ಚುನಾವಣೆಗಳು ಮುಗಿಯುತ್ತಿದ್ದಂತೆ ಪ್ರಧಾನಿ ಚಿತ್ತ ಮತ್ತೆ ವಿದೇಶಾಂಗ ನೀತಿಯತ್ತ, ಮೋದಿ ಅವರ ಮುಂದಿನ ವಿದೇಶ ಪ್ರವಾಸಗಳಾವುವು?

ಡಿಜಿಟಲ್ ಕನ್ನಡ ಟೀಮ್:

ಕಳೆದ ಹಲವು ತಿಂಗಳಲ್ಲಿ ವಿವಿಧ ಚುನಾವಣೆಗಳತ್ತ ಹೆಚ್ಚು ಗಮನ ಹರಿಸಿದ್ದ ಪ್ರಧಾನಿ ನರೇಂದ್ರ ಮೋದಿ ಈಗ ಮತ್ತೆ ವಿದೇಶ ನೀತಿಗಳತ್ತ ಚಿತ್ತ ಹರಿಸಲು ಆರಂಭಿಸಿದ್ದಾರೆ. ಪರಿಣಾಮ ಮುಂದಿನ ದಿನಗಳಲ್ಲಿ ಮೋದಿ ಅಂತಾರಾಷ್ಟ್ರೀಯ ಸಂಬಂಧಗಳ ವಿಚಾರವಾಗಿ ಸಾಲು ಸಾಲು ವಿದೇಶ ಪ್ರವಾಸ ಮಾಡಲಿದ್ದಾರೆ.

ಇತ್ತೀಚೆಗಷ್ಟೇ ಶ್ರೀಲಂಕಾದಲ್ಲಿ ನಡೆದ ಅಂತಾರಾಷ್ಟ್ರೀಯ ಬೌದ್ಧ ಸಮಾವೇಶದ ಮುಖ್ಯ ಅತಿಥಿಯಾಗಿದ್ದ ಮೋದಿ 2 ದಿನಗಳ ಕಾಲ ದ್ವೀಪ ರಾಷ್ಟ್ರಕ್ಕೆ ಭೇಟಿ ಕೊಟ್ಟು ಕೆಲವು ಒಪ್ಪಂದಗಳನ್ನು ಮಾಡಿಕೊಂಡಿದ್ದರು. ಇದು ಈ ವರ್ಷ ಮೋದಿ ಅವರ ಮೊದಲ ವಿದೇಶ ಪ್ರವಾಸವಾಗಿತ್ತು. ಕಳೆದ ವರ್ಷ ನವೆಂಬರ್ 10-12ರವರೆಗೆ ಜಪಾನ್ ಪ್ರವಾಸ ಮುಗಿಸಿದ ನಂತರ ಮೋದಿ ಅವರು ಯಾವುದೇ ದೇಶಕ್ಕೆ ಭೇಟಿ ಕೊಟ್ಟಿರಲಿಲ್ಲ. ನೋಟು ಅಮಾನ್ಯ ನಿರ್ಧಾರದ ಪರಿಸ್ಥಿತಿ ನಿರ್ವಹಣೆ, ಸಂಸತ್ತಿನ ಕಲಾಪಗಳು, ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳು ಹಾಗೂ ಉಪಚುನಾವಣೆಗಳಿಂದಾಗಿ ಮೋದಿ ಅವರು ಯಾವುದೇ ವಿದೇಶಿ ಪ್ರವಾಸದತ್ತ ಗಮನಹರಿಸಿರಲಿಲ್ಲ. ಇದರ ಜತೆಗೆ ಮಲೇಷ್ಯಾ, ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ಪ್ರಧಾನಮಂತ್ರಿಗಳು ಹಾಗೂ ನೇಪಾಳ, ಸಿಪ್ರಸ್ ಮತ್ತು ಟರ್ಕಿ ದೇಶಗಳ ಅಧ್ಯಕ್ಷರುಗಳು ಭಾರತಕ್ಕೆ ಆಗಮಿಸಿದ್ದರು.

ಈಗ ಮೇ ತಿಂಗಳಾಂತ್ಯದಿಂದ ಮತ್ತೆ ಮೋದಿ ಅವರ ವಿದೇಶ ಪ್ರವಾಸ ಆರಂಭವಾಗಲಿದ್ದು, ಈ ಪ್ರವಾಸಗಳ ಪಟ್ಟಿ ದೊಡ್ಡದಾಗಿಯೇ ಇದೆ. ಮುಂದಿನ ಎರಡು ತಿಂಗಳ ಅವಧಿಯಲ್ಲಿ ಮೋದಿ ಅವರು ಯಾವ ದೇಶಕ್ಕೆ ಹೋಗಲಿದ್ದಾರೆ, ಅವರ ಭೇಟಿಯ ಉದ್ದೇಶಗಳೇನು ಎಂಬುದಕ್ಕೆ ಉತ್ತರ ಹೀಗಿದೆ…

