ಶ್ರೀಲಂಕಾದ ಟ್ರಿಂಕೊಮಾಲಿ ತೈಲಸಂಗ್ರಹ ಸಮೂಹವನ್ನು ಮೋದಿ ಭಾರತದ ಮಡಿಲಿಗೆ ಎಳೆಯಲಿದ್ದಾರೆಯೇ?

 

ಪ್ರವೀಣ್ ಶೆಟ್ಟಿ, ಕುವೈತ್

ಮಾರುಕಟ್ಟೆಯಲ್ಲಿ ಕ್ವಿಂಟಾಲುಗಟ್ಟಲೆ ಅಕ್ಕಿಕೊಂಡರೆ ಅತೀ ಕಡಿಮೆದರದಲ್ಲಿ ಅಕ್ಕಿ ಸಿಕ್ಕುತ್ತದೆಯಾದರೆ, ಕೈಯಲ್ಲಿ ಹಣವಿದ್ದೂ ಮನೆಯಲ್ಲಿ ಕೂಡಿ ಇಡಲು ಸ್ಥಳವಿಲ್ಲವೆಂದು ಅವಕಾಶ ಕಳೆದುಕೊಳ್ಳುವವನು ಶತಮೂರ್ಖ. ಅದೃಷ್ಟ ಬಂದು ಬಾಗಿಲು ತಟ್ಟಿದಾಗ ಬಾಗಿಲು ತೆರೆಯಲೇ ಬೇಕು. ಹಾಗಂತ ಒಂದು ಲಕ್ಷ ಮೌಲ್ಯದ ಅಕ್ಕಿಗೆ ನಾಲ್ಕು ಲಕ್ಷದ ಹೊಸ ಶೆಡ್ಡು ನಿರ್ಮಿಸಲು ಹೊರಡುವುದೂ ಬುದ್ಧಿವಂತಿಕೆಯಲ್ಲ. ಆದರೆ ಪಕ್ಕದ ಮನೆಯವರಲ್ಲಿ ಖಾಲಿಬಿದ್ದಿರುವ ಕೋಣೆಯನ್ನು ಸ್ವಲ್ಪ ಅವಧಿಯ ಮಟ್ಟಿಗೆ ಬಾಡಿಗೆಗೆ ತೆಗೆದುಕೊಳ್ಳುವು ಜಾಣತನವಲ್ಲವೇ?

ಇದನ್ನೇ ನಮ್ಮ ಪ್ರಧಾನಿ ನರೇಂದ್ರಮೋದಿ ಮಾಡಲು ಹೊರಟಿದ್ದು. ಹೌದು ಶ್ರೀಲಂಕಾದ ಟ್ರಿಂಕೊಮಾಲಿ (Trincomalee) ಪ್ರದೇಶದಲ್ಲಿ ಎರಡನೇ ವಿಶ್ವಯುದ್ಧದ ಸಮಯದಲ್ಲಿ ಬ್ರೀಟಿಷರಿಂದ ನಿರ್ಮಿತವಾದ ಒಟ್ಟು ನೂರು ತೈಲಸಂಗ್ರಹದ ಟ್ಯಾಂಕ್ (Oil Tank) ಸಮೂಹಗಳು ಹೆಚ್ಚುಕಡಿಮೆ ಬಳಕೆಯಾಗದೆ ಖಾಲಿ ಬಿದ್ದಿದೆ. ಇದೇ ಖಾಲಿ ಬಿದ್ದಿರುವ ತೈಲಸಂಗ್ರಹದ ಟ್ಯಾಂಕ್ ಗಳನ್ನು ಭಾರತದ ಅಭಿವೃದ್ಧಿಗೆ ಬಳಸಿಕೊಳ್ಳಲು ಶ್ರೀಲಂಕಾದೊಂದಿಗೆ ಒಪ್ಪಂದವೊಂದಕ್ಕೆ ಸಹಿಹಾಕುವ ಕಾಲ ಸನ್ನಿಹಿತವಾಗುತ್ತಿದೆ. ಮೋದಿ ಭೇಟಿ ಸಂದರ್ಭದ ಹಲವು ಕಾರ್ಯಸೂಚಿಗಳಲ್ಲಿ ಇದೂ ಪ್ರಮುಖವಾಗಿತ್ತು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಕುಸಿದಿರುವ ಸಂದರ್ಭದಲ್ಲಿ, ಕಡಿಮೆ ಬೆಲೆಗೆ ಸಿಗುತ್ತಿರುವ ತೈಲವನ್ನು ಸಂಗ್ರಹಿಸಿಟ್ಟುಕೊಳ್ಳಲು ಭಾರತಕ್ಕೆ ಅತ್ಯಗತ್ಯವಾಗಿ ತೈಲಸಂಗ್ರಹಗಾರ ಬೇಕಿತ್ತು. ಹೊಸದಾಗಿ ತೈಲಸಂಗ್ರಹಗಾರ ನಿರ್ಮಿಸಲು ಅಧಿಕ ಹಣ ಮತ್ತು ಬಹು ಸಮಯ ಬೇಕಿತ್ತು. ಇಂತಹ ಸಂದರ್ಭದಲ್ಲೇ ಪಕ್ಕದ ಶ್ರೀಲಂಕಾದೊಂದಿಗೆ ಸೇರಿಕೊಂಡು ಪಾಳುಬಿದ್ದಿರುವ ನೂರು ತೈಲ ಟ್ಯಾಂಕುಗಳಲ್ಲಿ 85ನ್ನು ಜಂಟಿಯಾಗಿ ಅಭಿವೃದ್ಧಿಗೊಳಿಸಿ ಭಾರತವು ತನ್ನ ಉಪಯೋಗಕ್ಕೆ ಬಳಸಿಕೊಳ್ಳಲಿದೆ. ಕನಿಷ್ಠ ಒಂದು ಟ್ಯಾಂಕಿನಲ್ಲಿ 80,000 ಬ್ಯಾರೆಲ್ಲಿನಷ್ಟು ತೈಲ ಶೇಖರಿಸುವ ಸಾಮರ್ಥ್ಯವುಳ್ಳ ಈ ಟ್ಯಾಂಕುಗಳಿಂದ ಒಟ್ಟು 68 ಲಕ್ಷ ಬ್ಯಾರೆಲ್ಲಿನಷ್ಟು ತೈಲ ಸಂಗ್ರಹಿಸಬಹುದು.

