ಜಂತಕಲ್ ಮೈನಿಂಗ್ ಅಕ್ರಮ: ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ ಬಂಧನ, ಹೆಚ್ಡಿಕೆಗೂ ಹೋಗುತ್ತಾ ಸಮನ್ಸ್?

ಡಿಜಿಟಲ್ ಕನ್ನಡ ಟೀಮ್:

ಜಂತಕಲ್ ಮೈನಿಂಗ್ ಕಂಪನಿಯ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾರನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ಅಧಿಕಾರಿಗಳು ಸೋಮವಾರ ಬಂಧಿಸಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ಜಂತಕಲ್ ಮೈನಿಂಗ್ ಕಂಪನಿಯ ಅಕ್ರಮಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರ ವರದಿಯಲ್ಲಿ ಕೇಳಿಬಂದಿರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಮೂರು ತಿಂಗಳಲ್ಲಿ ವರದಿ ನೀಡುವಂತೆ ಸುಪ್ರೀಂ ಕೋರ್ಟ್ ಎಸ್ಐಟಿಗೆ ನಿರ್ದೇಶನ ನೀಡಿತ್ತು. ಸುಪ್ರೀಂ ಕೋರ್ಟಿನ ನಿರ್ದೇಶನದಂತೆ ಎಸ್ಐಟಿ ಅಧಿಕಾರಿಗಳು ಇಂದು ವಿಚಾರಣೆಗೆ ಹಾಜರಾಗಿದ್ದ ಗಂಗಾರಾಮ್ ಅವರನ್ನು ಬಂಧಿಸಿದ್ದಾರೆ. ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿರುವ ಗಂಗಾರಾಮ್ ಎಚ್.ಡಿ ಕುಮಾರಸ್ವಾಮಿ ಅವರ ಆಡಳಿತ ಅವಧಿಯಲ್ಲಿ ಅಕ್ರಮಗಣಿಗಾರಿಕೆಗೆ ನೆರವು ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ಅಲ್ಲದೆ ಈ ಪ್ರಕರಣದಲ್ಲಿ ಕುಮಾರಸ್ವಾಮಿ ಅವರ ಹೆಸರೂ ಕೂಡ ಕೇಳಿಬಂದಿದೆ. ಹೀಗಾಗಿ ವಿಚಾರಣೆಗೆ ಹಾಜರಾಗುವ ಕುರಿತು ಕುಮಾರಸ್ವಾಮಿ ಅವರಿಗೂ ಸಮನ್ಸ್ ಜಾರಿ ಮಾಡುವ ಸಾಧ್ಯತೆ ಇವೆ ಎಂದು ಮೂಲಗಳು ತಿಳಿಸಿವೆ. ಕುಮಾರಸ್ವಾಮಿ ಅವರ ಜತೆಗೆ ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ ಕೃಷ್ಣ, ಧರಂಸಿಂಗ್ ಅವರ ಹೆಸರೂ ಇದ್ದು, ಈ ಹಿಂದೆ ಎಸ್.ಎಂ ಕೃಷ್ಣ ಅವರ ವಿರುದ್ಧದ ತನಿಖೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.

ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾದವರ ವಿರುದ್ಧ ಕಟ್ಟು ನಿಟ್ಟಿನ ಕ್ರಮಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗಷ್ಟೇ ಹೇಳಿಕೆ ಕೊಟ್ಟಿದ್ದರು. ಇದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅಕ್ರಮ ಗಣಿಗಾರಿಕೆಯನ್ನೇ ಅಸ್ತ್ರವನ್ನಾಗಿಟ್ಟುಕೊಂಡು ಸರ್ಕಾರದ ವಿರುದ್ಧ ದಾಳಿ ಮಾಡುತ್ತಿದ್ದರು. ಅಲ್ಲದೆ ಬೆಂಗಳೂರಿನಿಂದ ಬಳ್ಳಾರಿವರೆಗೂ ಪಾದಯಾತ್ರೆ ಮಾಡಿ ಗಮನಸೆಳೆದಿದ್ದರು. ಚುನಾವಣೆ ಸಂದರ್ಭದಲ್ಲೂ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಡುವುದಾಗಿ ಮಾತು ನೀಡಿ ಅಧಿಕಾರಕ್ಕೆ ಬಂದಿದ್ದ ಸಿದ್ದರಾಮಯ್ಯನವರು ಆಗಾಗ್ಗೆ ತಮ್ಮ ಸರ್ಕಾರ ಅಕ್ರಮಗಣಿಗಾರಿಕೆ ವಿರುದ್ಧವಿದೆ ಎಂದು ಹೇಳುತ್ತಲೇ ಬಂದಿದ್ದರು.

ಮುಂದಿನ ವರ್ಷ ವಿಧಾನ ಸಭೆ ಚುನಾವಣೆ ನಡೆಯಲಿದ್ದು, ಇಂತಹ ಕಾಲಘಟ್ಟದಲ್ಲಿ ಈ ಬೆಳವಣಿಗೆಗಳು ರಾಜಕೀಯವಾಗಿ ಸಾಕಷ್ಟು ಮಹತ್ವ ಪಡೆದುಕೊಳ್ಳುತ್ತಿವೆ. ಮುಂದಿನ ದಿನಗಳಲ್ಲೂ ಇಂತಹ ಮತ್ತಷ್ಟು ಬೆಳವಣಿಗೆಗಳು ನಡೆದರೆ ಅಚ್ಚರಿಪಡಬೇಕಿಲ್ಲ.

Leave a Reply