ಮೇ 30ರಂದು ಮೋದಿ ಜರ್ಮನಿಗೆ ತೆರಳಲಿದ್ದು, ಉಭಯ ದೇಶಗಳ ಸರ್ಕಾರಗಳ ಮಾತುಕತೆ ನಡೆಯಲಿದೆ. ಮೋದಿ ಅಲ್ಲಿನ ಚಾನ್ಸಲರ್ ಆ್ಯಂಜೆಲಾ ಮಾರ್ಕೆಲ್ ಅವರನ್ನು ಭೇಟಿಯಾಗಲಿದ್ದಾರೆ. ಅಲ್ಲಿಂದ ಮೇ 31ರಂದು ಮೋದಿ ಸ್ಪೇನ್ ದೇಶಕ್ಕೆ ತೆರಳಲಿದ್ದಾರೆ. 1988ರಲ್ಲಿ ಆಗಿನ ಪ್ರಧಾನಿ ರಾಜೀವ್ ಗಾಂಧಿ ಅವರು ಸ್ಪೇನ್ ದೇಶಕ್ಕೆ ಭೇಟಿ ನೀಡಿದ್ದ ನಂತರ ಉಭಯ ದೇಶಗಳ ಮಾತುಕತೆಗಾಗಿ ಭಾರತದ ಯಾವುದೇ ಪ್ರಧಾನಿ ಸ್ಪೇನ್ ಗೆ ತೆರಳಿರಲಿಲ್ಲ. ಹೀಗಾಗಿ ಮೋದಿ ಅವರ ಸ್ಪೇನ್ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ.

ಸ್ಪೇನ್ ನಿಂದ ನೇರವಾಗಿ ಜೂನ್ ಒಂದರಂದು ರಷ್ಯಾಕ್ಕೆ ತೆರಳಲಿರುವ ಮೋದಿ ಅಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿರುವ ಸೆಂಟ್ ಪೀಟರ್ಸಬರ್ಗ್ ಇಂಟರ್ ನ್ಯಾಷನಲ್ ಎಕನಾಮಿಕ್ ಫೋರಂನಲ್ಲಿ ಭಾಗವಹಿಸಲಿದ್ದಾರೆ. ಈ ಸಭೆಯ ಜತೆಗೆ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡ್ಮಿರ್ ಪುಟಿನ್ ರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ.

ಜೂನ್ 8 ಹಾಗೂ 9ರಂದು ಮೋದಿ ಶಾಂಘೈ ಕೊಆಪರೇಷನ್ ಮೀಟ್ ನಲ್ಲಿ ಭಾಗವಹಿಸಲು ಕಜಕಸ್ತಾನಕ್ಕೆ ತೆರಳುವ ಸಾಧ್ಯತೆ ಇದೆ. ಅಲ್ಲಿ ಮೋದಿ ಹಾಗೂ ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಮುಖಾಮುಖಿ ಭೇಟಿಯಾಗುವ ಸಾಧ್ಯತೆಗಳಿವೆ. ಆದರೆ ಈ ಕಾರ್ಯಕ್ರಮದ ಜತೆಗೆ ಈ ಇಬ್ಬರು ನಾಯಕರು ಮಾತುಕತೆ ನಡೆಸುವರೇ ಎಂಬುದು ಇನ್ನು ತೀರ್ಮಾನವಾಗಿಲ್ಲ.

ಇನ್ನು ಜುಲೈನಲ್ಲಿ ಮೋದಿ ಇಸ್ರೇಲ್ ಪ್ರವಾಸ ಮಾಡಲಿದ್ದಾರೆ. 1992ರಲ್ಲಿ ಭಾರತ ಹಾಗೂ ಇಸ್ರೇಲ್ ನಡುವೆ ಮೊದಲ ಬಾರಿಗೆ ರಾಜತಾಂತ್ರಿಕ ಸ್ನೇಹ ಸಂಬಂಧ ಆರಂಭವಾಗಿದ್ದು, ಈಗ 25 ವರ್ಷಗಳು ಪೂರ್ಣಗೊಂಡಿವೆ. ಈ ಹಿನ್ನೆಲೆಯಲ್ಲಿ ಉಭಯ ದೇಶಗಳ ನಾಯಕರು ಪರಸ್ಪರವಾಗಿ ಎರಡೂ ದೇಶಗಳಿಗೆ ಭೇಟಿ ನೀಡಲಿದ್ದಾರೆ. ಮತ್ತೊಂದೆಡೆ ಮೋದಿ ಅವರ ಇಸ್ರೇಲ್ ಭೇಟಿಯ ಮುನ್ನವೇ ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೊದ್ ಅಬ್ಬಾಸ್ ಮುಂದಿನ ವಾರ ಭಾರತಕ್ಕೆ ಆಗಮಿಸುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಜುಲೈ 7-8ರಂದು ಹ್ಯಾಂಬರ್ಗ್ ನಲ್ಲಿ ಜಿ20 ಸಭೆ ನಡೆಯಲಿದ್ದು, ಮೋದಿ ಈ ಸಭೆಗಾಗಿ ಹ್ಯಾಂಬರ್ಗ್ ಗೆ ತೆರಳಲಿದ್ದಾರೆ.

ಈ ಎಲ್ಲ ಭೇಟಿಗಳ ನಂತರ ಮೋದಿ ಅಮೆರಿಕಕ್ಕೆ ಭೇಟಿ ಕೊಟ್ಟು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗುವ ಸಾಧ್ಯತೆಗಳಿವೆ ಎಂಬುದರ ಬಗ್ಗೆ ಕೇಂದ್ರ ಸರ್ಕಾರದ ಅಧಿಕಾರಿಗಳು ಮಾಹಿತಿಕೊಟ್ಟಿದ್ದಾರೆ. ಆದರೆ ಅಮೆರಿಕ ಭೇಟಿಯ ಕುರಿತಂತೆ ಇನ್ನು ಯಾವುದೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿಲ್ಲ.

Leave a Reply