ಚೀನಾ ಗಡಿ ಸಮೀಪ ಉದ್ಘಾಟನೆಯಾಗಲಿದೆ ಭಾರತದ ಅತಿ ದೊಡ್ಡ ಸೇತುವೆ, ಸಂಪರ್ಕ ಮತ್ತು ಸೇನೆ ಎರಡಕ್ಕೂ ಇದು ಪೂರಕ ಹೇಗೆ ಗೊತ್ತೆ?

ಡಿಜಿಟಲ್ ಕನ್ನಡ ಟೀಮ್:

ಈಶಾನ್ಯ ಭಾಗದ ಗಡಿ ಪ್ರದೇಶದಲ್ಲಿ ತನ್ನ ನಿಯಂತ್ರಣ ಗಟ್ಟಿಗೊಳಿಸಿಕೊಳ್ಳಲು ಇರುವುದು ಒಂದೇ ಮಾರ್ಗ ಅದು ಅಭಿವೃದ್ಧಿ. ಈಗ ಚೀನಾದ ಗಡಿ ಭಾಗದಲ್ಲಿ ದೇಶದ ಅತ್ಯಂತ ಉದ್ದನೆಯ ಸೇತುವೆ ನಿರ್ಮಾಣವಾಗಿದ್ದು, ಇದೇ ತಿಂಗಳು 26ರಂದು ಲೋಕಾರ್ಪಣೆಯಾಗಲಿದೆ. ಆ ಮೂಲಕ ಭಾರತ ಈ ಪ್ರದೇಶದ ಮೇಲೆ ತನ್ನ ನಿಯಂತ್ರಣ ಮತ್ತಷ್ಟು ಗಟ್ಟಿ ಮಾಡಿಕೊಳ್ಳಲಿದೆ.

ಅರುಣಾಚಲ ಪ್ರದೇಶಕ್ಕೆ ಸಮೀಪವಾಗಿ ಅಸ್ಸಾಂನ ಪುರಾನ ಸಾದಿಯಾ ಪ್ರದೇಶದಲ್ಲಿ ಬ್ರಹ್ಮ ಪುತ್ರ ನದಿಗೆ ಈ ಸೇತುವೆ ನಿರ್ಮಿಸಲಾಗಿದೆ. ಸಾದಿಯಾ ಹಾಗೂ ದೋಲಾ ಪ್ರದೇಶಗಳಿಗೆ ಈ ಸೇತುವೆ ಸಂಪರ್ಕ ನಿರ್ಮಿಸಲಿದ್ದು, ಈ ಸೇತುವೆಯ ಉದ್ದ 9.15 ಕಿ.ಮೀ ನಷ್ಟಿದೆ. ಆ ಮೂಲಕ ದೇಶದ ಅತಿ ದೊಡ್ಡ ಸೇತುವೆ ಎಂಬ ಖ್ಯಾತಿಗೂ ಭಾಜನವಾಗಲಿದೆ. ಈ ಹಿಂದೆ ಮುಂಬೈನಲ್ಲಿರುವ 3.55 ಕಿ.ಮೀ ಉದ್ದದ ಬಾಂದ್ರಾ ವೊರ್ಲಿ ಸಮುದ್ರ ಸೇತುವೆ ಭಾರತದ ಅತಿ ದೊಡ್ಡ ಸೇತುವೆಯಾಗಿತ್ತು.

ಈ ಸೇತುವೆ ಅಸ್ಸಾಂ ರಾಜಧಾನಿ ದಿಸ್ಪುರದಿಂದ 540 ಕಿ.ಮೀ ಹಾಗೂ ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರದಿಂದ 300 ಕಿ.ಮೀ ದೂರದಲ್ಲಿ ನಿರ್ಮಾಣವಾಗಿದೆ. ಬ್ರಹ್ಮಪುತ್ರ ನದಿಗೆ ತೆಜ್ಪುರದಲ್ಲಿರುವ ಕಲಿಯಾಭೊಸೊರಾ ಸೇತುವೆ ಹೊರತಾಗಿ 375 ಕಿ.ಮಿ ಉದ್ದದವರೆಗೂ ಯಾವುದೇ ಸೇತುವೆ ನಿರ್ಮಾಣವಾಗಿರಲಿಲ್ಲ. ಹೀಗಾಗಿ ಇಷ್ಟುದಿನಗಳ ಕಾಲ ನದಿಯ ಎರಡು ಕಡೆಯ ಪ್ರದೇಶಗಳ ನಡುವೆ ಸಂಪರ್ಕ ಸಾಧಿಸಲು ಜಲಮಾರ್ಗವನ್ನೇ ಅವಲಂಬಿಸಲಾಗಿತ್ತು. ಈಗ ಸೇತುವೆ ನಿರ್ಮಾಣಗೊಂಡಿರುವುದು ಸಂಪರ್ಕ ಸುಲಭವಾಗಿದೆ.

