ದಲಿತ ಸಿಎಂ ಬಯಕೆ ಕೆರಳಿಸಿದ ‘ಸಿದ್ದು ನಾಯಕತ್ವ’!

ನಾಳೆ ಏನಾಗುತ್ತದೋ ಬಿಡುತ್ತದೋ ಅದು ಬೇರೆ ಪ್ರಶ್ನೆ. ಮುಂದೇನಾಗುತ್ತದೆ ಎಂಬುದರ ನಿರೀಕ್ಷೆ ತಂತ್ರಗಾರಿಕೆ ನೂಲಾಗುತ್ತದೆ. ಈ ತಂತ್ರಗಾರಿಕೆ ನೂಲಿನಿಂದ ಹೊಸೆವ ಹಗ್ಗ ರಾಜಕೀಯ ಬಾವಿಯಿಂದ ಅದೆಷ್ಟು ನೀರೆತ್ತುತ್ತದೋ, ನಿರೀಕ್ಷೆಯ ಕೊರಳಿಗೇ ಉರುಳಾಗಿ ಪರಿಣಮಿಸುತ್ತದೋ ಗೊತ್ತಿಲ್ಲ. ಆದರೆ ತಂತ್ರಗಾರಿಕೆ ಮಾತ್ರ ಎಗ್ಗಿಲ್ಲದೆ ಸಾಗುತ್ತದೆ. ಅದು ರಾಜಕೀಯದ ಬುಡಶಕ್ತಿ.

ಮುಂದಿನ ವರ್ಷ ನಡೆಯುವ ವಿಧಾನಸಭೆ ಚುನಾವಣೆಗೆ ನಾನಾ ರಾಜಕೀಯ ಪಕ್ಷಗಳು ಈಗಾಗಲೇ ತಂತ್ರ, ಒಳತಂತ್ರ, ಕುತಂತ್ರ ಹೆಣೆವ ಕಾಯಕದಲ್ಲಿ ನಿರತವಾಗಿವೆ. ನಾನಾ ರಾಜಕೀಯ ಪಕ್ಷಗಳ ನಡುವೆ ಪರಸ್ಪರರನ್ನು ಮಣಿಸುವ ಬಗೆ ಹೇಗೆಂಬ ವ್ಯೂಹ ರಚನೆ ಒಂದು ರೀತಿಯಾದ್ದಾದರೆ, ಒಂದು ಪಕ್ಷದೊಳಗಿನ ನಾನಾ ಗುಂಪು, ನಾಯಕರ ನಡುವೆ ಮೇಲುಗೈ ಸಾಧಿಸುವ ಒಳತಂತ್ರಗಳ ಸಮರ ಮತ್ತೊಂದು ಬಗೆಯದ್ದು. ತಮ್ಮ ಶಕ್ತಿ, ಸಾಮರ್ಥ್ಯ, ದೌರ್ಬಲ್ಯ ಜತೆ ಎದುರಾಳಿಯ ಗುಣಾವಗುಣಗಳನ್ನು ಸಮೀಕರಿಸಿ ಪ್ರತಿತಂತ್ರ ರೂಪಿಸುವ ಕಾರ್ಯದಲ್ಲಿ ಎಲ್ಲರೂ ತಲ್ಲೀನರಾಗಿದ್ದಾರೆ.

