ಅಮೆರಿಕವು ಉಲ್ಟಾ ಹೊಡೆದಿರುವ ಹೊತ್ತಿನಲ್ಲಿ ಚೀನಾ ವಿರುದ್ಧ ಭಾರತವೀಗ ಏಕಾಂಗಿ, ಒಂದು ರಸ್ತೆಯ ಚೀನಾ ಬೆಲ್ಟು ನಮಗೇಕೆ ಉರುಳು ಗೊತ್ತೇ?

 

ಚೈತನ್ಯ ಹೆಗಡೆ

 ಒನ್ ಬೆಲ್ಟ್, ಒನ್ ರೋಡ್… (ಒಬಿಒಆರ್)

ಇದು ಭವಿಷ್ಯದಲ್ಲಿ ಜಗತ್ತಿನ ಮೇಲಿನ ಪಾರಮ್ಯಕ್ಕೆ ಚೀನಾ ಹೊಸೆದಿರುವ ಕನಸು. ಭಾನುವಾರದಿಂದ ಎರಡು ದಿನಗಳವರೆಗೆ ಇದೇ ವಿಷಯದಲ್ಲಿ ಸಭೆ ನಡೆಸುತ್ತಿರುವ ಚೀನಾದ ಆಹ್ವಾನಕ್ಕೆ ಜಗತ್ತಿನ ಪ್ರಮುಖ ರಾಷ್ಟ್ರಗಳು, ಮುಖ್ಯವಾಗಿ ಏಷ್ಯದ ದೇಶಗಳೆಲ್ಲ ಆಗಲೆಂದು ಹೋಗಿ ಕುಳಿತಿವೆ. ಭಾರತ ಮಾತ್ರ ಇದು ತನ್ನ ಸಾರ್ವಭೌಮತೆಯ ಪ್ರಶ್ನೆ ಎಂದು ವಿರೋಧಿಸುವ ಮೂಲಕ ಯಾವ ಪ್ರತಿನಿಧಿಗಳನ್ನೂ ಕಳುಹಿಸದೇ ಹೊರಗುಳಿದಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತದ ಒಪ್ಪಿಗೆಯಿಲ್ಲದೇ ನಿರ್ಮಾಣವಾಗಲಿರುವ ಆರ್ಥಿಕ ಕಾರಿಡಾರ್ ಅನ್ನು ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲವಾದ್ದರಿಂದ ಭಾರತದ ಈ ನಡೆ ಸೂಕ್ತವೇ.

ಆದರೆ ನಮಗೆ ಇರಿಸುಮುರಿಸು ಎದುರಾಗಿರುವುದು ಅಮೆರಿಕದ ಕಡೆಯಿಂದ. ಚೀನಾದ ವಿಶ್ವ ಪಾರಮ್ಯಕ್ಕೆ ಎಡೆಮಾಡಿಕೊಡುವ ಈ ಯೋಜನೆಯನ್ನು ಅಮೆರಿಕ ಸಹಜವಾಗಿಯೇ ವಿರೋಧಿಸಿತ್ತು. ಆದರೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ರಾಗ ಬದಲಿಸಿ ‘ಅದೇನಾಗುತ್ತದೋ ನೋಡೋಣ, ನಮಗೂ ಲಾಭವಾದರೆ ಆಗಲಿ’ ಎಂಬ ಧಾಟಿಯಲ್ಲಿ ಒಬಿಒಆರ್ ಗೆ ತಮ್ಮ ಪ್ರತಿನಿಧಿಯನ್ನೂ ಕಳುಹಿಸಿದ್ದಾರೆ. ರಷ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಖುದ್ದು ಭಾಗವಹಿಸಿದ್ದಾರೆ. ನೆರೆಯ ಪಾಕಿಸ್ತಾನ ಮತ್ತು ಶ್ರೀಲಂಕಾದ ಮುಖ್ಯಸ್ಥರೂ ಖುದ್ದು ಭಾಗವಹಿಸಿದ್ದಾರೆ. ಅಲ್ಲಿಗೆ ವಿಶ್ವದ ದೈತ್ಯ ಶಕ್ತಿಗಳೆಲ್ಲ ಈ ವಿಷಯದಲ್ಲಿ ಒಂದೆಡೆಯಾದರೆ ಭಾರತ ಇನ್ನೊಂದೆಡೆ.

