ಸೈಬರ್ ಅಟ್ಯಾಕ್: ಸಾಫ್ಟ್ ವೇರ್ ಅಪ್ಡೇಟ್ ಗಾಗಿ 2 ದಿನ ಎಟಿಎಂ ಬಂದ್ ಸಾಧ್ಯತೆ, ಭಾರತದ ಬಹುತೇಕ ಎಟಿಎಂಗಳು ಸುರಕ್ಷಿತ ಎಂದಿದ್ದಾರೆ ತಜ್ಞರು

ಡಿಜಿಟಲ್ ಕನ್ನಡ ಟೀಮ್:

ವಿಶ್ವದ ಅನೇಕ ರಾಷ್ಟ್ರಗಳ ತಂತ್ರಜ್ಞಾನ ವ್ಯವಸ್ಥೆಯನ್ನೇ ಬುಡಮೇಲು ಮಾಡಿರುವ ರಾಂಸಂವೇರ್ ವೈರಸ್ ದಾಳಿ ಭಾರತದಲ್ಲೂ ಆತಂಕ ಹೆಚ್ಚಿಸಿದೆ. ದೇಶದ ಎಟಿಎಂಗಳ ಮೇಲೂ ಈ ವೈರಸ್ ದಾಳಿ ನಡೆದಿವೆ ಎಂಬ ಆತಂಕ ದಟ್ಟವಾಗಿರುವ ಬೆನ್ನಲ್ಲೇ, ‘ಈ ದಾಳಿ ಭಾರತದ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ’ ಎಂದು ಭರವಸೆ ಕೊಟ್ಟಿದ್ದಾರೆ ಕೇಂದ್ರ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್.

ಇನ್ನು ಭಾರತದ ಬಹುತೇಕ ಎಟಿಎಂಗಳು ಸುರಕ್ಷಿತವಾಗಿದ್ದು, ಈ ದಾಳಿಗೆ ತುತ್ತಾಗುವ ಸಾಧ್ಯತೆ ತೀರಾ ಕಡಿಮೆ ಎಂದು ತಜ್ಞರು ತಿಳಿಸಿದ್ದಾರೆ. ಇದೇ ವೇಳೆ ಮುನ್ನೆಚ್ಚರಿಕಾ ಕ್ರಮವಾಗಿ ಖಾಸಗಿ ಬ್ಯಾಂಕುಗಳು ತಮ್ಮ ಎಟಿಎಂ ಯಂತ್ರಗಳ ಸಾಫ್ಟ್ ವೇರ್ ಅಪ್ಡೇಟ್ ಮಾಡಲು ಆರ್ಬಿಐ ನಿರ್ದೇಶನ ನೀಡಿದ್ದು, ಇದಕ್ಕಾಗಿ ಮುಂದಿನ 2-3 ದಿನ ಎಟಿಎಂ ಬಂದ್ ಆಗುವ ಸಾಧ್ಯತೆ ಇದೆ.

ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ‘ರಾಂಸಂವೇರ್ ವೈರಸ್ ದಾಳಿಯು ಬೇರೆ ರಾಷ್ಟ್ರಗಳ ಮೇಲೆ ಪರಿಣಾಮ ಬೀರಿದಷ್ಟು, ಭಾರತದ ಮೇಲೆ ಬೀರಿಲ್ಲ. ಈ ದಾಳಿ ತಡೆಯಲು ನಾವು ಸಾಕಷ್ಟು ಎಚ್ಚರ ವಹಿಸಿದ್ದೇವೆ. ಈಗ ಬಂದಿರುವ ವರದಿ ಪ್ರಕಾರ ಕೇರಳ ಹಾಗೂ ಆಂಧ್ರ ಪ್ರದೇಶಗಳಲ್ಲಿ ಕೆಲವು ಎಟಿಎಂಗಳು ಸ್ಥಗಿತವಾಗಿವೆ. ಆ ಬಗ್ಗೆ ಮಾಹಿತಿ ಪಡೆಯಲಾಗುವುದು. ಉಳಿದಂತೆ ಯಾವುದೇ ಆತಂಕ ಪಡುವ ಅಗತ್ಯ ಇಲ್ಲ. ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ.’ ಎಂದರು.

ಇನ್ನು ತಜ್ಞರು ಹೇಳುವ ಪ್ರಕಾರ ಭಾರತದಲ್ಲಿನ ಎಟಿಎಂಗಳು ಸುರಕ್ಷಿತವಾಗಿವೆ. ಇದಕ್ಕೆ ಅವರು ನೀಡುವ ವಿವರಣೆ ಹೀಗಿದೆ…

‘ಸದ್ಯ ಭಾರತದಲ್ಲಿರುವ ಶೇ.80ರಷ್ಟು ಎಟಿಎಂಗಳು ವಿಂಡೋಸ್ ಎಕ್ಸ್ ಪಿ ಸಾಫ್ಟ್ ವೇರ್ ಮೂಲಕ ಕಾರ್ಯನಿರ್ವಹಿಸುತ್ತಿದ್ದು, ಫಿರ್ಮ್ ವೇರ್ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಇದು ಎಟಿಎಂಗಳಲ್ಲಿ ಕೇವಲ ಹಣ ನೀಡುವುದು, ಖಾತೆಯಲ್ಲಿನ ಹಣದ ಮೊತ್ತ ಪರಿಶೀಲನೆ ಮಾಡಲು ಮಾತ್ರ ಅವಕಾಶ ಮಾಡಿಕೊಡುತ್ತದೆ. ಉಳಿದ ಯಾವುದೇ ಕಾರ್ಯ ನಡೆಸಲು ಅವಕಾಶ ನೀಡುವುದಿಲ್ಲ. ಹೀಗಾಗಿ ಈ ವೈರಸ್ ದಾಳಿಯಿಂದ ಯಾವುದೇ ತೊಂದರೆ ಇಲ್ಲ. ಅಷ್ಟೇ ಅಲ್ಲದೆ ಭಾರತದಲ್ಲಿನ ಎಟಿಎಂಗಳು ಈ ಮಾಲ್ ವೇರ್ ಗಳನ್ನು ತಡೆಗಟ್ಟಲು ವೈಟ್ ಲಿಸ್ಟಿಂಗ್ ಸರ್ವೀಸ್ ಅನ್ನು ಹೊಂದಿವೆ. ಇವು ಅಪಾಯಕಾರಿ ವೈರಸ್ ಗಳನ್ನು ತಡೆ ಹಿಡಿಯುತ್ತವೆ.’

Leave a Reply