ಗುಂಡ್ಲುಪೇಟೆ, ನಂಜನಗೂಡು ಮರುಚುನಾವಣೆ ಗೆಲುವಿನ ನಂತರ ಅದಮ್ಯ ಆತ್ಮವಿಶ್ವಾಸದಲ್ಲಿರುವ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ತಮ್ಮ ನೇತೃತ್ವದಲ್ಲೇ ಮುಂದಿನ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಝೇಂಕರಿಸಿದ್ದಾರೆ. ಯಾವುದೇ ಒಂದು ಗೆಲವಿನ ನಂತರ ನಾಯಕನಾದವನಲ್ಲಿ ಇಂಥದ್ದೊಂದು ಬಯಕೆ ಪುಟಿದೇಳುವುದು ಸಹಜವೇ. ಯಾಕೆಂದರೆ ಎಲ್ಲರೂ ರಾಜಕೀಯ ಮಾಡುವುದು ಅಧಿಕಾರಕ್ಕಾಗಿಯೇ. ಅವರ ಆತ್ಮವಿಶ್ವಾಸ ಎಷ್ಟರಮಟ್ಟಿಗೆ ಇತ್ತೆಂದರೆ ಮೊದಲಿಗೆ ಮುಂದಿನ ಮುಖ್ಯ ಮಂತ್ರಿ ಕೂಡ ತಾವೇ ಎಂದು ಹೇಳಿಕೊಂಡಿದ್ದರು. ನಂತರ ಯಾಕೋ ಈ ಹೇಳಿಕೆ ಸ್ವಲ್ಪ ಅತಿಯಾಯಿತು ಎಂದು ಅವರಿಗೇ ಅನ್ನಿಸಿ, ಮುಂದಿನ ಸಿಎಂ ಯಾರೆಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ತಮ್ಮ ಹೇಳಿಕೆಯನ್ನು ತಾವೇ ತಿದ್ದುಪಡಿ ಮಾಡಿಕೊಂಡರು. ಅದು ಅವರ ಮಟ್ಟಿಗೆ ಸರಿ ಹೋಯಿತು.

ಆದರೆ ಸಿದ್ದರಾಮಯ್ಯನವರ ಈ ಹೇಳಿಕೆ ರಾಜ್ಯ ಕಾಂಗ್ರೆಸ್ಸಿನಲ್ಲಿ ಒಂದಷ್ಟು ಒಳ ರಾಜಕೀಯ ಚಟುವಟಿಕೆಗಳು ಗರಿಗೆದರಲು ಆಸ್ಪದ ಮಾಡಿಕೊಟ್ಟಿದೆ. ಯಾವಾಗ ತಮ್ಮ ನೇತೃತ್ವದಲ್ಲೇ ಮುಂದಿನ ಚುನಾವಣೆ ಎಂದರೋ ಮುಖ್ಯಮಂತ್ರಿ ಗಾದಿಯ ಅನ್ಯ ಆಕಾಂಕ್ಷಿಗಳ ಕಣ್ಣುಗಳು ಕೆಂಡದುಂಡೆಗಳಾಗಿವೆ. ಅದರಲ್ಲೂ ಮುಖ್ಯವಾಗಿ ಎರಡು ದಶಕಗಳಿಂದ ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿರುವ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ‘ಸಾಮೂಹಿಕ ನಾಯಕತ್ವದಲ್ಲೇ ಮುಂದಿನ ಚುನಾವಣೆ’ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ಚಿತ್ರದುರ್ಗದ ‘ಜನ-ಮನನ, ಜನ-ನಮನ’ ಸಮಾವೇಶದಲ್ಲಿ ತಮ್ಮ ನೇತೃತ್ವದಲ್ಲೇ ಮುಂದಿನ ಚುನಾವಣೆ ಎಂದು ಸಿದ್ದರಾಮಯ್ಯ ಅವರು ಪುನರುಚ್ಚರಿಸಿದ 24 ಗಂಟೆಯೊಳಗೇ ಬಂದಿರುವ ಖರ್ಗೆ ಅವರ ಈ ಹೇಳಿಕೆ ಸಿಎಂ ಗಾದಿ ಅಭ್ಯರ್ಥಿಗಳ ಪೈಪೋಟಿಗೊಂದು ಸಂಕೇತವಾಗಿದೆ. ಅಷ್ಟೇ ಅಲ್ಲ ಮುಂದಿನ ಸಿಎಂ ಯಾರೆಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದೂ ಹೇಳಿದ್ದಾರೆ. ಅಂದರೆ ತಾವೂ ಕೂಡ ಆ ಹುದ್ದೆ ರೇಸಿನಲ್ಲಿರುವುದಾಗಿ ಬಿಂಬಿಸಿದ್ದಾರೆ. ನಿಜ, ಸುಮಾರು ನಾಲ್ಕೂವರೇ ದಶಕಗಳ ಕಾಲ ಕಾಂಗ್ರೆಸ್ ನಿಷ್ಠರಾಗಿ ದುಡಿದಿರುವ ಮಲ್ಲಿಕಾರ್ಜನ ಖರ್ಗೆ ಅವರಿಗೆ ಮುಖ್ಯಮಂತ್ರಿ ಪದವಿ ಮೇಲಿನ ಆಸೆ ನಿನ್ನೆ-ಮೊನ್ನೆಯದಲ್ಲ. ದಾಖಲೆಯ ಸತತ ಒಂಬತ್ತು ಬಾರಿ ವಿಧಾನಸಭೆಗೆ ಹಾಗೂ 2014ರಲ್ಲಿ ಲೋಕಸಭೆಗೆ ಆರಿಸಿ ಬಂದಿರುವ ಖರ್ಗೆ ಅವರು 1999ರಲ್ಲಿ ಮುಖ್ಯಮಂತ್ರಿ ಆಗಲು ಎಸ್.ಎಂ. ಕೃಷ್ಣ ಅವರಿಗೆ ತೀವ್ರ ಪೈಪೋಟಿ ಕೊಟ್ಟಿದ್ದರು.

