿನದ್ದೇ ಚೆಕ್ ಇದಾಗಿದೆ.

– ರಾಘವ ಚಡ್ಡಾ, ಅಂಕಿತ್ ಸೇರಿದಂತೆ ಆಪ್ ನ ಹಲವರು ವಿದೇಶಿ ಪ್ರವಾಸಗಳನ್ನು ಮಾಡಿ ವೆಚ್ಚ ಮುಚ್ಚಿಟ್ಟಿದ್ದಾರೆ.

– ಆಪ್ ತಾನು ಪಡೆದಿರುವ ದೇಣಿಗೆ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವದಕ್ಕೂ ವಾಸ್ತವಕ್ಕೂ ಅಂತರವಿದೆ.

ಇವೆಲ್ಲವಕ್ಕೆ ಆಪ್ ಸಹ ಪತ್ರಿಕಾಗೋಷ್ಟಿ ನಡೆಸಿ ಪ್ರತಿಕ್ರಿಯಿಸಿದೆ. ಅದರ ನಿರಾಕರಣೆಯ ಸಾರವಿಷ್ಟು- ‘ಬಿಜೆಪಿ ಮತ್ತು ಪ್ರಧಾನಿ ಯಾವ ಆರೋಪಗಳನ್ನು ಆಪ್ ವಿರುದ್ಧ ಮಾಡಿಕೊಂಡು ಬಂದಿದ್ದರೋ ಅದನ್ನೇ ಕಪಿಲ್ ಮಿಶ್ರ ಪುನರುಚ್ಛರಿಸಿದ್ದಾರೆ. ಈ ಎಲ್ಲ ಆರೋಪಗಳಿಗೆ ಆಪ್ ಆದಾಯ ತೆರಿಗೆ ಇಲಾಖೆಗೆ ಆಗಲೇ ದಾಖಲೆ ಸಲ್ಲಿಸಿದೆ. ಬಿಜೆಪಿಯ ಬಳಿಯೇ ಎಲ್ಲ ತನಿಖಾ ಏಜೆನ್ಸಿಗಳಿದ್ದರೂ ಇದುವರೆಗೆ ಯಾವ ಆರೋಪಗಳನ್ನೂ ಸಾಬೀತು ಮಾಡಲಾಗಿಲ್ಲ. ವಿದೇಶ ಪ್ರವಾಸಗಳನ್ನು ವೈಯಕ್ತಿಕ ಖರ್ಚಿನಲ್ಲಿ ಮಾಡಲಾಗಿದೆ. ತನಿಖೆಯಿಂದ ಏನನ್ನೂ ಸಾಬೀತುಗೊಳಿಸಲಾಗದ ಬಿಜೆಪಿ, ಕಪಿಲ್ ಮಿಶ್ರಾರನ್ನು ಬಳಸಿಕೊಂಡು ಆಪ್ ವಿರುದ್ಧ ಕೆಟ್ಟ ಪ್ರಚಾರಕ್ಕೆ ತೊಡಗಿದೆ.’

Leave a Reply