ಶ್ರೀಲಂಕಾದ ಟ್ರಿಂಕೊಮಾಲಿಯ ಈ ತೈಲಸಂಗ್ರಹ ಟ್ಯಾಂಕುಗಳನ್ನು ದುರಸ್ತಿ ಮಾಡಿ, ಅದನ್ನು ಉಪಯೋಗಿಸುವ ಹಿಂದೆ ಮೋದಿ ಸರಕಾರದ ದೂರಾಲೋಚನೆಯಿದೆ. ಮೊತ್ತ ಮೊದಲನೆಯದಾಗಿ ಕಡಿಮೆ ಖರ್ಚಿನಲ್ಲಿ ಅನಾಯಾಸವಾಗಿ ಸಿಕ್ಕುತ್ತಿರುವ ಬೃಹತ್ ತೈಲಸಂಗ್ರಹಣದ ಸಮೂಹ. ಎರಡನೆಯದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲದ ಬೆಲೆ ಕುಸಿದಿರುವಾಗ, ಕಡಿಮೆ ಬೆಲೆಯಲ್ಲಿ ತೈಲ ಖರೀದಿಸಿ ತುಂಬಿಸಿಡಲು ಅತೀ ತುರ್ತಾಗಿ ಬೃಹತ್ ತೈಲಸಂಗ್ರಹಣದ ಅಗತ್ಯತೆ. ಮೂರನೆಯದಾಗಿ ಭಾರತದಲ್ಲಿ ಹೊಸದಾಗಿ  ಬೃಹತ್ ತೈಲಸಂಗ್ರಹಣ ನಿರ್ಮಿಸಿದರೂ ಮುಂದಿನ ಹದಿನೈದು ವರ್ಷಗಳಲ್ಲಿ ವಿದ್ಯುತ್ ಆಧಾರಿತ ವಾಹನಗಳ ಹೆಚ್ಚಳದಿಂದ ಪೆಟ್ರೋಲಿಯಮ್ ಉಪ ಉತ್ಪನ್ನದ ಕಾರುಗಳಿಗೆ ಬೇಡಿಕೆ ಕಡಿಮೆಯಾದರೆ, ಅಧಿಕ ಹಣ ವ್ಯಯಿಸಿ ನಿರ್ಮಿಸಿದ ಸ್ಥಾವರಗಳು ಉಪಯೋಗಕ್ಕೆ ಬಾರದೆ ದೇಶದ ಹಣವು ಪೋಲಾಗುವದನ್ನು ಈಗಿಂದಲೇ ತಡೆಯುವುದು.  ನಾಲ್ಕನೆಯದಾಗಿ ಈ ಒಪ್ಪಂದದಿಂದ ಶ್ರೀಲಂಕಾ ದೇಶಕ್ಕೆ ಭಾರತದಿಂದ ಸ್ವಲ್ಪಮಟ್ಟಿನ ಆದಾಯವು ಹರಿದು ಬರಲಿದ್ದು, ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧವು ವೃದ್ಧಿಗೊಳ್ಳಲಿದ್ದು, ಚೀನಾ ದೇಶವನ್ನು ಭಾರತದ ದಕ್ಷಿಣದ ತುದಿಯಿಂದ ಕಾಲ್ಕೀಳುವಂತೆ ಮಾಡಬಹುದು. ಮತ್ತು ಕೊನೆಯದಾಗಿ ಭಾರತದ ದಕ್ಷಿಣದ ತುದಿಯಲ್ಲಿ ಆಪತ್ಕಾಲಿನ ಯುದ್ಧದ ಸಮಯದಲ್ಲಿ ಯುದ್ಧದ ಹಡಗುಗಳಿಗೆ ಇಂಧನ ತುಂಬಿಕೊಳ್ಳಲು ಪರ್ಯಾಯ ಬಂದರಿನ ಆವಶ್ಯಕತೆಯನ್ನು ಟ್ರಿಂಕೊಮಾಲಿಯಲ್ಲಿ ಕಂಡುಕೊಂಡಿರುವ ದಟ್ಟ ಸಾಧ್ಯತೆಯನ್ನೂ ಆಲ್ಲಗಳೆಯುವಂತಿಲ್ಲ.