ಆ ಪೈಪೋಟಿ ಎಷ್ಟು ತೀವ್ರವಾಗಿತ್ತು ಎಂದರೆ ಉಪಮುಖ್ಯಮಂತ್ರಿ ಹುದ್ದೆಯನ್ನು ಕೂಡ ಒಪ್ಪಲಿಲ್ಲ. ಸಿಎಂ ರೇಸಿನಿಂದ ಅವರನ್ನು ಹೊರಕ್ಕೆ ತರುವಷ್ಟರಲ್ಲಿ ಆಗ ಕರ್ನಾಟಕದಲ್ಲಿ ಪಕ್ಷದ ಉಸ್ತುವಾರಿ ಹೊತ್ತಿದ್ದ ಎ.ಕೆ. ಅ್ಯಂಟನಿ ಅವರಿಗೆ ಸಾಕು-ಬೇಕಾಗಿ ಹೋಗಿತ್ತು. ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಹಿಡಿದು ಕೇಂದ್ರ ಮಂತ್ರಿ ಪಟ್ಟದವರೆಗೆ ಅನೇಕ ಸ್ತರಗಳಲ್ಲಿ ಕಾರ್ಯ ನಿರ್ವಹಿಸಿರುವ ಖರ್ಗೆ 2013ರಲ್ಲೂ ಈ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಆದರೆ ಹೈಕಮಾಂಡ್ ಅವರನ್ನು ಕೇಂದ್ರ ಸಂಪುಟಕ್ಕೆ ಹೊತ್ತೋಯ್ದು ಸಿದ್ದರಾಮಯ್ಯ ಸಿಎಂ ಪದವಿಗೇರುವ ಹಾದಿ ಸುಗಮಗೊಳಿಸಿತ್ತು.

ಹಾಗೆ ನೋಡಿದರೆ ಸಿದ್ದರಾಮಯ್ಯ ಸರಕಾರದ ಜತೆಜತೆಗೆ ಬೆಳೆದು ಬಂದಿರುವ ದಲಿತ ಸಿಎಂ ಕೂಗಿನ ಹಿಂದಿರುವುದು ಮತ್ತದೇ ಮಲ್ಲಿಕಾರ್ಜುವ ಖರ್ಗೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಅವರ ಹೆಸರೇ.

ಮೊದಲಿಗೆ ಈ ಕೂಗು ಖರ್ಗೆ ಹಾಗೂ ಪರಮೇಶ್ವರ ನಡುವಣ ಪೈಪೋಟಿಯಿಂದ ಭಿನ್ನರಾಗದಲ್ಲಿ ಕೇಳುತ್ತಿತ್ತು. ಹಿಂದಿನ ವಿಧಾನಸಭೆ ಚುನಾವಣೆ ಸೋತು ಸುಣ್ಣವಾಗಿದ್ದ ಪರಮೇಶ್ವರ ಅವರ ಮುಖ್ಯಮಂತ್ರಿ ಆಸೆ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಇಳಿದು, ಕೊನೆಗೆ ಅದೂ ಸಿಗದೆ ಸಂಪುಟ ಸೇರುವಷ್ಟರಲ್ಲಿ ಶಸ್ತ್ರತ್ಯಾಗ ಮಾಡಿಯಾಗಿತ್ತು. ಆದರೂ ದಲಿತ ಸಿಎಂ ಕೂಗು ಮಾತ್ರ ಆಗಾಗ್ಗ ಕೇಳಿಬರುತ್ತಲೇ ಇತ್ತು.