ದಕ್ಷಿಣ ಚೀನಾ ಸಮುದ್ರದ ವಿಚಾರದಲ್ಲಿ ಚೀನಾದ ಪಾರಮ್ಯವನ್ನು ವಿರೋಧಿಸುತ್ತಿದ್ದ ಅಮೆರಿಕ ಅಲ್ಲೆಲ್ಲ ತನ್ನ ವಿರೋಧದ ಧ್ವನಿಗೆ ಭಾರತದ ಸಹಾಯವನ್ನೂ ಪಡೆದಿದೆ. ಆದರೆ ಒಬಿಒಆರ್ ವಿಷಯಕ್ಕೆ ಬಂದಾಗ ಮಾತ್ರ ತನ್ನ ಮೊದಲಿನ ವಿರೋಧದ ಧ್ವನಿಯನ್ನೂ ಬದಲಿಸಿ ರಾಜಿಮಾರ್ಗದಲ್ಲಿ ನಿಂತುಬಿಟ್ಟಿದೆ. ಅಲ್ಲಿಗೆ ಅಮೆರಿಕದ ಪೌರುಷವೇನಿದ್ದರೂ ಅಫಘಾನಿಸ್ತಾನ ಮತ್ತು ಸಿರಿಯಾಗಳಲ್ಲಿ ಬಾಂಬ್ ಹಾಕಿ ಹಳೆ ಶಿಲ್ಕು ಖಾಲಿ ಮಾಡುವುದಷ್ಟೇ ಎಂದಾಯಿತು. ಇತಿಹಾಸ ಗಮನಿಸಿದರೂ ವಿಶ್ವಯುದ್ಧದಲ್ಲಿ ಅಮೆರಿಕ-ಚೀನಾಗಳೆಲ್ಲ ಒಂದೇ ಪಕ್ಷದಲ್ಲಿ ಸೆಣೆಸಿವೆ.

ಅದಿರಲಿ… ಏನಿದು ಒಬಿಒಆರ್? ಭಾರತಕ್ಕೇಕೆ ಇದನ್ನು ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂಬುದನ್ನು ತುಸು ಗಮನಿಸಬೇಕು. ಸಾಮ್ರಾಜ್ಯ ನಿರ್ಮಾಣವು ಚೀನಾದ ಜಾಯಮಾನ. ಹಾಗೆಂದೇ ಅದು ಇತಿಹಾಸವಾಗಿ ಉಳಿಯುವ ದೂರಗಾಮಿ ಯೋಜನೆಗಳಿಗೆ ಕೈಯಿಡುತ್ತಿದೆ. ಕ್ರಿಸ್ತಪೂರ್ವ 207ರ ಸಮಯದಲ್ಲಿ ಚೀನಾದ ಹಾನ್ ರಾಜಮನೆತನದ ಕಾಲದಲ್ಲಿ ವ್ಯಾಪಾರ ವಹಿವಾಟು ಯುರೋಪಿನವರೆಗೆ ರಸ್ತೆಮಾರ್ಗದಲ್ಲಿ ಹಬ್ಬಿಕೊಂಡಿತ್ತು. ಆಗಿನ ವೈಭವದ ವಹಿವಾಟು ರೇಷ್ಮೆಯಾಗಿತ್ತಾದ್ದರಿಂದ ಅದು ಸಿಲ್ಕ್ ರೂಟ್ ಅರ್ಥಾತ್ ರೇಷ್ಮೆ ಮಾರ್ಗ ಎಂದು ಪ್ರಸಿದ್ಧವಾಗಿತ್ತು. ಈ ಮಾರ್ಗವನ್ನು ಪುನರುಜ್ಜೀವಿಸುವ ಮೂಲಕ ಮತ್ತೆ ಆ ದಿನಗಳನ್ನು ಕಾಣುವ ಕನಸು ಚೀನಾದ್ದು. ಹಾಗೆಂದೇ ಬೃಹತ್ ಹೆದ್ದಾರಿ ಯೋಜನೆಯನ್ನು ಈ ಮಾರ್ಗದಲ್ಲಿ ಹಾಕಿಕೊಂಡಿದೆ. ಬರೀ ಈ ಹೆದ್ದಾರಿಯಾಗಿದ್ದರೆ ಅದು ನೆತ್ತಿ ಮೇಲಿನ ಗೆರೆಯಂತಿರುತ್ತಿತ್ತೇ ವಿನಃ ಬೆಲ್ಟ್ ಅನ್ನಿಸಿಕೊಳ್ಳುತ್ತಿರಲಿಲ್ಲ. ಚೀನಾದ ಮಹಾಯೋಜನೆಗೆ ಆಧಾರಭೂತವಾಗಿರುವುದು ಪಾಕಿಸ್ತಾನದ ಗ್ವಾದಾರ್ ಬಂದರಿನಿಂದ ಆ ದೇಶದ ಉದ್ದುದ್ದ ಸೀಳಿಕೊಂಡು ನಿರ್ಮಾಣವಾಗುವ ಆರ್ಥಿಕ ಕಾರಿಡಾರ್. ಈ ಬೃಹತ್ ಹೆದ್ದಾರಿ ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್-ಬಾಲ್ಟಿಸ್ತಾನಗಳನ್ನು ಹಾದು ಕ್ಸಿನಿಯಾಂಗ್ ಸೇರಿಕೊಳ್ಳುತ್ತದೆ ಹಾಗೂ ರೇಷ್ಮೆ ಮಾರ್ಗಕ್ಕೂ ಜೋಡಿಸಿಕೊಳ್ಳುತ್ತದೆ. ಇತ್ತ ಅರಬ್ಬಿ ಸಮುದ್ರ/ ಹಿಂದು ಮಹಾಸಾಗರಗಳಲ್ಲೂ ಚೀನಾದ ನೌಕಾಬಲ ಇದ್ದೇ ಇದೆ. ಈ ಎಲ್ಲ ಗೆರೆಗಳನ್ನು ಸೇರಿಸುತ್ತ ಹೋದರೆ ಚೀನಾದ ‘ಬೆಲ್ಟ್’ ಏನೆಂಬುದರ ಚಿತ್ರಣ ಸಿಗುತ್ತದೆ.