ಇಷ್ಟೊಂದು ಮಹತ್ವವುಳ್ಳ ಮತ್ತು ಲಾಭವುಳ್ಳ ಒಪ್ಪಂದವೊಂದು ಯಾವಾಗಲೋ ಆಗಬೇಕಿತ್ತು. ಪಾಳುಬಿದ್ದಿರುವ ಟ್ರಿಂಕೊಮಾಲಿ ತೈಲಸಂಗ್ರಹಣ ಸಮೂಹ ಭಾರತಕ್ಕೆ ಬಿಟ್ಟರೆ ಬೇರೆ ಯಾವ ದೇಶಕ್ಕೂ ಉಪಯೋಗಕ್ಕೆ ಬಾರದು. ಆದರೂ ಭಾರತದ ಆಡಳಿತ ಮಾಗಧರಿಗೆ ಇದ್ಯಾವುದು ಬೇಡವಾಗಿತ್ತು. ಶ್ರೀಲಂಕಾಕ್ಕೆ ತಮಿಳು ಉಗ್ರರನ್ನು ಸದೆಬಡಿಯಲು ಭಾರತದ ಶಾಂತಿಸೇನೆಯನ್ನು 1987 ರಲ್ಲಿ ಕಳುಹಿಸಿದ ಸಂದರ್ಭದಲ್ಲಿ , ರಾಜೀವ ಗಾಂಧಿ ಸರಕಾರವು  ಟ್ರಿಂಕೊಮಾಲಿಯ ಈ ತೈಲಸಂಗ್ರಹಗಾರವನ್ನು ಉಪಯೋಗಿಸುವ ಬಗ್ಗೆ ಮಾತುಕತೆ ನೆಡೆಸಿತ್ತು. ಆದರೆ ದುರಾದೃಷ್ಟಾವಶಾತ್ ರಾಜೀವ ಗಾಂಧಿ ಸರಕಾರದ ಪತನದ ನಂತರ, ಮಂದಿರ, ಮಂಡಲ, ಹಗರಣಗಳಲ್ಲೆ ಕಾಲಕಳೆದ ಭಾರತ ಸರಕಾರದ ಆಡಳಿತ ಚೂಡಾಮಣಿಗಳು ದೇಶಕ್ಕೇನಾಗಬೇಕೆಂಬುದನ್ನೇ ಮರೆತು ಬಿಟ್ಟರು. ಮತ್ತೆ 2003 ರಲ್ಲಿ ವಾಜಪೇಯಿ ಸರಕಾರ ಈ ಮರೆತು ಹೋದ ಟ್ರಿಂಕೊಮಾಲಿ ತೈಲಸಂಗ್ರಹಗಾರವನ್ನು ಉಪಯೋಗಿಸಿಕೊಳ್ಳಲು ಉತ್ಸುಕತೆ ತೋರಿ, ಅದಕ್ಕೆ ಬೇಕಾದ ಎಲ್ಲಾ ಒಪ್ಪಂದಗಳಿಗೆ ವೇದಿಕೆ ಸಿದ್ಧಪಡಿಸಿದ್ದರು. ಆದರೆ ಮತ್ತೊಮ್ಮೆ ನಮಗೆಲ್ಲರಿಗೂ ಲಕ್ಷಕೋಟಿಗಳಲ್ಲಿ ಹಗರಣಗಳನ್ನು ಎಣಿಸಿಕೊಳ್ಳವಂತೆ ಸುಯೋಗ ಒದಗಿಸಿದ ಸರಕಾರವೊಂದನ್ನು ಕಾಣುವ ಭಾಗ್ಯ ಲಭಿಸಿದ್ದರಿಂದ ಭಾರತಕ್ಕೆ ಅನುಕೂಲವಾದ ಅವಕಾಶವೊಂದು ಮತ್ತೆ ಕೈತಪ್ಪಿಹೋಯಿತು. 27 ವರ್ಷಗಳ ಕಾಲಹರಣದ ನಂತರ ಈಗ ಮತ್ತೆ ಪ್ರಯತ್ನಗಳು ಆರಂಭವಾಗಿವೆ.