ಆ ಕೂಗು ಪರಮೇಶ್ವರ ಅವರ ಮಂತ್ರಿ ಪದವಿ ಜತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನೂ ರಕ್ಷಿಸುತ್ತಾ ಬಂದಿದೆ. ಆದರೆ ಈ ಕೂಗಿನ ಹಿಂದೆ ಪರಮೇಶ್ವರ ಅವರಿಗಿಂತಲೂ ಪ್ರಬಲವಾಗಿ ಕೆಲಸ ಮಾಡುತ್ತಾ ಬಂದಿರುವುದು ಖರ್ಗೆ ಅವರ ಹೆಸರು. ವರ್ಷದ ಹಿಂದೆ ಖರ್ಗೆ ಕೂಡ ಈ ಹುದ್ದೆಗೆ ಖಡಕ್ಕಾಗಿಯೇ ತೊಡೆ ತಟ್ಟಿದ್ದರು.

ಅಷ್ಟರಲ್ಲಿ ಅವರ ಪುತ್ರ ಪ್ರಿಯಾಂಕ ಖರ್ಗೆ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡು ಸಿದ್ದರಾಮಯ್ಯ ‘ಕುಸ್ತಿ’ಯನ್ನು ಅರ್ಧದಲ್ಲೇ ಬರ್ಕಾಸ್ತು ಮಾಡಿದ್ದರು. ಈಗ ಚುನಾವಣೆಗೆ ಉಳಿದಿರುವುದು ಇನ್ನೊಂದೇ ಒಂದು ವರ್ಷ. ಚುನಾವಣೆ ವರ್ಷದಲ್ಲಿ ಮತ್ಯಾಕೆ ರಗಳೆ, ಸಿದ್ದರಾಮಯ್ಯ ತಮ್ಮ ಅವಧಿಯನ್ನು ಮುಗಿಸಿ ಹೋಗಲಿ ಎಂದು ಮಾಘಮೌನಕ್ಕೆ ಶರಣಾಗಿದ್ದ ಖರ್ಗೆ ಮತ್ತು ಪರಮೇಶ್ವರ ಇದೀಗ ಸಿದ್ದರಾಮಯ್ಯನವರ ಮುಂದಿನ ಚುನಾವಣೆ ನಾಯಕತ್ವ ಹೇಳಿಕೆಯಿಂದ ಎಚ್ಚೆತ್ತುಕೊಂಡಿದ್ದಾರೆ. ದಲಿತ ಸಿಎಂ ರಾಗಕ್ಕೆ ಮತ್ತೆ ಹಿಮ್ಮೇಳ ನುಡಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಇನ್ನೂ ಇತ್ಯರ್ಥ ಆಗದಿರುವುದರ ಹಿಂದೆ ಖರ್ಗೆ ಅವರ ಕೈವಾಡವಿದೆ. ಇತ್ತೀಚೆಗೆ ದಿಗ್ವಿಜಯ್ ಸಿಂಗ್ ಬದಲು ಕರ್ನಾಟಕದಲ್ಲಿ ಕಾಂಗ್ರೆಸ್ ಉಸ್ತುವಾರಿಗೆ ನೇಮಕಗೊಂಡಿರುವ ಕೇರಳ ಮೂಲದ ವೇಣುಗೋಪಾಲ ರಾವ್, ಖರ್ಗೆ ಅವರಿಗೆ ಆಪ್ತರು. ಲೋಕಸಭೆಯಲ್ಲಿ ಪಕ್ಷದ ಮುಖಂಡರಾದ ನಂತರ ಖರ್ಗೆ ಮತ್ತು ವೇಣುಗೋಪಾಲ ರಾವ್ ಸಂಬಂಧ ಗಳಸ್ಯ-ಕಂಠಸ್ಯ.

ಮೇಲಾಗಿ ಖರ್ಗೆ ಅವರ ಬಗ್ಗೆ ವೇಣುಗೋಪಾಲ್ ಅವರಿಗೆ ಗುರುಹಿರಿಯ ಭಾವ. ಅವರು ಕರ್ನಾಟಕದ ಉಸ್ತುವಾರಿ ವಹಿಸಿಕೊಳ್ಳುವಲ್ಲಿ ಖರ್ಗೆ ಅವರ ಕೈವಾಡ ಕೂಡ ಕೆಲಸ ಮಾಡಿದೆ.