ಬೇರೆ ದೇಶಗಳ ಪಾಲಿಗೆ ಈ ಬೆಲ್ಟ್ ಏನನಿಸುವುದೋ, ಆದರೆ ಕಾರ್ಯತಂತ್ರ ದೃಷ್ಟಿಯಿಂದ ಭಾರತವನ್ನಂತೂ ಎಲ್ಲ ಕಡೆಯಿಂದ ಸುತ್ತುವರೆಯುವ ಬೆಲ್ಟ್ ಇದಾಗಲಿದೆ. ಯುರೋಪ್ ಮತ್ತು ಬೇರೆ ದೇಶಗಳು ಚೀನಾದ ಈ ಬೃಹತ್ ಜಾಲದಿಂದ ತಮ್ಮ ಆರ್ಥಿಕ ಚಟುವಟಿಕೆಗಳನ್ನು ಹೇಗೆಲ್ಲ ಬಿರುಸುಗೊಳಿಸಿಕೊಳ್ಳಬಹುದು ಎಂಬ ಯೋಚನೆಯಲ್ಲಿರುವುದರಿಂದ ಚೀನಾದ ಮಾತು ಕೇಳಲು ಉತ್ಸುಕವಾಗಿವೆ. ಭಾನುವಾರದ ಸಭೆಯಲ್ಲಿ ಪ್ರಾರಂಭಿಕ $125 ಬಿಲಿಯನ್ ಹೂಡಿಕೆಯ ಯೋಜನೆ ತೆರೆದಿರಿಸಿರುವ ಚೀನಾ ಅಧ್ಯಕ್ಷ ಜಿನ್ಪಿಂಗ್ ಸಹ ಇದನ್ನು ‘ವಿಶ್ವದ ಕನಸು’ ಅಂತಲೇ ಬಿಂಬಿಸಿದ್ದಾರೆ. ಈ ರಸ್ತೆಯಿಂದ ಎಲ್ಲರಿಗೆ ಪ್ರಯೋಜನವಾಗಲಿದೆ. ಜಾಗತಿಕರಣದ ಸುವರ್ಣ ಯೋಜನೆ ಇದಾಗಲಿದ್ದು, ಈ ಹೆದ್ದಾರಿಗೆ ಎಲ್ಲ ರಾಷ್ಟ್ರಗಳಿಗೂ ಮುಕ್ತ ಪ್ರವೇಶವಿರುತ್ತದೆ, ಭಾರತವೂ ಸೇರಿಕೊಳ್ಳಬೇಕು ಎಂದೆಲ್ಲ ಭಾಷಣ ಬಿಗಿದಿದ್ದಾರೆ ಜಿನ್ಪಿಂಗ್.