2011ರಲ್ಲಿ ₹ 950 ಕೋಟಿ ವೆಚ್ಚದೊಂದಿಗೆ ಆರಂಭವಾದ ಈ ಸೇತುವೆ, ಚೀನಾ ಗಡಿಗೆ ಸಮೀಪವಾಗಿದ್ದು, ಈ ಸೇತುವೆ ನಿರ್ಮಾಣದಿಂದ ಭಾರತ ಈ ಪ್ರದೇಶದಲ್ಲಿ ತನ್ನ ನಿಯಂತ್ರಣ ಹೆಚ್ಚಿಸಿಕೊಳ್ಳಲು ನೆರವಾಗಲಿದೆ. ಈ ಸೇತುವೆಯಿಂದಾಗಿ ಈ ಪ್ರದೇಶದಲ್ಲಿ ಸೇನಾ ಪಡೆಗಳ ಅಗತ್ಯ ಪೂರೈಕೆಗೆ ದೊಡ್ಡ ನೆರವಾಗಿದೆ.

ಈ ಸೇತುವೆ ಭಾರತೀಯ ಸೇನೆಗೂ ಒಂದು ಶಕ್ತಿಯನ್ನು ತುಂಬಿದೆ. ಅದು ಹೇಗೆಂದರೆ, ಈ ಸೇತುವೆಯನ್ನು ಸಾರ್ವಜನಿಕರು ಮಾತ್ರವಲ್ಲದೆ ಸೇನಾ ಉದ್ದೇಶಕ್ಕೂ ಬಳಸಿಕೊಳ್ಳಬಹುದಾಗಿದೆ. ಈಶಾನ್ಯ ಭಾಗದಲ್ಲಿ ಅರುಣಾಚಲ ಪ್ರದೇಶ ಹಾಗೂ ಅಸ್ಸಾಂ ನಡುವೆ ಸಂಪರ್ಕ ವೃದ್ಧಿಸುವಲ್ಲಿ ಈ ಸೇತುವೆ ಮಹತ್ವದ ಪಾತ್ರ ವಹಿಸಲಿದೆ. ಸೇನೆಯೂ ಸಹ ಈ ಸೇತುವೆಯನ್ನು ಬಳಸಿಕೊಳ್ಳಬೇಕೆಂಬ ಉದ್ದೇಶದಿಂದ ಇಲ್ಲಿ ಅತ್ಯಂತ ಬಲಿಷ್ಠ ಸೇತುವೆಯನ್ನು ನಿರ್ಮಿಸಲಾಗಿದೆ. ಈ ಸೇತುವೆಯ ಸಾಮರ್ಥ್ಯ ಎಷ್ಟಿದೆ ಎಂದರೆ, ಒಂದೇ ಬಾರಿಗೆ ಈ ಸೇತುವೆ ಮೇಲೆ 60 ಟನ್ ಟೂಕದ ಯುದ್ಧ ಟ್ಯಾಂಕರ್ ಗಳು ಸುಲಭವಾಗಿ ಸಾಗಬಹುದಾಗಿದೆ.

ಈ ಸೇತುವೆ ಹಾಗೂ ಇದರ ಮಹತ್ವದ ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಹೇಳಿರುವುದಿಷ್ಟು…

‘ಗಡಿ ಪ್ರದೇಶದಲ್ಲಿ ಭಾರತದ ತಂತ್ರಗಾರಿಕೆಗೆ ಉತ್ತೇಜನ ನೀಡಲಿರುವ ದೇಶದ ಅತಿದೊಡ್ಡ ಸೇತುವೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೇ 26ರಂದು ಉದ್ಘಾಟಿಸಲಿದ್ದಾರೆ. ಈ ಸೇತುವೆಯನ್ನು ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಜನರ ಜತೆಗೆ ಸೇನೆಯು ಬಳಸಿಕೊಳ್ಳಲಿದ್ದು, ಈ ಭಾಗದಲ್ಲಿ ಸಂಪರ್ಕ ವ್ಯವಸ್ಥೆಯನ್ನು ಹೆಚ್ಚಿಸಲಿದೆ. ಅಸ್ಸಾಂ ಹಾಗೂ ಅರುಣಾಚಲ ಪ್ರದೇಶ ಅಂತಾರಾಷ್ಟ್ರೀಯ ಗಡಿ ವಿಚಾರದಲ್ಲಿ ಭಾರತಕ್ಕೆ ಮಹತ್ವದ ರಾಜ್ಯಗಳಾಗಿವೆ. ಚೀನಾ ಗಡಿ ಸಮೀಪಕ್ಕೆ ಈ ಸೇತುವೆ ನಿರ್ಮಾಣವಾಗಿರುವುದರಿಂದ ಅಗತ್ಯ ಪರಿಸ್ಥಿತಿಯಲ್ಲಿ ಸೇನೆಯು ಫಿರಂಗಿ ಹಾಗೂ ಟ್ಯಾಂಕರ್ ಗಳನ್ನು ಸುಲಭವಾಗಿ ಗಡಿಯನ್ನು ತಲುಪಲು ನೆರವಾಗಲಿದೆ.’

Leave a Reply