ಮೊದಮೊದಲು ದಲಿತ ಸಿಎಂ ವಿಚಾರದಲ್ಲಿ ಖರ್ಗೆ ಮತ್ತು ಪರಮೇಶ್ವರ ನಡುವೆ ಇದ್ದ ಪೈಪೋಟಿ ಸಿದ್ದರಾಮಯ್ಯನವರ ಹೇಳಿಕೆ ಬೆನ್ನಲ್ಲಿ ಕಿತ್ತುಕೊಂಡು ಹೋಗಿದೆ. ದಲಿತರಲ್ಲಿ ಯಾರಾದರೂ ಆಗಲಿ, ಮುಂದಿನ ಸಿಎಂ ಮಾತ್ರ ದಲಿತರೇ ಆಗಬೇಕು ಎಂಬಲ್ಲಿಗೆ ಈ ಇಬ್ಬರು ನಾಯಕರು ಬಂದು ನಿಂತಿರುವುದರಿಂದ ಅಲ್ಲೊಂದು ರಾಜೀಸೂತ್ರ ತನ್ನಂತೆ ತಾನು ಮೊಳೆತಿದೆ. ಸದ್ಯಕ್ಕೆ ಪರಮೇಶ್ವರ್ ಅವರನ್ನೇ ಕೆಪಿಸಿಸಿ ಅಧ್ಯಕ್ಷ ಗಾದಿಯಲ್ಲಿ ಮುಂದುವರಿಸಿ ಪರೋಕ್ಷವಾಗಿ ರಾಜ್ಯ ಕಾಂಗ್ರೆಸ್ ಮೇಲೆ ಹಿಡಿತ ಹೊಂದಬೇಕು ಎಂಬ ಇಂಗಿತ ಖರ್ಗೆ ಅವರದು. ಪ್ರಬಲ ಲಿಂಗಾಯತ ಸಮುದಾಯದ ಸಚಿವ ಎಂ.ಬಿ. ಪಾಟೀಲ್ ಅಥವಾ ಎಸ್.ಆರ್. ಪಾಟೀಲ್ ಅವರನ್ನು ಈ ಸ್ಥಾನಕ್ಕೆ ತರಬೇಕೆಂಬ ಪ್ರಯತ್ನ ಸಿದ್ದರಾಮಯ್ಯ ಅವರದು. ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ಕೊಟ್ಟಂತಾಗುತ್ತದೆ, ಅಹಿಂದ ಜತೆಗೆ ಲಿಂಗಾಯತ ಸಮುದಾಯದ ಮತಗಳು ಜತೆಯಾಗುತ್ತವೆ ಎಂಬುದು ಅವರ ಲೆಕ್ಕಾಚಾರ. ಚುನಾವಣೆ ತಂತ್ರಗಾರಿಕೆಯಿಂದ ಈ ಲೆಕ್ಕಾಚಾರ ವಿಹಿತವೇ. ಅಹಿಂದ ಮತ್ತು ಲಿಂಗಾಯತ ಮತಗಳು ಸೇರ್ಪಡೆ ಆದರೆ ಕಾಂಗ್ರೆಸ್ಸಿಗೆ ಅದರಲ್ಲೂ ಕೆಪಿಸಿಸಿ ಅಧ್ಯಕ್ಷ ಗಾದಿಗೆ ಲಿಂಗಾಯತ ನಾಯಕರನ್ನು ತಂದ ಸಿದ್ದರಾಮಯ್ಯ ಅವರಿಗೆ ಅನುಕೂಲಕರ ಪರಿಸ್ಥಿತಿ ನಿರ್ಮಾಣ ಮಾಡುತ್ತದೆ.

