ಕುಲಭೂಷಣ್ ಜಾಧವ್ ಪ್ರಕರಣ: ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತ ಮಂಡಿಸಿದ ವಾದ ಏನು?

ಡಿಜಿಟಲ್ ಕನ್ನಡ ಟೀಮ್:

ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಪಾಕಿಸ್ತಾನ ಅಂತಾರಾಷ್ಟ್ರೀಯ ಕಾನೂನು ಉಲ್ಲಂಘಿಸಿರುವುದನ್ನು ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದೆ.

ಪಾಕಿಸ್ತಾನ ಕುಲಭೂಷಣ್ ಜಾಧವ್ ಅವರನ್ನು ಅಪಹರಿಸಿ, ಗೂಢಚಾರಿ ಕೆಲಸ ಮಾಡುತ್ತಿದ್ದ ಎಂದು ಆರೋಪಿಸಿದ್ದ ಪಾಕಿಸ್ತಾನ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಪಾಕಿಸ್ತಾನದ ಈ ನಿರ್ಧಾರವನ್ನು ಪ್ರಶ್ನಿಸಿ ಭಾರತ ಅಂತಾರಾಷ್ಟ್ರೀಯ ಕೋರ್ಟ್ ಮೆಟ್ಟಿಲೇರಿತ್ತು. ಆ ಮೂಲಕ ಭಾರತ ಹಾಗೂ ಪಾಕಿಸ್ತಾನ 18 ವರ್ಷಗಳ ಬಳಿಕ ಎರಡು ದೇಶಗಳು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಮುಖಾಮುಖಿಯಾಗಿವೆ.

ಸೋಮವಾರ ಅಂತಾರಾಷ್ಟ್ರೀಯ ನ್ಯಾಯಾಲಯ ಎರಡು ದೇಶಗಳ ಪ್ರತಿನಿಧಿಗಳಿಗೆ ತಮ್ಮ ವಾದ ಮಂಡಿಸಲು ಅವಕಾಶ ನೀಡಿತು. ನೆದರ್ಲೆಂಡ್ ನ ಹೆಗ್ ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ 15 ನ್ಯಾಯಾಧೀಶರ ಪೀಠ ಈ ಪ್ರಕರಣದ ವಿಚಾರಣೆ ನಡೆಸಿದೆ. ಭಾರತದ ಪರ 20 ನಿಮಿಷಗಳ ಕಾಲ ವಾದ ಮಂಡಿಸಿದ ಹರೀಶ್ ಸಾಳ್ವೆ, ಪಾಕಿಸ್ತಾನದಿಂದ ಆಗಿರುವ ಕಾನೂನು ಉಲ್ಲಂಘನೆಯನ್ನು ನ್ಯಾಯಾಲಯದ ಮುಂದೆ ವಿವರಿಸಿದ್ದು ಹೀಗೆ…

‘ಪ್ರಕರಣದ ವಿಚಾರಣೆ ವೇಳೆ ಕುಲಭೂಷಣ್ ಜಾಧವ್ ಅವರ ಪರ ವಾದ ಮಂಡಿಸಲು ನ್ಯಾಯವಾದಿ ನೇಮಕಕ್ಕೆ ಅವಕಾಶ ಮಾಡಿಕೊಡಿ ಎಂದು ಭಾರತ ಅನೇಕ ಬಾರಿ ಪಾಕಿಸ್ತಾನಕ್ಕೆ ಮನವಿ ಮಾಡಿತ್ತು. ಆದರೆ ಪಾಕಿಸ್ತಾನ ಈ ಮನವಿ ನಿರಾಕರಿಸಿತು. ಈ ಮನವಿ ನಿರಾಕರಣೆಗೆ ಪಾಕಿಸ್ತಾನದಿಂದ ನಿರ್ದಿಷ್ಟ ಕಾರಣ ಅಥವಾ ಸ್ಪಷ್ಟನೆ ಸಹ ಸಿಗಲಿಲ್ಲ. ಜಾಧವ್ ವಿರುದ್ಧ ಸಲ್ಲಿಸಲಾದ ಆರೋಪಪಟ್ಟಿಯ ವಿವರ ಹಾಗೂ ಸಾಕ್ಷ್ಯಾಧಾರಗಳ ದಾಖಲೆಯನ್ನು ನೀಡುವಂತೆ ಭಾರತ ಮನವಿ ಮಾಡಿತ್ತು. ಆದರೆ ಭಾರತದ ಮನವಿಗೆ ಪಾಕಿಸ್ತಾನದಿಂದ ಯಾವುದೇ ರೀತಿ ಪ್ರತಿಕ್ರಿಯೆ ಸಿಗಲಿಲ್ಲ.