ತಮ್ಮ ಪಾಲಿನ ಬಗ್ಗೆ ಯುರೋಪಿನ ರಾಷ್ಟ್ರಗಳು ತುಸು ಚೌಕಾಶಿ ಇರಿಸಿಕೊಂಡಿವೆಯಾದರೂ ಹೆಚ್ಚು-ಕಡಿಮೆ ಅವೆಲ್ಲ ಈ ಕನಸನ್ನು ಖರೀದಿಸುವುದಕ್ಕೆ ಒಪ್ಪಿರುವುದು ಸ್ಪಷ್ಟ. ಬ್ರೆಕ್ಸಿಟ್ ನಂತರ ಹೊಸ ಅರ್ಥವ್ಯವಸ್ಥೆಗೆ ಹವಣಿಸುತ್ತಿರುವ ಇಂಗ್ಲೆಂಡ್ ಕಡೆಯಿಂದ, ಅದರ ವಿತ್ತ ಸಚಿವನ ಬಾಯಲ್ಲಿ ಬಂದಿರುವ ಮಾತು ನೋಡಿ- ‘ಜಾಗತಿಕ ಜನಸಂಖ್ಯೆ ಶೇ. 70 ಭಾಗವನ್ನು ಎತ್ತರಕ್ಕೇರಿಸುವ ಶಕ್ತಿಯಿರುವ ಇಂಥದೊಂದು ದೂರಗಾಮಿ ಯೋಜನೆ ಕೈಗೊಂಡಿರುವುದಕ್ಕೆ ಚೀನಾ ಅಧ್ಯಕ್ಷರನ್ನು ಅಭಿನಂದಿಸುತ್ತೇನೆ.’

ಚೀನಾ ಈ ಮೂಲಕ ಪಾರಮ್ಯ ಮೆರೆಯುವುದಕ್ಕೆ ಹೊರಟಿದೆಯೇ ಎಂಬ ಒಳಗೊಳಗಿನ ಆತಂಕ ಕೆಲ ರಾಷ್ಟ್ರಗಳಿಗಿದ್ದರೂ ಯಾವುದಕ್ಕೂ ಕನಸು ಸಾಕಾರವಾಗುವವರೆಗೆ ನೋಡೋಣ ಎಂಬ ಮನಸ್ಥಿತಿ ಅವರೆಲ್ಲರದ್ದು. ಹಾರ್ನ್ ಆಫ್ ಆಫ್ರಿಕಾವನ್ನೂ ಸವರುವ ನೀಲನಕ್ಷೆ ಈ ಬೆಲ್ಟ್ ಗೆ ಇರುವುದರಿಂದ ಇಥಿಯೊಪಿಯಾದಂಥ ಆಫ್ರಿಕಾ ರಾಷ್ಟ್ರಗಳೂ ಚೀನಾ ಬಗ್ಗೆ ಪುಳಕಗೊಂಡಿವೆ. ಭಾರತ ಮಾತ್ರ ದೃಢ ಧ್ವನಿಯಲ್ಲಿ ಹೇಳುತ್ತಿದೆ- ‘ಇದು ಬೇರೆ ರಾಷ್ಟ್ರಗಳ ಸಾರ್ವಭೌಮತ್ವದೊಡನೆ ಆಟವಾಡುವ, ಜನ ಸಮುದಾಯಗಳನ್ನು ಸಾಲದಲ್ಲಿ ಮುಳುಗಿಸಿ ಪರಿಸರಕ್ಕೆ ಘಾಸಿ ಮಾಡುವ ಯೋಜನೆ. ಇಂಥ ಮಹತ್ವಾಕಾಂಕ್ಷಿ ವ್ಯಾಪಕ ಯೋಜನೆ ಕೈಗೊಳ್ಳುವಾಗ ಅನುಸರಿಸಬೇಕಾದ ಪಾರದರ್ಶಕತೆ, ಅಂತಾರಾಷ್ಟ್ರೀಯ ನಿಯಮಾವಳಿ, ಮುಕ್ತತೆ ಇವ್ಯಾವವನ್ನೂ ಚೀನಾ ಅನುಸರಿಸಿಲ್ಲ.’