ಆದರೆ ಲಿಂಗಾಯತರು ಬಿ.ಎಸ್. ಯಡಿಯೂರಪ್ಪನವರ ಕಾರಣಕ್ಕೆ ಬಿಜೆಪಿ ಪರ ವಾಲುವ ಸಾಧ್ಯತೆಗಳು ಹೆಚ್ಚು ಇರುವುದರಿಂದ ಮತ್ತೊಂದು ಪ್ರಬಲ ಸಮುದಾಯ ಒಕ್ಕಲಿಗ ಮುಖಂಡರಾದ ತಮಗೇ ಆ ಸ್ಥಾನ ನೀಡಬೇಕೆಂಬ ಪ್ರಸ್ತಾಪ ಸಚಿವ ಡಿ.ಕೆ. ಶಿವಕುಮಾರ್ ಅವರದ್ದು. ಆಗಲೂ ಕೂಡ ಅಹಿಂದ ಜತೆಗೆ ಒಕ್ಕಲಿಗ ಮತಗಳು ಕೂಡಿಕೆ ಆಗುತ್ತವೆ ಎಂಬ ವಾದವನ್ನು ಅವರು ಮುಂದಿಟ್ಟಿದ್ದಾರೆ. ಆರ್ಥಿಕ ಮತ್ತು ವ್ಯಕ್ತಿಗತವಾಗಿ ಪ್ರಬಲ ನಾಯಕರಾಗಿರುವ ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾಾನ ಸಿಕ್ಕರೆ ತಮ್ಮ ಭವಿಷ್ಯದ ಕನಸಿಗೆಲ್ಲಿ ಸಂಚಕಾರವಾಗುತ್ತದೋ ಎಂದು ಸಿದ್ದರಾಮಯ್ಯನವರು ಅದಕ್ಕೆ ಅಡ್ಡಗಾಲಾಗಿದ್ದಾರೆ.

ಲಿಂಗಾಯತರು ಅಥವಾ ಒಕ್ಕಲಿಗರಿಗೆ ಇಬ್ಬರಲ್ಲಿ ಯಾರೊಬ್ಬರಿಗೆ ಆಗಲಿ ಕೆಪಿಸಿಸಿ ಅಧ್ಯಕ್ಷ ಗಾದಿ ಹೋದರೆ ದಲಿತ ಸಿಎಂ ಕೂಗು ಮೂಲದಲ್ಲೇ ನಿಲ್ಲುತ್ತದೆ ಎಂಬ ವಿಷಯವನ್ನು ಪರಮೇಶ್ವರ ಅವರಿಗೆ ಮನದಟ್ಟು ಮಾಡಿರುವ ಖರ್ಗೆ ಅವರು ಮುಂದಿನ ದಾಳ ಉರುಳಿಸಲು ಅಣಿಯಾಗುತ್ತಿದ್ದಾರೆ.

ಹಾಗೆ ನೋಡಿದರೆ ಖರ್ಗೆ ಅವರೇ ಕೆಪಿಸಿಸಿ ಅಧ್ಯಕ್ಷರಾಗುತ್ತಾರೆ ಎಂಬ ಮಾತು ಆರಂಭದಲ್ಲಿ ಕೇಳಿ ಬಂದಿತ್ತು. ಆದರೆ ಯಾವಾಗ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ವೇಣುಗೋಪಾಲರಾವ್ ಉಸ್ತುವಾರಿ ವಹಿಸಿಕೊಂಡರೋ ಆಗ ಆ ಮಾತು ಮೌಲ್ಯ ಕಳೆದು ಕೊಂಡಿತ್ತು. ಏಕೆಂದರೆ ಕೆಪಿಸಿಸಿ ಅಧ್ಯಕ್ಷರಾದವರು ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ಹೊತ್ತಿರುವವರಿಗೆ ಉತ್ತರ ದಾಯಿಗಳಾಗಿರಬೇಕು. ತಮಗಿಂತ ಕಿರಿಯರಾದ ವೇಣುಗೋಪಾಲರಾವ್ ಅವರಿಗೆ ಖರ್ಗೆ ಅವರು ರಿಪೋರ್ಟ್ ಮಾಡಿಕೊಳ್ಳುವುದು ಸಾಧ್ಯವಿಲ್ಲದ ಮಾತು.