ಕಾನೂನು ವಿಚಾರಣೆ ವೇಳೆ ತನ್ನ ಪರ ವಾದಿಸಲು ವಕೀಲರನ್ನು ಹೊಂದುವುದು ಜಾಧವ್ ಅವರ ಹಕ್ಕು. ಇದಕ್ಕೆ ಅವಕಾಶ ಮಾಡಿಕೊಡದೇ ಪಾಕಿಸ್ತಾನ ಜಾಧವ್ ನ ಹಕ್ಕನ್ನು ಕಸಿದುಕೊಂಡಿದೆ. ಜಾಧವ್ ಅವರ ತಾಯಿ ಅವರು ಸಹ ರಾಜತಾಂತ್ರಿಕತೆಯ ಮಾರ್ಗವಾಗಿ ಸಲ್ಲಿಸಿದ ಅರ್ಜಿಗೂ ಪಾಕಿಸ್ತಾನ ಯಾವುದೇ ಉತ್ತರ ನೀಡಲಿಲ್ಲ. ಪಾಕಿಸ್ತಾನ ಈ ನಡವಳಿಕೆ ಮೂಲಕ ವಿಯೆನ್ನಾ ಅಂತಾರಾಷ್ಟ್ರೀಯ ಒಪ್ಪಂದದ 36ನೇ ನಿಯಮ ಉಲ್ಲಂಘಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಲಭೂಷಣ್ ಅವರನ್ನು ಬಂಧಿಸಿದ ಸಮಯದ ಬಗ್ಗೆ ಪಾಕಿಸ್ತಾನ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಈ ಪ್ರಕರಣದ ವಿಚಾರಣೆಯಲ್ಲಿ ಜಾಧವ್ ಅವರ ಪರ ವಾದ ಮಂಡಿಸಲು ವಕೀಲರ ನೇಮಕವಾಗಬೇಕು ಎಂದು ಭಾರತ ನ್ಯಾಯಾಲಯದ ಮುಂದೆ ಮನವಿ ಮಾಡುತ್ತದೆ.

ಸದ್ಯ ಭಾರತ ವಿಯೆನ್ನಾ ಒಪ್ಪಂದವನ್ನು ಬಲವಾಗಿ ನಂಬಿದ್ದು, ಭಾರತ ಮತ್ತು ಪಾಕಿಸ್ತಾನ ಸಹಿ ಮಾಡಿರುವ ಈ ಒಪ್ಪಂದದ ಪ್ರಕಾರ ಜಾಧವ್ ಅವರಿಗೆ ವಕೀಲರ ಸೌಲಭ್ಯವನ್ನು ನೀಡಲೇಬೇಕು. ಪಾಕಿಸ್ತಾನ ಕುಲಭೂಷಣ್ ಜಾಧವ್ ಅವರನ್ನು ಇರಾನ್ ನಿಂದ ಅಪಹರಿಸಿ ಸೇನೆಯ ವಶಕ್ಕೆ ಪಡೆದು ಬಲವಂತವಾಗಿ ಸುಳ್ಳು ತಪ್ಪೊಪ್ಪಿಗೆಯನ್ನು ಪಡೆದಿದೆ ಎಂಬ ವಾದಕ್ಕೆ ಭಾರತ ಈಗಲೂ ಬದ್ಧವಾಗಿದೆ.

ಸದ್ಯ ಪರಿಸ್ಥಿತಿ ತೀವ್ರತೆ ಪಡೆದುಕೊಂಡಿದ್ದು ಈ ವಿಚಾರಣೆ ಮುಕ್ತಾಯಗೊಳ್ಳುವ ಮುನ್ನವೇ ಜಾಧವ್ ಅವರನ್ನು ಪಾಕಿಸ್ತಾನ ಗಲ್ಲಿಗೇರಿಸಬಹುದು ಎಂಬ ಆತಂಕ ಮೂಡಿದೆ. ಪರಿಸ್ಥಿತಿ ತೀರಾ ಗಂಭೀರವಾಗಿರುವುದರಿಂದ ಅಂತಾರಾಷ್ಟ್ರೀಯ ನ್ಯಾಯಾಲಯ ಕೂಡಲೆ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ ವಿಚಾರಣೆ ನಡೆಯಬೇಕು ಎಂದು ಭಾರತ ಮನವಿ ಮಾಡಿದೆ. ಭಾರತದ ಮನವಿ ಪುರಸ್ಕರಿಸಿ ತುರ್ತಾಗಿ ವಿಚಾರಣೆಯನ್ನು ನಡೆಸುತ್ತಿರುವುದಕ್ಕೆ ನನ್ನ ದೇಶದ ಪರವಾಗಿ ನ್ಯಾಯಾಲಯಕ್ಕೆ ಧನ್ಯವಾದ ತಿಳಿಸುತ್ತೇನೆ.’

Leave a Reply