ನಾವು ರಸ್ತೆ ಮಾಡಿ ವಹಿವಾಟಿಗೆ ಬಿಡುತ್ತೇವೆ ಎನ್ನುವ ಚೀನಾದ ಮಾತನ್ನು ನಂಬುವುದಂತೂ ಖಂಡಿತ ದುಬಾರಿ. ಹೋದಲ್ಲೆಲ್ಲ ಧ್ವಜ ನೆಡದೇ ಉಳಿಯದು ಚೀನಾ. ಅದಾಗಲೇ ಪಾಕಿಸ್ತಾನದೊಂದಿಗೆ ಮೈತ್ರಿ ದಟ್ಟವಾಗಿಸಿಕೊಂಡಿರುವ ಚೀನಾ, ಜಮ್ಮು-ಕಾಶ್ಮೀರದ ವಿಷಯದಲ್ಲಿ ಭಾರತದ ಜತೆ ನಿಲ್ಲದು. ಹೀಗಿರುವಾಗ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅದರ ಹೆದ್ದಾರಿಯನ್ನು ಭಾರತ ವಿರೋಧಿಸದೇ ಇರಲಾದೀತೇ? ಉದಾಹರಣೆಗೆ ಚೀನಾದ್ದೇ ಪ್ರಾಂತ್ಯವಾಗಿರುವ ಕ್ಸಿನಿಯಾಂಗ್ ನಲ್ಲಿ ಮುಸ್ಲಿಂ ಬಂಡಾಯವಿದೆ. ಇದನ್ನು ಹತ್ತಿಕ್ಕುವುದಕ್ಕೆ 1950ರಿಂದ ಮಗ್ನವಾಗಿರುವ ಚೀನಾ, ಶೇ. 90ರಷ್ಟು ಉಯ್ಗರ್ ಮುಸ್ಲಿಮರಿದ್ದ ಜಾಗದ ಜನಸಂಖ್ಯಾ ರಚನೆಯನ್ನೇ ಬದಲು ಮಾಡಿ ಅಲ್ಲೀಗ ಶೇ. 40ರಷ್ಟು ಹಾನ್ ಚೀನಿಯರನ್ನು ತುಂಬಿಸಿದೆ. ಹೀಗೆ ಜನಾಂಗೀಯ ಮೂಲೋತ್ಪಾಟನೆ ಮತ್ತು ಜನಸಂಖ್ಯಾ ರಚನೆಯನ್ನು ಬದಲಿಸುವ ಜಾಯಮಾನ ಪಾಕಿಸ್ತಾನದ್ದೂ ಹೌದು. ಗಿಲ್ಗಿಟ್-ಬಾಲ್ಟಿಸ್ತಾನದಲ್ಲಿ ಹೆದ್ದಾರಿ ನೆಪದಲ್ಲಿ ಇವೆರಡೂ ಶಕ್ತಿಗಳು ಕೂಡಿಕೊಂಡಾಗ ಭಾರತಕ್ಕೆ ಎದುರಾಗುವ ಆತಂಕವನ್ನು ಊಹಿಸಬಹುದಾಗಿದೆ.

ಜಾಗತಿಕ ರಾಜಕಾರಣದಲ್ಲಿ ವಿಭಿನ್ನ ಧ್ರುವಗಳಲ್ಲಿರುವ ಅಮೆರಿಕ-ಚೀನಾಗಳು ಬಾಂಗ್ಲಾ ವಿಮೋಚನೆಯಂಥ ಸಂದರ್ಭಗಳಲ್ಲಿ ಭಾರತದ ವಿರುದ್ಧ ಒಂದಾದ ಉದಾಹರಣೆ ಇದ್ದಿದ್ದೇ. ಈಗ ರಷ್ಯಾ ಸಹ ಅತ್ತ ಸೇರಿಕೊಂಡಿದೆ.

ಒಬಿಒಆರ್ ಸಾಕಾರವಾಗುತ್ತ ಹೋದಂತೆ ಚೀನಾದ ವಿರುದ್ಧ ಬೇರೆ ರಾಷ್ಟ್ರಗಳಿಂದಲೂ ಹಲಬಗೆಗಳಲ್ಲಿ ಅಸಮಾಧಾನ ಶುರುವಾಗುವ ಸಾಧ್ಯೆತೆಗಳು ಇಲ್ಲದಿಲ್ಲ. ಸಧ್ಯಕ್ಕಂತೂ ಭಾರತ ಏಕಾಂಗಿಯಾಗಿ ಪ್ರತಿರೋಧಿಸುತ್ತಿರುವ ಹೋರಾಟವಿದು.

1 COMMENT

Leave a Reply