ಹೀಗಾಗಿ ವೇಣುಗೋಪಾಲರಾವ್ ಇರುವವರೆಗೂ ಖರ್ಗೆ ಅವರು ಕೆಪಿಸಿಸಿ ಅಧ್ಯಕ್ಷರಾಗುವುದು ದೂರವೇ ಉಳಿಯಿತು. ಅವರಿರುವವರೆಗೂ ಪರಮೇಶ್ವರ್ ಅವರನ್ನೇ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಲು ಖರ್ಗೆ ಕೂಡ ಅಸ್ಥೆ ವಹಿಸಿದ್ದಾರೆ. ವೇಣುಗೋಪಾಲರಾವ್ ಅವರದು ತಾತ್ಕಾಲಿಕ ವ್ಯವಸ್ಥೆ. ಮುಂದೆ ಗಲಾಂ ನಬಿ ಆಜಾದ್ ಕರ್ನಾಟಕದ ಉಸ್ತುವಾರಿಗೆ ಬರಬಹುದೆನ್ನುವ ಮಾತಿದೆ. ಒಂದೊಮ್ಮೆ ತಮ್ಮ ಜತೆ ಕೇಂದ್ರ ಸಂಪುಟದಲ್ಲಿ ಸೇವೆ ಸಲ್ಲಿಸಿರುವ ಹಿರಿಯ ಕಾಂಗ್ರೆಸ್ಸಿಗ ಗುಲಾಂ ನಬಿ ಆಜಾದ್ ಅವರು ನೇಮಕಗೊಂಡರೆ ಖರ್ಗೆ ಅವರು ಕೆಪಿಸಿಸಿ ಅಧ್ಯಕ್ಷ ಗಾದಿಗೆ ಯತ್ನಿಸುವ ಸಾಧ್ಯತೆಗಳು ಹೆಚ್ಚಾಗಿವೆ.

ಕೆಪಿಸಿಸಿ ಅಧ್ಯಕ್ಷರಾದವರು ಮುಖ್ಯಮಂತ್ರಿ ಸ್ಥಾನಕ್ಕೆ ಸಹಜ ಅರ್ಹತೆ ಪಡೆಯುತ್ತಾರೆ ಎನ್ನುವುದು ಕಾಂಗ್ರೆಸ್‌ನ ಪ್ರತೀತಿ ಆದರೂ ಅದಕ್ಕೆ ಅಪವಾದಗಳು ಇಲ್ಲದಿಲ್ಲ. ಆದರೆ ಅಪವಾದಗಳಿಗಿಂತ ಪ್ರತೀತಿಯೆ ಹೆಚ್ಚು ಚಾಲ್ತಿ ಪಡೆದಿರುವುದರಿಂದ ಆ ಗಾದಿಯ ಮೇಲೆ ಎಲ್ಲರಿಗೂ ಅಪರಿಮಿತ ಪ್ರೇಮ. ಕೆಪಿಸಿಸಿ ಅಧ್ಯಕ್ಷ ಗಾದಿ ಮೇಲೆ ಪರಿಶಿಷ್ಟ ಸಮುದಾಯದ ಮತ್ತೊಬ್ಬ ನಾಯಕ, ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಕೂಡ ಕಣ್ಣಿಟ್ಟಿದ್ದಾರೆ. ಖರ್ಗೆ ಮತ್ತು ಪರಮೇಶ್ವರ್ ಪರಿಶಿಷ್ಟರ ಪೈಕಿ ಬಲಗೈ ಗುಂಪಿಗೆ ಸೇರಿದವರು. ಮುನಿಯಪ್ಪ ಎಡಗೈ ಗುಂಪಿನವರು. ಆದರೆ ರಾಜ್ಯದಲ್ಲಾಗಲಿ, ಹೈಕಮಾಂಡ್ ಮಟ್ಟದಲ್ಲಾಗಲಿ ಮುನಿಯಪ್ಪನವರಿಗೆ ಕೆಪಿಸಿಸಿ ಅಧ್ಯಕ್ಷ ಗಾದಿಗೆ ತಮ್ಮನ್ನು ಪ್ರಸ್ತುತ ಪಡಿಸಿಕೊಳ್ಳುವಷ್ಟು ಪ್ರಭಾವ ಇಲ್ಲ. ಅವರ ನಾಯಕತ್ವ ಸ್ವಂತ ಜಿಲ್ಲೆ ಕೋಲಾರಕ್ಕೂ ನಾಲಾಯಕ್ಕು. ಕಳೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ತಮ್ಮ ಮಗಳು ರೂಪಕಲಾ ಅವರನ್ನೇ ಗೆಲ್ಲಿಸಿಕೊಳ್ಳಲು ಆಗದವರು ರಾಜ್ಯಕ್ಕೆ ಯಾವ ಸೀಮೆ ನಾಯಕತ್ವ ಕೊಟ್ಟಾರು ಎಂಬ ಪ್ರಶ್ನೆ ಕಾರ್ಯಕರ್ತರದು.