ಹಾಗೆ ನೋಡಿದರೆ, ಹಂಬನತೊಟ ಬಂದರು ಅಭಿವೃದ್ಧಿಯಿಂದ ಹಿಡಿದು ಅನೇಕ ಹೂಡಿಕೆಗಳಿಗೆ ಶ್ರೀಲಂಕಾ ಮೊದಲಿಗೆ ಭಾರತವನ್ನೇ ಆಹ್ವಾನಿಸಿತ್ತು. ಆಗೆಲ್ಲ ಹಿಂದಿನ ಸರ್ಕಾರಗಳು ಮೀನಮೇಷ ಎಣಿಸಿದ್ದ ಪರಿಣಾಮವಾಗಿ ಅಲ್ಲೆಲ್ಲ ಚೀನಿಯರು ಬಂದು ಕುಳಿತಿದ್ದಾರೆ.

ಕೋಟಿ ಖರ್ಚುಮಾಡಿ ಜಾತಿಗೊಂದು ಊರಿಗೊಂದರಂತೆ ಸಮಾಜಭವನ ಕಟ್ಟಿ ಕಮಿಷನ್ ಗಿಟ್ಟಿಸಿಕೊಂಡರೇ ಹೊರತು, ದೇಶಕ್ಕೆ ಬೇಕಾದ ತೈಲಸಂಗ್ರಹ ಟ್ಯಾಂಕುಗಳ ನಿರ್ಮಾಣ ಮಾಡಿದ್ದರೆ, ಇವತ್ತಿನ ದಿನದಲ್ಲಿ ಬ್ಯಾರೆಲ್ಲಿಗೆ 50 ಡಾಲರ್ ಕೊಡುತ್ತಿರುವ ಕಚ್ಚಾತೈಲಕ್ಕೆ ಕಳೆದ ವರ್ಷದ ಸುಮಾರಿಗೆ ಬರೇ 25 ಡಾಲರು ಕೊಟ್ಟು 68 ಲಕ್ಷಬ್ಯಾರೆಲ್ ಕಚ್ಚಾತೈಲ ಖರೀದಿಸಬಹುದಿತ್ತು. ಇದೊಂದೆ ಒಂದೇ ಬಾರಿಯ ವ್ಯವಹಾರದಿಂದ ಭಾರತಕ್ಕೆ ಸುಮಾರು 1000 ಕೋಟಿಯಷ್ಟು ವಿದೇಶಿ ವಿನಿಮಯ ಉಳಿತಾಯವಾಗುತ್ತಿತ್ತು. ದೇಶಕ್ಕೆ ಮುಂದಿನ ಹದಿನೈದು ವರ್ಷಗಳಲ್ಲಿ ಏನು ಬೇಕಾಗಬಹುದೆಂದು ಯೋಚಿಸುವ ಆಡಳಿತಗಾರರ ಬದಲಿಗೆ ಮುಂದಿನ ಬಾರಿ ಚುನಾವಣೆ ಗೆಲ್ಲಲು ಮಾತ್ರ ಸೀಮಿತವಾಗಿ ಕೆಲಸ ಮಾಡುವ ಮತಿಗೆಟ್ಟವರು ಅಧಿಕಾರಕ್ಕೆ ಬರುತ್ತಾ ಹೋದರೆ ಈ ದೇಶವನ್ನು ಯಾರಿಂದಲೂ ಕಟ್ಟಲಾಗದು.

(ಲೇಖಕರು ತೈಲ ಕ್ಷೇತ್ರದಲ್ಲೇ ಕಾರ್ಯನಿರ್ವಹಿಸುತ್ತಿದ್ದು ಈ ವಿಭಾಗದ ಆಳ ಅಗಲವನ್ನು ಬಲ್ಲವರು.)

1 COMMENT

Leave a Reply