ಆದರೂ ಮುನಿಯಪ್ಪ ಇತ್ತೀಚೆಗೆ ಒಬ್ಬರಿಗೆ ಒಂದೇ ಹುದ್ದೆ ಇರಬೇಕು ಎಂದು ಬಿಟ್ಟ ಬಾಣದಲ್ಲಿ ಪರಮೇಶ್ವರ ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಥವಾ ಮಂತ್ರಿ ಸ್ಥಾನ ಎರಡರಲ್ಲಿ ಒಂದನ್ನು ತ್ಯಜಿಸಲಿ ಎಂಬ ಇಂಗಿತವಿತ್ತು. ಆದರೆ ಅವರ ಮಾತನ್ನು ಅವರೇ ಕೇಳದಿರುವಾಗ ಮತ್ಯಾರು ಕೇಳಿಯಾರು? ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಗಾದಿ ಮೇಲೆ ಕಣ್ಣಿಟ್ಟಿರುವುದಷ್ಟೇ ಅವರ ಭಾಗ್ಯ!

ಚುನಾವಣೆ ಹೊಸ್ತಿಲಲ್ಲಿ ರಾಜ್ಯದ ರಾಜಕೀಯ ಚಿತ್ರಣ ಪ್ರತಿ ಎರಡು-ಮೂರು ತಿಂಗಳಿಗೊಮ್ಮೆ ಬದಲಾಗುತ್ತಾ ಬಂದಿದೆ. ಇತ್ತೀಚಿನ ಮೂರು ಪ್ರಸಂಗಗಳನ್ನು ತೆಗೆದುಕೊಳ್ಳುವುದಾದರೆ ಡೈರಿ ಹಗರಣ, ನಂತರದ್ದು ನಂಜನಗೂಡು ಮತ್ತು ಗುಂಡ್ಲುಪೇಟೆ ಮರುಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು, ಇತ್ತೀಚಿನದ್ದು ಬಿಜೆಪಿಯಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ ಬಿಗ್‌ಫೈಟ್.

ಈಗ ಮುಂದಿನ ಚುನಾವಣೆ ನಾಯಕತ್ವ ಕುರಿತು ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಹಾಡಿರುವ ಭಿನ್ನರಾಗ ಪಟ್ಟಿಗೆ ಹೊಸ ಸೇರ್ಪಡೆ. ಇದು ಕಾಂಗ್ರೆಸ್ ಆಂತರಿಕ ಬೆಳವಣಿಗೆಯನ್ನು ಯಾವ ದಿಕ್ಕಿಗೆ ಕೊಂಡೊಯ್ಯುತ್ತದೆ ಎಂಬುದನ್ನು ನೋಡಬೇಕು.

ಚುನಾವಣೆಗೆ ವರ್ಷ ಉಳಿದಿದೆ. ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೋ ಗೊತ್ತಿಲ್ಲ. ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೋ, ಮೈತ್ರಿ ಸರಕಾರ ರಚನೆ ಆಗುತ್ತದೋ ಅದೂ ತಿಳಿದಿಲ್ಲ. ಸರಕಾರದ ಸ್ವರೂಪವೇ ಗೊತ್ತಿಲ್ಲದಿರುವಾಗ ‘ಚುನಾವಣೆ ನಾಯಕತ್ವ’, ‘ಮುಖ್ಯ ಮಂತ್ರಿ ಸ್ಥಾನದ ಬಯಕೆ’ ನಾನಾ ಪಕ್ಷಗಳಲ್ಲಿ ಚಿಮ್ಮಿಸಿರುವ ತಂತ್ರ, ಪ್ರತಿತಂತ್ರದ ಕಾರಂಜಿ ರಾಜಕೀಯವನ್ನು ಮತ್ತಷ್ಟು ಕೆಂಪು-ಕೆಂಪಾಗಿಸಿದೆ.

ಲಗೋರಿ: ಯುದ್ಧ ಇಬ್ಬರ ನಡುವೆ ನಡೆದರೂ ತಪ್ಪು ಮಾತ್ರ ಒಬ್ಬರದ್ದಾಗಿರುತ್ತದೆ.

(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply